Bangalore Water Crisis: ನೀರಿನ ಸಮಸ್ಯೆ ಎಂದು ನಗರ ತೊರೆಯಬೇಡಿ, ವ್ಯವಸ್ಥೆ ಮಾಡುತ್ತೇವೆ: ಐಟಿ ಕಂಪನಿಗಳಿಗೆ ಜಲ ಮಂಡಳಿ ಭರವಸೆ

|

Updated on: Mar 29, 2024 | 7:42 AM

ಬೆಂಗಳೂರಿನ ನೀರಿನ ಬಿಕ್ಕಟ್ಟಿನಿಂದಾಗಿ ವರ್ಕ್ ಫ್ರಮ್ ಹೋಮ್​ ಆಯ್ಕೆ ನೀಡಬೇಕೆಂದು ನಗರದ ಅನೇಕ ಐಟಿ ಉದ್ಯೋಗಿಗಳು ಮನವಿ ಮಾಡಿದ್ದರು. ತಜ್ಞರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಗರದಲ್ಲಿ ಸುಮಾರು 15ಲಕ್ಷ ಐಟಿ ಉದ್ಯೋಗಿಗಳಿದ್ದು, ವರ್ಕ್ ಫ್ರಮ್ ಹೋಮ್ ನೀಡುವುದರಿಂದ ಸುಮಾರು 10 ಲಕ್ಷ ಜನ ಅವರ ಊರುಗಳಿಗೆ ತೆರಳುವ ಸಾಧ್ಯತೆ ಇದೆ. ಇದರಿಂದ ನಗರದ ನೀರಿನ ಒತ್ತಡ ಕಡಿಮೆ ಮಾಡಬಹುದು ಎಂದು ತಜ್ಞರು ಹೇಳಿದ್ದರು.

Bangalore Water Crisis: ನೀರಿನ ಸಮಸ್ಯೆ ಎಂದು ನಗರ ತೊರೆಯಬೇಡಿ, ವ್ಯವಸ್ಥೆ ಮಾಡುತ್ತೇವೆ: ಐಟಿ ಕಂಪನಿಗಳಿಗೆ ಜಲ ಮಂಡಳಿ ಭರವಸೆ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
Follow us on

ಬೆಂಗಳೂರು, ಮಾರ್ಚ್ 29: ಬೆಂಗಳೂರು ನಗರದಲ್ಲಿರುವ ಎಲ್ಲ ಐಟಿ ಕಂಪನಿಗಳಿಗೆ (IT Companies) ಸಾಕಷ್ಟು ನೀರು ಪೂರೈಸಲಾಗುವುದು. ಈ ವಿಚಾರದಲ್ಲಿ ಯಾವುದೇ ರೀತಿಯ ಭಯಪಡುವ ಅಗತ್ಯವಿಲ್ಲ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಭರವಸೆ ನೀಡಿದೆ. ಮನೆಯಿಂದಲೇ ಕೆಲಸದ (Work From Home) ಬೇಡಿಕೆ ಮತ್ತು ನೀರಿನ ಬಿಕ್ಕಟ್ಟಿನಿಂದಾಗಿ ಅನೇಕ ಐಟಿ ಕಂಪನಿಗಳು ನೆಲೆಯನ್ನು ಬದಲಾಯಿಸಲು ನೆರೆಯ ರಾಜ್ಯಗಳಿಂದ ಆಹ್ವಾನ ಸ್ವೀಕರಿಸುತ್ತಿವೆ ಎಂಬ ವದಂತಿಗಳ ಬೆನ್ನಲ್ಲೇ, ಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ವಿ ಗುರುವಾರ ಹೊರ ವರ್ತುಲ ರಸ್ತೆ ಕಂಪನಿಗಳ ಸಂಘದೊಂದಿಗೆ (ORRCA) ಸಭೆ ನಡೆಸಿದರು. ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡಿದರು.

ನಗರದಲ್ಲಿರುವ ಐಟಿ ಕಂಪನಿಗಳಿಗೆ ಸಾಕಷ್ಟು ನೀರು ದೊರೆಯುವಂತೆ ಮಾಡಲಿದ್ದೇವೆ. ನಗರದಾದ್ಯಂತ ನೀರು ಪೂರೈಕೆಯನ್ನು ಖಚಿತಪಡಿಸಿಕೊಳ್ಳಲು ನಾವು ಕ್ರಮಗಳನ್ನು ಕೈಗೊಂಡಿದ್ದೇವೆ ಮತ್ತು ಕಂಪನಿಗಳಿಗೆ ಕೂಡ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.

ಕಂಪನಿಗಳು ನೀರನ್ನು ಎಚ್ಚರಿಕೆಯಿಂದ ಬಳಸುವುದನ್ನು ಖಚಿತಪಡಿಸಿಕೊಳ್ಳಬೇಕು ಮತ್ತು ಅನಗತ್ಯ ಉದ್ದೇಶಗಳಿಗಾಗಿ ನೀರಿನ ದುರ್ಬಳಕೆಯಾಗದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚನೆ ನೀಡಿದರು.

ನೀರಿನ ಮಿತ ಹಾಗೂ ಜಾಗೃತಿಯ ಬಳಕೆಯ ಬಗ್ಗೆ ನಿಮ್ಮ ಉದ್ಯೋಗಿಗಳಲ್ಲಿ ಜಾಗೃತಿ ಮೂಡಿಸಿ. ನೀರಿನ ಉತ್ತಮ ನಿರ್ವಹಣೆಗಾಗಿ ಮೂರು ಹಂತಗಳನ್ನು ರೂಪಿಸಿದ್ದೇವೆ. ಅವುಗಳೆಂದರೆ ನೀರಿನ ಎಚ್ಚರಿಕೆಯ ಬಳಕೆ, ಸಂಸ್ಕರಿಸಿದ ನೀರಿನ ಮರುಬಳಕೆ ಮತ್ತು ಮಳೆನೀರು ಕೊಯ್ಲು. ಕಂಪನಿಗಳು ಕೂಡ ಇದನ್ನು ಅನುಸರಿಸಬೇಕೆಂದು ನಾವು ವಿನಂತಿಸುತ್ತೇವೆ. ಅದೇ ರೀತಿ ನೌಕರರು ಸಹ ಇದನ್ನು ಅನುಸರಿಸಬೇಕು ಎಂದು ಅವರು ಹೇಳಿದರು.

ಕುಡಿಯುವುದಕ್ಕಲ್ಲದೆ ಅನ್ಯ ಉದ್ದೇಶಗಳಿಗಾಗಿ ಕಂಪನಿಗಳಿಗೆ ಸಂಸ್ಕರಿಸಿದ ನೀರನ್ನು ಒದಗಿಸಲು ಜಲಮಂಡಳಿ ಮುಕ್ತವಾಗಿದೆ ಎಂದು ಅವರು ಹೇಳಿದರು. ನೀರು ನಿರ್ವಹಣೆಯ ಕುರಿತು ಜಲ ಮಂಡಳಿಯ ಸಲಹೆಯನ್ನು ಅನುಸರಿಸುವ ಕಂಪನಿಗಳಿಗೆ ‘ಗ್ರೀನ್ ಸ್ಟಾರ್ ರೇಟಿಂಗ್’ ನೀಡಲಾಗುವುದು ಎಂದು ಮನೋಹರ್ ಹೇಳಿದರು.

ಇದನ್ನೂ ಓದಿ: Bangalore Water Crisis: ನೀರಿನ ಬಿಕ್ಕಟ್ಟಿನ ಕಾರಣ ವರ್ಕ್ ಫ್ರಂ ಹೋಮ್​ಗೆ ಐಟಿ ಉದ್ಯೋಗಿಗಳ ಬೇಡಿಕೆ, ತಜ್ಞರ ಸಲಹೆಯೂ ಅದೇ!

ಬೆಂಗಳೂರಿನ ನೀರಿನ ಬಿಕ್ಕಟ್ಟಿನಿಂದಾಗಿ ವರ್ಕ್ ಫ್ರಮ್ ಹೋಮ್​ ಆಯ್ಕೆ ನೀಡಬೇಕೆಂದು ನಗರದ ಅನೇಕ ಐಟಿ ಉದ್ಯೋಗಿಗಳು ಮನವಿ ಮಾಡಿದ್ದರು. ತಜ್ಞರು ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು. ನಗರದಲ್ಲಿ ಸುಮಾರು 15ಲಕ್ಷ ಐಟಿ ಉದ್ಯೋಗಿಗಳಿದ್ದು, ವರ್ಕ್ ಫ್ರಮ್ ಹೋಮ್ ನೀಡುವುದರಿಂದ ಸುಮಾರು 10 ಲಕ್ಷ ಜನ ಅವರ ಊರುಗಳಿಗೆ ತೆರಳುವ ಸಾಧ್ಯತೆ ಇದೆ. ಇದರಿಂದ ನಗರದ ನೀರಿನ ಒತ್ತಡ ಕಡಿಮೆ ಮಾಡಬಹುದು ಎಂದು ಇತ್ತೀಚೆಗೆ ತಜ್ಞರು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ