Ayub Khan Murder: ಅಯೂಬ್ ಖಾನ್ಗೆ ಚಾಕು ಇರಿದ ಆರೋಪಿಯಿಂದ ವಿಡಿಯೋ ಹೇಳಿಕೆ ಬಿಡುಗಡೆ, ಚಿಕ್ಕಪ್ಪನನ್ನೇ ಕೊಂದ ಹಂತಕ ಹೇಳಿದ್ದೇನು?
ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದ ಅಯೂಬ್ ಖಾನ್, ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಅಯೂಬ್ ಖಾನ್ ಹತ್ಯೆ ಮಾಡಿದ ಆರೋಪಿ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ನೀಡಿದ್ದಾನೆ.
ಬೆಂಗಳೂರು: ಮಾಜಿ ಕಾರ್ಪೊರೇಟರ್ ನಜೀಮಾ ಖಾನಂ ಅವರ ಪತಿ ಅಯೂಬ್ ಖಾನ್(Ayub Khan Murder) ಮೇಲೆ ಅಟ್ಯಾಕ್ ಆಗಿತ್ತು. ನಮಾಜ್ ಮುಗಿಸಿಕೊಂಡು ಬರುವಾಗ್ಲೇ ಹಂತಕ ಹೊಟ್ಟೆಗೆ ಚಾಕು ಹಾಕಿ ಎಸ್ಕೇಪ್ ಆಗಿದ್ದ. ಹೀಗೆ ಚಾಕು ಇರಿತಕ್ಕೊಳಗಾಗಿ ವಿಕ್ಟೋರಿಯಾ ಆಸ್ಪತ್ರೆ ಸೇರಿದ್ದ ಅಯೂಬ್ ಖಾನ್, ಚಿಕಿತ್ಸೆ ಫಲಿಸದೆ ಪ್ರಾಣ ಬಿಟ್ಟಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿ ಅಯೂಬ್ ಖಾನ್ ಹತ್ಯೆ ಮಾಡಿದ ಆರೋಪಿ ಅಜ್ಞಾತ ಸ್ಥಳದಿಂದ ವಿಡಿಯೋ ಹೇಳಿಕೆ ನೀಡಿದ್ದಾನೆ.
ನನ್ನ ಮೇಲೆ ಹಲ್ಲೆ ಮಾಡಲು ಅವರೇ ಬಂದ್ರು. ನನ್ನ ಚಿಕ್ಕಪ್ಪ ಅಯೂಬ್ ಖಾನ್ ಹಾಗೂ ಅವರ ಮಗ ಹಲ್ಲೆಗೆ ಬಂದ್ರು. ಅಯೂಬ್ ಖಾನ್ ಮಗನೇ ಮೊದಲಿಗೆ ಲಾಂಗ್ ನಲ್ಲಿ ಹಲ್ಲೆ ಮಾಡಲಿಕ್ಕೆ ಬಂದ. ಏರಿಯಾದಲ್ಲಿ ಇರಬೇಡ ಅಂತ ಅಯೂಬ್ ಖಾನ್ ಯಾವಾಗಲೂ ಬೈತಿದ್ರು. ಸುಖಾಸುಮ್ಮನೇ ನನ್ನ ಮೇಲೆ ಪೊಲೀಸರಿಗೆ ದೂರು ಕೊಡ್ತಿದ್ರು. ಹಲವು ಬಾರಿ ಸ್ಟೇಷನ್ ಗೆ ಕರೆಸಿ ವಾರ್ನ್ ಮಾಡಿಸಿದ್ದಾರೆ. ಮೊನ್ನೆ ಘಟನೆ ನಡೆದಾಗ ನಾನು ನಮಾಜ್ ಮುಗಿಸಿ ಬರ್ತಿದ್ದೆ. ಅವರು ಹಾಗೂ ಅವರ ಮಗ ಕೂಡ ನಮಾಜ್ ಮುಗಿಸಿ ಬರ್ತಿದ್ರು. ಬೇಕರಿ ಬಳಿ ನಿಂತಿದ್ದ ನನಗೆ ಮೊದಲಿಗೆ ಅವರೇ ಬೈದಿದ್ದು. ಅವರು ಬೈತಿದ್ದಾಗೆ ಅವರ ಮಗ ನನ್ನ ಮೆಳೆ ಹಲ್ಲೆ ಮಾಡಲು ಬಂದ. ಹೀಗಾಗಿ ಈ ಘಟನೆ ನಡೆದು ಹೋಯ್ತು ಎಂದು ಅಜ್ಞಾತ ಸ್ಥಳದಿಂದ ಆರೋಪಿ ಮಥೀನ್ ಖಾನ್ ವಿಡಿಯೋ ಮೂಲಕ ಹೇಳಿಕೆ ನೀಡಿದ್ದಾನೆ.
ಯಾರು ಈ ಮಥೀನ್ ಖಾನ್? ಆರೋಪಿ ಮಥೀನ್ ಖಾನ್ ಮತ್ತು ಮೃತ ಅಯೂಬ್ ಖಾನ್ ಇಬ್ಬರೂ ಒಂದೇ ಕುಟುಂಬದವರು. ಕಣ್ಮುಂದೆ ಬೆಳೆದ ಮಗನೇ ತನ್ನ ಚಿಕ್ಕಪ್ಪನ್ನ ಕೊಂದಿದ್ದಾನೆ. ಆರೋಪಿ ಮಥೀನ್ ಖಾನ್, ಅಯೂಬ್ ಖಾನ್‌ನ ಸಹೋದರನ ಮಗ.
ಅಯೂಬ್ ಖಾನ್ ಕಳೆದ ಕೆಲ ವರ್ಷಗಳಿಂದ ಟಿಪ್ಪುನಗರದ ಖುದಾಯತ್ ಮಸೀದಿಗೆ ಅಧ್ಯಕ್ಷರಾಗಿದ್ರು. ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಮಥೀನ್ ಖಾನ್ ಅನೇಕ ಬಾರಿ ಪ್ರೆಸಿಡೆಂಟ್ ಹುದ್ದೆ ತನಗೆ ಬಿಟ್ಟುಕೊಡುವಂತೆ ಅಯೂಬ್ ಖಾನ್ ಬಳಿ ಕೇಳಿದ್ದ. ಆದ್ರೆ ಆಯೂಬ್ ಮಾತ್ರ ಒಪ್ಪಿರಲಿಲ್ಲ. ಇನ್ನು ಮಥೀನ್ ಖಾನ್ ಬದಲಿಗೆ ತನ್ನ ಮಗ ಸಿದ್ಧಿಕ್‌ನನ್ನ ಮಸೀದಿಗೆ ಅಧ್ಯಕ್ಷನಾಗಿ ಮಾಡೋಕೆ ಅಯೂಬ್ ಖಾನ್ ಪ್ಲ್ಯಾನ್ ಮಾಡಿದ್ದನಂತೆ. ಇದೇ ವಿಚಾರ ಮಥೀನ್ ಕೋಪಕ್ಕೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಆರು ತಿಂಗಳಿಂದ ಅಯೂಬ್ ಹಾಗೂ ಮಥೀನ್ ನಡುವೆ ಜಗಳವಾಗ್ತಿತ್ತು. ಹಾಗೂ ಇದೇ ವಿಚಾರವಾಗಿ ಆರಂಭವಾದ ಜಗಳ ಮಿತಿ ಮೀರಿದ್ದು, ಟಿಪ್ಪುನಗರದ ಮಸೀದಿಯಿಂದ ನಮಾಜ್ ಮುಗಿಸಿ ಬರೋ ವೇಳೆ ಆಯೂಬ್ ಕೆಳ ಹೊಟ್ಟೆಗೆ ಮಥೀನ್ ಚಾಕು ಇರಿದಿದ್ದ. ಕೂಡಲೇ ಆಯೂಬ್‌ನನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೇ ಆಯೂಬ್ ಪ್ರಾಣ ಬಿಟ್ಟಿದ್ದಾರೆ.
Published On - 3:17 pm, Fri, 15 July 22