AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವನಹಳ್ಳಿ: ಗೆಳೆಯನ ಹತ್ಯೆ ಮಾಡಿ ದೃಶ್ಯಂ ಸಿನಿಮಾ ರೀತಿ ಕಥೆ ಕಟ್ಟಿದ ವ್ಯಕ್ತಿ, ತನಿಖೆಯಲ್ಲಿ ಬಯಲಾಯ್ತು ಭಯಾನಕ ಸಂಗತಿ

ಆತ ರಿಯಲ್ ಎಸ್ಟೇಟ್ ಜೊತೆಗೆ ಸೆಕೆಂಡ್ ಹ್ಯಾಂಡ್ ಕಾರುಗಳ ಮಾರಾಟ ಮಾಡಿ ಬಂದ ಕಮಿಷನ್ ಹಣದಲ್ಲಿ ಜೀವನಕಟ್ಟಿಕೊಂಡಿದ್ದ. ಜೊತೆಗೆ ಸ್ನೇಹಿತನಿಗೂ ವ್ಯಾಪಾರದ ಜೊತೆಗೆ ಮನೆಯಲ್ಲೂ ಜಾಗ ನೀಡಿದ್ದ. ಕಷ್ಟ ಬಂದಾಗ ಹಣಕಾಸಿನ ನೆರವು ಸಹ ನೀಡಿದ್ದ. ಆದರೆ ಅದೇ ಹಣಕಾಸಿನ ನೆರವೇ ಆತನಿಗೆ ಮುಳುವಾಗಿದ್ದು, ಸ್ನೇಹಿತನೆಂದು ನಂಬಿದ್ದಕ್ಕೆ ಇಹಲೋಕ ತ್ಯಜಿಸುವಂತಾಗಿದೆ. ಸಿನಿಮೀಯ ರೀತಿಯ ಕೊಲೆ ಪ್ರಕರಣ ನಡೆದಿದ್ದೆಲ್ಲಿ, ಆಮೇಲೇನಾಯ್ತು ಎಂಬ ವಿವರ ಇಲ್ಲಿದೆ.

ದೇವನಹಳ್ಳಿ: ಗೆಳೆಯನ ಹತ್ಯೆ ಮಾಡಿ ದೃಶ್ಯಂ ಸಿನಿಮಾ ರೀತಿ ಕಥೆ ಕಟ್ಟಿದ ವ್ಯಕ್ತಿ, ತನಿಖೆಯಲ್ಲಿ ಬಯಲಾಯ್ತು ಭಯಾನಕ ಸಂಗತಿ
ದೇವನಹಳ್ಳಿ ಪೊಲೀಸ್
ನವೀನ್ ಕುಮಾರ್ ಟಿ
| Edited By: |

Updated on: Dec 28, 2024 | 4:42 PM

Share

ದೇವನಹಳ್ಳಿ, ಡಿಸೆಂಬರ್ 28: ಅದು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ. ಅಲ್ಲಿನ ಬಡಾವಣೆಯ ಮಣ್ಣಿನಲ್ಲಿ ಪೊಲೀಸರು ಇಂಚಿಂಚೂ ಶೋಧ ನಡೆಸುತ್ತಿದ್ದರೆ, ಇತ್ತ ಕೆರೆ ನೀರು ಏರಿ ಮೇಲೆ ಅಗ್ನಿಶಾಮಕ ದಳದ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ‌. ಕೆರೆಯಲ್ಲಿ ಎಲ್ಲಾ ಕಡೆ ಹುಡುಕಾಡಿದ ಪೊಲೀಸರಿಗೆ ಚೀಲದ ಮೂಟೆಯೊಂದು ಸಿಕ್ಕಿದೆ. ಮೂಟೆಯಲ್ಲಿ ಏನಿದೆ ಅಂತ ಕುತೂಹಲದಿಂದ ನೋಡಿದವರಿಗೆ ಕಾಣಿಸಿದ್ದು ಎರಡು ತಿಂಗಳ ಹಿಂದದೆ ಕೊಳೆತು ಅರೆ ಬರೆ ಬೆಂದಿರುವ ಮೃತದೇಹದ ಅಂಗಾಂಗಗಳು! ಈ ರೀತಿ ಕ್ರೂರವಾಗಿ ಕೊಲೆಯಾಗಿರುವವರ ಹೆಸರು ದೇವರಾಜ್.

ಜೊತೆಯಲ್ಲೇ ಊಟ ಮಾಡಿ, ಕಷ್ಟ ಬಂದಾಗ ಕೇಳಿದಾಗಲೆಲ್ಲ ಲಕ್ಷ ಲಕ್ಷ ರೂಪಾಯಿ ಹಣ ಕೊಟ್ಟಿದ್ದ ಸ್ನೇಹಿತನನ್ನೇ ಸಿನಿಮೀಯ ರೀತಿಯಲ್ಲಿ ಹತ್ಯೆ ಮಾಡಿರುವವನ್ನು ಕೊನೆಗೂ ಪೊಲೀಸರು ಬಲೆಗೆ ಕೆಡವಿದ್ದಾರೆ. ರಾಜ್ ಕುಮಾರ್ ಮತ್ತು ಅನಿಲ್ ಎಂಬವರನ್ನು ಬಂಧಿಸಿದ್ದಾರೆ.

ಏನಿದು ಪ್ರಕರಣ?

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ರಘುನಾಥಪುರ ನಿವಾಸಿಯಾದ ರಾಜ್ ಕುಮಾರ್ ಎಂಬವರು ಪಕ್ಕದ ಗ್ರಾಮದ ದೇವರಾಜ್ ಜೊತೆ ಸೇರಿ ರಿಯಲ್ ಎಸ್ಟೇಟ್ ಮತ್ತು ಸೆಕೆಂಡ್ ಹ್ಯಾಂಡ್ ಕಾರುಗಳನ್ನು ದೆಹಲಿಯಿಂದ ತಂದು ಇಲ್ಲಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದರು. ಕಳೆದ ಕೆಲ‌ ವರ್ಷಗಳಿಂದ ಇಬ್ಬರೂ ಜೊತೆಯಾಗಿಯೇ ವ್ಯವಹಾರ ಮಾಡುತ್ತಿದ್ದರು. ಅಂತಾರಾಜ್ಯ ವಾಹನಗಳನ್ನು ತಂದು ಮಾರಾಟ ಮಾಡಿ ಬಂದ ಲಾಭದ ಹಣವನ್ನ ಹಂಚಿಕೊಳ್ಳುತ್ತಿದ್ದರು.

ಹೀಗಾಗಿ ಲಕ್ಷ ಲಕ್ಷ ರೂಪಾಯಿ ಹಣವನ್ನು ಸ್ನೇಹಿತ ರಾಜ್ ಕುಮಾರ್​ಗೆ ದೇವರಾಜ್ ನಂಬಿಕೆ ಮೇಲೆ ಕೊಟ್ಟಿದ್ದರು. ಕೆಲ ತಿಂಗಳುಗಳಿಂದ ಕೊಟ್ಟ ಹಣವನ್ನ ವಾಪಸ್ ಕೇಳಿದ್ದರಂತೆ. ಪದೇಪದೇ ಹಣ ವಾಪಸ್ ಕೇಳಿದ್ದಕ್ಕೆ ರೊಚಿಗೆದ್ದ ರಾಜ್ ಕುಮಾರ್, ಸ್ನೇಹಿತ ದೇವರಾಜ್​ರನ್ನು ಕೊಲೆ ಮಾಡುವ ಸ್ಕೇಚ್ ಹಾಕಿದ್ದಾನೆ. ಅಲ್ಲದೆ ಅದಕ್ಕಾಗಿ ಆಂಧ್ರ ಮೂಲದ ಅನಿಲ್ ಎಂಬ ಸ್ನೇಹಿತನನ್ನ ಕರೆಸಿಕೊಂಡಿದ್ದು ಯುಪಿ ರಿಜಿಸ್ಟರ್ ಮೂಲದ ಕಾರಿನಲ್ಲಿ ಅಕ್ಟೋಬರ್ 17 ರಂದು ಹಣ ನೀಡುವುದಾಗಿ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಸ್ನೇಹಿತನ ಸಂಚು ತಿಳಿಯದೆ ಕಾರು ಹತ್ತಿದ ದೇವರಾಜ್​​ನನ್ನು ನಿರ್ಜನ‌ ಪ್ರದೇಶಕ್ಕೆ ಕರೆದುಕೊಂಡು ಹೋಗಿದ್ದಾನೆ. ಇದೇ ವೇಳೆ, ಕಾರಿನಲ್ಲಿ ಮುಂದೆ ಕುಳಿತಿದ್ದ ದೇವರಾಜ್​​ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಅನಿಲ್ ಕೊಲೆ ಮಾಡಿದ್ದಾನೆ.

ಶವವನ್ನು ಗುಂಡಿಯಲ್ಲಿ ಹೂಳಲು ಮೊದಲೇ ನಡೆದಿತ್ತು ಪ್ಲ್ಯಾನ್

ದೇವರಾಜ್​​ರನ್ನು ಕೊಲೆ ಮಾಡುವ ಮುನ್ನವೇ ಖಾಸಗಿ ಬಡಾವಣೆಯಲ್ಲಿ ಸಂಪು ಕಟ್ಟಬೇಕು ಎಂಬ ನೆಪದಲ್ಲಿ ರಾಜ್​ಕುಮಾರ್ ಜೆಸಿಬಿ ಮೂಲಕ ಗುಂಡಿ‌ ತೆಗೆಸಿದ್ದ. ನಂತರ ಅದೇ ಗುಂಡಿಯಲ್ಲಿ ದೇವರಾಜ್ ಮೃತದೇಹವನ್ನು ಹಾಕಿ ಮಣ್ಣು ಮುಚ್ಚಿದ್ದಾರೆ.

ಕುಟುಂಬದವರ ಜತೆಗೂಡಿ ಪೊಲೀಸರಿಗೆ ದೂರು ನೀಡಿದ್ದ ಕೊಲೆಗಾರ!

ಕೊಲೆ ಮಾಡಿದ ನಂತರ ಮೂರು ದಿನಗಳ ಬಳಿಕ ಕೊಲೆ ಮಾಡಿದ ದೇವರಾಜ್ ಕುಟುಂಬಸ್ಥರ ಜೊತೆಗೂಡಿ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೇವರಾಜ್ ಕಾಣೆಯಾಗಿರುವುದಾಗಿ ದೂರು ನೀಡಿದ್ದಾರೆ. ಹೀಗಾಗಿ ಎಲ್ಲಾ ಅಯಾಮದಲ್ಲೂ ತನಿಖೆ ನಡೆಸಿದ ಇನ್ಸ್​​​ಪೆಕ್ಟರ್ ಸಾಧಿಕ್ ಪಾಷಗೆ ಮೊದಲಿಗೆ ನಾಪತ್ತೆ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗೆ ಬೇರೆ ಆಯಾಮಾದಲ್ಲಿ ತನಿಖೆಗಿಳಿದ ಪೊಲೀಸರಿಗೆ ರಾಜ್ ಕುಮಾರ್ ಮೇಲೆ ಅನುಮಾನ ಮೂಡಿದ್ದು, ತಮ್ಮದೆ ಶೈಲಿಯಲ್ಲಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ 20 ಲಕ್ಷ ರೂ. ಸಾಲ ನೀಡಿದ್ದನ್ನು ದೇವರಾಜ್ ಪದೇ ಪದೆ ಕೇಳುತ್ತಿದ್ದ ಕಾರಣ ಸ್ನೇಹಿತ ಅನಿಲ್ ಜೊತೆಗೂಡಿ ಕೊಲೆ ಮಾಡಿದ್ದಾಗಿ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ: ಎಚ್ಚರ..ಎಚ್ಚರ: ವರ್ಕ್ ಫ್ರಾಮ್ ಹೋಂ ಕೆಲಸದ ಹೆಸರಿನಲ್ಲಿ ನಡೆಯುತ್ತಿದೆ ವಂಚನೆ

ತಿಂಗಳ ಬಳಿಕ ಶವವನ್ನು ಗುಂಡಿಯಿಂದ ತೆಗೆದು ಸುಟ್ಟಿದ್ದ!

ಹೂತಿದ್ದ ಹೆಣ ಸಿಗಬಾರದು ಎಂದು ಕೊಲೆಯಾದ ಒಂದು ತಿಂಗಳ ಬಳಿಕ ಅದನ್ನು ಗುಂಡಿಯಿಂದ ತೆಗೆದು ಪೆಟ್ರೋಲ್ ಹಾಕಿ ಸುಟ್ಟಿದ್ದ. ಸುಟ್ಟ ನಂತರ ಬೂದಿ ಸಮೇತ ಕೆರೆಗೆ ಹಾಕಿದ್ದಾಗಿ ವಿಚಾರಣೆ ವೇಳೆ ಹೇಳಿದ್ದು, ಕೆರೆಗೆ ಹಾಕಿದ್ದ ಮೃತದೇಹದ ಮೂಳೆಗಳನ್ನು ಹೊರ ತೆಗೆಯಲಾಗಿದೆ. ಇದೀಗ, ದೃಶ್ಯಂ ಸಿನಿಮಾ ಸ್ಟೈಲ್​​ನಲ್ಲಿ ಕಥೆ ಕಟ್ಟಲು ಮುಂದಾಗಿದ್ದವನ ಬಂಧನವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ