ಅಚ್ಚಿಗೂ ಮೊದಲು: ಮಂಜುನಾಥ ಚಾರ್ವಾಕರ ‘ಮುರಕಮಿ; ಕಿನೊ ಮತ್ತು ಇತರ ಕತೆಗಳು’ ಸದ್ಯದಲ್ಲೇ ನಿಮ್ಮ ಓದಿಗೆ

Attraction : ಸಾಧಾರಣವಾಗಿ, ಒಂದು ಹುಡುಗ ಹುಡುಗಿ ತುಂಬ ಸಮಯ ಜೊತೆಗಿದ್ದು, ಚೆನ್ನಾಗಿ ಪರಿಚಯವಾದಾಗ, ಆ ಹುಡುಗನಿಗೆ ಹುಡುಗಿಯ ಮೇಲೆ ದೈಹಿಕವಾಗಿ ಸ್ವಲ್ಪವಾದರೂ ಆಸಕ್ತಿ ಇರುತ್ತದಲ್ಲವೇ? ಒಂದು ಮುತ್ತು ಕೊಟ್ಟಾಗ, ಹಾಗೆಯೇ ಮುಂದುವರೆಯುತ್ತಾರಲ್ಲವೇ?

ಅಚ್ಚಿಗೂ ಮೊದಲು: ಮಂಜುನಾಥ ಚಾರ್ವಾಕರ ‘ಮುರಕಮಿ; ಕಿನೊ ಮತ್ತು ಇತರ ಕತೆಗಳು’ ಸದ್ಯದಲ್ಲೇ ನಿಮ್ಮ ಓದಿಗೆ
ಅನುವಾದಕ ಮಂಜುನಾಥ ಚಾರ್ವಾಕ
Follow us
ಶ್ರೀದೇವಿ ಕಳಸದ
|

Updated on: May 10, 2022 | 12:56 PM

Creative Writing : ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ. ಟಿವಿ9 ಕನ್ನಡ ಡಿಜಿಟಲ್​ – ‘ಅಚ್ಚಿಗೂ ಮೊದಲು’ ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್​ ನಂಬರ್ ​ನಮಗೆ ಕಳುಹಿಸಿ. ಇ- ಮೇಲ್ tv9kannadadigital@gmail.com

ಕೃತಿ : ಮುರಕಮಿ-ಕಿನೋ ಮತ್ತು ಇತರೆ ಕತೆಗಳು

ಕನ್ನಡಕ್ಕೆ : ಮಂಜುನಾಥ ಚಾರ್ವಾಕ

ಪುಟ : 249

ಬೆಲೆ : ರೂ. 175

ಮುಖಪುಟ ವಿನ್ಯಾಸ : ಶ್ವೇತಾ ಆಡುಕಳ

ಪ್ರಕಾಶನ:  ಋತುಮಾನ, ಬೆಂಗಳೂರು

ಇಷ್ಟು ತೀವ್ರ ತರವಾದ ಆಧುನಿಕರಣಗೊಂಡ, ಸಮಾಜವೊಂದರ ಕಥೆಗಳು ಕನ್ನಡಕ್ಕೆ ಏಕೆ ಅನುವಾದವಾಗಬೇಕು? ನಾನು ಮುರಕಮಿಯ ಕಥೆಗಳನ್ನು ಕನ್ನಡಕ್ಕೆ ಅನುವಾದ ಮಾಡಲು ನಿರ್ಧರಿಸಲು ಮುಖ್ಯ ಕಾರಣ, ಆತ ನನ್ನ ತಲೆಮಾರಿನ ತಲ್ಲಣಗಳ ಕಥೆಗಳನ್ನು ಹೇಳುತ್ತಿದ್ದಾನೆ ಎನ್ನಿಸಿದ್ದರಿಂದ. 2000ದ ನಂತರದ ನಮ್ಮ ದೇಶದಲ್ಲಿಯ ಬದಲಾವಣೆಗಳಂತೂ ದೈನಂದಿನ ರಾಜಕೀಯದಲ್ಲಿ ನಂಬಿಕೆ ಕಳೆದುಕೊಂಡ ತಲೆಮಾರೊಂದು, ತನ್ನದೇ ಅಸ್ಥಿತ್ವದ ಹುಡುಕಾಟದಲ್ಲಿದ್ದಾಗ ಅದಕ್ಕೆ ಪೂರಕವಾಗಿ ಸೃಷ್ಟಿಸಲಾದ ಕೆಲವೊಂದು ಐಡೆಂಟಿಟಿ ರಾಜಕೀಯಕ್ಕೆ, ಸುಳ್ಳು ಸುದ್ದಿಗಳಿಗೆ ಬಲಿಯಾಗಿ ರಾಜಕೀಯ ಸ್ವರೂಪವೇ ಬದಲಾಗಿ ಹೋಗಿದೆ. ಆದರೆ ಈ ಎಲ್ಲಾ ಪಲ್ಲಟಗಳಿಂದ ನಗರ – ಪಟ್ಟಣಗಳಲ್ಲಿ ಸೃಷ್ಟಿಯಾದ ತಲೆಮಾರು ಈ ಬದಲಾವಣೆಯ ಪ್ರಕ್ರಿಯೆಯಲ್ಲಿ ತಮ್ಮ ಭಾಷೆಯ ಮೇಲೆ, ಉಡುಗೆ ತೊಡುಗೆ, ಆಹಾರ ಕ್ರಮಗಳ ಮೇಲೆ ಉಂಟಾದ ಪಲ್ಲಟಗಳು ಅವರ ಚಿಂತನ ಕ್ರಮದ ಮೇಲೆ, ಅಂತರಂಗದ ಭಾವ ಪ್ರಪಂಚದ ಮೇಲೆ, ಉಂಟುಮಾಡಿದ ಪರಿಣಾಮಗಳನ್ನು ಕಥೆಗಳಲ್ಲಿ ಹಿಡಿದಿಡುವ ಪ್ರಯತ್ನಗಳು ನನ್ನ ಸೀಮಿತ ಓದಿನ ಮಟ್ಟಿಗಂತೂ ಕನ್ನಡ ಕಥಾಲೋಕದಲ್ಲಿ ಕಾಣಸಿಕ್ಕಿಲ್ಲ. ಅಸಂಖ್ಯಾತ ಯುವಕರು ನಗರಗಳಿಗೆ ಸೇರಿ ತಮ್ಮ ತಮ್ಮ ಖಾಸಗಿ ಕೆಲಸಗಳಲ್ಲಿ ತಮ್ಮ ಜೀವನ ಕಂಡುಕೊಂಡು, ಅವರ ಬದುಕಿನಲ್ಲದ ಸಾಂಸ್ಕೃತಿಕ, ಸಾಮಾಜಿಕ ಪಲ್ಲಟಗಳಿಗೆ ಹೇಗೆ ಹೊಂದಿಕೊಳ್ಳುತ್ತಿದ್ದಾರೆ ಎಂದು ಹುಡುಕಾಡುವ ಕಥೆಗಳು ನಮ್ಮ ಇಂದಿನ ತುರ್ತು. ಯಾಕೆಂದರೆ ಇದೇ ತಲೆಮಾರು ಇಂದು ತನ್ನ ಹಿಂದಿನ ತಲೆಮಾರು ಸವೆಸಿದ ಹಾದಿಯ ಅರಿವಿಲ್ಲದೆ, ತನ್ನದೇ ಅಸ್ಮಿತೆಯ ಹುಡುಕಾಟದಲ್ಲಿ ತೀವ್ರ ಬಲಪಂಥೀಯ ರಾಜಕೀಯದ ಗಾಳಕ್ಕೆ ಸಿಲುಕಿವೆ.

ಮಂಜುನಾಥ ಚಾರ್ವಾಕ, ಅನುವಾದಕ

‘ನಿನ್ನೆ’ ಕಥೆಯ ಆಯ್ದ ಭಾಗ 

‘ಅದು ಆಮೇಲೆ ಮಾಡಲಾಗುವುದಿಲ್ಲವಾ?’ ಎಂದಳು, ‘ನಾವು ಈಗಷ್ಟೇ ಭೇಟಿಯಾಗಿದ್ದೇವೆ, ನಾವಿಬ್ಬರೂ ಮತ್ತಷ್ಟು ಮಾತನಾಡಬಹುದಲ್ಲವೆ? ಇಲ್ಲೇ, ಇದೇ ರಸ್ತೆಯ ಮೂಲೆಯಲ್ಲಿ ಒಂದು ಒಳ್ಳೆಯ ನೂಡಲ್ ಶಾಪ್ ಇದೆ.’

ನಾನು ಕಾಫಿಯ ಹಣವನ್ನು ಟೇಬಲ್ ಮೇಲಿಟ್ಟು ನಿಂತು, ‘ಇದು ಬಹಳ ಮುಖ್ಯ ರಿಪೋರ್ಟ್, ಹಾಗಾಗಿ ನಿಜವಾಗಿಯೂ ತಡ ಮಾಡುವ ಹಾಗಿಲ್ಲ’ ಎಂದೆ. ವಾಸ್ತವದಲ್ಲಿ ಅದೇನು ಅಂತಹ ಮುಖ್ಯ ರಿಪೋರ್ಟ್ ಆಗಿರಲಿಲ್ಲ. ‘ನಾನು ನಾಳೆ ಅಥವಾ ನಾಳಿದ್ದು ನಿನಗೆ ಕರೆ ಮಾಡುತ್ತೇನೆ’ ಎಂದೆ.

‘ನಾನು ಎದುರು ನೋಡುತ್ತಿರುತ್ತೇನೆ’ ಎಂದು ಸುಂದರವಾಗಿ ನಕ್ಕಳು. ಆ ನಗು, ನನ್ನ ಮಟ್ಟಿಗೆ, ನಂಬಲು ಸ್ವಲ್ಪ ಕಷ್ಟವಾಗುವಷ್ಟು ಸುಂದರವಾಗಿತ್ತು. ಇಷ್ಟು ಹೊತ್ತು ಅಲ್ಲೇನು ನಡೆಯಿತು ಎಂದು ನಿಜಕ್ಕೂ ಚಕಿತನಾಗಿ ಯೋಚಿಸುತ್ತಾ, ಆಗಿದ್ದೆಲ್ಲವನ್ನು ಮೆಲುಕುಹಾಕುತ್ತಾ, ಆ ಕಾಫಿಶಾಪಿನಿಂದ ದಾಪುಗಾಲಿಟ್ಟು ರೈಲ್ವೆ ಸ್ಟೇಷನ್ ಕಡೆ ಓಡಿದೆ. ಎಲ್ಲ ಮುಗಿದಮೇಲೆ ಆದದ್ದೆಲ್ಲವನ್ನೂ ಯೋಚಿಸುತ್ತಾ ಕೂರುವುದು ನನ್ನ ಇನ್ನೊಂದು ದೌರ್ಬಲ್ಯ.

ಆ ಶನಿವಾರ, ಎರಿಕಾ ಮತ್ತು ನಾನು ಶಿಬುಯ ಏರಿಯಾದಲ್ಲಿ ಭೇಟಿಯಾಗಿ ವುಡಿ ಅಲೆನ್ ನ, ನ್ಯೂಯಾರ್ಕ್ ನಗರದ ಕಥೆಯುಳ್ಳ ಸಿನಿಮಾ ನೋಡಿದೆವು. ಆಕೆಗೆ ವುಡಿ ಅಲೆನ್ ಮೂವಿ ಇಷ್ಟವಾಗಬಹುದು ಹಾಗೂ ಕಿಟಾರು ಅವಳನ್ನು ವುಡಿ ಅಲೆನ್ ಸಿನಿಮಾಗೆ ಖಂಡಿತ ಕರೆದುಕೊಂಡು ಹೋಗಿರುವುದಿಲ್ಲ ಎಂದು ಅಂದಾಜು ಮಾಡಿದ್ದೆ. ಸದ್ಯ , ಸಿನೆಮಾ ಚೆನ್ನಾಗಿತ್ತು, ಚಿತ್ರಮಂದಿರ ಬಿಟ್ಟು ಹೊರಟಾಗ ಇಬ್ಬರೂ ಬಹಳ ಹುರುಪಿನಲ್ಲಿದ್ದೆವು. ಇಬ್ಬರೂ ಆ ಸಂಜೆಯ ಬೆಳಕಿನಲ್ಲಿ ಶಿಬುಯ ರಸ್ತೆಗಳಲ್ಲಿ ಓಡಾಡಿ, ಸಕುರಾಗೋಕ ಏರಿಯಾಲ್ಲಿದ್ದ ಸಣ್ಣಇಟಾಲಿಯನ್ ರೆಸ್ಟೋರೆಂಟಿಗೆ ಹೋದೆವು. ಅದೊಂದು ಸರಳವಾಗಿದ್ದ , ಅಷ್ಟೇನೂ ದುಬಾರಿಯಲ್ಲದ ರೆಸ್ಟೋರೆಂಟ್. ಟೇಬಲ್ ಗಳ ಮೇಲೆ ಇಟ್ಟಿದ್ದ ಮೇಣದ ದೀಪಗಳಿಂದ ಮಂದವಾದ ಬೆಳಕು ಹರಡಿತ್ತು. ಆಗಿನ ಕಾಲದ ಬಹುತೇಕ ಇಟಾಲಿಯನ್ ರೆಸ್ಟೋರೆಂಟ್ಗಳಲ್ಲೆಲ್ಲಾ ಮೇಣದ ದೀಪವನ್ನೇ ಇಡುತ್ತಿದ್ದರು.

ಪದವಿ ಕಾಲೇಜಿನ ಇಬ್ಬರು ತಮ್ಮ ಮೊದಲ ಭೇಟಿಯಲ್ಲಿ ಅತಿ ಉತ್ಸಾಹದಲ್ಲಿ ಹೇಗೆ ಮಾತನಾಡುತ್ತಾರೆ ಎಂದು ಅಂದಾಜು ಮಾಡುವಿರೋ ಹಾಗೆಯೇ, ನಾವಿಬ್ಬರೂ ನಮ್ಮಿಬ್ಬರ ಆಸಕ್ತಿಗಳ ಬಗ್ಗೆ , ಸಿನೆಮಾಗಳ ಬಗ್ಗೆ , ಕಾಲೇಜು ಬದುಕಿನ ಬಗ್ಗೆ, ಹವ್ಯಾಸಗಳ ಬಗ್ಗೆ, ಬಹಳ ಸಮಯ ಹರಟೆ ಹೊಡೆದೆವು. ನಾನು ಊಹಿಸಿದ್ದಕ್ಕಿಂತ ಸಲೀಸಾಗಿ ನಾವಿಬ್ಬರೂ ಬಹಳ ಕಾಲದ ಗೆಳೆಯರಂತೆ ಮಾತನಾಡಿದೆವು. ಅವಳಂತೂ ಆಗಾಗ ಜೋರಾಗಿ ನಗುತ್ತಾ ಮಾತಾಡುತ್ತಿದ್ದಳು. ನಾನು ನನ್ನ ಬಗ್ಗೆ ಕೊಚ್ಚಿಕೊಳ್ಳಲು ಹೇಳುತ್ತಿಲ್ಲ , ಆದರೂ ನನಗೆ ಹುಡುಗಿಯರನ್ನು ನಗಿಸುವ ಕಲೆ ಒಲಿದಿತ್ತು.

‘ನೀನು ನಿನ್ನ ಪ್ರೌಢಶಾಲೆಯಲ್ಲಿದ್ದ ಗೆಳತಿಯಿಂದ ಇತ್ತೀಚೆಗಷ್ಟೇ ಬ್ರೇಕ್ ಅಪ್ ಆಗಿದ್ದೀಯಾ ಎನ್ನುತ್ತಿದ್ದ ಅಕಿ-ಕುನ್?’ ಎರಿಕಾ ಕೇಳಿದಳು. ‘ಹೌದು, ನಾವಿಬ್ಬರೂ ಮೂರು ವರ್ಷ ಜೊತೆಗಿದ್ದೆವು, ಆದರೆ ಯಾಕೋ ಕೊನೆಗೂ ನಮ್ಮಿಬ್ಬರ ಮಧ್ಯೆ ಹೊಂದಾಣಿಕೆ ಬರಲೇ ಇಲ್ಲ.’ ‘ನಿಮ್ಮಿಬ್ಬರ ಮಧ್ಯೆ ಸೆಕ್ ವಿಷಯಕ್ಕೆ ಸಮಸ್ಯೆಯಾಯಿತು ಎಂದ ಅಕಿ-ಕುನ್. ಅವಳು ನೀನು ‘ಬಯಸಿದ್ದನ್ನು’ ಕೊಡಲಿಲ್ಲವಂತೆ?’

‘ಅದೂ ಕೂಡ ಒಂದು ಕಾರಣವಷ್ಟೇ, ಅದೊಂದೇ ಕಾರಣವಲ್ಲ. ನಾನು ಅವಳನ್ನು ನಿಜಕ್ಕೂ ಪ್ರೀತಿಸಿದ್ದರೆ, ತಾಳ್ಮೆಯಿಂದ ಕಾಯುತ್ತಿದ್ದೆನೇನೋ. ನಾನು ಅವಳನ್ನು ಪ್ರೀತಿಸಿದ್ದೆನಾ ಎನ್ನುವ ಸ್ಪಷ್ಟತೆ ಇದ್ದಿದ್ದರೆ, ಅದೆಲ್ಲ. ಆದರೆ ಹಾಗೆ ಎಂದೂ ಪ್ರೀತಿಸಿರಲಿಲ್ಲ.’

ಎರಿಕಾ ಹ್ಞೂ ಗುಟ್ಟಿದಳು.

‘ಅಕಸ್ಮಾತ್ ನಾವು ದೈಹಿಕವಾಗಿ ಮುಂದುವರೆದಿದ್ದರೂ, ಆ ಸಂಬಂಧ ಕೊನೆಗಾಣುತ್ತಿತ್ತೇನೋ, ಈಗ ಯೋಚಿಸಿದರೆ ಅದು ಅನಿವಾರ್ಯ ಅನ್ನಿಸುತ್ತದೆ.’ ‘ತುಂಬಾ ಕಷ್ಟಾನಾ?’ ಎಂದಳು.

‘ಕಷ್ಟ? ಯಾವುದು?’

‘ಯಾರೋ ಒಬ್ಬರ ಜೊತೆ ಬಹಳ ಕಾಲ ಇದ್ದು , ಒಂಟಿಯಾಗುವುದು.’ ‘ಒಮ್ಮೊಮ್ಮೆ ಹಾಗೆ ಅನ್ಸುತ್ತೆ’ ಎಂದೆ.

‘ಬಹುಶಃ ನಾವು ಯುವಕರಾಗಿದ್ದಾಗ ಇಂತಹ ಕಠಿಣ, ಏಕಾಂಗಿತನದ ಅನುಭವಕ್ಕೊಳಗಾಗುವುದು ಒಳ್ಳೆಯದೇ ಏನೋ. ಬದುಕಿನಲ್ಲಿ ಪ್ರಬುದ್ಧತೆ ಪಡೆಯಲು ಇದೆಲ್ಲಾ ಅನಿವಾರ್ಯ ಅನ್ಸುತ್ತೆ’

‘ನಿನಗೆ ಹಾಗನ್ನಿಸುತ್ತದಾ?’

‘ಥರಗುಟ್ಟುವ ಚಳಿಗಾಲವೊಂದನ್ನು ಕಳೆದ ಮರ ಮತ್ತಷ್ಟು ಗಟ್ಟಿಯಾಗುವ ಹಾಗೆ, ತನ್ನೊಳಗೆ ಮತ್ತಷ್ಟು ಸುರುಳಿಗಟ್ಟಿ ಗಟ್ಟಿಯಾಗುವ ಹಾಗೆ.’

ಇದನ್ನೂ ಓದಿ : ಋತುವಿಲಾಸಿನಿ: ಹನೀ, ಈ ನಶೆಗಾಗಿಯೇ ಇಡೀ‌ ಲೋಕ ಹಪಹಪಿಸುತ್ತಿದೆ

ನಾನು ನನ್ನೊಳಗೆ ಸೃಷ್ಟಿಯಾಗಿರುವ ಸುರುಳಿಗಳ ಬಗ್ಗೆ ಯೋಚಿಸಿದೆ. ಆದರೆ ನನ್ನ ಮನಸ್ಸಿನಲ್ಲಿ ಪದರಪದರಗಳಿಂದ ನಿರ್ಮಿತವಾದ ಕೇಕ್ ನ ಚಿತ್ರವೊಂದೇ ಮೂಡುತಿತ್ತು.

‘ಪ್ರತಿ ವ್ಯಕ್ತಿ ಇಂತಹ ಒಂದು ಸಮಯವನ್ನು ದಾಟಲೇಬೇಕು, ಆದರೆ ಆ ವ್ಯಕ್ತಿಗೆ ಆ ಸಮಯ ಒಂದು ದಿನ ಕೊನೆಯಾಗುತ್ತದೆ ಎನ್ನುವುದು ಸಹ ತಿಳಿದಿದ್ದರೆ ಒಳ್ಳೆಯದೇನೋ’ ಎಂದೆ.

ಅವಳು ನಗುತ್ತಾ, ‘ಯೋಚಿಸಬೇಡ, ಬಹಳ ಬೇಗ ನೀನು ಯಾರಾದರೂ ಒಳ್ಳೆಯ ಹುಡುಗಿಯನ್ನು ಭೇಟಿಯಾಗುತ್ತೀಯ’ ಎಂದಳು.

‘ನಾನೂ ಹಾಗೆಯೇ ಅನ್ಕೊಂಡಿದೀನಿ.’

ನಾನು ಪಿಜ್ಜಾ ತಿನ್ನುವುದರಲ್ಲಿ ನಿರತನಾಗಿದ್ದಾಗ, ಎರಿಕಾ ಗಂಭೀರವಾಗಿ ಯೋಚಿಸುತ್ತಾ ಕುಳಿತಿದ್ದಳು.

‘ತನಿಮುರ-ಕುನ್, ನಿನಗೇನೂ ಅಭ್ಯಂತರವಿಲ್ಲದಿದ್ದರೆ, ನಾನು ನಿನ್ನ ಬಳಿ ಒಂದು ಸಲಹೆ ಕೇಳಬೇಕಿತ್ತು.’

‘ಖಂಡಿತ’ ಎಂದೆನಾದರೂ ಇಂತಹ ಸಂದರ್ಭಗಳ ನನ್ನ ಹಿಂದಿನ ಅನುಭವಗಳಿಂದಾಗಿ ಒಳಗೊಳಗೆ ಕಸಿವಿಸಿಯಾಗತೊಡಗಿತು. ಆಗಷ್ಟೇ ಭೇಟಿಯಾದ ಯಾರಾದರೊಬ್ಬರು ಸಲಹೆ ಕೇಳುತ್ತಿದ್ದರೆ, ಅದು ಖಂಡಿತ ಸ್ವಲ್ಪ ಫಜೀತಿಗೆ ಸಿಕ್ಕಿಸುವ ವಿಷಯವೇ ಆಗಿರುತ್ತದೆ.

‘ನಾನು ಬಹಳ ಗೊಂದಲದಲ್ಲಿದ್ದೇನೆ..’ ಎಂದು ಶುರು ಮಾಡಿದಳು. ಏನನ್ನೋ ಹುಡುಕಾಡುತ್ತಿರುವ ಬೆಕ್ಕೊಂದರ ಕಣ್ಣುಗಳ ಹಾಗೆ, ಓಡಾಡುತ್ತಿದ್ದವು. ‘ನಿನಗೆ ಈಗಾಗಲೇ ಗೊತ್ತಾಗಿರುವ ಹಾಗೆ, ಅಕಿ-ಕುನ್ ಕಾಲೇಜು ಪರೀಕ್ಷೆ ಪಾಸಾಗಲು ಎರಡು ವರ್ಷ ತೆಗೆದುಕೊಂಡಿದ್ದಾನೆ, ಹಾಗಿದ್ದರೂ ಓದಿನ ಕಡೆ ಸ್ವಲ್ಪವೂ ಗಮನ ಹರಿಸುವುದಿಲ್ಲ. ಆ ಪರೀಕ್ಷೆಯ ತರಬೇತಿ ತರಗತಿಗಳನ್ನೂ ಸರಿಯಾಗಿ ತೆಗೆದುಕೊಳ್ಳುತ್ತಿಲ್ಲ , ಹಾಗಾಗಿ ಈ ಪರೀಕ್ಷೆಯಲ್ಲೂ ಅನುತ್ತೀರ್ಣನಾಗುತ್ತಾನೆ. ಬೇಕಿದ್ದರೆ ಯಾವುದಾದರೂ ಸಣ್ಣಕಾಲೇಜಿನಲ್ಲಿ ಅವನಿಗೆ ಪ್ರವೇಶ ಸಿಗಬಹುದು, ಆದರೆ ಅವನ ಮನಸ್ಸೆಲ್ಲಾ ವಸೇದ ಕಾಲೇಜಿನ ಮೇಲೆಯೇ ಇದೆ. ಅವನು ನನ್ನ ಮಾತಾಗಲಿ, ಅವನ ತಂದೆ ತಾಯಿಯರ ಮಾತನ್ನಾಗಲಿ ಕೇಳುವುದಿಲ್ಲ. ಅವನಿಗೆ ಇದೊಂದು ಕಾಲೇಜು ಮನಸ್ಸಿಗೆ ಹೊಕ್ಕಿದೆ…. ಆದರೆ ಅವನಿಗೆ ಹಾಗನ್ನಿಸಿದರೆ ಅದಕ್ಕಾಗಿ ಪ್ರಯತ್ನ ಕೂಡ ಮಾಡಬೇಕಲ್ಲವೇ?’

‘ಅವನು ಯಾಕೆ ಓದುವತ್ತ ಆಸಕ್ತಿ ತೋರಿಸುವುದಿಲ್ಲ?’

‘ಅವನು ಅಕಸ್ಮಾತ್ ಅದೃಷ್ಟ ಇದ್ದರೆ, ಓದದೆಯೇ ಪರೀಕ್ಷೆ ಪಾಸಾಗುತ್ತೇನೆ ಎಂದು ನಂಬಿದ್ದಾನೆ, ಓದುವುದು ನಿಜಕ್ಕೂ ವ್ಯರ್ಥ ಎನ್ನುವುದು ಅವನ ಭಾವನೆ’ ಎಂದು ನಿಟ್ಟುಸಿರು ಬಿಟ್ಟು ಮುಂದುವರೆಸಿದಳು, ‘ಪ್ರೈಮರಿ  ಸ್ಕೂಲಿನಲ್ಲಿ ಅವನು ಯಾವಾಗಲೂ ಚೆನ್ನಾಗಿ ಓದುತ್ತಿದ್ದ , ಆದರೆ ಒಮ್ಮೆ ಹೈಸ್ಕೂಲ್ ಸೇರಿದ ಕೂಡಲೇ ಅವನ ಅಂಕಗಳು ಕ್ರಮೇಣ ಕಡಿಮೆಯಾಗುತ್ತಾ ಹೋಯಿತು. ಅವನು ಬಹಳ ಪ್ರತಿಭಾವಂತ, ಆದರೆ ಅವನ ವ್ಯಕ್ತಿತ್ವ ಈ ಪ್ರತಿದಿನ ಕಷ್ಟಪಟ್ಟು ಓದುವ ಶಿಕಣ್ಷ ಕ್ಕೆ ಒಗ್ಗುವುದಿಲ್ಲ. ಬದಲಾಗಿ ತನ್ನ ಪಾಡಿಗೆ ತಾನು, ಏನೇನೋ ವಿಚಿತ್ರ ವಿಷಯಗಳಲ್ಲಿ ತೊಡಗಿಸಿಕೊಳ್ಳುತ್ತಾನೆ. ನಾನು ಅವನಿಗೆ ತದ್ವಿರುದ್ಧ. ಅವನಷ್ಟು ಜಾಣೆಯಲ್ಲದಿದ್ದರೂ ಕಷ್ಟಪಟ್ಟು ಕೂತು ಅಭ್ಯಾಸ ಮಾಡುತ್ತೇನೆ.’

ನಾನು ಕೂಡ ಅಷ್ಟೇನೂ ಕಷ್ಟಪಟ್ಟು ಓದಿ ಕಾಲೇಜು ಸೇರಿರಲಿಲ್ಲ. ಬಹುಶಃ ಅದೃಷ್ಟ ನನ್ನ ಕಡೆ ಇತ್ತು ಅನ್ನಿಸುತ್ತದೆ.

‘ನನಗೆ ಅಕಿ-ಕುನ್ ಎಂದರೆ ಬಹಳ ಇಷ್ಟ , ಅವನಿಗೆ ಎಷ್ಟೊಂದು ಒಳ್ಳೆಯ ಗುಣಗಳಿವೆ. ಆದರೆ ಕೆಲವೊಮ್ಮೆ ಅವನ ಅತಿರೇಕದ ಯೋಚನೆಗಳನ್ನು ಅರಗಿಸಿಕೊಳ್ಳಲು ಕಷ್ಟವಾಗುತ್ತದೆ. ಉದಾಹರಣೆಗೆ, ಈ ಕನ್ಸಾಯ್ ಭಾಷೆಯ ಬಗ್ಗೆ ಅವನ ಅಭಿಪ್ರಾಯವನ್ನೇ ತೆಗೆದುಕೊ. ಟೋಕಿಯೋದಲ್ಲಿ ಹುಟ್ಟಿ ಬೆಳೆದ ಯಾರಾದರೂ ಕಷ್ಟಪಟ್ಟು ಕನ್ಸಾಯ್ ಭಾಷೆಯನ್ನು ಕಲಿಯುವ ಅವಶ್ಯಕತೆ ಏನಾದರೂ ಇದೆಯಾ? ನನಗಂತೂ ನಿಜಕ್ಕೂ ತಿಳಿಯುತ್ತಿಲ್ಲ. ಮೊದಮೊದಲು ತಮಾಷೆಗೆ ಮಾಡುತ್ತಿದ್ದಾನೇನೋ ಎಂದುಕೊಂಡೆ. ಆದರೆ ಹಾಗಾಗದೆ, ಅವನು ಈ ವಿಷಯವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದಾನೆ’ ಎಂದಳು.

‘ಬಹುಶಃ ಅವನು ಬೇರೊಂದು ವ್ಯಕ್ತಿತ್ವ ಹೊಂದಲು ಪ್ರಯತ್ನಿಸುತ್ತಿದ್ದಾನೇನೋ, ಇಷ್ಟೂ ದಿನ ಬದುಕಿದ್ದಕ್ಕಿಂತ ಭಿನ್ನವಾಗಿ ಬದುಕಲು ನೋಡುತ್ತಿದ್ದಾನೇನೋ’ ಎಂದೆ. ‘ಅದೊಂದಕ್ಕೋಸ್ಕರ ಕನ್ಸಾಯ್ ಭಾಷೆ ಮಾತಾಡ್ತಾನ?’ ಎಂದು ಕೇಳಿದಳು.

‘ನೀನು ಹೇಳುವ ಹಾಗೆ ಇದು ಅತಿರೇಕದ ವರ್ತನೆಯೇ’ ಎಂದೆ. ಎರಿಕಾ ಪಿಜ್ಜಾ ತುಂಡನ್ನು ಅನ್ಯಮನಸ್ಕತೆಯಿಂದ ಕಚ್ಚಿ ತಿನ್ನುತ್ತಾ ನಿಧಾನವಾಗಿ ಮಾತನಾಡಲು ಶುರು ಮಾಡಿದಳು. ’ತನಿಮುರಾ-ಕುನ್, ನನಗೆ ಇದೆಲ್ಲವನ್ನೂ ಚರ್ಚಿಸಲು ಬೇರೆ ಯಾರು ಇಲ್ಲದ್ದರಿಂದ ನಿನ್ನ ಬಳಿ ಹೇಳಿಕೊಳ್ಳುತ್ತಿದ್ದೇನೆ, ನಿನಗೆ ತೊಂದರೆ ಎನಿಸಿದರೆ ಹೇಳು.’

‘ಖಂಡಿತ ಇಲ್ಲ’ ಎಂದೆ, ಏನು ಹೇಳುವುದು ತೋಚದೆ.

‘ಸಾಧಾರಣವಾಗಿ, ಒಂದು ಹುಡುಗ ಹುಡುಗಿ ತುಂಬ ಸಮಯ ಜೊತೆಗಿದ್ದು , ಚೆನ್ನಾಗಿ ಪರಿಚಯವಾದಾಗ, ಆ ಹುಡುಗನಿಗೆ ಹುಡುಗಿಯ ಮೇಲೆ ದೈಹಿಕವಾಗಿ ಸ್ವಲ್ಪವಾದರೂ ಆಸಕ್ತಿ ಇರುತ್ತದಲ್ಲವೇ?’ ‘ಸಾಧಾರಣವಾಗಿ ಹೌದು.’

‘ಒಂದು ಮುತ್ತು ಕೊಟ್ಟಾಗ, ಹಾಗೆಯೇ ಮುಂದುವರೆಯುತ್ತಾರಲ್ಲವೇ?’ ‘ಸಾಮಾನ್ಯವಾಗಿ, ಹೌದು.’

‘ನಿನಗೂ ಹಾಗೆಯೇ ಅನ್ನಿಸುತ್ತದೆಯಾ?’

‘ಖಂಡಿತಾ’ ಎಂದೆ.

ಪೂರ್ಣ ಓದಿಗೆ ಮತ್ತು ಈ ಪುಸ್ತಕದ ಖರೀದಿಗೆ ಈ ಲಿಂಕ್ : ಋತುಮಾನ

ಈ ಅಂಕಣದಲ್ಲಿರುವ ಹೊಸ ಪುಸ್ತಕಗಳ ಆಯ್ದ ಭಾಗಗಳನ್ನುಇಲ್ಲಿ ಓದಿ : https://tv9kannada.com/tag/acchigoo-modalu

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ