
ಬೆಂಗಳೂರು, ಡಿಸೆಂಬರ್ 28: ಮಹಾರಾಷ್ಟ್ರದ ANTF ಕೊಂಕಣ ವಿಭಾಗದ ಪೊಲೀಸರು ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಭರ್ಜರಿ ಬೇಟೆ ನಡೆಸಿದ್ದಾರೆ. ವಿವಿಧೆಡೆ ದಾಳಿ ನಡೆಸಿ 55.88 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಿದ್ದು, ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಿದ್ದಾರೆ. RJ ಇವೆಂಟ್ ಹೆಸರಿನಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿರೋದು ಬೆಂಗಳೂರಿಗರನ್ನು ಬೆಚ್ಚಿ ಬೀಳಿಸಿದೆ.
ಮುಂಬೈನಲ್ಲಿ ಇತ್ತೀಚೆಗೆ 1.5 ಕೋಟಿ ರೂ. ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿತ್ತು. ಈ ವೇಳೆ ಅರೆಸ್ಟ್ ಆಗಿದ್ದ
ಅಬ್ದುಲ್ಲಾ ಖಾದರ್ ಶೇಕ್ ಎಂಬಾತ ವಿಚಾರಣೆ ವೇಳೆ ಹಲವು ವಿಷಯ ಬಾಯ್ಬಿಟ್ಟಿದ್ದ. ಇದರ ಅನ್ವಯ ಬೆಳಗಾವಿ ಮೂಲದ ಪ್ರಶಾಂತ್ ಯಲ್ಲಪ್ಪ ಪಾಟೀಲ್ ಎಂಬಾತನನ್ನು ಬಂಧಿಲಾಗಿತ್ತು. ಪಾಟೀಲ್ ಮಾಹಿತಿ ಮೇರೆಗೆ ಬೆಂಗಳೂರಿನ ಮೂರು ಕಡೆ ದಾಳಿ ಮಹಾರಾಷ್ಟ್ರ ಪೊಲೀಸರು ದಾಳಿ ನಡೆಸಿದ್ದಾರೆ. ಹೊರಮಾವು, ಯರಪ್ಪನಹಳ್ಳಿ, ಕಣ್ಣೂರು ಬಳಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿರುವುದು ಪತ್ತೆಯಾಗಿದೆ.
ಇದನ್ನೂ ಓದಿ: ಹೊಸ ವರ್ಷ ಹಿನ್ನೆಲೆ ಬೆಂಗಳೂರಲ್ಲಿ ಭರ್ಜರಿ ಡ್ರಗ್ಸ್ ಬೇಟೆ; 2 ಪ್ರತ್ಯೇಕ ಪ್ರಕರಣಗಳಲ್ಲಿ 28 ಕೋಟಿ ರೂ.ಮೌಲ್ಯದ ಗಾಂಜಾ ಸೀಜ್
ದಾಳಿ ವೇಳೆ 4.1 ಕೆಜಿ ಘನ MDMA ಮತ್ತು 17 ಕೆಜಿ ದ್ರವ MDMA ಸೇರಿ 55.88 ಕೋಟಿ ರೂ. ಮೌಲ್ಯದ ಒಟ್ಟು 21.4 ಕೆಜಿ ಡ್ರಗ್ಸ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಾಜಸ್ಥಾನ ಮೂಲದ ಸೂರಜ್ ರಮೇಶ್ ಯಾದವ್, ಮಲ್ಖಾನ್ ರಾಮಲಾಲ್ ಬಿಷ್ಣೋಯ್ ಸೇರಿದಂತೆ ನಾಲ್ವರ ಬಂಧಿಸಲಾಗಿದೆ. ಈ ಫ್ಯಾಕ್ಟರಿಗಳಿಂದ ದೇಶದ ಅನೇಕ ರಾಜ್ಯಗಳಿಗೆ ಡ್ರಗ್ಸ್ ಸಪ್ಲೈ ಶಂಕೆ ವ್ಯಕ್ತವಾಗಿದ್ದು, ಮಹಾರಾಷ್ಟ್ರ ಪೊಲೀಸರು ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ರಾಜಸ್ಥಾನ ಮೂಲದ ಕಿಂಗ್ಪಿನ್ಗಳು ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದು, ಯೋಗಿರಾಜ್ ಕುಮಾರ್ ಮತ್ತು ನಯನ್ ಪವರ್ ಇದರ ಪ್ರಮುಖ ರೂವಾರಿಗಳಾಗಿದ್ದಾರೆ. ಕರ್ನಾಟಕ ಮಾತ್ರವಲ್ಲದೆ ದೇಶದ ಹಲವೆಡೆ ಇವರು ಡ್ರಗ್ಸ್ ಫ್ಯಾಕ್ಟರಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಉಳಿದ ಆರೋಪಿಗಳಿಗೂ ಮಹಾರಾಷ್ಟ್ರ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ವರದಿ: ಪ್ರದೀಪ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:33 am, Sun, 28 December 25