ಟ್ರಾಫಿಕ್ ಕಿರಿಕಿರಿಗೆ ಗುಡ್ ಬೈ ಹೇಳಲು ಬೆಂಗಳೂರಿನ 5 ಕಡೆ ನಿರ್ಮಾಣವಾಗಲಿದೆ ಎಲಿವೇಟೆಡ್ ಕಾರಿಡಾರ್: ಎಲ್ಲೆಲ್ಲಿ ಗೊತ್ತಾ?
ಬೆಂಗಳೂರು ಮಹಾನಗರವಾಗಿ ಬೆಳೆದ ನಂತರ, ಟ್ರಾಫಿಕ್ ದಟ್ಟಣೆ ಕೂಡ ದೊಡ್ಡ ಸಮಸ್ಯೆಯಾಗಿ ಬೆಳೆದು ಬಂದಿದೆ. ಹೀಗಾಗಿ ಟ್ರಾಫಿಕ್ ಕಿರಿಕಿರಿ ಕಡಿಮೆ ಮಾಡಲು ವಿವಿಧ ಯೋಜನೆಗಳಿಗೆ ಮುಂದಾಗಿರುವ ಸರ್ಕಾರ, ಐದು ಕಡೆ ಎಲಿವೇಟೆಡ್ ಕಾರಿಡಾರ್ ಕಾಮಗಾರಿಗಳ ನಿರ್ಮಾಣದ ಮೊರೆ ಹೋಗಿದೆ. ಹಾಗಾದರೆ ಎಲ್ಲೆಲ್ಲಿ ಕಾರಿಡಾರ್ಗಳ ನಿರ್ಮಾಣವಾಗಲಿದೆ? ಇಲ್ಲಿದೆ ಮಾಹಿತಿ.

ಬೆಂಗಳೂರು, ಜನವರಿ 12: ಬೆಂಗಳೂರಿನ (Bangalore) ಜನರು ಅತಿಯಾಗಿ ಜಿಗುಪ್ಸೆಗೆ ಒಳಗಾಗುವುದು ಇಲ್ಲಿನ ಸಂಚಾರ (Traffic) ದಟ್ಟಣೆಯಿಂದ. ಹೀಗಾಗಿ ಸಂಚಾರ ದಟ್ಟಣೆ ನಿವಾರಣೆಗಾಗಿ ಸರ್ಕಾರ ನಾನಾ ಯೋಜನೆಗಳನ್ನು ಹಾಕಿಕೊಳ್ಳುತ್ತಿದೆ. ಇದೀಗ ಪ್ರಮುಖ ಭಾಗಗಳಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಾಣಕ್ಕೆ ನಿರ್ಧರಿಸಿದೆ. ಒಟ್ಟು ಸುಮಾರು 75 ಕಿಲೋ ಮೀಟರ್ ಉದ್ದದ 5 ಎತ್ತರಿಸಿದ ರಸ್ತೆಗಳು ಅಥವಾ ಎಲಿವೇಟೆಡ್ ಕಾರಿಡಾರ್ಗಳ ನಿರ್ಮಾಣದ ಜವಾಬ್ದಾರಿಯನ್ನು ಬೆಂಗಳೂರು ಸ್ಮಾರ್ಟ್ ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ಗೆ ವಹಿಸಲಾಗಿದೆ.
ಎಲ್ಲೆಲ್ಲಿ ಎಲಿವೇಟೆಡ್ ಕಾರಿಡಾರ್?
- ನಾಗವಾರ ಜಂಕ್ಷನ್ – ನ್ಯೂ ಏರ್ಪೋರ್ಟ್ ರಸ್ತೆ (17.94 ಕಿ.ಮೀ)
- ಹಲಸೂರು ಕೆರೆ ಜಂಕ್ಷನ್- ಬಾಗಲೂರು (27.19 ಕಿ.ಮೀ)
- ಹಳೆ ಮದ್ರಾಸ್ ರಸ್ತೆ – ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ (10.81 ಕಿ.ಮೀ)
- ಸಿರ್ಸಿ ಸರ್ಕಲ್ – ಸ್ಯಾಟಲೈಟ್ ಬಸ್ ಸ್ಟ್ಯಾಂಡ್ (5.22 ಕಿ.ಮೀ)
- ರಾಗಿಗುಡ್ಡ ಜಂಕ್ಷನ್ – ಕನಕಪುರ ಮುಖ್ಯರಸ್ತೆ (18.47 ಕಿ.ಮೀ)
ಇದನ್ನೂ ಓದಿ: ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್: ಆ್ಯಂಬುಲೆನ್ಸ್ ಸಿಲುಕಿ ರೋಗಿ ನರಳಾಟ
ಇನ್ನು ಹೊಸ ಎಲಿವೇಟೆಡ್ ರಸ್ತೆಗಳು ನಗರದ ವಾಹನ ಸವಾರರಿಗೆ ಟ್ರಾಫಿಕ್ ಕಿರಿಕಿರಿಯಿಂದ ಮುಕ್ತಿ ನೀಡುವ ನಿರೀಕ್ಷೆಯಿದೆ. ಆದರೆ, ಇವುಗಳ ನಿರ್ಮಾಣದ ಬಳಿಕ ಟೋಲ್ ಸಂಗ್ರಹ ಮಾಡುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಈ ಮೂಲಕ ದುಬಾರಿ ಕಾಮಗಾರಿಯ ವೆಚ್ಚವನ್ನು ಸವಾರರಿಂದಲೇ ವಸೂಲಿ ಮಾಡುವ ಚಿಂತನೆ ಕೂಡ ಸರ್ಕಾರದ್ದಾಗಿದೆ ಎನ್ನಲಾಗಿದೆ.
ವರದಿ: ಲಕ್ಷ್ಮಿ ನರಸಿಂಹ, ಟಿವಿ9 ಬೆಂಗಳೂರು
