ಬೆಂಗಳೂರು: ಆನೆದಂತ (Elephant Ivory) ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಆರ್ಎಂಸಿ ಯಾರ್ಡ್ ಪೊಲೀಸರು (Police) ಬಂಧಿಸಿದ್ದಾರೆ. ಶ್ರೀಶೈಲ ಬಂಧಿತ ಆರೋಪಿ. ಆರೋಪಿ ಶ್ರೀಶೈಲ್ ಗುರುವಾರ ಸಂಜೆ 6.30 ರ ಸುಮಾರಿಗೆ ಆರ್ಎಂಸಿ ಯಾರ್ಡ್ ಠಾಣಾ ವ್ಯಾಪ್ತಿಯ ಕೈಗಾರಿಕಾ ಪ್ರದೇಶದಲ್ಲಿ ಆನೆ ದಂತ ಮಾರಾಟಕ್ಕೆ ಯತ್ನಿಸುತ್ತಿದ್ದನು. ಈ ಬಗ್ಗೆ ಆರ್ಎಂಸಿ ಯಾರ್ಡ್ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಕೂಡಲೆ ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದ್ದಾರೆ.
ಬಂಧಿತನಿಂದ 7.42 ಕೆಜಿ ತೂಕದ 5 ಆನೆ ದಂತಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇನ್ನು ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಆರ್ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣ -ಎಸ್ಐಟಿ ಯಿಂದ ತನಿಖೆ ಚುರುಕು
ಚಾಮರಾಜನಗರ: ಚಿನ್ನದ ವ್ಯಾಪಾರಿ ಬಳಿ ಇದ್ದ 40 ಲಕ್ಷ ರೂ. ಹಣವನ್ನು ದೋಚಿ ಕಾರಿನಲ್ಲಿ ಪರಾರಿಯಾಗುತ್ತಿದ್ದ ನಾಲ್ವರನ್ನು ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಸೋಮಹಳ್ಳಿ ಗ್ರಾಮಸ್ಥರು ಸೆರೆ ಹಿಡಿದಿದ್ದಾರೆ.
ಮೂರು ಕಾರುಗಳಲ್ಲಿ ಬಂದಿದ್ದ ಕೇರಳ ಮೂಲದ ದರೋಡೆ ಗ್ಯಾಂಗ್ ಚಿನ್ನದ ವ್ಯಾಪಾರಿ ಬಳಿ ಇದ್ದ 40 ಲಕ್ಷ ರೂ. ಹಣವನ್ನು ದೋಚಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಅಲರ್ಟ್ ಆದ ಗ್ರಾಮಸ್ಥರು ಖದೀಮರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ನೆಲಮಂಗಲ: ಆಗಸ್ಟ್ 5ರಂದು ಹೆದ್ದಾರಿ4ರ ಬ್ರಿಡ್ಜ್ ಬಳಿ ಅಪರಿಚಿತ ಶವವೊಂದು ಪತ್ತೆಯಾಗಿತ್ತು. ನೆಲಮಂಗಲ ಟೌನ್ ಪೊಲೀಸರು ಅನುಮಾನಾಸ್ಪದ ಸಾವೆಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಇದೀಗ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಬೆಂಗಳೂರಿನ ಲಗ್ಗೆರೆ ಮಂಜುನಾಥ್ (31), ಅರಿಶಿನಕುಂಟೆಯ ಅಬ್ದುಲ್ ಸಲಾಂ(34), ಸುನೀಲ್(26),ಶರಣ್ ಗೌಡ(27) ಬಂಧಿತ ಆರೋಪಿಗಳು.ಸಂತೋಷ್(32) ಮೃತ ದುರ್ದೈವಿ.
ನಾಲ್ವರು ಆರೋಪಿಗಳು ಆ.5 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಚಂದು ಡಾಬಾದಲ್ಲಿ ಕಂಠಪೂರ್ತಿ ಕುಡಿದಿದ್ದರು. ಮದ್ಯದ ಅಮಲಿನಲ್ಲಿ ಕಾರು ಚಾಲನೆ ಮಾಡಿ ನೆಲಮಂಗಲ ಟೌನ್ ದಾನೋಜಿಪಾಳ್ಯ ಬಳಿ ಪಾದಚಾರಿ ಸಂತೋಷ್ಗೆ ಕಾರಿನಿಂದ ಗುದ್ದಿ ಪರಾರಿಯಾಗಿದ್ದರು.
ಸಂತೋಷ್ ಮೃತ ದೇಹ ಹೆದ್ದಾರಿ4ರ ಬ್ರಿಡ್ಜ್ ಬಳಿ ಪತ್ತೆಯಾಗಿತ್ತು. ವಿಷಯ ತಿಳಿದ ನೆಲಮಂಗಲ ಟೌನ್ ಪೊಲೀಸರು ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು. ಈ ಕುರಿತು ತಿನಿಖೆ ನಡೆಸುವಾಗ ಪೊಲೀಸರಿಗೆ ಮೃತ ಸಂತೋಷ್ ರಸ್ತೆ ಪಕ್ಕದಲ್ಲಿ ನಡೆದು ಬರುತ್ತಿದ್ದ ಸಿಸಿಟಿವಿ ದೃಶ್ಯ ಲಭ್ಯವಾಗಿದೆ. ಇದರ ಅಧಾರದ ಮೇಲೆ ಪ್ರಕರಣ ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ ತನಿಖೆ ಪೂರ್ಣಗೊಳಿಸಿ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಗೆ ಪ್ರಕರಣ ವರ್ಗಾವಣೆ ಮಾಡಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ