ಪಠ್ಯ ಪರಿಷ್ಕರಣೆ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆಗೆ ಬರಗೂರು ರಾಮಚಂದ್ರಪ್ಪ ತಿರುಗೇಟು

| Updated By: ಗಂಗಾಧರ​ ಬ. ಸಾಬೋಜಿ

Updated on: May 24, 2022 | 3:00 PM

ಈ ಹಿಂದಿನ ಪಠ್ಯ ಪರಿಷ್ಕರಣೆ ಸಮಿತಿಯ ಬಗ್ಗೆ ಬಿ.ಸಿ.ನಾಗೇಶ್ ಟೀಕೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಠ್ಯ ಪರಿಷ್ಕರಣೆ ಸಮಿತಿ ಮುಖ್ಯಸ್ಥರಾಗಿದ್ದ ಬರಗೂರು ರಾಮಚಂದ್ರಪ್ಪ ತಿರುಗೇಟು ನೀಡಿದ್ದಾರೆ.

ಪಠ್ಯ ಪರಿಷ್ಕರಣೆ ಬಗ್ಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿಕೆಗೆ ಬರಗೂರು ರಾಮಚಂದ್ರಪ್ಪ ತಿರುಗೇಟು
ಬರಗೂರು ರಾಮಚಂದ್ರಪ್ಪ
Follow us on

ಬೆಂಗಳೂರು: ನಾವು ಪರಿಷ್ಕರಣೆ ಮಾಡಿದ ಸಮಯದಲ್ಲಿ ಗಾಂಧಿ, ಅಂಬೇಡ್ಕರ್, ಮದಕರಿ ನಾಯಕ, ಕೆಂಪಗೌಡರ ಪಠ್ಯ ಕೈ ಬಿಟ್ಟಿದ್ದೇವೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಆದರೇ, ಇದೊಂದು ಅಪ್ಪಟ ತಪ್ಪು ಮಾಹಿತಿ. ಸ್ಪಷ್ಟವಾದ ಮಾಹಿತಿ ಏನೆಂದರೇ, ಕುವೆಂಪು ಪಾಠ ಕೈ ಬಿಟ್ಟು ಕನ್ನಡ ಪಠ್ಯ ರಚಿಸಲು ಸಾಧ್ಯವೇ ಎಂದು ಟಿವಿ9 ಗೆ ಬರಗೂರು ರಾಮಚಂದ್ರಪ್ಪ ಹೇಳಿಕೆ ನೀಡಿದರು. ಈ ಹಿಂದಿನ ಪಠ್ಯ ಪರಿಷ್ಕರಣೆ ಸಮಿತಿಯ ಬಗ್ಗೆ ಬಿ.ಸಿ.ನಾಗೇಶ್ ಟೀಕೆಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪಠ್ಯ ಪರಿಷ್ಕರಣೆ ಸಮಿತಿ ಮುಖ್ಯಸ್ಥರಾಗಿದ್ದ ಬರಗೂರು ರಾಮಚಂದ್ರಪ್ಪ ತಿರುಗೇಟು ನೀಡಿದ್ದಾರೆ. ಕುವೆಂಪು ಪಾಠ ಹತ್ತನೇ ತರಗತಿಯ ಕನ್ನಡ ವಿಷಯದಲ್ಲಿ ಇದೆ. ಏಳನೇ ತರಗತಿಯಲ್ಲೂ ಕುವೆಂಪು ಪಾಠ ಇದೆ. ಗಾಂಧೀಜಿ ಕುರಿತ ಪಾಠ ಏಳನೇ ತರಗತಿಯ ಸಮಾಜ ವಿಜ್ಞಾನ ಭಾಗ 2 ರಲ್ಲಿ ಇದೆ. ಹತ್ತನೇ ತರಗತಿಯ ಸಮಾಜ ವಿಜ್ಞಾನದ ಭಾಗ 2ರಲ್ಲಿ ಗಾಂಧೀಜಿ ಕುರಿತಿದೆ. ಎರಡು ಕಡೆ ಮಹಾತ್ಮ ಗಾಂಧೀಜಿ ಕುರಿತಂತೆ ಮಾಹಿತಿ ಇದೆ ಎಂದು ಹೇಳಿದರು.

ಇದನ್ನೂ ಓದಿ: Mental Health: ಪೋಷಕರ ಈ ತಪ್ಪುಗಳಿಂದ ಮಕ್ಕಳ ಮಾನಸಿಕ ಆರೋಗ್ಯ ಹಾಳಾಗಬಹುದು

ಅಂಬೇಡ್ಕರ್ ಕುರಿತಂತೆ ಎಂಟನೇ ತರಗತಿಯಲ್ಲಿ ಭಾಗ ಒಂದರಲ್ಲಿ ಪಾಠ ಇದೆ. ಹತ್ತನೇ ತರಗತಿಯ ಭಾಗ 2ರಲ್ಲಿ ಪಾಠ ಇದೆ. 9ನೇ ತರಗತಿಯ ಪಠ್ಯದಲ್ಲೂ ಸಂವಿಧಾನ ರಚನೆಯ ಬಗ್ಗೆ ಅಂಬೇಡ್ಕರ್ ಪೋಟೋ ಹಾಕಿ ವಿವರ ನೀಡಲಾಗಿದೆ. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ ಕುರಿತಂತೆ ಆರನೇ ತರಗತಿ ಭಾಗ 2ರಲ್ಲಿ, ಹತ್ತನೇ ತರಗತಿ ಭಾಗ 1ರಲ್ಲಿ ಇಬ್ಬರ ಬಗ್ಗೆಯೂ ಮಾಹಿತಿ ಇದೆ. ಸಂಗೊಳ್ಳಿ ರಾಯಣ್ಣ ಬಗ್ಗೆ 5ನೇ ತರಗತಿಯಲ್ಲಿ ಪ್ರತೇಕ ಪಾಠ ಇದೆ. ಮದಕರಿ ನಾಯಕರ ಬಗ್ಗೆ ನಾಡಪ್ರಭು, ಪಾಳೇಗಾರರ ಬಗ್ಗೆ ಪ್ರತೇಕ ಪಾಠ ಬರೆಸಿದ್ದೇವೆ. ಅದರಲ್ಲಿ ಮದಕರಿ ನಾಯಕರ ಬಗ್ಗೆ ಪಾಠ ಇದೆ. ಅದರ ಜೊತೆಗೆ ಸುರಪುರ ನಾಯಕರ ಬಗ್ಗೆ 7ನೇ ತರಗತಿಯ ಸಮಾಜ ವಿಜ್ಞಾನ ಭಾಗ 1ರಲ್ಲಿ ಮಾಹಿತಿ ಇದೆ ಎಂದರು.

ರಾಣಿ ಅಬ್ಬಕ್ಕರ ಬಗ್ಗೆ 7ನೇ ತರಗತಿಯ ಸಮಾಜ ವಿಜ್ಞಾನದ ಭಾಗ 2 ರಲ್ಲಿ ಅನೇಕ ವಿವರ ಕೊಟ್ಟಿದ್ದೇವೆ. ಯಲಹಂಕ ಪ್ರಭುಗಳ ಬಗ್ಗೆ 7ನೇ ತರಗತಿ ಭಾಗ 1ರಲ್ಲಿ ಪ್ರತೇಕ ಪಾಠ ನೀಡಲಾಗಿದೆ. ಕೆಂಪೇಗೌಡರ ವಂಶಸ್ಥರ ಬಗ್ಗೆ ಎಲ್ಲ ಲೇಖನಗಳೂ ಇವೆ. ಬೆಂಗಳೂರು ನಿರ್ಮಾಣ ಮಾಡಿದ ಇಮ್ಮಡಿ ಕೆಂಪೇಗೌಡರ ವಿವರ ಕೊಟ್ಟಿದ್ದೇವೆ. ಹೀಗಾಗಿ ಸಚಿವರ ಮಾಹಿತಿಗಳು ತಪ್ಪು ಮಾಹಿತಿಗಳು. ನಿಜವಾದ ಸತ್ಯವಾದ ಮಾಹಿತಿಯನ್ನು ಆಧಾರ ಸಹಿತ ನೀಡುತ್ತಿದ್ದೇನೆ. ಮೈಸೂರು ಒಡೆಯರ್ ಬಗ್ಗೆ ಕಡಿಮೆ ಮಾಹಿತಿ ಇದೆ ಎಂದಿದ್ದಾರೆ. ಕಡಿಮೆ ಇದ್ದರೇ, ಮರು ಪರಿಷ್ಕರಣೆ ಮಾಡಿ ಹೆಚ್ಚು ಮಾಡಬಹುದಲ್ಲವೇ ಎಂದು ಪ್ರಶ್ನಿಸಿದರು.

ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಗೆ ಬರಗೂರು ರಾಮಚಂದ್ರಪ್ಪ ಪ್ರಶ್ನೆ.

ಮೈಸೂರು ಒಡೆಯರ್ ಕುರಿತಂತೆ ಸೂಕ್ತವಾದ ಮಾಹಿತಿ ಇಲ್ಲ ಎಂದು ಸಚಿವರು ಹೇಳಿದ್ದಾರೆ. ಆದರೆ ವಾಸ್ತವ ಏನೆಂದರೇ, ಸಮಾಜ ವಿಜ್ಞಾನದ ಭಾಗ 1ರಲ್ಲಿ ಮೈಸೂರು ಒಡೆಯರ್ ಎಂಬ ಪ್ರತೇಕ ಅಧ್ಯಾಯವನ್ನೇ ಬರೆಯಲಾಗಿದೆ. ಇದರಲ್ಲಿ ಮೈಸೂರು ಒಡೆಯರ್ ಬಗ್ಗೆ ಎಲ್ಲ ವಿವರ ಕೊಡಲಾಗಿದೆ. ಮೈಸೂರು ಯುದ್ದಗಳ ಬಗ್ಗೆ ಪ್ರಸ್ತಾಪ ಮಾಡುವಾಗ ಹೈದರಾಲಿ, ಟಿಪ್ಪು ಸುಲ್ತಾನ್ ಬಗ್ಗೆ ವಿವರ ಕೊಡಲಾಗಿದೆ. ಒಂದು ವೇಳೆ ಮೈಸೂರು ಒಡೆಯರ್ ವಿಷಯ ನಿರೀಕ್ಷಿಸಿದ್ದಷ್ಟು ಹೆಚ್ಚು ಇಲ್ಲ ಅಂತ ಅನ್ನಿಸಿದರೇ, ಪಠ್ಯ ಮರು ಪರಿಷ್ಕರಣೆ ಸಮಯದಲ್ಲಿ ಹೆಚ್ಚು ಮಾಡುವ ಬದಲು ಬೇರೆ ಬೇರೆ ಪಾಠ ಹಾಕುವ ಮೂಲಕ ವಿವಾದ ಸೃಷ್ಟಿಸಲು ಏಕೆ ಹೋಗಬೇಕಾಗಿತ್ತು ಎಂದಿದ್ದಾರೆ.

ಸಾರ್ವಕರ್ ಕುರಿತಂತೆ ವಿವಾದಾತ್ಮಕ, ನಕಾರಾತ್ಮಕ ಅಂಶಗಳನ್ನು ನಾವು ಸೇರಿಸಿಲ್ಲ. ಪ್ರೌಢಶಾಲೆಯವರೆಗೂ ಸಾಕಾರಾತ್ಮಕ ಅಂಶಗಳನ್ನು ನಾವು ಮಕ್ಕಳಿಗೆ ಕೊಡಬೇಕು. ಪದವಿ ತರಗತಿಗಳಲ್ಲಿ ವಿದ್ಯಾರ್ಥಿಗಳು ಪರ-ವಿರೋಧ ಚರ್ಚೆಗಳನ್ನು, ವಾಗ್ವಾದ ಕುರಿತಂತೆ ಅಧ್ಯಯನ ಮಾಡಬೇಕು. ಈ ವಿವಾದ ಅಂತ್ಯ ಮಾಡುವತ್ತ ಶಿಕ್ಷಣ ಸಚಿವರು ಗಮನ ಕೊಡಲಿ. ಶೈಕ್ಷಣಿಕ ಕ್ಷೇತ್ರ ಕಲುಷಿತವಾಗದಿರಲಿ ಎಂದು ಬರಗೂರು ರಾಮಚಂದ್ರಪ್ಪ ಹೇಳಿದರು.


ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Published On - 2:59 pm, Tue, 24 May 22