Bengaluru Rains: ಮೇ 12ರ ವರೆಗೂ ಬೆಂಗಳೂರಿನಲ್ಲಿ ಭಾರಿ ಮಳೆ ಮುನ್ಸೂಚನೆ, ಗುರುವಾರದ ಮಳೆಗೆ ಎಲ್ಲೆಲ್ಲಿ ಏನೇನಾಯ್ತು?

|

Updated on: May 10, 2024 | 8:03 AM

Karnataka Weather forecast: ಬೆಂಗಳೂರಿನಲ್ಲಿ ಗುರುವಾರ ಸಂಜೆ ಹಾಗೂ ರಾತ್ರಿ ಕೂಡ ಮಳೆಯಾಗಿದೆ. ಜೊತೆಗೆ ಕರ್ನಾಟಕದ ಇತರ ಹಲವು ಪ್ರದೇಶಗಳಲ್ಲಿಯೂ ಮಳೆಯಾಗಿದೆ. ಬೆಂಗಳೂರಿನಲ್ಲಿ ಮುಂದಿನ ಎರಡು ಮೂರು ದಿನಗಳ ಕಾಲ ಭಾರಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಗುರುವಾರ ರಾತ್ರಿ ಸುರಿದ ಮಳೆಗೆಕರ್ನಾಟಕದ ಎಲ್ಲಿ ಏನಾಯಿತು ಎಂಬ ವಿವರದ ಜೊತೆ ರಾಜ್ಯದ ಹವಾಮಾನ ಮುನ್ಸೂಚನೆ ಇಲ್ಲಿದೆ.

Bengaluru Rains: ಮೇ 12ರ ವರೆಗೂ ಬೆಂಗಳೂರಿನಲ್ಲಿ ಭಾರಿ ಮಳೆ ಮುನ್ಸೂಚನೆ, ಗುರುವಾರದ ಮಳೆಗೆ ಎಲ್ಲೆಲ್ಲಿ ಏನೇನಾಯ್ತು?
ಮೇ 12ರ ವರೆಗೂ ಬೆಂಗಳೂರಿನಲ್ಲಿ ಭಾರಿ ಮಳೆ ಮುನ್ಸೂಚನೆ
Follow us on

ಬೆಂಗಳೂರು, ಮೇ 10: ಬೆಂಗಳೂರು (Bengaluru) ಸೇರಿದಂತೆ ಕರ್ನಾಟಕದ ಹಲವೆಡೆ ಬಿರು ಬಿಸಿಲ ಬೇಗೆಗೆ ಮಳೆ (Karnataka Rains) ತಂಪೆರೆಯುತ್ತಿದೆ. ಬೆಂಗಳೂರಿನಲ್ಲಿ ಸತತ 4ನೇ ದಿನವೂ ಮಳೆಯಾಗಿದೆ. ಕೆಲವೆಡೆ ಮಳೆ ಅವಾಂತರ ಸೃಷ್ಟಿಸಿದೆ. ಬೆಂಗಳೂರಿನಲ್ಲಿ ಗುರುವಾರ ಸಂಜೆ ಶುರುವಾದ ಗುಡುಗು ಸಹಿತ ಮಳೆ ಮಧ್ಯ ರಾತ್ರಿವರೆಗೂ ಜಿಟಿಜಿಟಿ ಎಂದು ಸುರಿದಿದೆ. ಕಚೇರಿ ಇನ್ನಿತರ ಕೆಲಸ ಕಾರ್ಯ ಮುಗಿಸಿ ಮನೆಗೆ ಹೋಗುವವರು ಪರದಾಡಿದ್ದಾರೆ. ಮೈಸೂರು ರಸ್ತೆಯಲ್ಲಿ ನೀರು ನಿಂತು ಕೆರೆಯಂತಾಗಿತ್ತು. ರಾಜರಾಜೇಶ್ವರಿನಗರ-ಜ್ಞಾನಭಾರತಿ ನಡುವೆ ಕೆಲಕಾಲ ಸಂಚಾರ ವ್ಯತ್ಯಯವಾಗಿತ್ತು.

ಬೆಂಗಳೂರಲ್ಲಿ ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ. ದೂರುಗಳ ಸರಮಾಲೆಯೇ ಬರುತ್ತಿದೆ. ಹೀಗಾಗಿ ತ್ವರಿತವಾಗಿ ಸಮಸ್ಯೆ ಇತ್ಯರ್ಥಕ್ಕೆ ಬೆಸ್ಕಾಂ ವಾಟ್ಸಾಪ್ ಹೆಲ್ಪ್​ಲೈನ್ ಆರಂಭಿಸಿದೆ. ಬಿಬಿಎಂಪಿ ವ್ಯಾಪ್ತಿಯ 8 ವಲಯಗಳಲ್ಲಿ ವಿಪತ್ತು ನಿರ್ವಹಣೆಯ ಕಂಟ್ರೋಲ್ ರೂಂ ತೆರೆದಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಗಾಳಿಗೆ 70 ಮರಗಳು ಧರೆಗೆ

ಗುರುವಾರ ರಾತ್ರಿಯೂ ಬೆಂಗಳೂರಿನಲ್ಲಿ ಗಾಳಿ ಮಳೆಗೆ 70 ಮರಗಳು ಧರೆಗೆ ಉರುಳಿವೆ. ಬೆಂಗಳೂರು ದಕ್ಷಿಣ ವಲಯದಲ್ಲಿ 10, ಆರ್ ಆರ್ ನಗರ ವಲಯದಲ್ಲಿ 32, ಬೊಮ್ಮನಹಳ್ಳಿಯಲ್ಲಿ 06, ಪಶ್ಚಿಮ ವಲಯದಲ್ಲಿ 10, ಮಹಾದೇವಪುರದಲ್ಲಿ 01, ಯಲಹಂಕದಲ್ಲಿ 03, ಪೂರ್ವ ವಲಯದಲ್ಲಿ 06, ದಾಸರಹಳ್ಳಿ ವಲಯದಲ್ಲಿ 02 ಸೇರಿ 70 ಮರಗಳು ಧರಾಶಾಯಿಯಾಗಿವೆ.

ಹೊಸಪೇಟೆ ಸೇರಿ ಹಲವೆಡೆ ಬೆಳೆ ನಾಶ

ಭಾರಿ ಮಳೆ ರೈತರಲ್ಲಿ ಮಂದಹಾಸ ಮೂಡಿಸಿದೆ. ಆದರೆ ಕೆಲವೆಡೆ ಬೆಳೆಗೆ ಕಂಟಕವಾಗಿದೆ. ವಿಜನಯಗರ ಜಿಲ್ಲೆಯ ಹೊಸಪೇಟೆಯಲ್ಲಿ ಬಿರುಗಾಳಿ ಸಹಿತ ಮಳೆಗೆ ಹತ್ತಾರು ಎಕರೆ ಬಾಳೆ ಬೆಳೆ ನಾಶವಾಗಿದೆ.

ಬಳ್ಳಾರಿ ತಾಲೂಕಿನ ಕಪ್ಪಗಲ್ ಗ್ರಾಮದಲ್ಲಿ ಸಿಡಿಲು ಬಡಿದು ದೊಡ್ಡಬಸಯ್ಯ ಎಂಬ ರೈತನಿಗೆ ಸೇರಿದ ಎರಡು ಎತ್ತುಗಳು ಸಾವನ್ನಪ್ಪಿವೆ. ಸುಮಾರು ಒಂದು ಲಕ್ಷ ರೂಪಾಯಿ ಬೆಲೆ ಬಾಳುವ ಎತ್ತುಗಳನ್ನ ಕಳೆದುಕೊಂಡು ರೈತ ಕಣ್ಣೀರು ಹಾಕಿದ್ದಾನೆ.

ಬೆಂಗಳೂರಿನಲ್ಲಿ ಇನ್ನೂ ಮೂರ್ನಾಲ್ಕು ದಿನ ಮಳೆ

ಮೇ 12 ನೇ ತಾರೀಖಿನ ವರೆಗೂ ಬೆಂಗಳೂರು ಹಾಗೂ ದಕ್ಷಿಣ ಒಳನಾಡಿನಲ್ಲಿ ಗುಡುಗು, ಸಿಡಿಲು, ಬಿರುಗಾಳಿ ಸಹಿತ 40-50 ಕೀಮಿ ವೇಗದ ಗಾಳಿಯೊಂದಿಗೆ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮೂನ್ಸುಚನೆ ನೀಡಿದೆ. 12 ನೇ ತಾರಿಖಿನ ಬಳಿಕ ಬೆಂಗಳೂರಿಗೆ ಹೆಚ್ಚಿನ ಮಳೆ ಸಾಧ್ಯತೆ ಜೊತೆಗೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಮಳೆ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ತಿಳಿಸಿದೆ. ಈ ಮಧ್ಯೆ, ನಗರದಾದ್ಯಂತ ವಾಹನ ಸಂಚಾರಕ್ಕೆ ಅಡ್ಡಿಯಾಗುವುದನ್ನು ತಪ್ಪಿಸಲು ಸಂಚಾರ ಪೊಲೀಸರು ಹಲವು ಪೂರ್ವಸಿದ್ಧತಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಮರ ಬಿದ್ದಂಥ ಘಟನೆಗಳು ವರದಿಯಾದರೆ, ಪ್ರತಿ ವಾರ್ಡ್ ಕಚೇರಿಯಲ್ಲಿ ಇರುವ ಮರ ಕಡಿಯುವ ಯಂತ್ರವನ್ನು ಬಳಸಿ ಮರವನ್ನು ತೆರವುಗೊಳಿಸಲು ಸಂಚಾರ ಪೊಲೀಸರು ಸ್ಥಳೀಯ ಬಿಬಿಎಂಪಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲು ಮುಂದಾಗಿದ್ದಾರೆ. ವಿದ್ಯುತ್ ಕಂಬ ಬಿದ್ದರೆ ಮತ್ತು ವಿದ್ಯುತ್ ತಂತಿ ಬಿದ್ದರೆ ತಕ್ಷಣವೇ ಬೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ ಕ್ರಮ ಕೈಗೊಳ್ಳುವ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮುಂದುವರೆದ ಮಳೆ ಅಬ್ಬರ; ಕೆರೆಯಂತಾದ ರಸ್ತೆಗಳು

ಗುರುವಾರ ಸಂಜೆ ಮತ್ತು ರಾತ್ರಿ ಮೆಜೆಸ್ಟಿಕ್, ಯಶವಂತಪುರ, ರಾಜಾಜಿನಗರ, ಮಲ್ಲೇಶ್ವರಂ, ವಿಜಯನಗರ, ವಸಂತನಗರ, ಶಿವಾಜಿ ನಗರ, ಜಯನಗರ, ಚಂದ್ರಲೇಔಟ್, ಬನಶಂಕರಿ, ಸದಾಶಿವನಗರ, ಆರ್‌.ಟಿ.ನಗರ, ಹೆಬ್ಬಾಳ, ಸಹಕಾರನಗರ, ಭಾಷ್ಯಂ ಸರ್ಕಲ್ ಸೇರಿದಂತೆ ಬೆಂಗಳೂರಿನ ಅನೇಕ ಕಡೆಗಳಲ್ಲಿ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಿತ್ತು. ನಂತರ ರಾತ್ರಿಯೂ ಮಳೆ ಮುಂದುವರಿದಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:30 am, Fri, 10 May 24