Jnanabharathi campus: ಬೆಂಗಳೂರು ವಿವಿ ಜ್ಞಾನಭಾರತಿ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ, ಮತ್ತೊಂದು ಅಪಘಾತ, ವಿದ್ಯಾರ್ಥಿಗಳ ಪ್ರತಿಭಟನೆ ಜೋರು

| Updated By: ಸಾಧು ಶ್ರೀನಾಥ್​

Updated on: Oct 12, 2022 | 1:18 PM

Bangalore University Jnanabharathi campus: ಈ ಮಧ್ಯೆ ನಿನ್ನೆ ಮಂಗಳವಾರ ರಾತ್ರಿಯಿಂದಲೇ ರಸ್ತೆಯಲ್ಲಿನ ಹಂಪ್ ಗಳಿಗೆ ಬಿಳಿಪಟ್ಟಿ ಹಚ್ಚಲಾಗುತ್ತಿದೆ. ಇಂದು ರಾತ್ರಿಯ ವೇಳೆಗೆ ರಸ್ತೆಯ ಎಲ್ಲಾ ಹಂಪ್ ಗಳಿಗೆ ವೈಟ್ ಪಟ್ಟಿ ಹಾಕಲು ಸಿದ್ದತೆ ನಡೆದಿದೆ. ಅಲ್ಲಿಯವರೆಗೆ ಪೊಲೀಸರು ಜ್ಞಾನಭಾರತಿ ಕ್ಯಾಂಪಸ್​​ ನಲ್ಲಿ ಸಂಪೂರ್ಣ ಸಂಚಾರ ಬಂದ್ ಮಾಡಿದ್ದಾರೆ.

Jnanabharathi campus: ಬೆಂಗಳೂರು ವಿವಿ ಜ್ಞಾನಭಾರತಿ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ, ಮತ್ತೊಂದು ಅಪಘಾತ, ವಿದ್ಯಾರ್ಥಿಗಳ ಪ್ರತಿಭಟನೆ ಜೋರು
ಬೆಂಗಳೂರು ವಿವಿ ಜ್ಞಾನಭಾರತಿ ಆವರಣದಲ್ಲಿ ಉದ್ವಿಗ್ನ ಪರಿಸ್ಥಿತಿ, ಮತ್ತೊಂದು ಅಪಘಾತ
Image Credit source: thehindu.com
Follow us on

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಕ್ಯಾಂಪಸ್​​ ಆವರಣದಲ್ಲಿರುವ (Bangalore University Jnanabharathi campus) ರಸ್ತೆಗಳಲ್ಲಿ ಸರಣಿ ಅಪಘಾತಗಳು (Road Accident) ಸಂಭವಿಸುತ್ತೊರುವ ಹಿನ್ನೆಲೆಯಲ್ಲಿ ನಾಲ್ಕೂ ದಿಕ್ಕುಗಳಲ್ಲಿ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಸಂಚಾರಿ ಪೊಲೀಸರು ಪರಿಶೀಲನೆ ಮಾಡ್ತಿದ್ದಾರೆ. ಈ ಮಧ್ಯೆ, ಇಂದೂ ಪ್ರತಿಭಟನೆ ನಡೆಸಲು ಬೆಂ ವಿವಿ ವಿದ್ಯಾರ್ಥಿಗಳು ನಿರ್ಧರಿಸಿದ್ದಾರೆ. ವಿದ್ಯಾರ್ಥಿಗಳ (Students) ಈ ಪ್ರತಿಭಟನೆಯಿಂದ ಬೆಂಗಳೂರು ವಿವಿ ಇಕ್ಕಟ್ಟಿಗೆ ಸಿಲುಕಿದೆ. ಕ್ಯಾಂಪಸ್​​ ಆವರಣದಲ್ಲಿ (Jnanabharathi Campus) ಪರಿಸ್ಥಿತಿ ಉದ್ವಿಗ್ನವಾಗಿರುವುದರ ಮಧ್ಯೆ ಇಂದು ಬುಧವಾರ ಬೆಳಗ್ಗೆ 10:30ರ ಸುಮಾರಿಗೆ ಬೆಂ. ವಿವಿ ರಸ್ತೆಯಲ್ಲಿ ಅವೈಜ್ಞಾನಿಕ ಹಂಪ್ ನಿಂದ ಮತ್ತೊಂದು ಅಪಘಾತ ಸಂಭವಿಸಿದೆ. ಆಂಬ್ಯುಲೆನ್ಸ್ ಮೂಲಕ ಗಾಯಾಳು ಸ್ಥಳೀಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಈ ಮಧ್ಯೆ, ಬೆಂಗಳೂರು ವಿವಿ ಸಂಶೋಧನಾ ವಿದ್ಯಾರ್ಥಿ ಚಂದ್ರು ಟಿವಿ9 ಜೊತೆ ಮಾತನಾಡಿದ್ದು ಮೊನ್ನೆ ಬಿಎಂಟಿಸಿ ಬಸ್​ ಹತ್ತುವಾಗ ಜಾರಿಬಿದ್ದು ಕೋಮಾ ಸ್ಥಿತಿಗೆ ತಲುಪಿರುವ ವಿದ್ಯಾರ್ಥಿನಿ ಶಿಲ್ಪಾ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿದೆ. ಮತ್ತೆ 2 ಆಪರೇಷನ್ ಮಾಡ್ಬೇಕು ಅಂತಾ ವೈದ್ಯರು ತಿಳಿಸಿದ್ದಾರೆ. ಮತ್ತೊಬ್ಬರಿಗೆ ಈ ರೀತಿ ಆಗಬಾರದು ಅಂದ್ರೆ ಜ್ಞಾನಭಾರತಿ ಕ್ಯಾಂಪಸ್​​ ನಲ್ಲಿ ವಾಹನ ನಿಷೇಧಿಸಬೇಕು. ಹಲವು ವರ್ಷಗಳಿಂದ ನಾವು ಈ ಮನವಿ ಕೊಡ್ತಾ ಬಂದಿದ್ದೀವಿ. ವಿಶ್ವವಿದ್ಯಾಲಯ ಈಗ ಸಭೆ ನಡೆಸಿ ತೀರ್ಮಾನ ಕೈಗೊಳ್ಳೋದಾಗಿ ಹೇಳಿದೆ. ಇಂದು ಮಧ್ಯಾಹ್ನ 3 ಗಂಟೆಗೆ ಕುಲಪತಿ, ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ಇದೆ. ಹಲವು ಸರ್ಕಾರಿ ಸಂಸ್ಥೆಗಳು, ವಿದ್ಯಾರ್ಥಿ ಸಂಘಟನೆಗೆ ಸಭೆಗೆ ಆಹ್ವಾನ ನೀಡಲಾಗಿದೆ. ಯಾರಿಗೂ ತೊಂದರೆ ಆಗದಂತೆ ಬದಲಿ ಮಾರ್ಗ ಮಾಡಲಿ ಎಂದು ಅವರು ಆಗ್ರಹ ಮಾಡಿದ್ದಾರೆ.

ಈ ಮಧ್ಯೆ ನಿನ್ನೆ ಮಂಗಳವಾರ ರಾತ್ರಿಯಿಂದಲೇ ರಸ್ತೆಯಲ್ಲಿನ ಹಂಪ್ ಗಳಿಗೆ ಬಿಳಿಪಟ್ಟಿ ಹಚ್ಚಲಾಗುತ್ತಿದೆ. ಇಂದು ರಾತ್ರಿಯ ವೇಳೆಗೆ ರಸ್ತೆಯ ಎಲ್ಲಾ ಹಂಪ್ ಗಳಿಗೆ ವೈಟ್ ಪಟ್ಟಿ ಹಾಕಲು ಸಿದ್ದತೆ ನಡೆದಿದೆ. ಅಲ್ಲಿಯವರೆಗೆ ಪೊಲೀಸರು ಜ್ಞಾನಭಾರತಿ ಕ್ಯಾಂಪಸ್​​ ನಲ್ಲಿ ಸಂಪೂರ್ಣ ಸಂಚಾರ ಬಂದ್ ಮಾಡಿದ್ದಾರೆ. ಗುರುವಾರ ಬೆಳಗ್ಗೆಯವರೆಗೂ ವಿವಿಗೆ ಸಂಪರ್ಕ ನೀಡುವ ನಾಲ್ಕೂ ರಸ್ತೆಗಳಿಗೆ ಸಂಪೂರ್ಣ ಬ್ಯಾರಿಕೇಡ್ ಹಾಕಿ ಬಂದ್ ಆಗಲಿವೆ.

ಬೆಂಗಳೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಬೇಡಿಕೆಗಳು:

ವಿವಿ ಆವರಣದೊಳಕ್ಕೆ ಮದ್ಯ ಸೇವಿಸಿ ಬರುವವರ ತಪಾಸಣೆ ನಡೆಸಬೇಕು. ಟೂ ವಿಲ್ಲರ್ ಗಳನ್ನ ಅಡ್ಡಗಟ್ಟಿ ಡ್ರಂಕ್ ಅಂಡ್ ಡ್ರೈವ್ ಚೆಕ್ಕಿಂಗ್ ಮಾಡುವುದು, ವಿವಿ ಐಡಿ ಕಾರ್ಡ್ ಇಲ್ಲದೇ ಇದ್ದರೆ ನೋ ಎಂಟ್ರಿ, ವಿವಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡುವುದಕ್ಕೆ ಬೆಂಗಳೂರು ವಿವಿ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಈ ಸಂಬಂಧ ವಿವಿ ರಸ್ತೆಯಲ್ಲಿ ಕುಳಿತ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿವಿ ಆವರಣದಲ್ಲಿ ಸಾರ್ವಜನಿಕ ವಾಹನ ನಿಷೇಧ ಮಾಡಬೇಕು, ವಿವಿ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಸಾರಿಗೆ ವ್ಯವಸ್ಥೆ ಮಾಡಬೇಕು, ಬಿಎಂಟಿಸಿ ಡ್ರೈವರ್ ವಿರುದ್ಧ ಕಾನೂನು ಕ್ರಮ‌ ಕೈಗೊಳ್ಳಬೇಕು, ವಿವಿ ರಸ್ತೆಗಳಲ್ಲಿ ವೈಜ್ಞಾನಿಕವಾಗಿ ಹಂಪ್ ಅಳವಡಿಸಬೇಕು, ಅನೈತಿಕ ಚಟುವಟಿಕೆಗೆ ಕಡಿವಾಣ ಹಾಕಿ ಉತ್ತಮ ಶೈಕ್ಷಣಿಕ ಪರಿಸರ ರೂಪಿಸಬೇಕು ಎಂದೂ ಬೆಂಗಳೂರು ವಿವಿ ವಿದ್ಯಾರ್ಥಿಗಳು ಒತ್ತಾಯ ಮಾಡಿದ್ದಾರೆ.