ಬೆಂಗಳೂರು: ಅವರವರ ಧರ್ಮಕ್ಕೆ ಅವರವರು ಗೌರವ ಕೊಡಬೇಕು. ಆಜಾನ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿದೆ. ಪೊಲೀಸರು ಅದನ್ನ ಪಾಲಿಸುತ್ತಾರೆ. ನಮ್ಮ ಪಕ್ಷದ ಅಲ್ಪ ಸಂಖ್ಯಾತ ಶಾಸಕರ ನಿಯೋಗ ಇಂದು ಸಿಎಂ ಭೇಟಿ ಮಾಡಿ ಮನವಿ ಸಹಾ ಮಾಡಿದೆ. ಬೇಕಂತ ಕೆಣಕಿಕೊಂಡು ಜಗಳಕ್ಕೆ ಬರ್ತಿದಾರೆ. ಇದು ಸರ್ಕಾರದ ಜವಬ್ದಾರಿ ಎಂದು ನಗರದಲ್ಲಿ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದ್ದಾರೆ. ಸಿಎಂ ಹಾಗೂ ಗೃಹ ಸಚಿವರ ಜವಬ್ದಾರಿ ಶಾಂತಿಯನ್ನ ಕಾಪಾಡಬೇಕು. ಕುವೆಂಪು ಹೇಳಿದಂತೆ ರಾಜ್ಯ ಸರ್ವ ಜನಾಂಗದ ಶಾಂತಿಯ ತೋಟ ಆಗಬೇಕು ಎಂದು ಹೇಳಿದರು.
ಸಿಎಂ ಅವರನ್ನು ಭೇಟಿ ಮಾಡಿ, ಮನವಿ ಮಾಡಿದ್ದೇವೆ. ರಾಜ್ಯದಲ್ಲಿ ಶಾಂತಿ ಸುವ್ಯವಸ್ಥೆ ಜೀವನವನ್ನು ಜನರು ಬಯಸುತ್ತಿದ್ದಾರೆ. 99 % ರಷ್ಟು ಜನ ಶಾಂತಿ, ಸೌಹಾರ್ದತೆ ಬಯಸುತ್ತಿದ್ದಾರೆ. ಕೆಲವೊಂದು ಸಂಘಟನೆಗಳು ದ್ವೇಷದ ಸಮಾಜ ಸೃಷ್ಟಿಸಲು ಮುಂದಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು, ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಯು.ಟಿ ಖಾದರ್ ಹೇಳಿಕೆ ನೀಡಿದ್ದಾರೆ. ಕೋರ್ಟ್ ಆದೇಶವನ್ನು ಪಾಲಿಸುವಂತೆ ನೋಡಿಕೊಳ್ಳಬೇಕು. ವಿವಾದದ ಬಗ್ಗೆ ಕಾಂಗ್ರೆಸ್ ಮುಸ್ಲಿಂ ಶಾಸಕರನ್ನು ಹೊರತು ಪಡಿಸಿ, ಉಳಿದವರು ಮಾತನಾಡಲು ಯಾಕೆ ಹಿಂದೇಟು ಎಂಬ ಮಾಧ್ಯಮಗಳ ಪ್ರಶ್ನೆಗೆ ಯು.ಟಿ ಖಾದರ್ ಗರಂ ಆದರು. ಇದರಲ್ಲಿ ಜಾತಿ, ಧರ್ಮವಿಲ್ಲ. ಎಲ್ಲ ಜಾತಿ, ಧರ್ಮದವರು ಶಾಂತಿ ಸುವ್ಯವಸ್ಥೆ ಬಯಸುತ್ತಿದ್ದಾರೆ. ರಾಜ್ಯದ ಅಭಿವೃದ್ಧಿ, ದೇಶ್ ಏಕತೆ ಮುಖ್ಯ. ಬೇರೆ ದೇಶದ ಮುಂದೆ ನಮ್ಮ ದೇಶವನ್ನು ಸ್ವಾಭಿಮಾನದಿಂದ ನೋಡುವುದು ನಮ್ಮ ಉದ್ದೇಶವಾಗಿದೆ ಎಂದು ಹೇಳಿದರು.
ಯಾರು ಕೂಡ ಜಾತಿ ತರಬಾರದು, ಅದನ್ನ ಯಾರು ನೋಡುತ್ತಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಎಲ್ಲಾ ಕಡೆ ಪಾಲಿಸುತ್ತಾರೆ. ಎಲ್ಲಿ ಪಾಲನೆ ಆಗುತ್ತಿಲ್ಲವೋ ಅಲ್ಲಿ ಸರ್ಕಾರ ಹೇಳಿ ಪಾಲಿಸುವಂತೆ ನೋಡಿಕೊಳ್ಳಿ. ಸಮಾಜದಲ್ಲಿ ಸಾಮರಸ್ಯ ಕಾಪಾಡುವುದು ಮಾಧ್ಯಮಗಳ ಮೇಲಿದೆ. ನಾವು ಟೆನಷನ್ನಲ್ಲಿದ್ದೇವೆ. ನಮ್ಮ ಮಕ್ಕಳಾದ್ರೂ ನೆಮ್ಮದಿಯಿಂದ ಇರಲಿ. ಇದರಲ್ಲಿ ಯಾವುದೇ ರಾಜಕೀಯ ತರಬೇಡಿ. ಡಿ.ಕೆ. ಶಿವಕುಮಾರ ಸಿದ್ದರಾಮಯ್ಯ, ಕಾಂಗ್ರೆಸ್ ,ಕಾರ್ಯಕರ್ತರು ಎಲ್ಲರು ಶಾಂತಿ, ಸುವ್ಯವಸ್ಥೆಗೆ ಒತ್ತು ಕೊಟ್ಟು ಕೆಲಸ ಮಾಡುತ್ತಿವೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದಿಯಾ ಎಂಬ ಪ್ರಶ್ನೆಗೆ
ಇದನ್ನು ನೀವು ಸಿಎಂ ಹಾಗೂ ಸರ್ಕಾರವನ್ನು ಕೇಳಬೇಕು ಎಂದರು.
ಎಲ್ಲಾ ವಿಷಯಗಳಲ್ಲಿ ಮಾಧ್ಯಮಗಳ ಒಂದು ಅಭಿಪ್ರಾಯ ಕೊಡ್ತೀರಾ. ಈ ವಿಷಯದಲ್ಲೂ ಒಂದು ಅಭಿಪ್ರಾಯ ಕೊಡಿ. ನಾವು ನೆಮ್ಮದಿಯಿಂದ ಕೇಳ್ತೇವೆ. ನಾವು ಯಾವಾಗ ಜವಬ್ದಾರಿಯುತವಾಗಿ ಕೆಲಸ ಮಾಡಬೇಕು, ಅವಾಗ ಮಾಡಿದ್ದೇವೆ. ಎಲ್ಲರೂ ಶಾಂತಿ, ಸೌಹಾರ್ದತೆ ಬಯಸಿದ್ದಾರೆ. ಕೆಲ ತಿಂಗಳಿಂದ ಕೆಲವರು ಈ ರೀತಿ ವಾತಾವರಣ ನಿರ್ಮಾಣ ಮಾಡಿದ್ದಾರೆ. ಅವರನ್ನು ಹದ್ದು ಬಸ್ತಿನಲ್ಲಿಡಬೇಕು. ಸರ್ಕಾರ ಮೌನ ವಹಿಸುವುದು ಸರಿಯಲ್ಲ. ಸರ್ಕಾರ ಮೌನವಹಿಸಿದಾ ಒಂದೊಂದು ಅಭಿಪ್ರಾಯ ಬರುತ್ತದೆ. ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಕಾನೂನು ಸುವ್ಯವಸ್ಥೆ ಕಾಪಾಡುವುದು ಸರ್ಕಾರದ ಜವಾಬ್ದಾರಿ. ಕಾನೂನು ಸುವ್ಯವಸ್ಥೆ ಕಾಪಾಡಲು ಆಗದಿದ್ರೆ ಬಿಟ್ಟು ಹೋಗಲಿ ಎಂದು ಸರ್ಕಾರದ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು. ಅಭಿಯಾನ ನಡೆಸುತ್ತಿರುವವರು ಭಯೋತ್ಪಾದಕರು. ಅಭಿಯಾನ ನಡೆಸುತ್ತಿರುವವರನ್ನು ಯುಎಪಿಎ ಕಾಯ್ದೆಯಡಿ ಬಂಧಿಸಿ ಎಂದು ಪರಿಷತ್ ವಿಪಕ್ಷ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪ ಮಾಡಿದ್ದಾರೆ. ಸರ್ಕಾರ ಸಮಾಜ ವಿರೋಧಿ ಶಕ್ತಿಗಳನ್ನು ಬಳಸಿಕೊಳ್ಳುತ್ತಿದೆ. ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಳ್ಳಲು ಇಂತಹ ಅಭಿಯಾನ ಮಾಡುತ್ತಿದೆ. ಇವರೆಲ್ಲರೂ ಸಂಘ ಪರಿವಾರದವರ ಆಕ್ಟೋಪಸ್ ಇದ್ದಂತೆ. ಇವರನ್ನೆಲ್ಲ ಯುಎಪಿಎ ಅಡಿಯಲ್ಲಿ ಅರೆಸ್ಟ್ ಮಾಡಬೇಕು ಎಂದು ಹೇಳಿದ್ದಾರೆ.
ಪ್ರಮೋದ್ ಮುತಾಲಿಕ್ರನ್ನು ಮೊದಲು ಒದ್ದು ಒಳಗೆ ಹಾಕಬೇಕು ಎಂದು ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಚಿಕ್ಕಮುಚ್ಚಳಗುಡ್ಡ ಗ್ರಾಮದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ನೀಡಿದ್ದು, ಸಾಮರಸ್ಯ ಹಾಳು ಮಾಡುವವರನ್ನು ಒದ್ದು ಒಳಗೆ ಹಾಕಬೇಕು. ಸರ್ಕಾರ ಇಂತಹ ವಿಷಯಗಳನ್ನು ಬೆಳೆಯಲು ಬಿಡಬಾರದು. ಮೌನವಾಗಿ ಒಪ್ಪಿಗೆ ಸೂಚಿಸುವುದನ್ನು ಬೊಮ್ಮಾಯಿ ಬಿಡಬೇಕು. ಸಮಾಜದಲ್ಲಿ ಸಾಮರಸ್ಯ ಹಾಳಾದ್ರೆ ರಿಪೇರಿ ಮಾಡೋಕಾಗುತ್ತಾ? ರಾಜ್ಯದಲ್ಲಿ ಬೆಲೆ ಏರಿಕೆ ಸೇರಿದಂತೆ ಹಲವು ಸಮಸ್ಯೆಗಳು ಇವೆ. ಇಂತಹ ಸಮಸ್ಯೆಗಳ ಬಗ್ಗೆ ಸಂಘಟನೆಗಳು ಮಾತನಾಡಲಿ ಎಂದು ಹೇಳಿದ್ದಾರೆ.
ಆಜಾನ್ ವಿರುದ್ಧ ಸುಪ್ರಭಾತ ಅಭಿಯಾನ ವಿಚಾರ ಹಿನ್ನೆಲೆ ಬೆಳಗಾವಿಯಲ್ಲಿ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಪ್ರತಿಕ್ರಿಯೆಗೆ ನಕಾರವೆತ್ತಿದ್ದಾರೆ. ಶ್ರೀರಾಮ ಸೇನೆಯಿಂದ ಸುಪ್ರಭಾತ ಅಭಿಯಾನ ಕುರಿತ ಮಾಧ್ಯಮಗಳ ಪ್ರಶ್ನೆಗೆ ಎರಡು ಕೈ ಮುಗಿದು ನಾನು ಯಾವುದೇ ಕಾಂಟರ್ವರ್ಸಿ ವಿಚಾರದ ಬಗ್ಗೆ ಹೇಳಿಕೆ ನೀಡಲ್ಲ ಎಂದಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.