ಬೆಂಗಳೂರು, ನವೆಂಬರ್ 11: ಬೆಂಗಳೂರು ನಗರದಾದ್ಯಂತ ಸಂಚಾರ ನಿಯಮಗಳ ಉಲ್ಲಂಘನೆ ವಿರುದ್ಧ ಬಿರುಸಿನ ಕಾರ್ಯಾಚರಣೆ ಆರಂಭಿಸಿರುವ ಟ್ರಾಫಿಕ್ ಪೊಲೀಸರು ಹಲವಾರು ಪ್ರಕರಣಗಳನ್ನು ಪತ್ತೆಮಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ಡ್ರಂಕ್ ಆ್ಯಂಡ್ ಡ್ರೈವ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ಅದರಂತೆ, ಚಾಲನಾ ಪರವಾನಗಿ ಕೂಡ ಇಲ್ಲದೆ ಮದ್ಯಪಾನ ಮಾಡಿ ವಾಹನ ಚಲಾಯಿಸಿದ ವ್ಯಕ್ತಿಯೊಬ್ಬರ ವಿರುದ್ಧ ಕುಮಾರಸ್ವಾಮಿ ಲೇಔಟ್ ಸಂಚಾರಿ ಠಾಣಾ ವ್ಯಾಪ್ತಿಯಲ್ಲಿ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
ಡಿಎಲ್ ಇಲ್ಲದೆ, ಮದ್ಯಪಾನ ಮಾಡಿ ವಾಹನ ಚಲಾಯಿಸಿದರೆ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಟ್ರಾಫಿಕ್ ಪೊಲೀಸರು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಅದರಂತೆ, ಇದೀಗ ಮೊದಲ ಪ್ರಕರಣ ದಾಖಲಾಗಿದೆ.
ಕಳೆದ ವಾರ ಬೆಂಗಳೂರು ನಗರದಲ್ಲಿ ರಾತ್ರಿ ವೇಳೆ ಡ್ರಂಕ್ ಆ್ಯಂಡ್ ಡ್ರೈವ್ ತಪಾಸಣೆ ಮಾಡಲಾಗಿದೆ. ನಗರದಾದ್ಯಂತ ಸುಮಾರು 53 ಸಾವಿರ ವಾಹನಗಳನ್ನ ತಪಾಸಣೆ ಮಾಡಲಾಗಿದೆ ಎಂದು ಸಂಚಾರ ಜಂಟಿ ಪೊಲೀಸ್ ಆಯುಕ್ತ ಎಂಎನ್ ಅನುಚೇತ್ ಮಾಹಿತಿ ನೀಡಿದ್ದಾರೆ.
ವಿಶೇಷ ಕಾರ್ಯಾಚರಣೆ ವೇಳೆ, 294 ಜನರು ಮದ್ಯಪಾನ ಮಾಡಿ ಚಾಲನೆ ಮಾಡಿರುವುದು ಪತ್ತೆಯಾಗಿದೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅಷ್ಟೇ ಅಲ್ಲದೆ, ಅವರ ಚಾಲನಾ ಪರವಾನಗಿ ರದ್ದತಿಗೆ ಮನವಿ ಮಾಡಲಾಗಿದೆ. ಪ್ರಕರಣಗಳ ಸಂಬಂಧ ಮುಂದಿನ ವಿಚಾರಗಳು ನ್ಯಾಯಾಲಯದಲ್ಲಿ ನಿರ್ಧಾರ ಆಗಲಿವೆ ಎಂದು ಅವರು ತಿಳಿಸಿದ್ದಾರೆ.
ಈಗ ಡಿಎಲ್ ಇಲ್ಲದೇ ಚಾಹನ ಚಲಾಯಿಸುವವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ. ಭಾನುವಾರ ಕೆಎಸ್ ಲೇಔಟ್ ಟ್ರಾಫಿಕ್ ಠಾಣೆಯಲ್ಲಿ ಒಂದು ಕೇಸ್ ದಾಖಲಾಗಿದೆ. ಯಾರೇ ಆಗಲಿ ಡಿಎಲ್ ಕೂಡ ಇಲ್ಲದೆ, ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಾರೋ ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುತ್ತದೆ. BNS 281 ಅಡಿ ಕೇಸ್ ದಾಖಲಿಸುವ ಕೆಲಸ ಆಗುತ್ತಿದೆ ಎಂದು ಅನುಚೇತ್ ಹೇಳಿದ್ದಾರೆ.
ಇದನ್ನೂ ಓದಿ: ಡ್ರಂಕ್ ಡ್ರೈವ್: ಬೆಂಗಳೂರಿನ 118 ಶಾಲಾ ಬಸ್ ಚಾಲಕರ ವಿರುದ್ಧ ಕೇಸ್, ಪರವಾನಗಿ ರದ್ದು
ಬೆಂಗಳೂರಿನ ಶಾಲೆ ಬಸ್ಗಳ ಚಾಲಕರು ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿರುವ ಬಗ್ಗೆಯೂ ವಿಶೇಷ ನಿಗಾ ಇಟ್ಟಿರುವ ಸಂಚಾರ ಪೊಲೀಸರು, ಕಳೆದ ಕೆಲವು ದಿನಗಳಿಂದ ಕಾರ್ಯಾಚರಣೆಯನ್ನು ತೀವ್ರಗೊಳಿಸಿದ್ದಾರೆ. ಕಳೆದ 10 ತಿಂಗಳ ಅವಧಿಯಲ್ಲಿ 118 ಶಾಲಾ ವಾಹನ ಚಾಲಕರ ವಿರುದ್ಧ ಡ್ರಂಕ್ ಆ್ಯಂಡ್ ಡ್ರೈವ್ ಕೇಸ್ ದಾಖಲಾಗಿದೆ ಎಂದು ಸಂಚಾರ ಪೊಲೀಸರು ಈಗಾಗಲೇ ತಿಳಿಸಿದ್ದಾರೆ.
ವರದಿ: ಪ್ರದೀಪ್ ಚಿಕ್ಕಾಟಿ, ‘ಟಿವಿ9’
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ