ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬೆಂಗಳೂರಿನ ಐದು ಕಡೆ ಎನ್​​ಐಎ ದಾಳಿ

| Updated By: Ganapathi Sharma

Updated on: Mar 27, 2024 | 7:58 AM

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್​ಐಎ ತನಿಖೆ ಮತ್ತಷ್ಟು ತೀವ್ರಗೊಂಡಿದೆ. ಈಗಾಗಲೇ ಹಲವು ಕಡೆ ದಾಳಿ ನಡೆಸಿ ಕೆಲವು ಮಂದಿ ಶಂಕಿತರನ್ನು ಬಂಧಿಸಿರುವ ಎನ್​ಐಎ ಇದೀಗ ಬುಧವಾರ ಬೆಳ್ಳಂಬೆಳಗ್ಗೆ ಬೆಂಗಳೂರಿನ ಐದು ಕಡೆ ದಾಳಿ ನಡೆಸಿದೆ. ಅಲ್ಲದೆ, ತಮಿಳುನಾಡಿನ ಚೆನ್ನೈ ಸೇರಿದಂತೆ ಹಲವೆಡೆ ದಾಳಿ ನಡೆಸಿದೆ.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ: ಬೆಂಗಳೂರಿನ ಐದು ಕಡೆ ಎನ್​​ಐಎ ದಾಳಿ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಮಾರ್ಚ್ 27: ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಯನ್ನು ಮುಂದುವರಿಸಿರುವ ರಾಷ್ಟ್ರೀಯ ತನಿಖಾ ದಳ (NIA) ಬುಧವಾರ ನಗರದ (Bengaluru) ಐದು ಕಡೆ ದಾಳಿ ನಡೆಸಿದೆ. ಶಂಕಿತ ವ್ಯಕ್ತಿಗಳ ಮನೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್​ಐಎ ಅಧಿಕಾರಿಗಳು ಬೆಂಗಳೂರಿನ ಇಬ್ಬರು ಶಂಕಿತರನ್ನು ಶನಿವಾರ (ಮಾ.23) ಸಂಜೆ ವಶಕ್ಕೆ ಪಡೆದುಕೊಂಡಿರುವ ವಿಚಾರ ಮಂಗಳವಾರ ತಿಳಿದುಬಂದಿತ್ತು.

ಶಿವಮೊಗ್ಗ ಜಿಲ್ಲೆಯಲ್ಲೂ ಎನ್​ಐಎ ದಾಳಿ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ 5ಕ್ಕೂ ಹೆಚ್ಚು ಕಡೆ ಎನ್​ಐಎ ಅಧಿಕಾರಿಗಳು ದಾಳಿ ಮಾಡಿದ್ದು, ಪರಿಶೀಲನೆ ನಡೆಸಿದ್ದಾರೆ. ತೀರ್ಥಹಳ್ಳಿ ಪಟ್ಟಣದ ಸೊಪ್ಪುಗುಡ್ಡೆ, ಇಂದಿರಾನಗರ, ಬೆಟಮಕ್ಕಿ ಸೇರಿದಂತೆ 5 ಕಡೆ ದಾಳಿ ಮಾಡಲಾಗಿದೆ. ಬೆಂಗಳೂರಿನಿಂದ 5ಕ್ಕೂ ಹೆಚ್ಚು ವಾಹನಗಳಲ್ಲಿ ಬಂದಿರುವ ಎನ್​ಐಎ ತಂಡದಲ್ಲಿ 15ಕ್ಕೂ ಹೆಚ್ಚು ಅಧಿಕಾರಿಗಳಿದ್ದಾರೆ.

ಚೆನ್ನೈಯಲ್ಲೂ ಎನ್​ಐಎ ಶೋಧ

ಚೆನ್ನೈನ ಮೂರು ಕಡೆ ಕೂಡ ಎನ್​ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು, ಪ್ರಕರಣ ಸಂಬಂಧ ಶಂಕಿತರ ಶೋಧ ನಡೆಸಿದೆ. ಉಗ್ರರಿಗೆ ಹಣದ ನೆರವು, ಉಗ್ರರ ಪರ ಹಣ ಸಂಗ್ರಹ ಆರೋಪದ ಮೇಲೆ ಶಂಕಿತರ ಮನೆಗಳಲ್ಲಿ ಶೋಧ ನಡೆಸಿದೆ.

ತಮಿಳುನಾಡಿನಲ್ಲಿ ನಡೆದಿರುವ ಎನ್‌ಐಎ ದಾಳಿ ಕೂಡ ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದ್ದೇ ಆಗಿದೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಸಂಬಂಧ ಕೆಲವರನ್ನು ಬಂಧಿಸಲಾಗಿತ್ತು. ಬಂಧಿತರಿಂದ ಹಲವು ಮಹತ್ವದ ಸುಳಿವುಗಳು ಎನ್​ಐಎ ಅಧಿಕಾರಿಗಳಿಗೆ ಲಭಿಸಿದ್ದವು. ಶಿವಮೊಗ್ಗ ಮೂಲದ ಇಬ್ಬರು ಕೆಲ ದಿನ ಚೆನ್ನೈನಲ್ಲಿ ತಂಗಿದ್ದರು ಎನ್ನಲಾಗಿತ್ತು. ಹೀಗಾಗಿ ಈ ಎನ್​ಐಎ ದಾಳಿ ನಡೆದಿದೆ. ಅದೇ ರೀತಿ ಬಾಂಬ್ ಇಟ್ಟಿದ್ದ ವ್ಯಕ್ತಿ ಧರಿಸಿದ್ದ ಟೋಪಿಯನ್ನು ಸಹ ಚೆನ್ನೈ ಸೆಂಟ್ರಲ್​​ನಿಂದ ಖರೀದಿಸಿರುವುದು ತನಿಖೆ ವೇಳೆ ತಿಳಿದುಬಂದಿತ್ತು.

ಬಾಂಬ್ ಇಟ್ಟಿದ್ದ ಉಗ್ರ ತಮಿಳುನಾಡಿನಿಂದ ಬಂದು ಬಾಂಬ್ ಇಟ್ಟು ಪರಾರಿಯಾಗಿದ್ದಾನೆ ಎಂಬ ಶಂಕೆಯೂ ನಂತರದಲ್ಲಿ ವ್ಯಕ್ತವಾಗಿತ್ತು. ಸ್ಫೋಟಕ್ಕೂ ಮುನ್ನ ಆರೋಪಿ ಎರಡು ತಿಂಗಳು ತಮಿಳುನಾಡಿನಲ್ಲಿದ್ದ. ಉಗ್ರ ಧರಿಸಿದ್ದ 10 ನಂಬರ್​ನ ಟೋಪಿಯ ಬ್ರ್ಯಾಂಡ್​ನನ​ ಜಾಡು ಹಿಡಿದ ಎನ್​ಐಎ ಅಧಿಕಾರಿಗಳಿಗೆ ಅದು ಚೆನ್ನೈಯಿಂದ ಖರೀದಿಸಿದ್ದೆಂಬುದು ತಿಳಿದುಬಂದಿತ್ತು.

ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್​ ಬ್ಲಾಸ್ಟ್​​ ಪ್ರಕರಣ: ಬೆಂಗಳೂರಿನ ಇಬ್ಬರು ಎನ್ಐಎ ವಶಕ್ಕೆ

ಮಾರ್ಚ್​ 01 ರಂದು ಬೆಂಗಳೂರಿನ ವೈಟ್​ಫಿಲ್ಡ್​ನಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿ ಐದು ಮಂದಿ ಗಾಯಗೊಂಡಿದ್ದರು. ಆರಂಭದಲ್ಲಿ ಪ್ರಕರಣದ ತನಿಖೆಯ ಹೊಣೆಯನ್ನು ಸಿಸಿಬಿ ಪೊಲೀಸರು ವಹಿಸಿಕೊಂಡಿದ್ದರು. ನಂತರ ಪ್ರಕರಣದ ಗಂಭೀರತೆ ಅರಿತು ಸರ್ಕಾರ ತನಿಖೆಯನ್ನು ಎನ್​ಐಎಗೆ ವರ್ಗಾಯಿಸಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:35 am, Wed, 27 March 24