ರಾಜಧಾನಿ ಬೆಂಗಳೂರಿನಲ್ಲಿ ಕ್ಷಣಕ್ಷಣಕ್ಕೂ ಹೊಸ ಸಮಸ್ಯೆಗಳು ಸೃಷ್ಟಿ, ಹಣ ಕೊಟ್ರೂ ಕೊರೊನಾ ಡೆಡ್‌ಬಾಡಿಗೆ ಸಿಗ್ತಿಲ್ಲ ಮುಕ್ತಿ
ಬೆಳಿಗ್ಗೆಯಿಂದ ಬಂದ ಮೃತದೇಹಗಳ ಅಂತ್ಯಕ್ರಿಯೆ ತಡರಾತ್ರಿವರೆಗೂ ನಡೆಯುತ್ತಿದೆ. ಹಾಗಾಗಿ ಸಂಜೆ ವೇಳೆ ಬಂದ ಮೃತದೇಹಗಳಿಗೆ ನೋ ಎಂಟ್ರಿ ಎನ್ನಲಾಗುತ್ತಿದೆ. ಚಿತಾಗಾರದ ಸಿಬ್ಬಂದಿಗಳು ಬೇರೆ ಕಡೆ ಹೋಗುವಂತೆಯೂ ಸಂಬಂಧಿಕರಿಗೆ ಸೂಚಿಸುತ್ತಿದ್ದಾರೆ.
ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕ್ಷಣಕ್ಷಣಕ್ಕೂ ಹೊಸ ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಹಣ ಕೊಟ್ರೂ ಕೊರೊನಾ ಡೆಡ್‌ಬಾಡಿಗೆ ಮುಕ್ತಿ ಸಿಗ್ತಿಲ್ಲ. ಬೆಡ್ ಸಮಸ್ಯೆ, ಲಸಿಕೆ ಸಮಸ್ಯೆ, ಚಿತಾಗಾರ ಸಮಸ್ಯೆ ಬಳಿಕ ಈಗ ಆ್ಯಂಬುಲೆನ್ಸ್‌ಗಳ ಸಮಸ್ಯೆ ಸೃಷ್ಟಿಯಾಗಿದೆ.
ಕೊರೊನಾಗೆ ಬಲಿಯಾದವರ ಶವ ಸಾಗಿಸಲು ಪರದಾಡುತ್ತಿರುವ ಸಂಬಂಧಿಕರು ಆ್ಯಂಬುಲೆನ್ಸ್ ಸಿಗದೆ ಹೈರಾಣಗೊಂಡಿದ್ದಾರೆ. ಆ್ಯಂಬುಲೆನ್ಸ್‌ಗಾಗಿ ದಿನಗಟ್ಟಲೇ ಕಾಯಬೇಕಾದ ಸ್ಥಿತಿ ಉದ್ಭವವಾಗಿದೆ. ಹಣ ಪಾವತಿ ಮಾಡುವುದಾಗಿ ಹೇಳಿದ್ರೂ ಸಿಗುತ್ತಿಲ್ಲ ಎಂದು ಅಳಲು ಸಂಬಂಧಿಕರು ತೋಡಿಕೊಂಡಿದ್ದಾರೆ.
ವೃತ್ತಿಯಲ್ಲಿ ಕೆಎಸ್ ಎಫ್ ಸಿ (ಕರ್ನಾಟಕ ಸ್ಟೇಟ್ ಫೈನಾನಿಶಿಯಲ್ ಕಾರ್ಪೊರೇಷನ್) ಅಧಿಕಾರಿಯಾಗಿರುವ 58 ವರ್ಷದ ಕೆ ಎಚ್ ಬಿ ಕಾಲೋನಿ ನಿವಾಸಿಯೊಬ್ಬರು ಕೊರೊನಾ ಸೋಂಕಿನಿಂದಾಗಿ ಇದೇ ತಿಂಗಳ 14ನೇ ತಾರೀಖು ಸಪ್ತಗಿರಿ ಆಸ್ಪತ್ರೆಗೆ ದಾಖಲಾಗಿದ್ದರು. ಕೊರೊನಾ ಸೊಂಕು ಹಿನ್ನೆಲೆ ಚಿಕಿತ್ಸೆ ನಡೆಯುತ್ತಿತ್ತು.
ಆದ್ರೆ ಇಂದು ಬೆಳಗ್ಗೆ ಅವರು ಮೃತಪಟ್ಟಿದ್ದು, ಬೆಳಿಗ್ಗೆಯಿಂದ ಆ್ಯಂಬುಲೆನ್ಸ್ ಗಾಗಿ ಸಂಬಂಧಿಕರು ಪರದಾಟ ನಡೆಸಿದ್ದಾರೆ. ಅವರ ಕಡೆಯವರು ಇದುವರೆಗೂ ಬರೊಬ್ಬರಿ 25 ಸಾವಿರ ರೂಪಾಯಿ ಕೊಟ್ಟು ಖಾಸಗಿ ಆ್ಯಂಬುಲೆನ್ಸ್ ಬುಕ್ ಮಾಡಿದ್ದಾರೆ. ಕೊನೆಗೂ ಇದೀಗ ಆ್ಯಂಬುಲೆನ್ಸ್ ಸಿಕ್ಕಿದೆ. ಕುಟುಂಬಸ್ಥರು ಈಗ ಸಪ್ತಗಿರಿ ಆಸ್ಪತ್ರೆಯಿಂದ ಸುಮ್ಮನಹಳ್ಳಿ ಚಿತಾಗಾರಕ್ಕೆ ಮೃತದೇಹ ಸಾಗಿಸುತ್ತಿದ್ದಾರೆ.
ಸಂಜೆ ವೇಳೆ ಮೃತಪಟ್ಟ ಸೋಂಕಿತರ ಅಂತ್ಯಕ್ರಿಯೆ ಮರುದಿನವೇ.. ಕೊರೊನಾದಿಂದ ಸಂಜೆ ವೇಳೆ ಮೃತಪಟ್ಟ ಸೋಂಕಿತರ ಅಂತ್ಯಕ್ರಿಯೆ ಮರುದಿನವೇ ಎಂಬಂತಾಗಿದೆ. ಸಂಜೆ ನಂತರ ಚಿತಾಗಾರದ ಬಳಿ ಬಂದ್ರೆ ಜಾಗವೇ ಸಿಗುತ್ತಿಲ್ಲ. ಚಿತಾಗಾರದ ಸುತ್ತಮುತ್ತ ಆ್ಯಂಬುಲೆನ್ಸ್ ಗಳು ಕಾದು ನಿಂತಿವೆ. ಬೆಳಿಗ್ಗೆಯಿಂದ ಬಂದ ಮೃತದೇಹಗಳ ಅಂತ್ಯಕ್ರಿಯೆ ತಡರಾತ್ರಿವರೆಗೂ ನಡೆಯುತ್ತಿದೆ. ಹಾಗಾಗಿ ಸಂಜೆ ವೇಳೆ ಬಂದ ಮೃತದೇಹಗಳಿಗೆ ನೋ ಎಂಟ್ರಿ ಎನ್ನಲಾಗುತ್ತಿದೆ. ಚಿತಾಗಾರದ ಸಿಬ್ಬಂದಿಗಳು ಬೇರೆ ಕಡೆ ಹೋಗುವಂತೆಯೂ ಸಂಬಂಧಿಕರಿಗೆ ಸೂಚಿಸುತ್ತಿದ್ದಾರೆ.