ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆ ಇತಿಹಾಸ, ಕಾರ್ತಿಕ ಮಾಸದಲ್ಲೇ ನಡೆಯಲು ಕಾರಣವೇನು? ಇಲ್ಲಿದೆ ಮಾಹಿತಿ

|

Updated on: Nov 25, 2024 | 11:30 AM

ಬಸವನಗುಡಿಯ ದೊಡ್ಡ ಬಸವನ ದೇವಸ್ಥಾನದಲ್ಲಿ ಪ್ರತಿ ವರ್ಷ ನಡೆಯುವ ಕಡಲೆಕಾಯಿ ಪರಿಷೆ (ಜಾತ್ರೆ)ಯ ಇತಿಹಾಸ ಮತ್ತು ಈ ಬಾರಿಯ ವಿಶೇಷತೆ ಇಲ್ಲಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಈ ಜಾತ್ರೆಯಲ್ಲಿ ವಿವಿಧ ಬಗೆಯ ಕಡಲೆಕಾಯಿಗಳು ದೊರೆಯುತ್ತವೆ. ಈ ವರ್ಷದ ಕಡಲೆಕಾಯಿ ಬೆಲೆಗಳು ಮತ್ತು ಜಾತ್ರೆಯ ಆರಂಭ ದಿನಾಂಕಗಳ ಬಗ್ಗೆಯೂ ಮಾಹಿತಿ ಇದೆ.ಜಾತ್ರೆಯ ಮೂಲ ಮತ್ತು ಅದರ ಸಂಪ್ರದಾಯಿಕ ಮಹತ್ವವನ್ನು ಸಹ ಲೇಖನ ತಿಳಿಸುತ್ತದೆ.

ಬೆಂಗಳೂರು ಬಸವನಗುಡಿ ಕಡಲೆಕಾಯಿ ಪರಿಷೆ ಇತಿಹಾಸ, ಕಾರ್ತಿಕ ಮಾಸದಲ್ಲೇ ನಡೆಯಲು ಕಾರಣವೇನು? ಇಲ್ಲಿದೆ ಮಾಹಿತಿ
ಕಡಲೆಕಾಯಿ ಪರಿಷೆ
Follow us on

ಬೆಂಗಳೂರು, ನವೆಂಬರ್​ 25: ಪ್ರತಿವರ್ಷ ಕಾರ್ತಿಕ ಮಾಸದ (Kartika Masa) ಕೊನೆ ಸೋಮವಾರದಿಂದ ಎರಡು ದಿನಗಳ ಕಾಲ ಬಸವನಗುಡಿಯ (Basavangudi) ದೊಡ್ಡ ಬಸವನ ದೇವಸ್ಥಾನದ ಹತ್ತಿರ ಕಡಲೆಕಾಯಿ ಪರಿಷೆ (ಜಾತ್ರೆ) (Kadalekai Parishe) ನಡೆಯುತ್ತದೆ. ಬಸವನಗುಡಿಯಲ್ಲಿ ನೂರಾರು ವರ್ಷಗಳಿಂದ ಕಡಲೆಕಾಯಿ ಪರಿಷೆ ನಡೆಯುತ್ತಿದೆ. ಈ ಬಾರಿಯ ಕಡಲೆಕಾಯಿ ಪರಿಷೆ ಸೋಮವಾರ (ನ.25) ಇಂದಿನಿಂದ ಆರಂಭವಾಗಿದೆ. ಆದರೆ, ಎಂದಿನಂತೆ ಎರಡು ದಿನಕ್ಕೆ ಮುಂಚಿತವಾಗಿಯೇ ಸಡಗರ ಶುರುವಾಗಿದೆ.

ಈ ಬಾರಿಯ ಬಸವನಗುಡಿಯ ಕಡಿಲೆಕಾಯಿ ಪರಿಷೆಯಲ್ಲಿ 10 ಬಗೆಯ ಬಗೆಯ ಕಡಲೆಕಾಯಿಗಳು ಬಂದಿವೆ. ಕೋಲಾರ, ತಮಿಳುನಾಡು, ಚಿಕ್ಕಬಳ್ಳಾಪುರ, ಆಂಧ್ರ ಪ್ರದೇಶ, ಸೇರಿದಂತೆ ವಿವಿಧೆಡೆಯಿಂದ ರೈತರು ಬಂದಿದ್ದು, ನಾಟಿ, ಫಾರಂ, ಬೋಂಡಾ ಹಾಗೂ ಬಾದಮಿ ಕಡಲೆಕಾಯಿಗಳು ಪ್ರಮುಖ ಆಕರ್ಷಣೆಯಾಗಿವೆ.

ಆದರೆ, ಬೆಲೆ ಕೊಂಚ ಜಾಸ್ತಿಯಾಗಿದೆ. ಬಾದಾಮಿ ಕಡಲೆಕಾಯಿ – ಸೇರಿಗೆ 50 ರೂ., ಬೋಂಡಾಕಾಯಿ – 70 ರೂ., ನಾಟಿ ಕಡಲೆಕಾಯಿ – 60 ರೂ. ಫಾರಂ‌ಕಡಲೆಕಾಯಿ – 70 ರೂ. ಇದೆ.

ಕಡಲೆಕಾಯಿ ಪರಿಷೆಗೆ ಕಾರಣ

ಹಿಂದಿನ ಕಾಲದಲ್ಲಿ ಬಸವನಗುಡಿಯಲ್ಲಿ ಸಾಕಷ್ಟು ಕಡಲೆಕಾಯಿ (ಶೇಂಗಾ) ಬೆಳೆಯುತ್ತಿದ್ದರು. ಸಮೃದ್ಧವಾಗಿ ಬೆಳೆದು ಕಡಲೆಕಾಯಿ ಕಟಾವಿಗೆ ಸಿದ್ಧವಾದ ಸಂದರ್ಭದಲ್ಲಿ ತೋಟಕ್ಕೆ ಬಸವ (ನಂದಿ) ನುಗ್ಗಿ ಬೆಳೆ ನಾಶಪಡಿಸುತ್ತಿತ್ತು. ಇದರಿಂದ, ರೈತರಿಗೆ ಅಪಾರ ನಷ್ಟವಾಗುತ್ತಿತ್ತು. ಇದರಿಂದ ಪರಿಹಾರ ಕಂಡುಕೊಳ್ಳಲು ರೈತರು ನಂದಿ ದೇವ (ಬಸವಣ್ಣ)ನ ಮೊರೆ ಹೋದರು.

ಹೌದು, ರೈತರು ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ತಮ್ಮ ಮೊದಲ ಬೆಳೆಯನ್ನು ಬಸವನಿಗೆ ಅರ್ಪಿಸಲು ಆರಂಭಿಸಿದರು. ಪ್ರತಿವರ್ಷ ಕಾರ್ತಿಕ ಮಾಸದ ಕೊನೆ ಸೋಮವಾರ ಬಸವಣ್ಣನಿಗೆ ಕಡಲೆಕಾಯಿ ಅರ್ಪಿಸಿ ಪ್ರಾರ್ಥಿಸಲು ಆರಂಭಿಸಿದರು. ಹೀಗೆ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಬಸವನಗುಡಿಯಲ್ಲಿ ನಂದಿ ವಿಗ್ರಹವೊಂದು ದೊರಕಿತು.

ಇದನ್ನೂ ಓದಿ: ಕಳೆಗಟ್ಟಿದ ಬೆಂಗಳೂರಿನ ಬಸವನಗುಡಿ ಕಡಲೆಕಾಯಿ ಪರಿಷೆ, ಫೋಟೋಸ್​ ನೋಡಿ

ನಂತರ, ಈ ಸ್ಥಳದಲ್ಲಿ ನಾಡಪ್ರಭು ಕೆಂಪೇಗೌಡರು 16ನೇ ಶತಮಾನದಲ್ಲಿ ನಂದಿಯ ವಿಗ್ರಹದ ಸುತ್ತಲೂ ದೇವಾಲಯವನ್ನು ನಿರ್ಮಿಸಿದರು. ಇದನ್ನು ಬಸವನಗುಡಿ ಅಥವಾ ಬಿಗ್​ ಬುಲ್​ ಟೆಂಪಲ್​​ ಎಂದು ಕರೆಯಲಾಗುತ್ತದೆ. ಬಳಿಕ ರೈತರು, ದೊಡ್ಡ ಬಸವಣ್ಣನಿಗೆ ಕಡಲೆಕಾಯಿ ಅರ್ಪಿಸಲು ಆರಂಭಿಸಿದರು.

ಕಾರ್ತಿಕ ಮಾಸದಲ್ಲೇ ಪರಿಷೆ ಯಾಕೆ?

ಕಾರ್ತಿಕ ಮಾಸ ಶಿವನ ಆರಾಧನೆಗೆ ಸೂಕ್ತವಾದ ತಿಂಗಳು. ಕಾರ್ತಿಕ ಮಾಸದ ಸೋಮವಾರದಂದು ಶಿವನಿಗೆ ವಿಶೇಷ ಪೂಜೆಗಳು ನೆರವೇರುತ್ತವೆ. ಪ್ರತಿವರ್ಷ ಕಾರ್ತಿಕ ಮಾಸದ ಕೊನೆಯ ಸೋಮವಾರದಂದು ಬಸವನಗುಡಿ ಕಡಲೆಕಾಯಿ ಪರಿಷೆ ನಡೆಯುತ್ತದೆ. ಕಾರ್ತಿಕ ಮಾಸದ ಸೋಮವಾರವು ಭಗವಾನ್​ ಶಿವನ ನೆಚ್ಚಿನ ದಿನವಾಗಿದ್ದು, ನಂದಿಯು ಶಿವನ ವಾಹನವಾಗಿರುವುದರಿಂದ ನಂದಿಗೆ ಈ ದಿನ ಪ್ರಿಯವಾಗಿದೆ. ಆದ್ದರಿಂದ ಕಾರ್ತಿಕ ಮಾಸದಲ್ಲಿ ಸೋಮವಾರ ಕಡೆಲೆಕಾಯಿ ಪರಿಷೆ ನಡೆಯುತ್ತದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:25 am, Mon, 25 November 24