ಬೆಂಗಳೂರು, ಸೆ.11: ವಿವಿಧ ಬೇಡಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಇಂದು ಖಾಸಗಿ ಸಾರಿಗೆ ಒಕ್ಕೂಟ ಬೃಹತ್ ಹೋರಾಟ ನಡೆಸುತ್ತಿದೆ(Bengaluru Bandh). ಈ ಹಿನ್ನೆಲೆ ಖಾಸಗಿ ಬಸ್, ಓಲಾ ಆಟೋ, ಕ್ಯಾಬ್, ಉಬರ್ ಆಟೋ ಕ್ಯಾಬ್, ಗೂಡ್ಸ್ ವಾಹನಗಳು ರಸ್ತೆಗೆ ಇಳಿದಿಲ್ಲ. ಆದರೆ ಬೆಂಗಳೂರಿನ ಕೆಲ ಕಡೆ ರಾಪಿಡೊ, ಗೂಡ್ಸ್ ವಾಹನಗಳು ಎಂದಿನಂತೆ ಸೇವೆ ಆರಂಭಿಸಿವೆ. ಹೀಗಾಗಿ ಪ್ರತಿಭಟನಾಕಾರರು ಟಯರ್ಗಳ ಗಾಳಿ ಬಿಟ್ಟು ವಾಹನ ಸವಾರರನ್ನು ಹಿಗ್ಗಾಮುಗ್ಗ ಥಳಿಸಿ ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.
ಖಾಸಗಿ ಸಾರಿಗೆ ಸಂಘಟನೆ ಒಕ್ಕೂಟ ಕೆಂಗಣ್ಣಿಗೆ ಗುರಿಯಾದ ರಾಪಿಡೊ ಚಾಲಕರು. ನಗರದ ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ ಮೇಲೆ ರಾಪಿಡೊ ಚಾಲಕ ಮತ್ತು ಹಿಂಬದಿ ಸವಾರನ ಮೇಲೆ ಹಲ್ಲೆ ನಡೆದಿದೆ. ಹೆಲ್ಮೆಟ್ ಹಾಕಿದ್ದರೂ ತಲೆ ಮೇಲೆ ಹೊಡೆದು ಹಲ್ಲೆ ನಡೆಸಲಾಗಿದೆ. ಹತ್ತಕ್ಕೂ ಹೆಚ್ಚು ಕ್ಯಾಬ್ ಚಾಲಕರು ರಾಪಿಡೋ ಸವಾರನ ಬೈಕ್ ಬೀಳಿಸಿ ಚಾಲಕನನ್ನು ಅಟ್ಟಾಡಿಸಿ ಹೊಡೆದಿದ್ದಾರೆ.
ಗಾಂಧಿನಗರದ ಮೌರ್ಯ ಸರ್ಕಲ್ ಬಳಿ ವಾಹನದಲ್ಲಿ ಬಾಡಿಗೆ ಹೋಗ್ತಿದ್ದ ಕಾರು ಚಾಲಕನ ಮೇಲೆ ಹಲ್ಲೆ ನಡೆದಿದೆ. ಕಾರಿನ ಕೀ ಕಿತ್ತುಕೊಂಡು ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಕಾರು ಚಾಲಕನ ರಕ್ಷಣೆ ಮಾಡಿದ್ದಾರೆ. ಇನ್ನು ಮತ್ತೊಂದೆಡೆ ರಾಪಿಡೊ ಬೈಕ್ ಸವಾರನ ಜೊತೆ ಗಲಾಟೆ ಮಾಡಿಕೊಂಡು ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದೆ.
ಇದನ್ನೂ ಓದಿ: ಈಡೇರಿಸಬಹುದಾದ ಖಾಸಗಿ ಸಾರಿಗೆ ಒಕ್ಕೂಟಗಳ ಬೇಡಿಕೆಗಳನ್ನು ಈಡೇರಿಸುತ್ತೇವೆ: ರಾಮಲಿಂಗಾರೆಡ್ಡಿ
ಖಾಸಗಿ ಸಾರಿಗೆ ಒಕ್ಕೂಟದವರು ರಾಪಿಡೊ ಬೈಕ್ ಚಾಲಕನ ಮೇಲೆ ಹಲ್ಲೆ ನಡೆಸಿದ್ದಾರೆ. ಮೊದಲಿಗೆ ಒಕ್ಕೂಟದವರೇ ರಾಪಿಡೊ ಬೈಕ್ ಬುಕ್ ಮಾಡಿ, ಬೈಕನ್ನ ಬೊಮ್ಮನಹಳ್ಳಿಯ ಮುಖ್ಯ ರಸ್ತೆಗೆ ಕರಿಸಿಕೊಂಡು ಸ್ಥಳಕ್ಕೆ ಬೈಕ್ ಬಂದ ಮೇಲೆ ಚಾಲಕನ ಮೇಲೆ ಹಲ್ಲೆ ನಡೆಸಿ ದರ್ಪ ಮೆರೆದಿದ್ದಾರೆ.
ಬೆಂಗಳೂರಿನ ಎಸ್ಪಿ ರೋಡ್ನ ಸುಜಾತಾ ಥಿಯೇಟರ್ ಬಳಿ ಐದಾರು ಗೂಡ್ಸ್ ಗಾಡಿಗಳ ಟೈರ್ ಗಾಳಿ ತೆಗೆದು ಪ್ರತಿಭಟನಾಕಾರರು ಆಕ್ರೋಶ ಹೊರ ಹಾಕಿದ್ದಾರೆ. ಟೈರ್ ಗಾಳಿ ತೆಗೆದಿದ್ರಿಂದ ಕೆಲವೊತ್ತು ವಾಹನಗಳು ನಿಂತಲ್ಲೇ ನಿಂತಿದ್ದವು. ಈ ವೇಳೆ ಸವಾರರಿಗೆ ಟ್ರಾಫಿಕ್ ಜಾಮ್ ಬಿಸಿ ತಟ್ಟಿತ್ತು. ಟ್ರಾಫಿಕ್ ಹೆಚ್ಚಾಗುತ್ತಿದ್ದಂತೆ ಸ್ಥಳಕ್ಕೆ ಬಂದ ಟ್ರಾಫಿಕ್ ಪೊಲೀಸರು, ಟ್ರಾಫಿಕ್ ಕ್ಲಿಯರ್ ಮಾಡಿದರು. ಪೊಲೀಸರು ಬರುತ್ತಿದ್ದಂತೆ ವಾಹನಗಳ ಗಾಳಿ ತೆಗೆದವರು ಎಸ್ಕೇಪ್ ಆದರು. ಈ ವೇಳೆ ಕೆಲ ಚಾಲಕರು ಗಾಳಿ ಹೋಗಿದ್ದ ಟೈರ್ ನಲ್ಲೇ ವಿಧಿ ಇಲ್ಲದೇ ಸಂಚರಿಸಿದರು.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ