ಬೆಂಗಳೂರು, ಡಿ.26: ಬೆಂಗಳೂರಿನ ಜನರಿಗೆ ನೆರವಾಗಲಿ ಎಂದು ಇಂದಿರಾ ಕ್ಲಿನಿಕ್‌ಗಳನ್ನು ತೆರೆಯಲಾಗಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಏನಾದ್ರೂ ತುರ್ತು ಚಿಕಿತ್ಸೆ ಬೇಕಿದ್ರೆ ಸಹಾಯ ಸಿಗಲಿ ಅಂತಾ ನಿರ್ಮಿಸಲಾಗಿದೆ. ಆದರೆ ಇದೀಗ ನಿರ್ವಹಣೆಯಿಲ್ಲದೇ ಇಂದಿರಾ ಕ್ಲಿನಿಕ್ ಕಟ್ಟಡ ದುಸ್ಥಿತಿ ತಲುಪಿದೆ. ಜನರಿಗೆ ಚಿಕಿತ್ಸೆ ಕೊಡೋ ಬದಲು ಆಸ್ಪತ್ರೆಗೆ ಚಿಕಿತ್ಸೆ ನೀಡಬೇಕಾದ ಸ್ಥಿತಿ ನಿರ್ಮಾಣವಾಗಿಬಿಟ್ಟಿದೆ. ಬೆಂಗಳೂರಿನ ಹೃದಯ ಭಾಗವಾಗಿರೋ ಮೆಜೆಸ್ಟಿಕ್ ನಲ್ಲಿ ಪ್ರತಿನಿತ್ಯ ಸಾವಿರಾರು ಪ್ರಯಾಣಿಕರು ಓಡಾಡುತ್ತಾರೆ. ಬೇರೆ ಬೇರೆ ಕಡೆಯಿಂದ ಬರೋ ಪ್ರಯಾಣಿಕರಿಗೆ, ಸೇವೆಯಲ್ಲಿರೋ ಬಿಎಂಟಿಸಿ ಚಾಲಕರು, ನಿರ್ವಾಹಕರಿಗೆ ತುರ್ತು ಚಿಕಿತ್ಸೆ ಸಿಗಲಿ ಎಂದು ಪಾಲಿಕೆ ಇದೇ ಬಸ್ ನಿಲ್ದಾಣದ ಬಳಿ ನಿರ್ಮಿಸಿದ್ದ ಇಂದಿರಾ ಕ್ಲಿನಿಕ್ ಇದೀಗ ಹಳ್ಳ ಹಿಡಿತಿದೆ.
2017 ರಲ್ಲಿ ಸಿದ್ದರಾಮಯ್ಯ ಆಡಳಿತ ಅವಧಿಯಲ್ಲಿ, ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ನಿರ್ಮಿಸಿದ್ದ ಈ ಕ್ಲಿನಿಕ್, ಇದೀಗ ಸೂಕ್ತ ನಿರ್ವಹಣೆಯಿಲ್ಲದೇ ಸೊರಗುತ್ತಿದೆ. ಒಂದೆಡೆ ಪ್ರವೇಶದ್ವಾರದ ಮುಂಭಾಗದಲ್ಲಿ ಸೀಟ್ ಕಿತ್ತುಬಂದಿದ್ರೆ, ಎಲ್ಲೆಂದರಲ್ಲಿ ಮೂತ್ರ ವಿರ್ಸಜನೆ ಮಾಡಿರೋದರಿಂದ ಕ್ಲಿನಿಕ್ ಆವರಣ ಗಬ್ಬೆದ್ದು ನಾರುತ್ತಿದೆ. ಪ್ರಯಾಣಿಕರಿಗೆ ತುರ್ತು ಸೇವೆ ನೀಡಬೇಕಿದ್ದ ಕ್ಲಿನಿಕ್ ಸಮಯ ನಿಗಧಿ ಮಾಡಿದ್ರೂ ಸರಿಯಾಗಿ ತೆಗೆಯುತ್ತಿಲ್ಲ ಅಂತಾ ಜನರು ಕಿಡಿಕಾರುತ್ತಿದ್ದಾರೆ.
ಸದ್ಯ ದೂರ ದೂರದ ಊರುಗಳಿಂದ ಬರೋ ಪ್ರಯಾಣಿಕರಿಗೆ ತಕ್ಷಣ ವೈದ್ಯಕೀಯ ನೆರವು ನೀಡಬೇಕಿದ್ದ ಈ ಕ್ಲಿನಿಕ್, ಇದೀಗ ಶೋಚನೀಯ ಸ್ಥಿತಿ ತಲುಪಿದ್ರು ಅಧಿಕಾರಿಗಳು ಮೌನವಹಿಸಿದ್ದಾರೆ. ಪಾಲಿಕೆ ಹಾಗೂ ಆರೋಗ್ಯಾಧಿಕಾರಿಗಳು ಇತ್ತ ಗಮನಹರಿಸಿ ಪ್ರಯಾಣಿಕರಿಗೆ ಸೇವೆ ನೀಡುವಂತೆ ವಾತಾವರಣ ನಿರ್ಮಿಸಬೇಕಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಹೊಸ್ತಿನಲ್ಲಿ ಯುವ ಸಮುದಾಯದ ಮತಬೇಟೆಗೆ ಇಳಿದ ಕಾಂಗ್ರೆಸ್, ಇಂದಿನಿಂದ ಯುವ ನಿಧಿ ನೋಂದಣಿ ಆರಂಭ
ಇಂದಿರಾ ಕ್ಯಾಂಟೀನ್ ಜನಪ್ರಿಯತೆ ಪಡೆದ ಬೆನ್ನಲ್ಲೇ ಮುಂದುವರೆದ ಭಾಗವಾಗಿ ಕಾಂಗ್ರೆಸ್ ಸರ್ಕಾರ 2017ರಲ್ಲಿ ಇಂದಿರಾ ಕ್ಲಿನಿಕ್‌ಗಳನ್ನು ನಗರದ ಎರಡು ಕಡೆ ಪ್ರಾಯೋಗಿಕವಾಗಿ ಆರಂಭಿಸಿತ್ತು. ಮೆಜೆಸ್ಟಿಕ್ ಬಸ್ ನಿಲ್ದಾಣ ಹಾಗೂ ಯಶವಂತಪುರ ಬಸ್ ನಿಲ್ದಾಣದಲ್ಲಿ ಪ್ರಾಯೋಗಿಕವಾಗಿ ಇಂದಿರಾ ಕ್ಲಿನಿಕ್‌ಗಳನ್ನು ಆರಂಭಿಸಲಾಗಿತ್ತು. ಆದರೆ ಈ ಇಂದಿರಾ ಕ್ಲಿನಿಕ್‌ಗಳು ನಿರ್ವಾಹಣೆ ಇಲ್ಲದೆ ಹೋಗಿವೆ. ಶುಚಿತ್ವ ಇಲ್ಲ. ಜನರು ಈ ಕ್ಲಿನಿಕ್ಗೆ ಹೋಗಲು ಭಯಪಡುವಂತಾಗಿದೆ.
ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ