ಬೆಂಗಳೂರು, ನವೆಂಬರ್ 21: ಬಿಎಂಟಿಸಿ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಗಳು ಬೆಂಗಳೂರಿನಲ್ಲಿ ಮತ್ತೆ ಮುಂದುವರಿದಿವೆ. ಸ್ಕೂಟರ್‌ಗೆ ಸೈಡ್ ಕೊಡಲಿಲ್ಲ ಎಂಬ ಕಾರಣಕ್ಕೆ, ನೃಪತುಂಗ ರಸ್ತೆಯ ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಬಿಎಂಟಿಸಿ ಬಸ್ ಚಾಲಕ ಕುಶಾಲ್ ಕುಮಾರ್ (38) ಎಂಬವರ ಮೇಲೆ ಹಲ್ಲೆ ನಡೆಸಲಾಗಿದೆ. ಮೆಜೆಸ್ಟಿಕ್ನಿಂದ ಸಿಕೆ ಪಾಳ್ಯ ಕಡೆ ಹೊರಟಿದ್ದ ಬಿಎಂಟಿಸಿ ಬಸ್, ರೂಟ್ ಸಂಖ್ಯೆ 365K/1, ಬಸ್ ನಂಬರ್ KA-57 F-0835 (ಡಿಪೋ-34 ಜಂಬೂಸವಾರಿ ದಿಣ್ಣೆಗೆ ಸೇರಿದ ಬಿಎಂಟಿಸಿ ಬಸ್) ಚಾಲಕನ ಮೇಲೆ ಹಲ್ಲೆ ನಡೆದಿದೆ.
ಕೆಆರ್ ಸರ್ಕಲ್ನಿಂದ ನೃಪತುಂಗ ರಸ್ತೆಯಲ್ಲಿ ಬರುತ್ತಿದ್ದ ಸವಾರ, ಸ್ಕೂಟರ್‌ಗೆ ಸೈಡ್ ಬಿಡಲಿಲ್ಲ ಎನ್ನುವ ಕಾರಣಕ್ಕೆ ಏಕಾಏಕಿ, ಚಾಲಕನ ಸೀಟ್ ಬಳಿಯ ಡೋರ್ನಿಂದ ಬಸ್ ಹತ್ತಿ ಹಲ್ಲೆ ನಡೆಸಿದ್ದಾನೆ. ಚಾಲಕ ಕುಶಾಲ್ ಕುಮಾರ್ ಕೊರಳಪಟ್ಟಿಗೆ ಕೈಹಾಕಿ ಎಳೆದಿದ್ದಾನೆ. ಇದನ್ನು ಪ್ರಶ್ನಿಸಿದ ನಿರ್ವಾಹಕ ಕೃಷ್ಣ ಮೇಲೂ ಹಲ್ಲೆಗೆ ಯತ್ನಿಸಲಾಗಿದೆ. ಸದ್ಯ ಘಟನೆ ಸಂಬಂಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ದೂರುದಾರರಾದ ಕುಶಾಲ್ ಕುಮಾರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ, ಅವರು ಬಿಎಂಟಿಸಿ ಬಸ್ ಚಾಲಕರಾಗಿದ್ದು, ನವೆಂಬರ್ 20ರಂದು ಸಂಜೆ 05:40 ಗಂಟೆಗೆ ಕೆಬಿಎಸ್, (ಮಜೆಸ್ಟಿಕ್) ಬಸ್ ನಿಲ್ದಾಣದಿಂದ ಬಿಎಂಟಿಸಿ ಬಸ್ ನಂ.ಕೆಎ-57 ಎಫ್-835 ಅನ್ನು ಸಿ,ಕೆ.ಪಾಳ್ಯ ಕಡೆಗೆ ಚಾಲನೆ ಮಾಡಿಕೊಂಡು ಕೆ.ಆರ್,ಸರ್ಕಲ್ ನಿಂದ ನೃಪತುಂಗ ರಸ್ತೆಯಲ್ಲಿ ಹೋಗುತ್ತಿರುವಾಗ ಮ್ಯಾಜಿಸ್ಟ್ರೇಟ್ ಕೋರ್ಟ್ ಬಳಿ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಏಕಾವಿಕಿ ಅವಾಚ್ಯ ಶಬ್ದಗಳಿಂದ ಬೈದಿದ್ದಾನೆ. ಆಗ ಆವರು ಏನಾಯಿತು ಎಂದು ಕೇಳಿದಾಗ ಬಾಗಿಲ ಮುಖಾಂತರ ಬಸ್ ಹತ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಕರ್ತವ್ಯದಲ್ಲಿದ್ದ ಸಿಬ್ಬಂದಿಯ ಸಮವಸ್ತ್ರವನ್ನು ಸಾರ್ವಜನಿಕರ ಮುಂದೆ ಹಿಡಿದು ಎಳೆದಾಡಿ ಎಡ ಕಿವಿ ಮತ್ತು ಭುಜದ ಮೇಲೆ ಕೈಗಳಿಂದ ಹೊಡೆದು ಬಸ್ ಅನ್ನು ಚಾಲನೆ ಮಾಡದಂತೆ ತಡದು ಕರ್ತವ್ಯಕ್ಕೆ ಅಡ್ಡಿ ಪಡಿಸಿರುತ್ತಾನೆ. ಪ್ರಾಣ ಬೆದರಿಕೆ ಹಾಕಿರುತ್ತಾನೆ. ಈ ಬಗ್ಗೆ ಬಸ್ ನಲ್ಲಿದ್ದ ನಿರ್ವಾಹಕ ಕೃಷ್ಣ ಅವರು ಪ್ರಶ್ನಿಸಿದಾಗ ಅವರಿಗೂ ಸಹ ಅವಾಚ್ಯ ಶಬ್ದಗಳಿಂದ ಬೈದಿರುತ್ತಾನೆ. ಸ್ಥಳದಲ್ಲಿದ್ದ ಕಾರಿನ ಚಾಲಕನೂ ಸಹ ಇದಕ್ಕೆ ಕುಮ್ಮಕ್ಕು ನೀಡಿದ್ದಾನೆ.
ಇದನ್ನೂ ಓದಿ: ಬೆಂಗಳೂರು: ಕಳ್ಳತನ ಮಾಡಿ 15 ದಿನಗಳಲ್ಲಿ 12 ಸಾವಿರ ಕಿ.ಮೀ ಪ್ರಯಾಣ….!
ಪ್ರಾಣ ಬೆದರಿಕೆ ಹಾಕಿ, ಸಾರ್ವಜನಿಕ ಕರ್ತವ್ಯಕ್ಕೆ ಅಡ್ಡಿಪಡಿಸಿರುವವನು ಹೆಸರು ಮೊಹಮ್ಮದ್ ಫಜಲ್ ಎಂದು ತಿಳಿದಿದ್ದು, ಅದ್ದರಿಂದ ಆತನ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
3 ತಿಂಗಳಲ್ಲಿ ಬಿಎಂಟಿಸಿ ಸಿಬ್ಬಂದಿ ಮೇಲೆ ನಡೆದ 9ನೇ ಹಲ್ಲೆ ಪ್ರಕರಣ ಇದಾಗಿದೆ. ನವೆಂಬರ್ ತಿಂಗಳಲ್ಲೇ ಇದು ನಾಲ್ಕನೇ ಹಲ್ಲೆ ಪ್ರಕರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ