
ಬೆಂಗಳೂರು, ಜನವರಿ 12: ಎಂಟು ವರ್ಷಗಳ ನಂತರವೂ ನಿರ್ಮಾಣ ಹಂತದಲ್ಲಿರುವ ಬೆಂಗಳೂರಿನ ಈಜಿಪುರ ಫ್ಲೈಓವರ್ ಕುರಿತ ಎಕ್ಸ್ ಪೋಸ್ಟ್ ಒಂದು ವೈರಲ್ ಆಗಿದ್ದು, ನೆಟ್ಟಿಗರ ಗಮನ ಸೆಳೆದಿದೆ. ಬೆಂಗಳೂರಿನ ಮಹಿಳೆಯೊಬ್ಬರು ಅಪೂರ್ಣ ಫ್ಲೈಓವರ್ ಅನ್ನು ಚಿತ್ರಿಸುವ ಕಸ್ಟಮ್ ಫ್ರಿಡ್ಜ್ ಮ್ಯಾಗ್ನೆಟ್ ಅನ್ನು ಖರೀದಿಸಿದ್ದು, ಅದರ ಫೋಟೋವನ್ನು X ನಲ್ಲಿ ಹಂಚಿಕೊಂಡಿದ್ದಾರೆ.
ಮಹಿಳೆ ತಮ್ಮ ಎಕ್ಸ್ ಖಾತೆಯಲ್ಲಿ ಬಸವನಗುಡಿ ಮತ್ತು ಅರ್ಧಂಬರ್ಧ ನಿರ್ಮಾಣವಾದ ಈಜಿಪುರ ಫ್ಲೈಓವರ್‌ನ ಕಸ್ಟಮ್ ಮ್ಯಾಗ್ನೆಟ್ನ ಫೋಟೋವನ್ನು ಹಂಚಿಕೊಂಡಿರುವುದು ಸೋಶಿಯಲ್ ಮೀಡಿಯಾದಲ್ಲಿ ಹಾಸ್ಯದ ಅಲೆಯೆಬ್ಬಿಸದೆ. ನಾನು ಬಸವನಗುಡಿ , ಜಯನಗರ ಮತ್ತು ಬೆಂಗಳೂರು ಇವುಗಳ ನಡುವೆ ಯಾವ ಮ್ಯಾಗ್ನೆಟ್ ತೆಗೆದುಕೊಳ್ಳಲಿ ಎಂದು ಸ್ವಲ್ಪ ಯೋಚನೆ ಮಾಡಿ, ಕೊನೆಗೆ ಬಸವನಗುಡಿ ಎಂದು ನಿರ್ಧರಿಸಿದೆ ಎಂದು ಪೋಸ್ಟ್ ಮಾಡಿರುವ ಮಹಿಳೆ, ನನಗೂ ಈಜಿಪುರ ಫ್ಲೈಓವರ್‌ಗೂ ತುಂಬಾ ಹತ್ತಿರದ ಸಂಬಂಧವಿದೆ. ಹಾಗಾಗಿ ಈ ಮ್ಯಾಗ್ನೇಟ್ ಮಾಡಿಸಬೇಕಾಯಿತು ಎಂದು ಹಾಸ್ಯಭರಿತವಾಗಿ ಬರೆದುಕೊಂಡಿದ್ದಾರೆ.
Got 2 custom fridge magnets done 😄 After contemplating for quite a bit between Basavanagudi, Jayanagar, and Bengaluru, I decided to go ahead with Basavanagudi, because it is ❤️ Also since I’ve had a loooonngggg association with the Ejipura flyover, had to get this done 😂😂 pic.twitter.com/zvRsZNSLQs
— V (@Dhichkyaaon) January 11, 2026
ಆಕೆಯ ಪೋಸ್ಟ್ಗೆ ಕಾಮೆಂಟ್ಗಳ ಸುರಿಮಳೆಯೇ ಸುರಿದಿದ್ದು, ಕೆಲವರು ‘ಈಜಿಪುರ ಅಪೂರ್ಣ ಫ್ಲೈಓವರ್ ಅನ್ನು ರಕ್ಷಿಸಬೇಕಾಗಿದೆ. ಅದು ಬೆಂಗಳೂರಿನ ನಿಧಿ’ ಎಂದು ಬರೆದರೆ, ಇನ್ನೂ ಕೆಲವರು ‘ಒಂದು ದಿನ ಜನರು ಹಂಪಿಗೆ ಭೇಟಿ ನೀಡುವಂತೆಯೇ ಈಜಿಪುರವನ್ನು ನೋಡಲು ಬರುತ್ತಾರೆ’ ಎಂದು ತಮಾಷೆ ಮಾಡಿದ್ದಾರೆ. ಒಬ್ಬರಂತೂ ಈಜಿಪುರ ಮ್ಯಾಗ್ನೆಟ್‌ನಲ್ಲಿರುವ ಗುಂಡಿಗಳ ವಿವರವನ್ನೂ ಹೊಗಳಿದ್ದಾರೆ.
ಬೆಂಗಳೂರಿನಲ್ಲಿರುವ ಈಜಿಪುರ ಮೇಲ್ಸೇತುವೆಯು ಈಜಿಪುರ ಮುಖ್ಯ ರಸ್ತೆಯ ಉದ್ದಕ್ಕೂ ಇರುವ ಎತ್ತರದ ಕಾರಿಡಾರ್ ಆಗಿದ್ದು, ಇನ್ನರ್ ರಿಂಗ್ ರಸ್ತೆ, ಕೋರಮಂಗಲ ಮತ್ತು ಸುತ್ತಮುತ್ತಲಿನ ಪ್ರದೇಶಗಳ ನಡುವಿನ ಸಂಚಾರವನ್ನು ಸುಗಮಗೊಳಿಸುವ ಉದ್ದೇಶವನ್ನು ಹೊಂದಿದೆ. ನಗರದ ಅತ್ಯಂತ ಜನನಿಬಿಡ ಜಂಕ್ಷನ್‌ಗಳಲ್ಲಿ ಸಿಗ್ನಲ್-ಮುಕ್ತ ಮಾರ್ಗವಾಗಿ ಯೋಜಿಸಲಾಗಿದ್ದು, ಇದು ದಟ್ಟಣೆಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಭಾವಿಸಲಾಗಿತ್ತು.
ಬದಲಾಗಿ, ಇದು ಬೆಂಗಳೂರಿನಲ್ಲೇ ಅತ್ಯಂತ ವಿಳಂಬವಾದ ಯೋಜನೆಯಾಗಿ ಮಾರ್ಪಟ್ಟಿದೆ. 2017 ರಲ್ಲಿ ಇದರ ನಿರ್ಮಾಣ ಪ್ರಾರಂಭವಾಗಿತ್ತು. ಆರಂಭದಲ್ಲಿ ಈ ಯೋಜನೆಯು ಒಂದೆರಡು ವರ್ಷಗಳಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು. ಆದರೆ ಈ ನಿರೀಕ್ಷೆಗಳ ಮೇಲೆ ತಣ್ಣೀರು ಬಿದ್ದಿರುವುದು ಬೆಂಗಳೂರಿಗರ ಬೇಸರಕ್ಕೆ ಕಾರಣವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.