ಬೆಂಗಳೂರು, ಮೇ 21: ಮಳೆ (Rain) ಬಂದರೆ ಸಾಕು ಎನ್ನುತ್ತಿದ್ದ ಬೆಂಗಳೂರಿನ (Bengaluru) ಜನರು ಇದೀಗ ಮಳೆ ಬಂದಾಗ ರಸ್ತೆಗಿಳಿಯಲು ಯೋಚಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಗಾಳಿ-ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳಿಂದ ವಾಹನಗಳಿಗೆ ಹಾನಿಯಾದರೂ ಬೆಸ್ಕಾಂ (BESCOM) ಎಚ್ಚೆತ್ತುಕೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಂಬಗಳು (Electric Poles) ಬೀಳುವ ಸ್ಥಿತಿ ತಲುಪಿದ್ದು ಜನ ಆತಂಕಕ್ಕೀಡಾಗುವಂತೆ ಮಾಡಿದೆ.
ಮೆಜೆಸ್ಟಿಕ್ನಿಂದ ರಾಜಾಜಿನಗರ ಕಡೆ ತೆರಳುವ ರಸ್ತೆಯಲ್ಲಿ ಬಸ್ ನಿಲ್ದಾಣದ ಪಕ್ಕವೇ ವಿದ್ಯುತ್ ಕಂಬ ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ವಿದ್ಯುತ್ ಕಂಬದ ಕೆಳಭಾಗದಲ್ಲಿ ಬಹತೇಕ ಓಪನ್ ಆಗಿದ್ದು ಎರಡೇ ಎರಡು ಕಂಬಿಗಳ ಮೇಲೆ ಇಡೀ ಕಂಬ ನಿಂತಿದೆ. ಪಕ್ಕದಲ್ಲೇ ಇರೋ ಮತ್ತೊಂದು ಕಂಬದಲ್ಲಿ ಜಂಕ್ಷನ್ ಬಾಕ್ಸ್ ಬಾಯ್ದೆರೆದಿದ್ದು ಅಪಾಯದ ಸೂಚನೆ ನೀಡ್ತಿದೆ. ಪ್ರತಿನಿತ್ಯ ನೂರಾರು ಜನ ಓಡಾಡೋ ಈ ರಸ್ತೆಯಲ್ಲಿ ಯಾವುದೇ ಕ್ಷಣದಲ್ಲಿ ಅಪಾಯ ಎದುರಾಗೋ ಲಕ್ಷಣ ಎದ್ದು ಕಾಣುತ್ತಿದೆ.
ಅತ್ತ ಮಹಾಲಕ್ಷ್ಮೀ ಲೇ ಔಟ್, ನಂದಿನಿ ಲೇ ಔಟ್ ಸುತ್ತಮುತ್ತ ಮೂರ್ನಾಲ್ಕು ಕಡೆ ವಿದ್ಯುತ್ ಕಂಬ ವಾಲಿದ್ದು, ಜನರ ಜೀವ ಬಲಿ ಪಡೆಯುವ ಮೊದಲೇ ಎಚ್ಚೆತ್ತುಕೊಳ್ಳಿ ಎಂದು ಜನರು ಬೆಸ್ಕಾಂಗೆ ಮನವಿ ಮಾಡಿದ್ದಾರೆ.
ಇತ್ತ ವಿದ್ಯುತ್ ಕಂಬಗಳು ವಾಲಿರೋದನ್ನು ಒಪ್ಪಿಕೊಂಡಿರುವ ಬೆಸ್ಕಾಂ, ಮಳೆ ಇರುವುದರಿಂದ ಒಂದಷ್ಟು ಕಡೆ ಹೀಗಾಗೊದೆ. ಈಗ ಸಮಸ್ಯೆ ಬಗೆಹರಿಸುತ್ತಿದ್ದೇವೆ ಎಂದಿದೆ. ಅಲ್ಲದೆ ಮಳೆ-ಗಾಳಿಗೆ 9. 19 ಕೋಟಿ ರೂ. ನಷ್ಟವಾಗಿದೆ. ಗ್ರಾಹಕರಿಗೆ ವಿದ್ಯುತ್ ನೀಡಬೇಕಿರುವುದರಿಂದ ಮಳೆ ಕಡಿಮೆಯಾದಾಗ ಸರಿಪಡಿಸುತ್ತೇವೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ನಾಗರಾಜ್ ಹೇಳಿದ್ದಾರೆ.
ಇದನ್ನೂ ಓದಿ: ಇನ್ನೂ HSRP ನಂಬರ್ ಪ್ಲೇಟ್ ಅಳವಡಿಸಿಕೊಳ್ಳದ ವಾಹನ ಸವಾರರಿಗೆ ಗುಡ್ನ್ಯೂಸ್
ಒಟ್ಟಿನಲ್ಲಿ ರಸ್ತೆಗುಂಡಿ, ಮರಗಳ ಕಂಟಕ ಸೇರಿ ಹಲವು ಅವಾಂತರಗಳಿಂದ ಸುಸ್ತಾಗಿದ್ದ ಬೆಂಗಳೂರು ಮಂದಿಗೆ ಈಗ ವಿದ್ಯುತ್ ಕಂಬಗಳಿಂದ ಸಂಕಷ್ಟ ಎದುರಾಗುವ ಭೀತಿ ಕಾಡುತ್ತಿದೆ. ಮಳೆಗಾಲ ಶುರುವಾಗುತ್ತಿದ್ದು, ಆಪತ್ತು ಎದುರಾಗುವ ಮೊದಲೇ ನಗರದಲ್ಲಿರುವ ವಾಲಿದ ಕಂಬಗಳು, ಅಪಾಯಕ್ಕೆ ಆಹ್ವಾನ ನೀಡುತ್ತಿರೋ ಟ್ರಾನ್ಸ್ಫಾರ್ಮರ್ಗಳ ಬಗ್ಗೆ ಬೆಸ್ಕಾಂ ಗಮನಹರಿಸಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ