ಬೆಂಗಳೂರು, ಜನವರಿ 12: ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಚಿರತೆ (leopard) ಪ್ರತ್ಯಕ್ಷವಾಗಿ ಈಗಾಗಲೇ ಸಾಕಷ್ಟು ಭಯ ಹುಟ್ಟಿಸಿದೆ. ಎಷ್ಟೇ ಹುಡುಕಾಡಿದರೂ ಚಿರತೆ ಮಾತ್ರ ಪತ್ತೆ ಆಗುತ್ತಿಲ್ಲ. ಇದರ ಬೆನ್ನಲ್ಲೇ ಇದೀಗ ಬೆಂಗಳೂರಿನ ತುರಹಳ್ಳಿ ಫಾರೆಸ್ಟ್ ಪಕ್ಕದ ಬನಶಂಕರಿ 6ನೇ ಹಂತದ ಫಸ್ಟ್ ಬ್ಲಾಕ್‌ನಲ್ಲಿ ತಾಯಿ ಮತ್ತು ಮರಿ ಚಿರತೆ ಪ್ರತ್ಯಕ್ಷವಾಗಿದೆ. 3 ತಿಂಗಳಲ್ಲಿ 10ಕ್ಕೂ ಹೆಚ್ಚು ನಾಯಿ, ಮೇಕೆ, ಕುರಿಯನ್ನು ಚಿರತೆ ಕೊಂದಿದೆ. ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಬೆಳಗ್ಗೆ, ಸಂಜೆ ವೇಳೆ ಮನೆಯಿಂದ ಹೊರಬರಲು ನಿವಾಸಿಗಳಿಗೆ ಆತಂಕ ಪಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಕ್ಕಳನ್ನು ನಿತ್ಯ ಶಾಲೆಗೆ ಕಳಿಸಲು ಪೋಷಕರು ಭಯ ಬೀಳುತ್ತಿದ್ದಾರೆ. ಡೆಲಿವರಿ ಬಾಯ್ಸ್ ಯಾವುದೇ ವಸ್ತುಗಳನ್ನು ಸಪ್ಲೈ ಮಾಡುತ್ತಿಲ್ಲ.
ಇದನ್ನೂ ಓದಿ: ಮೈಸೂರಿನ ಇನ್ಫೋಸಿಸ್ ಕ್ಯಾಂಪಸ್ನಲ್ಲಿ ಇಂದೂ ಪತ್ತೆಯಾಗದ ಚಿರತೆ; 12 ತಂಡಗಳಿಂದ ಕಾರ್ಯಾಚರಣೆ
ಚಿರತೆ ಪ್ರತ್ಯಕ್ಷ ಹಿನ್ನೆಲೆ ನೀರಿನ ಟ್ಯಾಂಕರ್‌ನವರೂ ಏರಿಯಾಗೆ ಬರುತ್ತಿಲ್ಲ. ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ ಎಂದು ನಿವಾಸಿಗಳು ಅಳಲು ತೊಡಿಕೊಂಡಿದ್ದಾರೆ. ಈ ಹಿಂದೆಯೂ ಬಿಎಂಟಿಸಿ ಬಸ್ ಚಾಲಕನ ಮೇಲೆ ಚಿರತೆ ದಾಳಿ ನಡೆಸಿತ್ತು. ಹಾಗಾಗಿ ನಿವಾಸಿಗಳು ಜೀವ ಕೈಯಲ್ಲಿಡಿದು ಜೀವನ ಮಾಡುವಂತಾಗಿದೆ.
ಇನ್ನು ನಿವಾಸಿಯೊಬ್ಬರು ಈ ಬಗ್ಗೆ ಸೊಶೀಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ನಮ್ಮ ಅಪಾರ್ಟ್‌ಮೆಂಟ್‌ನ ಪಕ್ಕದಲ್ಲಿರುವ ತುರಹಳ್ಳಿ ಅರಣ್ಯದೊಳಗಿನ ಬಂಡೆಯೊಂದರ ಮೇಲೆ ಚಿರತೆ ಮಲಗಿಕೊಂಡಿರುವುದು ಕಂಡುಬಂತು. ಸಂಜೆ 5.30ರ ಸುಮಾರಿಗೆ ತಮ್ಮ ಅಪಾರ್ಟ್‌ಮೆಂಟ್ ಬಾಲ್ಕನಿಯಿಂದ ನೋಡಿರುವುದಾಗಿ ಹೇಳಿದ್ದಾರೆ.
ಇನ್ನು ಕೋಲಾರದಲ್ಲಿ ಕೂಡ ಚಿರತೆ ಪ್ರತ್ಯಕ್ಷವಾಗಿದ್ದು, ಜನರು ಭಯಭೀತರಾಗಿದ್ದಾರೆ. ಕೋಲಾರ ತಾಲ್ಲೂಕಿನ ಬುಸನಹಳ್ಳಿ ಗ್ರಾಮದ ಸಮೀಪ ರಸ್ತೆ ದಾಟುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್ನಲ್ಲಿ ಸೆರೆ ಆಗಿದೆ. ಚಿರತೆ ಕಂಡು ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಗ್ರಾಮಸ್ಥರಿಂದ ಕೋಲಾರ ವಲಯ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಕಳೆದ ವಾರ ಅಂತರಗಂಗೆ ಬೆಟ್ಟದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಮತ್ತೊಮ್ಮೆ ಚಿರತೆ ಕಂಡು ಗ್ರಾಮಸ್ಥರಿಗೆ ಭೀತಿ ಎದುರಾಗಿದೆ. ಚಿರತೆ ಸೆರೆಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.