
ಬೆಂಗಳೂರು, ಜನವರಿ 12: ಕಳೆದ ಕೆಲ ದಿನಗಳಿಂದ ಹೋಲಿಸಿದರೆ ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (Bengaluru Air Quality) ಸುಧಾರಿಸುತ್ತಿದೆ. ಅಷ್ಟೇ ಅಲ್ಲ, ಮೈಸೂರು, ವಿಜಯಪುರದಲ್ಲೂ ಏರ್ ಕ್ವಾಲಿಟಿ ಸುಧಾರಿಸಿದಂತೆ ಕಾಣುತ್ತಿದೆ. ಆದರೆ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಗಳಲ್ಲಿ ಗಾಳಿಯ ಗುಣಮಟ್ಟ ಮೊದಲು ಎರಡಂಕಿಯಲ್ಲಿದ್ದರೂ ಈಗ ಮೂರಂಕಿ ತಲುಪಿದೆ. ಈ ನಗರಗಳಲ್ಲಿ ವಾಹನಗಳ ಹೊಗೆ, ಧೂಳು ಮತ್ತು ನಿರ್ಮಾಣ ಚಟುವಟಿಕೆಗಳಿಂದ ವಾಯುಮಾಲಿನ್ಯ ಹೆಚ್ಚಾಗಿರುವುದು ಗಮನಕ್ಕೆ ಬರುತ್ತಿದೆ.
ಉಡುಪಿಯಲ್ಲಿ ಕಳೆದ ತಿಂಗಳೆಲ್ಲಾ 50 ರಿಂದ 100ರ ಆಸುಪಾಸಿನಲ್ಲಿ ಗಾಳಿಯ ಗುಣಮಟ್ಟ ಏರುಪೇರಾಗುತ್ತಿತ್ತು. ಆದರೆ ಇಂದು 166ಕ್ಕೆ ತಲುಪಿದೆ. ಈ ಪರಿಸ್ಥಿತಿಯಲ್ಲಿ ಸುರಕ್ಷತೆ ಅತ್ಯಂತ ಮುಖ್ಯ. ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಉತ್ತಮ. ಸಾಧ್ಯವಾದರೆ ಬೆಳಿಗ್ಗೆ ಅಥವಾ ಸಂಜೆ ಪೀಕ್ ಟ್ರಾಫಿಕ್ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಮನೆಯೊಳಗೆ ಗಿಡಗಳನ್ನು ಬೆಳೆಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಸ್ವಚ್ಛತೆ ಕಾಪಾಡುವುದು ಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.
ಬೆಂಗಳೂರಿನ ಗಾಳಿಯ ಗುಣಮಟ್ಟ 138 ಇದ್ದು, ಡಿಸೆಂಬರ್ ತಿಂಗಳಿಗೆ ಹೋಲಿಸಿದರೆ ಸ್ವಲ್ಪ ಸುಧಾರಣೆ ಕಂಡಿದೆ. ಕಳೆದ ತಿಂಗಳಿನಲ್ಲಿ ಒಮ್ಮೆ 200ರ ಗಡಿ ದಾಟಿದ್ದ ಏರ್ ಕ್ವಾಲಿಟಿ, ನಗರವಾಸಿಗಳಲ್ಲಿ ಆತಂಕ ಮೂಡಿಸಿತ್ತು. ಸಿಲ್ಕ್ ಬೋರ್ಡ್, ವೈಟ್ಫೀಲ್ಡ್ ಸೇರಿದಂತೆ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟ ಹದಗೆಟ್ಟಿತ್ತು. ಇದೀಗ ವಾತಾವರಣ ಸಲ್ಪ ಸುಧಾರಣೆ ಕಂಡಿದ್ದರೂ, ಏರ್ ಕ್ವಾಲಿಟಿ ಅನಾರೋಗ್ಯಕಾರಿ ಹಂತದಲ್ಲೇ ಇದೆ. ಇದು ಹೀಗೆ ಮುಂದುವರೆದರೆ ಬೆಂಗಳೂರಿನ ಪರಿಸ್ಥಿತಿ ದೆಹಲಿಯಂತಾಗಬಹುದೆಂದು ತಜ್ಞರು ಎಚ್ಚರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.