ಪಾಸ್​ಪೋರ್ಟ್​​ಗೆ ಅರ್ಜಿ ಸಲ್ಲಿಸಿದ ಬೆಂಗಳೂರಿನ ಯುವಕನಿಗೆ ಶಾಕ್; 11 ವರ್ಷ ಹಿಂದೆಯೇ ನೀಡಲಾಗಿದೆ ಎಂದ ಅಧಿಕಾರಿಗಳು!

|

Updated on: Jun 22, 2023 | 4:14 PM

28 ವರ್ಷದ ಯುವಕ ಸುಬೋಧ್ ಎಂಬವರು ಇತ್ತೀಚೆಗೆ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ, 11 ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ಅವರಿಗೆ ಪಾಸ್​​ಪೋರ್ಟ್ ನೀಡಲಾಗಿತ್ತು ಎಂದು ತಿಳಿದುಬಂದಿದೆ.

ಪಾಸ್​ಪೋರ್ಟ್​​ಗೆ ಅರ್ಜಿ ಸಲ್ಲಿಸಿದ ಬೆಂಗಳೂರಿನ ಯುವಕನಿಗೆ ಶಾಕ್; 11 ವರ್ಷ ಹಿಂದೆಯೇ ನೀಡಲಾಗಿದೆ ಎಂದ ಅಧಿಕಾರಿಗಳು!
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು: ಪಾಸ್​​ಪೋರ್ಟ್​​ಗೆಂದು (Passport) ಅರ್ಜಿ ಸಲ್ಲಿಸಿದ ವ್ಯಕ್ತಿಯೊಬ್ಬರಿಗೆ, ‘11 ವರ್ಷಗಳ ಹಿಂದೆಯೇ ನಿಮ್ಮ ಹೆಸರಿಗೆ ಪಾಸ್​ಪೋರ್ಟ್ ನೀಡಲಾಗಿದೆ’ ಎಂಬ ಉತ್ತರ ದೊರೆತ ಮತ್ತು ಅರ್ಜಿ ತಿರಸ್ಕೃತಗೊಂಡ ಅಪರೂಪದ ವಿದ್ಯಮಾನ ಬೆಂಗಳೂರಿನಲ್ಲಿ (Bengaluru) ಇತ್ತೀಚೆಗೆ ನಡೆದಿರುವುದಾಗಿ ವರದಿಯಾಗಿದೆ. 28 ವರ್ಷದ ಯುವಕ ಸುಬೋಧ್ ಎಂಬವರು ಇತ್ತೀಚೆಗೆ ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ, 11 ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ಅವರಿಗೆ ಪಾಸ್​​ಪೋರ್ಟ್ ನೀಡಲಾಗಿತ್ತು ಎಂದು ತಿಳಿದುಬಂದಿದೆ. ಕೆಲಸದ ಮೇಲೆ ವಿದೇಶಕ್ಕೆ ತೆರಳುವ ಅಗತ್ಯವಿದ್ದು ಪಾಸ್​ಪೋರ್ಟ್ ಅಗತ್ಯವೆಂದು ಮನವಿ ಮಾಡಿದ ಅವರು, ಈ ಹಿಂದೆ ಅರ್ಜಿ ತಿರಸ್ಕೃತಗೊಂಡಿದ್ದ ವಿಚಾರವಾಗಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದರ ತನಿಖೆ ಪೂರ್ಣಗೊಂಡ ನಂತರ ಹೊಸ ಅರ್ಜಿಯನ್ನು ಪರಿಗಣಿಸಿ ಬುಧವಾರ ಅವರಿಗೆ ಪಾಸ್​​ಪೋರ್ಟ್ ನೀಡಲಾಗಿದೆ.

ಕೆಲವು ವರ್ಷಗಳ ಹಿಂದೆ ಮದುವೆಯಾಗಿದ್ದ ಸುಬೋಧ್ ನಂತರ ಪತ್ನಿಯ ಜತೆಗೂಡಿ ವಿದೇಶಗಳಲ್ಲಿ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ಕೆಲಸ ಸಿಗುವ ಸುಳಿವು ದೊರೆಯುತ್ತಿದ್ದಂತೆಯೇ ಅವರು ಪಾಸ್‌ಪೋರ್ಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಕೆಲವು ತಿಂಗಳ ಹಿಂದೆ ಅವರು ಲಾಲ್‌ಬಾಗ್ ಮುಖ್ಯ ರಸ್ತೆಯಲ್ಲಿರುವ ಪಾಸ್‌ಪೋರ್ಟ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿದ್ದರು. ಇದೇ ವೇಳೆ, 2012ರ ಜೂನ್ 26ರಂದು ಹೈದರಾಬಾದ್‌ನಲ್ಲಿ (15 ವರ್ಷದವನಾಗಿದ್ದಾಗಲೇ) ಪಾಸ್‌ಪೋರ್ಟ್ ನೀಡಲಾಗಿತ್ತು ಎಂದು ಅಧಿಕಾರಿಗಳಿಂದ ತಿಳಿದು ಸುಬೋಧ್ ಆಘಾತಗೊಂಡರು. ಪಾಸ್‌ಪೋರ್ಟ್‌ನ ಅವಧಿ ಮುಗಿದಿದ್ದು, ಅವರ ಹೆಸರಿನಲ್ಲಿ ಹೊಸದನ್ನು ನೀಡಲು ಅದನ್ನು ರದ್ದುಗೊಳಿಸಬೇಕಾಗಿತ್ತು.

2011 ರಲ್ಲಿ ನನ್ನ ಅರ್ಜಿಯ ಮೇರೆಗೆ 2012 ರ ಮಧ್ಯದಲ್ಲಿ ನನ್ನ ಹೆಸರಿನಲ್ಲಿ ಪಾಸ್‌ಪೋರ್ಟ್ ಇಶ್ಯೂ ಮಾಡಲಾಗಿತ್ತು ಎಂಬುದನ್ನು ನಾನು ಅರಿತುಕೊಂಡೆ. ಆದರೆ ಅಂತಿಮವಾಗಿ ಪಾಸ್​ಪೋರ್ಟ್ ತಿರಸ್ಕೃತಗೊಂಡ ಬಗ್ಗೆ ನಮಗೆ ಮಾಹಿತಿ ಬಂದಿತ್ತು. ಇದು ನನ್ನ ತಂದೆ ಹೈದರಾಬಾದ್‌ನಲ್ಲಿ ಕೆಲಸಕ್ಕೆ ಪೋಸ್ಟ್ ಆಗಿದ್ದ ಸಂದರ್ಭದಲ್ಲಿ ನಡೆದಿದ್ದ ವಿದ್ಯಮಾನ. ನಂತರ ಅವರು ಬೆಂಗಳೂರಿಗೆ ವರ್ಗಾವಣೆಯಾಗಿ ನಾವು ಹಿಂತಿರುಗಿದೆವು. ಆ ಬಗ್ಗೆ ಪೊಲೀಸ್ ವಿಚಾರಣೆಯಾಗಲಿ ಅಥವಾ ಅಧಿಕೃತ ದೂರವಾಣಿ ಕರೆಯಾಗಲಿ ಬಾರದ ಕಾರಣ ನನ್ನ ಪಾಸ್‌ಪೋರ್ಟ್‌ ಅರ್ಜಿ ತಿರಸ್ಕೃತಗೊಂಡಿದೆ ಎಂದು ಭಾವಿಸಿದ್ದೆ ಎಂದು ವಿಜಯನಗರ ನಿವಾಸಿಯಾಗಿರುವ ಸುಬೋಧ್ ಹೇಳಿರುವುದನ್ನು ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ.

ಸುಬೋಧ್ ದಂಪತಿಗೆ ಆಸ್ಟ್ರೇಲಿಯಾದಲ್ಲಿ ಉದ್ಯೋಗದ ಆಫರ್‌ ದೊರೆತಿರುವುದರಿಂದ ಶೀಘ್ರದಲ್ಲೇ ಪಾಸ್​ಪೋರ್ಟ್ ಪಡೆಯುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಹೀಗಾಗಿ ಬೆಂಗಳೂರಿನ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಗೆ ಮನವಿ ಸಲ್ಲಿಸಿದ್ದರು ಎಂದು ವರದಿ ಉಲ್ಲೇಖಿಸಿದೆ.

ಇದನ್ನೂ ಓದಿ: Shivananda Patil: ಅಪ್ಪನ ಸರ್ಕಾರಿ ಕಾರಿನಲ್ಲಿ ಸಕ್ಕರೆ ಖಾತೆ ಸಚಿವರ ಪುತ್ರಿ ಸಂಚಾರ

ಅರ್ಜಿದಾರರ 12 ವರ್ಷದ ಹಿಂದಿನ ಪ್ರಕರಣದ ಕುರಿತು ನಾವು ಹೈದರಾಬಾದ್‌ನಲ್ಲಿರುವ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿಯಲ್ಲಿ ವಿಚಾರಿಸಿ ಮಾಹಿತಿ ತರಿಸಿಕೊಂಡಿದ್ದೇವೆ. ಅವರಿಗೆ ಮೊದಲ ಪಾಸ್‌ಪೋರ್ಟ್ ಅನ್ನು 2012 ರಲ್ಲಿ ನೀಡಲಾಗಿತ್ತು. ಆದರೆ ಅರ್ಜಿದಾರರು ಅದನ್ನು ಸ್ವೀಕರಿಸದ ಕಾರಣ ಅಂಚೆ ಮೂಲಕ ಹಿಂತಿರುಗಿಸಲಾಗಿತ್ತು. 30 ದಿನಗಳಿಗಿಂತ ಹೆಚ್ಚು ಕಾಲ ಯಾರೂ ಅದನ್ನು ಸ್ವೀಕರಿಸಿರಲಿಲ್ಲ. ಹೀಗಾಗಿ ಅದನ್ನು ರದ್ದುಗೊಳಿಸಲಾಗಿತ್ತು. ಅವರ ಹೊಸ ಅರ್ಜಿಯನ್ನು ಇಲ್ಲಿ ಪರಿಶೀಲನೆಗೆ ಒಳಪಡಿಸಿದಾಗ ಮೊದಲೇ ಪಾಸ್‌ಪೋರ್ಟ್ ನೀಡಿರುವುದು ಕಂಡುಬಂದಿತ್ತು. ಅರ್ಜಿದಾರರು ಅದನ್ನು ಹಳೆಯದು ಎಂದು ಘೋಷಿಸಿ ಅದನ್ನು ರದ್ದುಗೊಳಿಸಲುನ ಮನವಿ ಸಲ್ಲಿಸಿದ ನಂತರವಷ್ಟೇ ಹೊಸದರ ಅರ್ಜಿ ಪರಿಗಣಿಸಲು ಸಾಧ್ಯ. ಅದರಂತೆ ನಡೆದುಕೊಂಡಿದ್ದೇವೆ ಎಂದು ಪಾಸ್​ಪೋರ್ಟ್ ಸೇವಾ ಕೇಂದ್ರದ ಅಧಿಕಾರಿಯೊಬ್ಬರು ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ