ಬೆಂಗಳೂರು: ಇಂದು ರಾಜ್ಯಾದ್ಯಂತ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದ್ದು ರಾಜ್ಯದ ಬಹುತೇಕ ಮಾರುಕಟ್ಟೆಗಳು ತುಂಬಿ ತುಳುಕುತ್ತಿವೆ. ಜನರ ಖರೀದಿ ಭರಾಟೆ ಜೋರಾಗಿದೆ. ಸಿಲಿಕಾನ್ ಸಿಟಿಯಲ್ಲಿ ಆಯುಧ ಪೂಜೆಗೆ ಹೂವು, ಹಣ್ಣು, ಬಾಳೆಕಂದು ಖರೀದಿ ಮಾಡಲು ಜನ ಮುಗಿಬಿದ್ದಿದ್ದು ಕೆ.ಆರ್.ಮಾರ್ಕೆಟ್ ಸುತ್ತಮುತ್ತ ಟ್ರಾಫಿಕ್ ಜಾಮ್ ಉಂಟಾಗಿದೆ.
ಅಶ್ವಿನೀ ಮಾಸದ ಶುಕ್ಲಪಕ್ಷದ ನವಮೀ ದಿನದ ಆಯುಧ ಪೂಜೆ ಇಂದಿದ್ದು ನಾಳೆ ವಿಜಯದಶಮಿ ಈ ಹಿನ್ನೆಲೆಯಲ್ಲಿ ಖರೀದಿ ಜೋರಾಗಿದೆ. ಕಳೆದ ಭಾರಿ ಕೊರೊನಾ ಕಾರಣಕ್ಕೆ ಹಬ್ಬ ಆಚರಿಸಲು ಸಾಧ್ಯವಾಗಿರಲಿಲ್ಲ. ಈ ವರ್ಷ ಕೊರೊನಾ ಸೋಂಕು ನಿಯಂತ್ರಣದಲ್ಲಿದೆ. ಹೀಗಾಗಿ ಹಬ್ಬದ ಮೂಡ್ನಲ್ಲಿ ಸಿಟಿ ಮಂದಿ ಕಾಣಿಸಿಕೊಂಡಿದ್ದಾರೆ.
ಬೆಣ್ಣೆ ನಗರಿಯಲ್ಲಿ ಆಯುಧ ಪೂಜೆ
ಬೆಣ್ಣೆ ನಗರಿ ದಾವಣಗೆರೆಯಲ್ಲಿ ಸುಮಂಗಲಿಯರು ಬನ್ನಿ ಮರಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಬೆಳ್ಳಂ ಬೆಳಿಗ್ಗೆ ಬನ್ನಿ ಮರಗಳಿಗೆ ಆರತಿ ಮಾಡಿ ಪೂಜೆ ಮಾಡಿದ್ದಾರೆ.
ಜಿಟಿಪಿಟಿ ಮಳೆಯ ಮಧ್ಯೆಯೂ ಖರೀದಿ
ಕೊಡಗು ಜಿಲ್ಲೆಯಲ್ಲಿ ಜಿಟಿಪಿಟಿ ಮಳೆಯ ಮಧ್ಯೆಯೂ ಜನರು ಅಗತ್ಯ ವಸ್ತುಗಳ ಖರೀದಿಯಲ್ಲಿ ಮುಳುಗಿದ್ದಾರೆ. ಪ್ರವಾಹ, ಭೂಕುಸಿತದಿಂದ ಎರಡು ವರ್ಷ ಆಯುಧ ಪೂಜಾ ನಡೆದಿರಲಿಲ್ಲ. ಹಾಗೂ ಕಳೆದ ವರ್ಷ ಕೊರೊನಾ ಕಾರಣದಿಂದ ಆಚರಣೆ ಸದ್ಯವಾಗಿರಲಿಲ್ಲ. ಹೀಗಾಗಿ ಮೂರು ವರ್ಷಗಳ ಬಳಿಕ ಜಿಲ್ಲೆಯಲ್ಲಿ ಆಯುಧ ಪೂಜೆ ನಡೆಯುತ್ತಿದೆ. ಜನ ಸಂಭ್ರಮದಿಂದ ಖರೀದಿಗೆ ಮುಂದಾಗಿದ್ದಾರೆ.
ಬಳ್ಳಾರಿ, ವಿಜಯನಗರ, ಹುಬ್ಬಳ್ಳಿ, ವಿಜಯಪುರ, ಚಿಕ್ಕಬಳ್ಳಾಪುರ ಸೇರಿದಂತೆ ರಾಜ್ಯಾದ್ಯಂತ ಜನ ಆಯುಧ ಪೂಜೆ ಬೇಕಾದ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಇನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಸರ್ಕಲ್ ಮಾರಿಯಮ್ಮ ದೇವಾಲಯದ ಮುಂದೆ ಕಾರು, ಬೈಕ್ಗಳಿಗೆ ಪೂಜೆ ಸಲ್ಲಿಸಲು ಜನ ಸಾಲುಗಟ್ಟಿ ನಿಂತಿದ್ದಾರೆ. ಬೆಳಗ್ಗಿನಿಂದಲೇ ಪೂಜಾ ಕೈಂಕರ್ಯಗಳು ಆರಂಭವಾಗಿದೆ. ಬಣ್ಣ ಬಣ್ಣದ ಹೂವು ಬಾಳೆಕಂದುಗಳಿಂದ ದೇವಸ್ಥಾನ ಸಿಂಗಾರಗೊಂಡಿದ್ದು ಮಾರಮ್ಮನ ದರ್ಶನ ಪಡೆಯಲು ಭಕ್ತ ಸಾಗರವೇ ಹರಿದು ಬರುತ್ತಿದೆ.
ಈ ಬಾರಿಯ ದಸರಾ ಕೊಂಚ ದುಬಾರಿಯಾಗಿದೆ ಹಬ್ಬದ ಖುಷಿಗೆ ಬೆಲೆ ಏರಿಕೆಯ ಶಾಕ್ ಆಗಿದೆ. ಹೂವು,ಹಣ್ಣು, ಪೂಜಾ ಸಾಮಾಗ್ರಿ ದರ ಏರಿಕೆಯಾಗಿದೆ. ಬೆಂಗಳೂರಿನ ಮಾರುಕಟ್ಟೆಗಳಲ್ಲಿ ದರ ಈ ರೀತಿ ಇದೆ.
ಹೂವು ಹಿಂದಿನ ದರ( ಕೆ.ಜಿಗೆ) ಈಗೀನ ದರ(ಕೆ.ಜಿಗೆ)
ಕನಕಾಂಬರ-600-1500ರೂ
ದುಂಡುಮಲ್ಲಿಗೆ-400-1000ರೂ
ಕಾಕಡ-200-500ರೂ
ಜಾಜಿ ಮಲ್ಲಿಗೆ-150-200ರೂ
ಸೇವಂತಿಗೆ-60-150ರೂ
ಸುಗಂಧರಾಜ-100-300ರೂ
ಗುಲಾಬಿ-150-200ರೂ
ತುಳಸಿ-50ರೂ(ಒಂದು ಮಾರು)
ಮಾವಿನ ಎಲೆ-40ರೂ(ಒಂದು ಕಟ್ಟಿಗೆ)
ಹಣ್ಣುಗಳ ಬೆಲೆ
ಹಣ್ಣುಗಳು ಹಿಂದಿನ ಬೆಲೆ ಈಗೀನ ಬೆಲೆ
ಸೇಬುಹಣ್ಣು-80-120ರೂ
ಕಿತ್ತಳೆ-60-80ರೂ
ಮೊಸಂಬಿ-70-100ರೂ
ಬಾಳೆಹಣ್ಣು-50-80ರೂ
ಅನಾನಸ್-30-60ರೂ
ದ್ರಾಕ್ಷಿ-90-120ರೂ
ದಾಳಿಂಬೆ-80-100ರೂ
ವಾಹನಗಳ ದೃಷ್ಟಿ ತೆಗೆಯಲು ಬೇಕಾದ ಬೂದುಕುಂಬಳ ಕಾಯಿಗೆ ಈ ಬಾರಿ ಡಿಮ್ಯಾಂಡ್ ಕಮ್ಮಿಯಾಗಿದೆ. ಕೆ.ಜಿ ಬೂದುಕುಂಬಳ 40 ರೂಪಾಯಿ. ಬಾಳೆಕಂಬ ಒಂದು ಜೊತೆಗೆ 50 ರಿಂದ 100. ನಿಂಬೆ ಹಣ್ಣು ಒಂದಕ್ಕೆ 6 ರಿಂದ 8 ರೂಪಾಯಿ ಇದೆ.
ನಾಡಿನಾದ್ಯಂತ ಆಯುಧ ಪೂಜೆಯ ಸಂಭ್ರಮ ಮನೆ ಮಾಡಿದ್ದು ಟಿವಿ9ನ ಸಮಸ್ತ ವೀಕ್ಷಕರು, ಕೇಬಲ್ ಆಪರೇಟರ್ಸ್, ಜಾಹೀರಾತುದಾರರಿಗೆ ಆಯುಧ ಪೂಜೆ ಶುಭಾಶಯಗಳು.
ಇದನ್ನೂ ಓದಿ: Dasara 2021: ದಸರಾ ಪ್ರಯುಕ್ತ 5 ಕೋಟಿ ರೂ. ನೋಟುಗಳಿಂದಲೇ ನೆಲ್ಲೂರಿನ ದೇವಸ್ಥಾನದ ಅಲಂಕಾರ
Published On - 8:53 am, Thu, 14 October 21