AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangalore News: ಮೂಲಸೌಕರ್ಯಕ್ಕಾಗಿ ಬಂಡೇಮಠ ಕೆಎಚ್.ಬಿ. ನಿವಾಸಿಗಳ ಪ್ರತಿಭಟನೆ; ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿಗೆ ಒತ್ತಾಯ

ಬೆಂಗಳೂರು: ಚುನಾವಣೆ ವೇಳಾಪಟ್ಟಿ ಪ್ರಕಟವಾದ ಬಳಿಕ ಕಾರ್ಯಾದೇಶ (ವರ್ಕ್ ಆರ್ಡರ್) ಕೂಡ ನೀಡದೆ ಕಾಮಗಾರಿ ಆರಂಭಿಸಿ, ನಂತರ ಸ್ಥಗಿತಗೊಳಿಸಿ, ನಿತ್ಯ ನರಕ ಸೃಷ್ಟಿಸಿರುವ ಬಿಬಿಎಂಪಿಯ ವಿರುದ್ಧ ಬಂಡೇಮಠ ಕೆ.ಎಚ್.ಬಿ. ನಿವಾಸಿಗಳು ಪ್ರತಿಭಟನೆ ನಡೆಸಿದರು.

Bangalore News: ಮೂಲಸೌಕರ್ಯಕ್ಕಾಗಿ ಬಂಡೇಮಠ ಕೆಎಚ್.ಬಿ. ನಿವಾಸಿಗಳ ಪ್ರತಿಭಟನೆ; ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿಗೆ ಒತ್ತಾಯ
ಮೂಲಸೌಕರ್ಯಕ್ಕಾಗಿ ಬಂಡೇಮಠ ಕೆಎಚ್.ಬಿ. ನಿವಾಸಿಗಳ ಪ್ರತಿಭಟನೆ
Ganapathi Sharma
|

Updated on: May 24, 2023 | 8:16 PM

Share

ಬೆಂಗಳೂರು: ಚುನಾವಣೆ ವೇಳಾಪಟ್ಟಿ ಪ್ರಕಟವಾದ ಬಳಿಕ ಕಾರ್ಯಾದೇಶ (Work Order) ಕೂಡ ನೀಡದೆ ಕಾಮಗಾರಿ ಆರಂಭಿಸಿ, ನಂತರ ಸ್ಥಗಿತಗೊಳಿಸಿ, ನಿತ್ಯ ನರಕ ಸೃಷ್ಟಿಸಿರುವ ಬಿಬಿಎಂಪಿ(BBMP) ವಿರುದ್ಧ ಬಂಡೇಮಠ ಕೆ.ಎಚ್.ಬಿ. ನಿವಾಸಿಗಳು ಪ್ರತಿಭಟನೆ ನಡೆಸಿದರು. ಬಡಾವಣೆಯ ಮುಖ್ಯ ರಸ್ತೆಯಲ್ಲಿ ಹಂಪ್ ರೀತಿಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿದ್ದು ವಾಹನಗಳ ಚಾಸಿಗೆ ತಾಗುತ್ತಿದೆ. ರಸ್ತೆಯಲ್ಲಿ ಮಳೆ ನೀರು ನಿಲ್ಲುತ್ತಿದೆ. ಮಳೆ ನೀರು ಚರಂಡಿಗಳ ಹೂಳನ್ನು ಕೆಲವೆಡೆ ಮಾತ್ರ ತೆಗೆದಿದ್ದು, ನೀರು ಹರಿಯಲು ಜಾಗವಿಲ್ಲದೆ ಮಳೆ ನೀರು ನಿಂತು ಸೊಳ್ಳೆಗಳ ಆವಾಸ ಸ್ಥಾನವಾಗುತ್ತಿದೆ. ಹಳೆ ರಸ್ತೆ ಅಗೆದು ಸಿಮೆಂಟ್ ಚರಂಡಿ ನಿರ್ಮಿಸುವ ಕಾಮಗಾರಿಯನ್ನು ಏಪ್ರಿಲ್ 3ರಂದು ಆರಂಭಿಸಿದ ಗುತ್ತಿಗೆದಾರರು 1 ವಾರ ಕಾಮಗಾರಿ ಮಾಡಿ ನಾಪತ್ತೆಯಾಗಿದ್ದಾರೆ. ರಸ್ತೆಯಲ್ಲಿ ಎಲ್ಲೆಂದರಲ್ಲಿ ಮಣ್ಣಿನ ರಾಶಿ ಬಿದ್ದಿದ್ದು, ಮನೆಗಳಿಗೆ ನೀರು ನುಗ್ಗುತ್ತಿದೆ. ಜನ ನಿತ್ಯ ಬಿದ್ದು ಗಾಯಗೊಳ್ಳುತ್ತಿದ್ದಾರೆ. ಈ ಬಗ್ಗೆ ಬಿಬಿಎಂಪಿ ಕೆಂಗೇರಿ ವಿಭಾಗದ ಎಂಜಿನಿಯರುಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರತಿಭಟನೆಯ ಮಾರ್ಗ ಹಿಡಿದಿದ್ದಾಗಿ ಬಂಡೇಮಠ ಕೆ.ಎಚ್.ಬಿ. ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ರಾಮಕೃಷ್ಣೇಗೌಡ ತಿಳಿಸಿದ್ದಾರೆ.

ಬಡಾವಣೆಯ ಉದ್ಯಾನಗಳು ಒತ್ತುವರಿಯಾಗಿವೆ, ಬಡಾವಣೆ ನಿರ್ಮಾಣವಾಗಿ 20 ವರ್ಷವಾದರೂ ಒಂದೇ ಒಂದು ಉದ್ಯಾನವೂ ಅಭಿವೃದ್ಧಿಯಾಗಿಲ್ಲ. ಇಷ್ಟು ದಿನ ಕರ್ನಾಟಕ ಗೃಹ ಮಂಡಳಿ ನಿರ್ಲಕ್ಷ್ಯ, ಬೇಜವಾಬ್ದಾರಿತನ ತೋರಿತ್ತು. ಈಗ ಬಿಬಿಎಂಪಿಗೆ ಹಸ್ತಾಂತರ ಆಗಿದ್ದರೂ ಜನರ ಸಂಕಷ್ಟ ಬಗೆಹರಿದಿಲ್ಲ ಎಂದು ಉಪಾಧ್ಯಕ್ಷ ಮೋಹನ್ ಕುಮಾರ್ ಬೇಸರ ವ್ಯಕ್ತಪಡಿಸಿದರು.

ಬಡಾವಣೆಯಲ್ಲಿ ಕೆ.ಎಚ್.ಬಿ. ನಿರ್ಮಿಸಿದ ರಸ್ತೆಗಳು ತಿಂಗಳಿಗೇ ಕಿತ್ತು ಬಂದವು. 16 ಅಡಿ ರಸ್ತೆಗೆ ಅನುಮೋದನೆ ನೀಡಿದ್ದರೂ, ಇಲ್ಲಿ ನಿರ್ಮಾಣ ಮಾಡಿರುವುದು ಕೇವಲ 12 ಅಡಿ ರಸ್ತೆ, ಅದೂ ಕಳಪೆಯಾಗಿ ಕಿತ್ತು ಹೋಗಿ ಓಡಾಡಲೂ ಆಗದ ಸ್ಥಿತಿ ನಿರ್ಮಾಣವಾಗಿದೆ. ಬೀದಿ ದೀಪ ಮತ್ತು ಕಸದ ನಿರ್ವಹಣೆಯೂ ಸಮರ್ಪಕವಾಗಿಲ್ಲ. ವಾರದಲ್ಲಿ 2 ದಿನ ಮಾತ್ರ ನೀರು ಬರುತ್ತದೆ. ಹೆಸರಿಗೆ ಕೆ.ಎಚ್.ಬಿ. ಬಡಾವಣೆ, ಆದರೆ ರೆವಿನ್ಯೂ ಬಡಾವಣೆಗಿಂತ ದುಸ್ಥಿತಿಯಲ್ಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಎಂ.ಸತೀಶ್ ತಿಳಿಸಿದ್ದಾರೆ.

ಇದನ್ನೂ ಓದಿ: Bangalore news: ಮೋಜು ಮಸ್ತಿಗಾಗಿ ಬೆಂಗಳೂರು, ತಮಿಳುನಾಡಿನಲ್ಲಿ ಬೈಕ್ ಕಳವು ಮಾಡುತ್ತಿದ್ದ ಗ್ಯಾಂಗ್ ಅರೆಸ್ಟ್

ಕಳೆದ 5 ವರ್ಷದಿಂದ ಸತತ ಹೋರಾಟ ಮಾಡುತ್ತಿದ್ದು, ಶಾಸಕರೂ ಇತ್ತ ಗಮನ ಹರಿಸುತ್ತಿಲ್ಲ. ವಿಧಿ ಇಲ್ಲದೆ ಲೋಕಾಯುಕ್ತ ಮೊರೆ ಹೋದೆವು, ಬಳಿಕ ವಿಧಾನಸಭೆಯ ಅರ್ಜಿಗಳ ಸಮಿತಿಗೆ ದೂರು ಸಲ್ಲಿಸಿದ ತರುವಾಯ ಸದನ ಸಮಿತಿಯ ಅಧ್ಯಕ್ಷರಾಗಿದ್ದ ಶಾಸಕ ಸುರೇಶ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿದ ತರುವಾಯ ಬಿಬಿಎಂಪಿಗೆ ಹಸ್ತಾಂತರವಾಗಿದೆ. ಬಿಬಿಎಂಪಿಗೆ ಗೃಹ ಮಂಡಳಿ ಮೂಲಸೌಕರ್ಯ ಕಲ್ಪಿಸಲು 5 ಕೋಟಿ ರೂಪಾಯಿ ನೀಡಿದೆ. ಆದರೂ ರಸ್ತೆಗಳ ಸ್ಥಿತಿ ಶೋಚನೀಯವಾಗಿದೆ. ಉದ್ಯಾನದಲ್ಲಿ ಕಾಡು ಗಿಡಗಂಟಿ ಬೆಳೆದು ಹಾವು ಚೇಳುಗಳ ಆವಾಸ ಸ್ಥಾನವಾಗಿದೆ ಎಂದು ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಬಿಬಿಎಂಪಿ ಕೂಡಲೇ ಸ್ಥಗಿತಗೊಂಡಿರುವ ಕಾಮಗಾರಿ ಆರಂಭಿಸದಿದ್ದರೆ, ಮೂಲಸೌಕರ್ಯ ಕಲ್ಪಿಸದಿದ್ದರೆ ನ್ಯಾಯಾಲಯದ ಮೊರೆ ಹೋಗದೆ ವಿಧಿ ಇಲ್ಲ ಎಂದು ಪ್ರತಿಭಟನಾ ನಿರತ ನಿವಾಸಿಗಳು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ