New Book: ಅಚ್ಚಿಗೂ ಮೊದಲು: ಕೆ. ನಲ್ಲತಂಬಿ ಅನುವಾದಿಸಿದ ‘ಮತ್ತೊಂದು ರಾತ್ರಿ’, ‘ಬಾಪೂ ಹೆಜ್ಜೆಗಳಲ್ಲಿ’, ‘ಗುಡಿ ಗಂಟೆ’ ಸದ್ಯದಲ್ಲೇ ಬಿಡುಗಡೆ

New Book: ಅಚ್ಚಿಗೂ ಮೊದಲು: ಕೆ. ನಲ್ಲತಂಬಿ ಅನುವಾದಿಸಿದ ‘ಮತ್ತೊಂದು ರಾತ್ರಿ’, ‘ಬಾಪೂ ಹೆಜ್ಜೆಗಳಲ್ಲಿ’, ‘ಗುಡಿ ಗಂಟೆ’ ಸದ್ಯದಲ್ಲೇ ಬಿಡುಗಡೆ
ತಮಿಳು ಕಥೆಗಾರ ಎಸ್. ರಾಮಕೃಷ್ಣನ್. ಅನುವಾದಕ ಕೆ. ನಲ್ಲತಂಬಿ.

Gandhiji : ‘ಹೆಂಗಸರು ರಾಜಕೀಯ ಮಾತನಾಡಿದರೆ ನಿನ್ನಪ್ಪನಿಗೆ ಹಿಡಿಸೋದಿಲ್ಲ. ಅದೂ ಓದುವ ಹೆಂಗಸರು ಅವರಿಗೆ ನಂಜಿನಕೊರಡುಕಾಯಿಯಂತೆ. ಇದರಲ್ಲಿ ಗಾಂಧೀಜಿ ಪಕ್ಷಕ್ಕೆ ಬೇರೆ ಸೇರಿಕೊಂಡಳು, ಅದೇ ನಿನ್ನಪ್ಪನಿಗೂ ಅಮ್ಮನಿಗೂ ಸಮಸ್ಯೆಯಾದದ್ದು’ ಎಂದು ಒಮ್ಮೆ ವೆಂಕಟರತ್ನಂ ಮಾವ ನನ್ನ ಬಳಿ ಹೇಳಿದ್ದರು.

ಶ್ರೀದೇವಿ ಕಳಸದ | Shridevi Kalasad

|

May 24, 2022 | 2:49 PM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

ಕೃತಿ: ಮತ್ತೊಂದು ರಾತ್ರಿ-ಮಹಾತ್ಮನ ಬದುಕಿನ ಕಥೆಗಳು

ತಮಿಳು ಮೂಲ : ವಿವಿಧ ಲೇಖಕರು

ಕನ್ನಡಕ್ಕೆ : ಕೆ. ನಲ್ಲತಂಬಿ

ಪುಟ : ರೂ. 140

ಬೆಲೆ : 193

ಮುಖಪುಟ ವಿನ್ಯಾಸ : ಅರುಣಕುಮಾರ ಜಿ.

ಪ್ರಕಾಶನ : ಅಭಿರುಚಿ ಪ್ರಕಾಶನ, ಮೈಸೂರು

‘ಮತ್ತೊಂದು ರಾತ್ರಿ’, ಎಂಬ ದೇವಿಭಾರತಿಯವರ ತಮಿಳು ಕಥೆ ಆಕಸ್ಮಿಕವಾಗಿ ಓದಲು ದೊರಕಿತು. ನಂತರ ನನ್ನನ್ನು ಗಾಂಧಿ ಆವರಿಸಿಕೊಂಡಿದ್ದರು. ಗಾಂಧಿಯ ಬಗ್ಗೆ ಆಸಕ್ತಿ ಇರುವ ನನ್ನ ಅನೇಕ ತಮಿಳು ಗೆಳೆಯರನ್ನು ವಿಚಾರಿಸಿದೆ. ಪಾವಣ್ಣನ್, ಸುನಿಲ್ ಕೃಷ್ಣನ್ ಮುಂತಾದವರು ಕೆಲವು ಕಥೆಗಳ ಬಗ್ಗೆ ಸುಳಿವು ಕೊಟ್ಟರು. ಗೂಗಲ್​ನಲ್ಲಿ ಒಂದಿಷ್ಟು ಸಿಕ್ಕವು. ಹಳೆಯ ಸಂಕಲನಗಳಲ್ಲಿದ್ದ ಕಥೆಗಳನ್ನು ಸ್ನೇಹಿತರು ಪ್ರತಿ ತೆಗೆದು ಕಳುಹಿಸಿ ನೆರವಾದರು. ಇದಕ್ಕೆ ಸುಮಾರು ಮೂರು ವರ್ಷಗಳೇ ಬೇಕಾದವು. ಹದಿನೈದು ಕಥೆಗಳಲ್ಲಿ ಹನ್ನೊಂದು ಕಥೆಗಳು ನನಗೆ ಇಷ್ಟವಾದವು. ಅವನ್ನು ಕನ್ನಡಕ್ಕೆ ಅನುವಾದಿಸಿದ್ದೇನೆ. ನನಗೂ ಒಂದು ಕಥೆ ಬರೆಯಬೇಕೆಂಬ ಆಸೆ ಉಂಟಾಯಿತು. ಆ ಕಥೆಯೇ ‘ಗಾಂಧಿ ನಕ್ಕರು’. ಈ ಸಂಕಲನದ ಬಗ್ಗೆ ಕೆಲವರ ಬಳಿ ಹೇಳಿದಾಗ, ಅನೇಕರು ಕೇಳಿದ ಒಂದೇ ಪ್ರಶ್ನೆ, ‘ಗಾಂಧಿ ಪ್ರಸ್ತುತವೇ?’ ಈ ಪ್ರಶ್ನೆ ನನ್ನನ್ನೂ ಕೆಲವು ದಿನಗಳು ಕಾಡಿತು. ನಂತರ ನನ್ನ ಆಲೋಚನೆಯ ದಿಕ್ಕು ಬದಲಾಯಿತು, ಗಾಂಧಿ ಪ್ರಸ್ತುತವೇ? ಎಂದು ಕೇಳುವ ಈ ಪ್ರಶ್ನೆ ಇರುವವರೆಗೆ ಗಾಂಧಿ ಪ್ರಸ್ತುತವೇ ಅನಿಸಿತು. ಅವನು ಹುಟ್ಟಿ 153 ವರ್ಷಗಳಾಗಿದೆ, ಸತ್ತು 75 ವರ್ಷಗಳಾಗಿದೆ ಆದರೂ ಜಗತ್ತು ಅವನನ್ನು ಹೊಗಳುತ್ತಿದೆ, ತೆಗಳುತ್ತಿದೆ. ಕೆ. ನಲ್ಲತಂಬಿ, ಅನುವಾದಕ

ಸಾಕ್ರಟೀಸ್‌ನ ಆನಂತರದಲ್ಲಿ ಜಗತ್ತು ಕಂಡ ಮಹಾನ್ ಸಂಯಮಿಯೆನ್ನಿಸಿಕೊಂಡಿರುವ ಗಾಂಧೀಜಿಯವರ ಬಗ್ಗೆ, ಈಗಾಗಲೇ ಪ್ರಕಟವಾಗಿರುವ ಕತೆ, ಕಾದಂಬರಿ, ಕವನ, ಲೇಖನ ನಾಟಕಗಳ ಒಟ್ಟು ಸಂಖ್ಯೆಯು, ಅಕ್ಷರ ಓದಬಲ್ಲವರ ಸಂಖ್ಯೆಗಿಂತಲೂ ದೊಡ್ಡದಿರಬಹುದು. ಅಷ್ಟೆಲ್ಲವನ್ನಲ್ಲದಿದ್ದರೂ, ಅಷ್ಟಿಷ್ಟನ್ನಾದರೂ ಓದಿಕೊಂಡ ನಾವು, ‘ಮಹಾತ್ಮಾ ಗಾಂಧಿ ಮಾರ್ಗ’ನಲ್ಲಿ ನಡೆಯದೆ, ‘ಕ್ರಾಸ್ ರೋಡ್’ಗಳಲ್ಲೇ ಬಚ್ಚಿಟ್ಟುಕೊಂಡಿದ್ದೇವೆ. ಯಾಕೆಂದರೆ, ನಾವು ಪುಕ್ಕಲರು. ಬ್ರಿಟಿಷ್ ರಾಜಕುಮಾರನನ್ನು ಅರೆಬೆತ್ತಲೆ ಮೈಯಲ್ಲಿ ಭೇಟಿಯಾಗಿದ್ದ ನಲುವತ್ತೈದು ಕಿಲೋ ತೂಕದ ಆ ‘‘ಹಿಡಿಮೂಳೆ ಚಕ್ಕಳ’ದೊಡೆಯ’ನಿಗಿದ್ದ ಧೈರ್ಯದಲ್ಲಿ, ಒಂದಿಷ್ಟಾದರೂ ಹೊಂದಬೇಕೆನ್ನುವವರು, ಹೃದಯವಂತ ಕತೆಗಾರ ನಲ್ಲತಂಬಿ ಅವರು  ಅನುವಾದಿಸಿರುವ, ತಮಿಳಿನ ಸುಪ್ರಸಿದ್ಧ ಸಾಹಿತಿ ದೇವಿಭಾರತಿ ಅವರ ಅದ್ಭುತ ಕತೆ, ‘ಮತ್ತೊಂದು ರಾತ್ರಿ’ಯನ್ನು  ದಿನಕ್ಕೊಮ್ಮೆಯಾದರೂ ಓದುವುದು ಒಳ್ಳೆಯದು. ಬೊಳುವಾರು ಮಹಮದ್ ಕುಂಞಿ, ಲೇಖಕ

(ಎಸ್. ರಾಮಕೃಷ್ಣನ್​ ಅವರ ‘ಗಾಂಧಿಯೊಂದಿಗೆ ಮಾತನಾಡುವೆ’ ಕಥೆಯ ಆಯ್ದ ಭಾಗ)

ನೀನು ಯಾತಕ್ಕೆ ಗಾಂಧೀಜಿಯನ್ನು ಹುಡುಕಿಕೊಂಡು ಹೋದೆ ಎಂದು ಕೇಳಿದೆ.

ಅಮ್ಮ ಉತ್ತರ ಹೇಳಲಿಲ್ಲ. ಮೌನವಾಗಿದ್ದಳು. ನಂತರ ಮೆಲ್ಲಗೆ ತಲೆಯನ್ನು ಆಡಿಸುತ್ತಾ ಅದರ ಬಗ್ಗೆ ನಿನಗೆ ಹೇಳಿದರೆ ಅರ್ಥವಾಗುವುದಿಲ್ಲ. ಹೇಳುವುದಕ್ಕೆ ನನಗೆ ಇಷ್ಟವೂ ಇಲ್ಲ ಎಂದು ಮಾತನ್ನು ತುಂಡರಿಸಿದಳು.

ಅದರ ನಂತರ ಒಂದೆರಡು ಸಲ ಗಾಂಧೀಜಿಯ ಬಗ್ಗೆ ಮಾತು ಬರುವಾಗಲೆಲ್ಲಾ ಅಮ್ಮ ವಾರ್ಧಾಗೆ ಓಡಿಹೋದ ಕತೆಯ ಬಗ್ಗೆ ಕೆಲವು ಘಟನೆಗಳನ್ನು ಕೇಳಿದ್ದೇನೆ. ಅಪ್ಪ ಒಮ್ಮೆ ಕೋಪದಲ್ಲಿ ‘ನಿಮ್ಮಮ್ಮ ಮನೆ ಬಿಟ್ಟು ಓಡ್ಹೋದ ಮುಂಡೆ. ಬೇರೆ ಗಂಡಸಾಗಿದ್ದರೆ ಇಷ್ಟೊತ್ತಿಗೆ ಅವಳನ್ನು ಕೊಚ್ಚಿ ಕೊಂದು ಹೂತಾಕಿರೋನು’ ಎಂದು ಕಿರುಚಾಡಿದರು.

“ಅದನ್ನು ಯಾವಾಗಲೋ ಮಾಡಿಯಾಯಿತಲ್ಲಾ” ಎಂದು ಅಮ್ಮ ಶಾಂತವಾಗಿ ಹೇಳಿದಳು. ಅಪ್ಪ ಅಮ್ಮನನ್ನು ದುರುಗುಟ್ಟಿ ನೋಡುತ್ತಲೇ ಹೊರಗೆ ಹೊರಟುಹೋದರು.

‘ಹೆಂಗಸರು ರಾಜಕೀಯ ಮಾತನಾಡಿದರೆ ನಿನ್ನಪ್ಪನಿಗೆ ಹಿಡಿಸೋದಿಲ್ಲ. ಅದೂ ಓದುವ ಹೆಂಗಸರು ಅವರಿಗೆ ನಂಜಿನಕೊರಡುಕಾಯಿಯಂತೆ. ಇದರಲ್ಲಿ ಗಾಂಧೀಜಿ ಪಕ್ಷಕ್ಕೆ ಬೇರೆ ಸೇರಿಕೊಂಡಳು, ಅದೇ ನಿನ್ನಪ್ಪನಿಗೂ ಅಮ್ಮನಿಗೂ ಸಮಸ್ಯೆಯಾದದ್ದು’ ಎಂದು ಒಮ್ಮೆ ವೆಂಕಟರತ್ನಂ ಮಾವ ನನ್ನ ಬಳಿ ಹೇಳಿದ್ದರು.

ಆ ವಯಸ್ಸಿನಲ್ಲಿ ಇದನ್ನು ಬರೀ ಗಂಡ ಹೆಂಡತಿಯ ಜಗಳ ಅಷ್ಟೇ ಎಂದು ಅಂದುಕೊಂಡಿದ್ದೆ. ಆದರೆ ಅದು ಸಂಸಾರದ ಜಗಳ ಅಲ್ಲ. ದ್ವೇಷಕ್ಕೂ ಪ್ರೀತಿಗೂ ಆದ ತೊಯ್ದಾಟ ಎಂಬುದನ್ನೂ ಮುಂದಿನ ದಿನಗಳಲ್ಲಿ ಅರ್ಥ ಮಾಡಿಕೊಂಡೆ. ಅಮ್ಮನನ್ನು ಕುಟುಂಬ ಜೀವನದ ಕತ್ತಲೊಳಗೆ ನೂಕಿದಾಗ ಅದರಿಂದ ಗಾಂಧೀಜಿಯೇ ಅವಳನ್ನು ಪಾರುಮಾಡಿದ್ದರು. ತನ್ನ ಪ್ರಾಮಾಣಿಕವಾದ ನಡೆವಳಿಕೆಗಳಿಂದ ಉಳಿದವರ ಅಪಹಾಸ್ಯವನ್ನು ಮೀರಿ ನಿಲ್ಲಬೇಕೆಂಬುದನ್ನು ನಿರೂಪಿಸಿದ್ದರು. ತನ್ನ ಮನಃಸಾಕ್ಷಿಯ ದನಿಯನ್ನು ಗೌರವಿಸಬೇಕೆಂದು ಕಲಿಸಿಕೊಟ್ಟಿದ್ದರು. ಎಲ್ಲದ್ದಕ್ಕಿಂತ ಹೆಚ್ಚಾಗಿ ಮತ್ತೊಬ್ಬರಿಗಾಗಿ ಬದುಕುವುದು ಎಂದಿಗೂ ನೋವು ತುಂಬಿರುತ್ತದೇ. ಆದರೆ ಅದರಿಂದ ದೊರಕುವ ಮನಃಶಾಂತಿ ಉನ್ನತವಾದದ್ದು ಎಂಬುದನ್ನೂ ಗಾಂಧೀಜಿಯೇ ಸ್ವತಃ ಅನುಭವಿಸಿದ್ದಾರೆ.

Acchigoo Modhalu excerpt of Matthondu Ratri stories on Gandhiji translated by K Nallathambi

ಪಾವಣ್ಣನ್ ಅವರ ಅಂಕಣಬರಹಗಳನ್ನು ಕೆ. ನಲ್ಲತಂಬಿ ಅನುವಾದಿಸಿದ್ಧಾರೆ. ಪ್ರಕಾಶನ : ಪಲ್ಲವ

ಇದರ ಬಗ್ಗೆ ಮಾತನಾಡುವಾಗ ರಾಖೇಲ್ ಹೇಳಿದಳು.

ಲಟ್ಸ್, ನಿಜವಾಗಲೂ ದೇವರು ಕೈಬಿಟ್ಟ ಜಗತ್ತನ್ನು ಗಾಂಧೀಜಿ ತುಂಬಿಕೊಟ್ಟಿದ್ದರು. ಅದೇ ನಿನ್ನ ಅಮ್ಮನ ವಿಷಯದಲ್ಲಿ ನಡೆದದ್ದು. ಎರಡು ಸಲ ಗರ್ಭಪಾತ, ಒಂದರ ನಂತರ ಒಂದು ಮಕ್ಕಳು, ಬಡತನ, ಕೂಡು ಕುಟುಂಬದ ಅವಮಾನ ಇವೆಲ್ಲವೂ ನಿನ್ನ ಅಮ್ಮನನ್ನು ಉಸಿರು ಕಟ್ಟುವ ಹಾಗೆ ಹಿಂಸಿಸಿದಾಗ ಗಾಂಧೀಜಿ ಮಾತ್ರವೇ ಅವಳ ನಂಬಿಕೆಯ ಬೆಳಕಾಗಿದ್ದರು. ಗಾಂಧೀಜಿ ಎಂಬ ಸಾಮಾಜಿಕ ಹೋರಾಟಗಾರನಿಗಿಂತ, ಗಾಂಧೀಜಿ ಎಂಬ ಈ ಸರಳ ನಂಬಿಕೆ ಬಹಳ ಬಲಿಷ್ಠವಾದದ್ದು. ಅದನ್ನು ಅರಿತವರು ಗಾಂಧೀಜಿಯನ್ನು ಸದಾ ಪ್ರೀತಿಸುತ್ತಲೇ ಇರುತ್ತಾರೆ.

ರಾಖೇಲ್ ಹೇಳುವುದು ನಿಜ. ಭಾರತೀಯ ಮಹಿಳೆಯರು ಗಾಂಧೀಜಿಯನ್ನು ಸಮಾಜ ಸೇವಕ ಎಂಬ ತಳದಿಂದ ಅರ್ಥಮಾಡಿಕೊಂಡಿಲ್ಲ. ಹೆಚ್ಚಿನ ಜನಗಳು ಎಲ್ಲ ಬಗೆಯ ಮೂಲಭೂತ ಧರ್ಮಗಳನ್ನು ಕೈಬಿಟ್ಟು ದುಷ್ಟತನವನ್ನೂ ಅಸತ್ಯವನ್ನೂ ತಮ್ಮದಾಗಿಸಿಕೊಂಡ ಪರಿಸ್ಥಿತಿಯಲ್ಲಿ ಧರ್ಮಕ್ಕಾಗಿ ತನ್ನನ್ನು ಅರ್ಪಿಸಿಕೊಂಡು ತನ್ನ ಬದುಕನ್ನೇ ಸತ್ಯಶೋಧನೆ ಮಾಡಿಕೊಂಡ ಸರಳವಾದ ಮನುಷ್ಯ ಎಂದೇ ಅರ್ಥಮಾಡಿಕೊಂಡಿದ್ದಾರೆ.

ರಾಖೇಲಿಗೆ ಹಿಂಸೆಯ ಕ್ರೌರ್ಯ ಗೊತ್ತು. ಅವಳು ಯಹೂದಿ ಹೆಣ್ಣು. ನನ್ನ ವಿದ್ಯಾರ್ಥಿನಿಯಾಗಿ ಪರಿಚಯವಾಗಿ ನನ್ನನ್ನು ಮದುವೆಯಾದವಳು. ಅವಳಿಗೆ ನನಗಿಂತಲೂ ನನ್ನ ಕುಟುಂಬಕ್ಕೆ ಸೇರಿದ ಹೆಣ್ಣುಗಳೊಂದಿಗೆ ಹೆಚ್ಚಿನ  ನಂಟು. ಆ ಹೆಣ್ಣುಗಳು ನಿರಂತರವಾದ ಸೆರೆ ಶಿಬಿರಗಳಲ್ಲಿ ಬದುಕುತ್ತಿರುವವರು ಎಂದು ಒಮ್ಮೆ ರಾಖೇಲ್ ನನ್ನ ಬಳಿ ಹೇಳಿದ್ದು  ಸತ್ಯವಾದ ಮಾತು.

ಆರ್ಥಶಾಸ್ತ್ರ ಕಲಿಯಲು ನಾನು ಲಂಡನಿಗೆ ಹೋಗಿ ಅಲ್ಲೇ ಉಳಿದುಕೊಂಡು ಕೆಲಸ ಮಾಡಲು ಪ್ರಾರಂಭಿಸಿದಾಗ ಅಮ್ಮ ಒಮ್ಮೆ ಫೋನಿನಲ್ಲಿ  ಕೇಳಿದಳು.

ಒಂದೇ ಒಂದು ಸಲ ಲಂಡನಿಗೆ ಬರಬೇಕೆಂಬ ಆಸೆ ಇದೆ ಲಕ್ಷ್ಮ.

ಅಮ್ಮ ಒಬ್ಬಳೇ ಲಕ್ಷ್ಮಣ ಎಂಬ ನನ್ನ ಹೆಸರನ್ನು ಲಕ್ಷ್ಮ ಎಂದು ಕರೆಯುತ್ತಿದ್ದಳು. ಲಂಡನ್ ವಾಸಿಗಳು ನನ್ನನ್ನು ಲಟ್ಸ್ ಎನ್ನುತ್ತಾರೆ. ಅಪ್ಪನಿಗೂ ಉಳಿದ ಸ್ನೇಹಿತರಿಗೂ ಮಣಾ. ಆದರೆ ಅಮ್ಮ ನನ್ನನ್ನು ಲಕ್ಷ್ಮ ಎಂದು ಕರೆಯುವಾಗ ಅದು ಹೆಣ್ಣಿನ ಹೆಸರಿನಂತೆಯೇ ಕಾಣುತ್ತದೆ. ಅಮ್ಮ ಹಾಗೆ ಕರೆಯುವಾಗ ಅದರಲ್ಲಿ ಏನೋ ಒಂದು ಬಗೆಯ ವಿಶೇಷ ಪ್ರೇಮ ಬೆರೆತಿರುತ್ತದೆ.

ಇದನ್ನೂ ಓದಿ : ಅಚ್ಚಿಗೂ ಮೊದಲು: ಕವಿಜೋಡಿ ಸಂಘಮಿತ್ರೆ ನಾಗರಘಟ್ಟ, ರಾಜೇಶ್ ಹೆಬ್ಬಾರ್ ‘ಬೆನ್ನಿಗೆಲ್ಲಿಯ ಕಣ್ಣು’ ಕೃತಿ ನಿಮ್ಮ ಕೈಗೆ

“ಮುಂದಿನ ಸಲ ಊರಿಗೆ ಬರುವಾಗ ನಿನ್ನನ್ನೂ ಲಂಡನಿಗೆ ಕರೆದುಕೊಂಡು ಬರುತ್ತೇನೆ ಅಮ್ಮ” ಎಂದೆ.

“ಇಲ್ಲಾ ಕಣೋ, ನಾನೊಬ್ಬಳೇ ಒಂಟಿಯಾಗಿ ಲಂಡನಿಗೆ ಬರಬೇಕೆಂಬ ಆಸೆ, ಅದೂ ಸಹ ಹಡಗಿನಲ್ಲಿ ಬರಬೇಕೆಂಬ ಆಸೆ” ಎಂದಳು ಅಮ್ಮ.

ನನಗೆ ಅರ್ಥವಾಯಿತು. ಈ ಆಸೆಯ ಮೂಲ ಗಾಂಧೀಜಿಯ ಬಗ್ಗೆ ಇರುವ ಅಭಿಮಾನ. ಹತ್ತೊಂಭತ್ತನೇಯ ವಯಸ್ಸಿನಲ್ಲಿ ಭಾಷೆ ತಿಳಿಯದೆ ಲಂಡನ್ನಿಗೆ ವಿದ್ಯಾಭ್ಯಾಸಕ್ಕಾಗಿ ಬಂದ ಗಾಂಧೀಜಿಯ ಮನಸ್ಸನ್ನು ತಾನೂ ಸಹ ಅನುಭವಿಸಿ ನೋಡಿಬಿಡಬೇಕೆಂದು ಬಯಸುತ್ತಾಳೆ.  ಗಾಂಧೀಜಿಯ ಬಗ್ಗೆ ಅಂತಹ ಹುಚ್ಚುತನ.

ನಾನು ನಗುತ್ತಲೇ “ಈಗ ಹಡಗಿನ ಪ್ರಯಾಣ ಇಲ್ಲಮ್ಮ. ನೀನು ಫ್ಲೈಟಿನಲ್ಲಿಯೇ ಒಂಟಿಯಾಗಿ ಬರಬಹುದು” ಎಂದೆ.

ಹಾಗೆಯೇ ಅಮ್ಮ ಒಂಟಿಯಾಗಿ ಲಂಡನಿಗೆ ಬಂದಿಳಿದಳು. ಬಲಿತ ವೃದ್ದಾಪ್ಯ ಅವಳಿಗೆ ವಿಶೇಷ ಶೋಭೆಯನ್ನು ತಂದಿತ್ತು. ಕಿತ್ತಳೆ ಬಣ್ಣದ ಶಾಲೊಂದನ್ನು ಹೊದ್ದುಕೊಂಡು ನಸುಗೆಂಪು ಬಣ್ಣದ ಸೀರೆಯನ್ನು ಚೊಕ್ಕವಾಗಿ ಉಟ್ಟುಕೊಂಡು ಕೊಕ್ಕರೆಯ ಬಿಳಿಯಂತಹ ತಲೆಕೂದಲೊಂದಿಗೆ, ಪೇಲವ ಮುಖದ ಅಮ್ಮ ಇಳಿದು ಮೆಲ್ಲಗೆ ಗಾಜಿನ ಬಾಗಿಲುಗಳನ್ನು ದಾಟಿ ನಡೆದು ಬಂದಳು.

ಅವಳ ಕಣ್ಣಲ್ಲಿ ಸ್ವಲ್ಪವೂ ಭಯವಿರಲಿಲ್ಲ, ಹಾದುಹೋಗುವ ಪ್ರಯಾಣಿಕರು ಯಾರನ್ನೂ ಅವಳು ಕತ್ತೆತ್ತಿಯೂ ಸಹ  ನೋಡಲಿಲ್ಲ, ನಿಧಾನವಾಗಿ, ಮೆಲ್ಲಗೆ ಅವಳು ನಿರ್ಗಮನದ ಬಾಗಿಲಿನ ಕಡೆ ನಡೆದು ಬರುವ ದೃಶ್ಯ ನನ್ನ ಮನಸ್ಸಿನಲ್ಲಿ ಹಾಗೆಯೇ ಅಚ್ಚೊತ್ತಿದೆ.

Acchigoo Modhalu excerpt of Matthondu Ratri stories on Gandhiji translated by K Nallathambi

ನಲ್ಲತಂಬಿ ಅನುವಾದಿಸಿದ ಟಿ. ಜಾನಕಿರಾಮನ್ ಕಥೆಗಳು. ಪ್ರಕಾಶನ : ಲಡಾಯಿ

ಇಮಿಗ್ರೇಷನಿನಲ್ಲಿ ಏನಾದರೂ ಕೇಳಿದರೇ ಎಂದು ಕೇಳಿದೆ.

“ಯಾತಕ್ಕಾಗಿ ಈ ಪಯಣ” ಎಂದು ಕೇಳಿದರು, ನಾನು “ಹಾಗೆ ಸುಮ್ಮನೆ” ಎಂದೆ. ಇಮಿಗ್ರೇಷನ್ ಅಧಿಕಾರಿ ನಗುತ್ತಲೇ “ಸುಮ್ಮನೆ ಲಂಡನ್ನಿಗೆ ಬರುವವರು ಅದನ್ನು ಬಿಟ್ಟು ಎಂದಿಗೂ ಹಿಂತಿರುಗಿ ಹೋಗುವುದಿಲ್ಲ. ನೀವೂ ಹಾಗೆಯೇ ಮಾಡುವಿರಿ ನೋಡುತ್ತಿರಿ” ಎಂದರು.

“ನನ್ನ ನೆನಪುಗಳು ನನ್ನನ್ನು ಪರ ಊರಿನಲ್ಲಿ ಉಳಿಯಲು ಬಿಡವುದಿಲ್ಲ” ಎಂದು ಹೇಳಿದೆ. ಅವರು ವಿಸ್ಮಯದಿಂದ ಕೈಯನ್ನು ಎತ್ತಿ “ನೀವು ಹೇಳುವುದು ಸಂಪೂರ್ಣ ಸತ್ಯ” ಎಂದರು. ಅಷ್ಟೇ ನಡೆದದ್ದು ಎಂದು ಹೇಳಿ ಕಾರಿನ ಗಾಜಿನ ಕಿಟಕಿಯ ಹೊರಗೆ ಕಾಣುವ ರೋಮಾಂಚಕ ಲಂಡನ್ ರಸ್ತೆಗಳನ್ನು ನೋಡುತ್ತಲೇ ಬಂದಳು.

ಅಪ್ಪ ಸತ್ತು ಹೋದಮೇಲೆ  ಕಳೆದ ಹತ್ತು ವರ್ಷಗಳಿಂದ ಅಮ್ಮ ದಿನವೆಲ್ಲಾ ಓದುತ್ತಲೇ ಇರುತ್ತಾಳೆ. ತಮಿಳು, ಇಂಗ್ಲಿಷ್ ಎರಡರಲ್ಲೂ ಓದುತ್ತಾಳೆ. ಕೆಲವು ರಾತ್ರಿಗಳು ಅವಳು ಓದುವುದನ್ನು ನೋಡುವಾಗ ಪರೀಕ್ಷೆಗೆ ಓದುವವಳಂತೆ ಕಾಣುತ್ತದೆ. ಕೆಲವು ಸಮಯ ಕುರ್ಚಿಯಲ್ಲಿ ಒರಗಿಕೊಂಡು ಮಡಿಲಲ್ಲಿ ಪುಸ್ತಕವನ್ನಿಟ್ಟುಕೊಂಡು ತನ್ನಷ್ಟಕ್ಕೆ ತಾನೇ ಮಾತನಾಡುತ್ತಿರುತ್ತಾಳೆ. ಅಮ್ಮನಿಗೊಂದು ಪ್ರತ್ಯೇಕ  ಜಗತ್ತಿದೆ. ಅವಳು ತನ್ನ ಸುತ್ತ ತಾನೇ  ಅಪರೂಪವಾದ ಬಲೆಯೊಂದನ್ನು ಹೆಣೆದುಕೊಂಡಿದ್ದಾಳೆ.

ಅಮ್ಮ ಲಂಡನಿನಲ್ಲಿ ನನ್ನೊಂದಿಗೆ ಎರಡೂವರೆ ತಿಂಗಳು ಉಳಿದುಕೊಂಡಿದ್ದಳು. ಒಂಟಿಯಾಗಿ ಅವಳೇ ಟ್ಯೂಬ್ ರೈಲಿನಲ್ಲಿ ಗಾಂಧೀಜಿ ಓದಿದ ಯೂನಿವರ್ಸಿಟಿ ಕಾಲೇಜು, ಗಾಂಧೀಜಿ ನಡೆದ ಬೀದಿಗಳು, ಗಾಂಧೀಜಿ  ಸದಸ್ಯರಾಗಿದ್ದ ವೆಜಿಟೇರಿಯನ್ ಸಂಘ ಎಂದು ಪ್ರತಿಯೊಂದನ್ನೂ ಹುಡುಕಿಕೊಂಡು ಹೋಗಿ ನೋಡುತ್ತಿದ್ದಳು. ಅದರ ಬಗ್ಗೆ ನನ್ನ ಬಳಿ ಹೆಚ್ಚಾಗಿ ಮಾತನಾಡಲಿಲ್ಲ. ಕೆಲವು ಸಮಯ ನನ್ನ ಹೆಂಡತಿ ರಾಖೇಲಿನೊಂದಿಗೆ ಗಾಂಧೀಜಿಯ ಬಗ್ಗೆ ಮಾತನಾಡಿರಬಹುದು.

ಇದನ್ನೂ ಓದಿ : ಅಚ್ಚಿಗೂ ಮೊದಲು: ಮಂಜುನಾಥ ಚಾರ್ವಾಕರ ‘ಮುರಕಮಿ; ಕಿನೊ ಮತ್ತು ಇತರ ಕತೆಗಳು’ ಸದ್ಯದಲ್ಲೇ ನಿಮ್ಮ ಓದಿಗೆ

ರಾಖೇಲೂ ಅಮ್ಮನೂ ಮಾತನಾಡಿಕೊಳ್ಳುವುದು ತಮಾಷೆಯಾಗಿರುತ್ತಿತ್ತು. ಅಮ್ಮ ರಾಖೇಲನ್ನು ಒಬ್ಬ ಶಾಲಾ ಬಾಲಕಿಯನ್ನು ನಡೆಸಿಕೊಳ್ಳುವಂತೆ ನಡೆಸಿಕೊಳ್ಳುತ್ತಿದ್ದಳು.

ಒಂದು ದಿನ ರಾಖೇಲ್ ನನ್ನ ಬಳಿ ಕೇಳಿದಳು. “ಸಾಮಾನ್ಯವಾಗಿ ಭಾರತೀಯ ಹೆಂಗಸರು ಹೆಚ್ಚಾಗಿ ತಲೆಯನ್ನು ಆಡಿಸುತ್ತಾರೆ, ನಿನ್ನ ಅಮ್ಮ ಮಾತನಾಡುವಾಗ ಹಾಗೆ ಮಾಡುವುದಿಲ್ಲವಲ್ಲ ಯಾಕೆ?”

ನಾನು ಆಗಲೇ ಹಾಗೊಂದು ವಿಷಯವಿರುವುದನ್ನು ಗಮನಿಸಿದ್ದು. ಏನು ಹೇಳುವುದೆಂದು ತಿಳಿಯದೆ ನಗುತ್ತಲೇ “ಹೆಂಗಸರು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತೀರಿ. ನಿನ್ನ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ” ಎಂದೆ.

ಇದನ್ನೂ ಓದಿ

(ಈ ಕಥೆಯ ಪೂರ್ಣ ಓದಿಗೆ ಮತ್ತು ಕೃತಿಯ ಖರೀದಿಗೆ ಸಂಪರ್ಕಿಸಿ : 9980560013)

Follow us on

Related Stories

Most Read Stories

Click on your DTH Provider to Add TV9 Kannada