ಈಡೇರಿಸಬಹುದಾದ ಖಾಸಗಿ ಸಾರಿಗೆ ಒಕ್ಕೂಟಗಳ ಬೇಡಿಕೆಗಳನ್ನು ಈಡೇರಿಸುತ್ತೇವೆ: ರಾಮಲಿಂಗಾರೆಡ್ಡಿ
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟಗಳು ಇಂದು ಬೆಂಗಳೂರು ಬಂದ್ ನಡೆಸುತ್ತಿವೆ. ಕೆಲವೆಡೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದ್ದರೆ, ಇನ್ನೂ ಕೆಲವೆಡೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಈ ನಡುವೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕಾನೂನಾತ್ಮಕವಾಗಿ ಏನು ಸಾಧ್ಯವಿದೆಯೋ ಅದನ್ನು ಈಡೇರಿಸುತ್ತೇವೆ. ನಾನು ಖಾಸಗಿ ಸಾರಿಗೆ ಚಾಲಕರ ಪರವಾಗಿ ಇದ್ದೇನೆ ಎಂದಿದ್ದಾರೆ.
ಬೆಂಗಳೂರು, ಸೆ.11: ಖಾಸಗಿ ಸಾರಿಗೆ ಒಕ್ಕೂಟಗಳು ಮುಂದಿಟ್ಟ ಬೇಡಿಕೆಗಳಲ್ಲಿ ಕಾನೂನಾತ್ಮಕವಾಗಿ ಈಡೇರಿಸಬಹುದಾದ ಬೇಡಿಕೆಗಳನ್ನು ಈಡೇರಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದರು. ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಖಾಸಗಿ ಸಾರಿಗೆ ಒಕ್ಕೂಟಗಳು ನಡೆಸುತ್ತಿರುವ ಬೆಂಗಳೂರು ಬಂದ್ ವಿಚಾರವಾಗಿ ಮಾತನಾಡಿದ ಅವರು, ನಾನು ಖಾಸಗಿ ಸಾರಿಗೆ ಚಾಲಕರ ಪರವಾಗಿ ಇದ್ದೇನೆ ಎಂದಿದ್ದಾರೆ.
ಖಾಸಗಿ ಸಾರಿಗೆ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆಗೆ ಕರೆದಾಗ ಬರಲಿಲ್ಲ. ಯಾರೋ ಅಧಿಕಾರಿಗಳು ಏನೋ ಹೇಳಿದರು ಅಂತ ಸಭೆಗೆ ಬರಲಿಲ್ಲ ಎಂದು ಹೇಳಿದ ಸಾರಿಗೆ ಸಚಿವರು, ಕಳೆದ ನಾಲ್ಕು ವರ್ಷಗಳಿಂದ ಖಾಸಗಿ ಸಾರಿಗೆ ಸಂಸ್ಥೆಗಳ ಬೇಡಿಕೆಗಳಿವೆ. ಟ್ಯಾಕ್ಸ್ ಹೆಚ್ಚಳ ಮತ್ತು ಶಕ್ತಿ ಯೋಜನೆ ನಮ್ಮ ಸರ್ಕಾರ ಜಾರಿಗೆ ತಂದಿದೆ ಎಂದರು.
ಶಕ್ತಿ ಯೋಜನೆಯಿಂದ ನಷ್ಟ ಆಗಿದೆ ಪರಿಹಾರ ಕೊಡಿ ಅಂತಿದ್ದಾರೆ. ಅದು ಪ್ರಾಯೋಗಿಕವಾಗಿ ಸಾಧ್ಯವಿಲ್ಲ ಅಂತಾ ಸ್ಪಷ್ಟವಾಗಿ ಹೇಳಿದ್ದೇವೆ. ನಮ್ಮ ಶಕ್ತಿ ಯೋಜನೆಗೆ ಬಜೆಟ್ನಲ್ಲಿ 2500 ಕೋಟಿ ರೂ. ಮೀಸಲಿರಿಸಲಾಗಿದೆ. ಆದರೆ, ಸಾರಿಗೆ ಚಾಲಕರು 3 ಲಕ್ಷ ಮಂದಿ ಇದ್ದಾರೆ. ಅವರ ಬೇಡಿಕೆ ಪ್ರಕಾರ ಪರಿಹಾರ ಕೊಟ್ಟರೆ 5 ಸಾವಿರ ಕೋಟಿ ರೂ. ಆಗುತ್ತದೆ. ಇದನ್ನು ಈಡೇರಿಸಲು ಸಾಧ್ಯಾನಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬೆಂಗಳೂರು ಬಂದ್ಗೆ ನೀರಸ ಪ್ರತಿಕ್ರಿಯೆ; ರಸ್ತೆಗಿಳಿದ ಆಟೋ, ಬಸ್ಗಳು, ಕಲ್ಲು ತೂರಾಟ, ಚಾಲಕನಿಗೆ ಸನ್ಮಾನ
ಬಂದ್ಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನೈತಿಕ ಬೆಂಬಲ ನೀಡಿದ್ದಾರೆ. ತಮ್ಮ ಸರ್ಕಾರವಿದ್ದಾಗ ಈಡೇರಿಸದೇ ಇರುವವರಿಗೆ ಬೆಂಬಲ ಸೂಚಿಸಲು ಯಾವ ನೈತಿಕತೆ ಇದೆ ಎಂದು ಸಚಿವರು ಪ್ರಶ್ನಿಸಿದರು. ಅಲ್ಲದೆ, ನಾನು ಕಾನೂನಾತ್ಮಕ ಬೇಡಿಕೆಗಳನ್ನು ಈಡೇರಿಸುವ ಭರವಸೆ ನೀಡುತ್ತೇನೆ ಎಂದರು.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರ್ಯಾಪಿಡೋ ಬೈಕ್ ಟ್ಯಾಕ್ಸಿ ಬಂದಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಇದ್ದಾಗಲೇ ಬೈಕ್ ಟ್ಯಾಕ್ಸಿಗಳು ಬಂದಿವೆ. ಕೆಲವು ಪ್ರಕರಣಗಳು ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್ನಲ್ಲಿವೆ. ಅವುಗಳನ್ನು ತ್ವರಿತಗತಿಯಲ್ಲಿ ಇತ್ಯರ್ಥವಾಗುವ ರೀತಿ ವಾದ ಮಂಡನೆ ಮಾಡಲಾಗುವುದು. ಸಮರ್ಥ ವಾದ ಮಾಡುವಂತೆ ನಮ್ಮ ಅಡ್ವೊಕೇಟ್ ಜನರಲ್ ಜೊತೆಗೆ ಮಾತನಾಡಿದ್ದೇನೆ ಎಂದರು.
ಕಡಿಮೆ ಬಡ್ಡಿ ದರದಲ್ಲಿ ಸಾಲ
ಖಾಸಗಿ ಸಾರಿಗೆಯವರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತೇನೆ ಎಂದು ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಹೇಳಿದ ಸಚಿವ ರಾಮಲಿಂಗಾರೆಡ್ಡಿ, ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಬಗ್ಗೆ ಸಿಎಂ ಸಿದ್ದರಾಮಯ್ಯ ಜೊತೆ ಚರ್ಚೆ ನಡೆಸಲಾಗುವುದು. ನಾನು ನಿಮ್ಮ ಪರವಾಗಿಯೇ ಇದ್ದೇನೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:09 pm, Mon, 11 September 23