ಡೆತ್​ನೋಟ್ ಕೈಯಲ್ಲಿ ಹಿಡಿದುಕೊಂಡೇ ಕೆಎಸ್​​ಡಿಎಲ್​​ ಅಧಿಕಾರಿ ಆತ್ಮಹತ್ಯೆ

| Updated By: ಗಂಗಾಧರ​ ಬ. ಸಾಬೋಜಿ

Updated on: Dec 30, 2024 | 5:54 PM

ಬೆಂಗಳೂರಿನಲ್ಲಿ ಕೆಎಸ್​ಡಿಎಲ್​ನ ಮೆಟೀರಿಯಲ್ ವಿಭಾಗದ ಅಧಿಕಾರಿ ಅಮೃತ್ ಶಿರೂರ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡಿಸೆಂಬರ್ 28 ರಂದು ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಡೆತ್​ನೋಟ್ ಬರೆದಿದ್ದು, ಕುಟುಂಬ ಸಮಸ್ಯೆಗಳನ್ನು ಉಲ್ಲೇಖಿಸಿದ್ದಾರೆ. ಪೊಲೀಸರು ಡೆತ್​ನೋಟ್ ವಶಪಡಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಡೆತ್​ನೋಟ್ ಕೈಯಲ್ಲಿ ಹಿಡಿದುಕೊಂಡೇ ಕೆಎಸ್​​ಡಿಎಲ್​​ ಅಧಿಕಾರಿ ಆತ್ಮಹತ್ಯೆ
ಡೆತ್​ನೋಟ್ ಕೈಯಲ್ಲಿ ಹಿಡಿದುಕೊಂಡೇ ಕೆಎಸ್​​ಡಿಎಲ್​​ ಅಧಿಕಾರಿ ನೇಣಿಗೆ ಶರಣು
Follow us on

ಬೆಂಗಳೂರು, ಡಿಸೆಂಬರ್​ 30: ಡೆತ್​ನೋಟ್ ಕೈಯಲ್ಲಿ ಹಿಡಿದುಕೊಂಡೇ ಕೆಎಸ್​​ಡಿಎಲ್​​ (KSDL) ಅಧಿಕಾರಿ ನೇಣಿಗೆ ಶರಣಾಗಿರುವಂತಹ ಘಟನೆ ಡಿಸೆಂಬರ್​ 28ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮುನೇಶ್ವರ ಬ್ಲಾಕ್​​ನಲ್ಲಿರುವ ಮನೆಯಲ್ಲಿ ಅಮೃತ್ ಶಿರೂರ್(40) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಮಹಾಲಕ್ಷ್ಮೀ ಲೇಔಟ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ತನಿಖೆ ನಡೆಸಿದ್ದಾರೆ.

ನನ್ನ ಸಾವಿಗೆ ನಾನೇ ಕಾರಣ, ಯಾರೂ ಕಾರಣರಲ್ಲ

ಶಿವಮೊಗ್ಗದ ಶಿರಾಳಕೊಪ್ಪ ನಿವಾಸಿಯಾಗಿರುವ ಅಮೃತ್ ಶಿರೂರ್, ಕೆಎಸ್​ಡಿಎಲ್​ನಲ್ಲಿ ಮೆಟೀರಿಯಲ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. 2019ರಲ್ಲಿ ಎರಡನೇ ಮದುವೆಯಾಗಿದ್ದರು. ಕೌಟುಂಬಿಕ ವಿಚಾರದಲ್ಲಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.

ಇದನ್ನೂ ಓದಿ: ಸಿನಿಮಾ ಶೈಲಿಯಲ್ಲಿ ಬ್ಯಾಂಕಿಗೆ ವಂಚನೆ: ತಂಗಿ ಮದ್ವೆ ಸಾಲಕ್ಕೆ ಅಣ್ಣ ಜೈಲು ಸೇರುವ ಪರಿಸ್ಥಿತಿ

ಕೈಯಲ್ಲಿ ಡೆತ್​ನೋಟ್​ ಹಿಡಿದುಕೊಂಡು ನೇಣಿಗೆ ಶರಣಾಗಿರುವ ಅಮೃತ್​​, ತಂದೆ-ತಾಯಿಗೆ ಒಳ್ಳೆಯ ಮಗನಾಗಲಿಲ್ಲ, ಪತ್ನಿಗೆ ಒಳ್ಳೆಯ ಗಂಡನಾಗಲಿಲ್ಲ. ನನ್ನ ಸಾವಿಗೆ ನಾನೇ ಕಾರಣ, ಯಾರೂ ಕಾರಣರಲ್ಲ ಎಂದು ಡೆತ್​ನೋಟ್​ನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಡೆತ್​ನೋಟ್ ವಶಕ್ಕೆ ಪಡೆದು ಎಫ್​ಎಸ್​ಎಲ್​​ಗೆ ಪೊಲೀಸರು ರವಾನಿಸಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಶವ ಹಸ್ತಾಂತರ ಮಾಡಲಿದ್ದಾರೆ.

ಡಿಸಿಪಿ ಸೈದುಲು ಅಡಾವತ್ ಹೇಳಿದ್ದಿಷ್ಟು

ಬೆಂಗಳೂರು ಉತ್ತರ ವಿಭಾಗದ ಡಿಸಿಪಿ ಸೈದುಲು ಅಡಾವತ್ ಹೇಳಿಕೆ ನೀಡಿದ್ದು, ಮಹಾಲಕ್ಷ್ಮೀ ಲೇಔಟ್ ಠಾಣೆಗೆ ಮನೆ ಮಾಲೀಕ ಗಿರೀಶ್​ರಿಂದ ದೂರು ನೀಡಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಶವ ಕೆಳಗಿಸಿ ಸ್ಥಳಾಂತರ ಮಾಡಲಾಗಿದೆ. ಘಟನಾ ಸ್ಥಳ ಪರಿಶೀಲಿಸಿದಾಗ ಯಾವುದೇ ಸಂಶಯ ಕಂಡುಬಂದಿಲ್ಲ. ಮರಣೋತ್ತರ ಪರೀಕ್ಷೆಗಾಗಿ ಅಮೃತ್ ಶವ ಸ್ಥಳಾಂತರ ಮಾಡಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಆಧಾರದಲ್ಲಿ ತನಿಖೆ ಮಾಡಲಾಗುವುದು ಎಂದಿದ್ದಾರೆ.

10 ವರ್ಷದಿಂದ ಅಮೃತ್ ಕೆಎಸ್​ಡಿಎಲ್​ನಲ್ಲಿ ಕೆಲಸ ಮಾಡುತ್ತಿದ್ದರು. ಸ್ಥಳದಲ್ಲಿ ಸಿಕ್ಕ ಡೆತ್​ನೋಟ್​ನಲ್ಲಿ ಯಾರೊಬ್ಬರ ಹೆಸರು ಉಲ್ಲೇಖಿಸಿಲ್ಲ. ‘ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆದಿದ್ದ ಡೆತ್​ನೋಟ್ ಸಿಕ್ಕಿದೆ. ನನ್ನ ಕೆಲಸಕ್ಕೆ ನ್ಯಾಯ ಒದಗಿಸಲು ಆಗುತ್ತಿಲ್ಲವೆಂದು ಉಲ್ಲೇಖಿಸಲಾಗಿದೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿದ ನಂತರ ಮತ್ತೊಂದು ವಿವಾಹವಾಗಿದೆ. ಅಮೃತ್ 2ನೇ ಪತ್ನಿಗೂ ವಿಚ್ಛೇದನ ನೀಡುವ ಪ್ರಕ್ರಿಯೆ ನಡೆಯುತ್ತಿದೆ. ಮುನೇಶ್ವರ ಬ್ಲಾಕ್​ನಲ್ಲಿ ಬಾಡಿಗೆ ಮನೆಯಲ್ಲಿ ಅಮೃತ್ ಒಬ್ಬರೇ ಇದ್ದರು ಎಂದು ಹೇಳಿದ್ದಾರೆ.

ಲಾರಿ, ಬೈಕ್ ನಡುವೆ ಡಿಕ್ಕಿ: ಬೈಕ್ ಸವಾರ ಸಾವು, ಓರ್ವನಿಗೆ ಗಂಭೀರ ಗಾಯ

ಮೈಸೂರಿನ ಮಾರಗೌಡನಹಳ್ಳಿ ಗೇಟ್​​ ಬಳಿ ಲಾರಿ, ಬೈಕ್ ನಡುವೆ ಡಿಕ್ಕಿಯಾಗಿ ಬೈಕ್ ಸವಾರ ಸಾವನ್ನಪ್ಪಿರುವಂತಹ ಘಟನೆ ನಡೆದಿದೆ. ಹಿಂಬದಿ ಕುಳಿತಿದ್ದ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಹೆಚ್.ಡಿ.ಕೋಟೆ ತಾಲೂಕಿನ ಕೆ.ಬೆಳ್ತೂರು ಗ್ರಾಮದ ತಿಮ್ಮನಾಯಕ ಪುತ್ರ ಸತೀಶ್(27) ಮೃತ ಸವಾರ. ಸತೀಶ್ ಅಕ್ಕನ ಮಗ ಶಿವು(13)ಗೆ ಗಂಭೀರ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ದೇವನಹಳ್ಳಿ: ಗೆಳೆಯನ ಹತ್ಯೆ ಮಾಡಿ ದೃಶ್ಯಂ ಸಿನಿಮಾ ರೀತಿ ಕಥೆ ಕಟ್ಟಿದ ವ್ಯಕ್ತಿ, ತನಿಖೆಯಲ್ಲಿ ಬಯಲಾಯ್ತು ಭಯಾನಕ ಸಂಗತಿ

ಬೈಕ್​​​​ನಲ್ಲಿ ಅಕ್ಕನ ಮಗನ ಜೊತೆ ಮೈಸೂರಿನಿಂದ ಸ್ವಗ್ರಾಮಕ್ಕೆ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಲಾರಿ ಚಾಲಕ ಜಾವೀದ್ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:45 pm, Mon, 30 December 24