ಬೆಂಗಳೂರು, ಮಾರ್ಚ್ 22: ಬೆಂಗಳೂರು ನಗರದಲ್ಲಿ ದಿನದಿಂದ ದಿನಕ್ಕೆ ನೀರಿನ ಬಿಕ್ಕಟ್ಟು (Bengaluru Water Crisis) ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ (BWSSB) ಇದೀಗ ಕೊಳವೆ ಬಾವಿಗಳ (Borewell) ವಿಚಾರದಲ್ಲಿ ಕಠಿಣ ಕ್ರಮಕ್ಕೆ ಒಂದಾಗಿದೆ. ಕಟ್ಟಡ ನಿರ್ಮಾಣ, ಉದ್ಯಾನ ಬಳಕೆ, ಕಾರು ತೊಳೆಯುವುದು ಮತ್ತಿತರ ಚಟುವಟಿಕೆಗಳಿಗೆ ಕುಡಿಯಲು ಯೋಗ್ಯ ನೀರನ್ನು ಬಳಸುವುದನ್ನು ನಿರ್ಬಂಧಿಸಿದ್ದ ಮಂಡಳಿ, ಇದೀಗ ಆದೇಶ ಉಲ್ಲಂಘನೆ ಆಗುತ್ತಿರುವುದನ್ನು ಗಮನಿಸಿದೆ. ಅಲ್ಲದೆ, ಈ ವಿಚಾರದಲ್ಲಿ ಕಠಿಣ ಕ್ರಮಕ್ಕೆ ಮುಂದಾಗಿದೆ.
ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿ ನಿರ್ಮಾಣ ಚಟುವಟಿಕೆಗಳಿಗೆ ಕೊಳವೆಬಾವಿ ನೀರು ಬಳಸುತ್ತಿರುವುದರಿಂದ ಅಂತಹ ಜಾಗಗಳಲ್ಲಿರುವ ಖಾಸಗಿ ಬೋರ್ವೆಲ್ಗಳನ್ನು ವಶಪಡಿಸಿಕೊಳ್ಳಲು ಮುಂದಾಗಿದೆ. ಈ ನಿಟ್ಟಿನಲ್ಲಿ ಶುಕ್ರವಾರ ಮತ್ತು ಆದೇಶ ಹೊರಡಿಸಿದ್ದು, 20,000 ಚದರ ಅಡಿ ಮೇಲ್ಪಟ್ಟ ಕಟ್ಟಡ ನಿರ್ಮಾಣ ಪ್ರದೇಶಗಳಲ್ಲಿರುವ ಕೊಳವೆಬಾವಿಗಳನ್ನು ಸುಪರ್ದಿಗೆ ತೆಗೆದುಕೊಳ್ಳುವುದಾಗಿ ಹೇಳಿದೆ.
ನಗರದಲ್ಲಿ ಅಂತರ್ಜಲ ಮಟ್ಟ ಕುಸಿತವಾಗಿರುವ ಕಾರಣ ಈಗಾಗಲೇ ಅನೇಕ ಕೊಳವೆ ಬಾವಿಗಳು ಬತ್ತಿ ಹೋಗಿವೆ. ಈ ಬಿಕ್ಕಟ್ಟಿನ ಸಂದರ್ಭದಲ್ಲಿ, ನಗರದಲ್ಲಿರುವ ಪ್ರತಿಯೊಬ್ಬರಿಗೂ ನೀರು ಒದಗಿಸಬೇಕಾದ ಅನಿವಾರ್ಯತೆಯಲ್ಲಿ ಜಲಮಂಡಳಿ ಇದೆ. ಹೀಗಾಗಿ ಕಟ್ಟಡ ನಿರ್ಮಾಣ ಮಾಲೀಕರಿಗೆ ಖಡಕ್ ಆದೇಶ ಹೊರಡಿಸಲಾಗಿದೆ ಎಂದು ಜಲಮಂಡಳಿ ಅಧ್ಯಕ್ಷ ರಾಮಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುಮಾರು 14 ಸಾವಿರ ಕೊಳವೆಬಾವಿಗಳು ಇದ್ದು, ಇದರಲ್ಲಿ ಸುಮಾರು 6,900 ಬತ್ತಿ ಹೋಗಿವೆ ಎಂದು ಈಗಾಗಲೇ ಜಲ ಮಂಡಳಿ ತಿಳಿಸಿದೆ.
ಇದನ್ನೂ ಓದಿ: ಕಾವೇರಿ ಐದನೇ ಹಂತದ ಯೋಜನೆ: ಬೆಂಗಳೂರು ನೀರಿನ ಬಿಕ್ಕಟ್ಟು ಪರಿಹರಿಸುವ ಯೋಜನೆ ಬಗ್ಗೆ ತಿಳಿಯಬೇಕಾದ ವಿಚಾರಗಳಿವು
ಕುಡಿಯಲು ಯೋಗ್ಯ ಇರುವ ನೀರನ್ನು ಕಾರು ವಾಶ್ ಮಾಡಲು, ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಹಾಗೂ ಉದ್ಯಾನಗಳಿಗೆ ಬಳಸುವುದಕ್ಕೆ ಕೆಲವು ದಿನಗಳ ಹಿಂದಷ್ಟೇ ಜಲ ಮಂಡಳಿ ನಿರ್ಬಂಧ ಹೇರಿತ್ತು. ಆದರೆ ಜಲಮಂಡಳಿ ಆದೇಶದ ನಂತರವೂ, ಅನೇಕ ಕಡೆಗಳಲ್ಲಿ ಕೊಳವೆಬಾವಿ ನೀರನ್ನು ಕಟ್ಟಡ ನಿರ್ಮಾಣ ಚಟುವಟಿಕೆಗಳಿಗೆ ಬಳಸುತ್ತಿರುವುದು ಕಂಡುಬಂದಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:10 pm, Fri, 22 March 24