ಋತುವಿಲಾಸಿನಿ: ಹನೀ, ಈ ನಶೆಗಾಗಿಯೇ ಇಡೀ ಲೋಕ ಹಪಹಪಿಸುತ್ತಿದೆ
Love and God : ಅದೆಂತದ್ದೋ ವ್ರತದ ನೆಪ ಹೇಳಿ ಮಾತು ತಪ್ಪಿಸುತ್ತಿದ್ದೀಯಾ. ಅವ ಯಾವೂರ ದೇವರು ಹನೀ ನಿಮ್ಮವ. ಒಂದು ಶುದ್ದಾನುಶುದ್ದ ಪ್ರೇಮಕ್ಕೆ ನಿಯಮದ ಹೆಸರೊಡ್ಡಿ ತಣ್ಣಾಗಿರಲು ಹೇಳುವವ? ಸಿಕ್ಕರೆ ಸುಮ್ಮನೆ ಬಿಡಬಾರದು ಎನಿಸುತ್ತದೆ.
ಋತುವಿಲಾಸಿನಿ | Rutuvilaasini : ಮೊನ್ನೆ ಮನೆಯಲ್ಲಿ ಶುಭಕಾರ್ಯ ಆದ ದಿನ ಆಕಾಶವೇ ಕಳಚಿ ಬಿದ್ದಂತೆ ಸುರಿದ ಮಳೆ ಅದು ಕಳೆದು ಹದಿನೈದು ದಿನವಾದರೂ ಒಂದು ಹನಿಯೂ ಕೆಳಗಿಳಿಯದೆ ಸತಾಯಿಸುತ್ತಿದೆ ಹನೀ. ಹಗಲುಗಳಿಗೆ ಕೆಂಡ ರಾಚುವಷ್ಟು ಕುದಿ. ಕಳೆ ಬೆಳೆಯ ಹೊದಿಕೆಯಿಲ್ಲದ ನೆಲವಂತೂ ಧಗಧಗ ಬಿಸಿ. ಬಿಸಿಲಿಗೆ ಹೆಚ್ಚು ಶಕ್ತಿ ಬಂತೋ ಆಕಾಶದ ಸೋಸುಪದರಕ್ಕೆ ತೂತು ಬಿತ್ತೊ ಸೂರ್ಯನಿಗೇ ಮಡದಿ ಮೇಲೆ ಮೋಹ ಹೆಚ್ಚಿ ಮೆತ್ತಗೆ ಹತ್ತಿರ ಬಂದನೋ ಗೊತ್ತಾಗ್ತಿಲ್ಲ. ಕಳೆದ ಅಷ್ಟೂ ಬೇಸಿಗೆಗಳಿಲ್ಲದ ಕಾವು ನನ್ನೂರಿನಲ್ಲಿ. ನಿಂಗೆ ಗೊತ್ತಲ್ವಾ ಹನೀ. ನಾನು ತಣ್ಣನೆಯ ರಕ್ತದ ಪ್ರಾಣಿ. ಒಂದೇ ಒಂದು ಬೊಗಸೆ ಚಳಿ ಹೆಚ್ಚಾದರೂ ಕರುಳೂ ಗದಗುಡುತ್ತದೆ ನನಗೆ. ರಣಬೇಸಿಗೆಯಲ್ಲೂ ದಪ್ಪ ಕೌದಿ ಹೊದ್ದೇ ಮಲಗುವ ನನ್ನಂತ ನಾನೂ ಈ ವರ್ಷ ಹೊದಿಕೆಯಿರಲಿ ಹಾಸಿಗೆಯನ್ನೂ ದೂರವಿಟ್ಟು ನೆಲದಲ್ಲಿ ಮಲಗುತ್ತಿದ್ದೇನೆ.ಮೈಮೇಲಿನ ಬಟ್ಟೆಯೇ ಸೆರೆಯೆನಿಸುತ್ತಿದೆ. ಸ್ನಾನಕ್ಕೆ ತಣ್ಣೀರು ಹಿತವೆನಿಸುತ್ತಿದೆ. ಮಳೆ ಚಳಿ ಬಿಸಿಲು ಎಲ್ಲದಕ್ಕೂ ಸೌಲಭ್ಯಗಳನ್ನು ಹೊಂಚಿಕೊಂಡ ಮನುಷ್ಯನೇ ಹೀಗಾದರೇ ಉಳಿದ ಕೋಟ್ಯಂತರ ಜೀವಜಂತುಗಳ ಪಾಡೇನಿರಬಹುದು ಅನಿಸ್ತದೆ ಹನೀ. ನಂದಿನಿ ಹೆದ್ದುರ್ಗ, ಕವಿ, ಲೇಖಕಿ (Nandini Heddurga)
(ಋತು 7)
ಈ ಬಿರುಬೇಸಿಗೆಗೆ ಪ್ರೇಮವೂ ಆವಿಯಾಗಬಹುದಾ ಎದೆಯಿಂದ? ಉಹು, ಗೊತ್ತಾಗ್ತಿಲ್ಲ ನೋಡು.ಎಲ್ಲ ಮುಗಿದ ಮೇಲೂ ನೀನು ಮೊದಲಿನಂತೆ ಮರಳಲಾರೆಯೆಂಬ ಭಾವ ಯಾವ ಸೂತಕದ ಹೊತ್ತಿನಲ್ಲೋ ಒಳಬಂದು ಮಲಗಿಬಿಟ್ಟಿದೆ. ಒಳಗಿನ ಖಾಲಿತನಕ್ಕೆ ಹೆದರಿ ಹೊರಗೆ ನೋಡುವೆ. ತೊಟ್ಟೇ ತೊಟ್ಟು ಗಾಳಿಯೂ ಮರಮರದ ನಡುವೆ ಹಂತಾಡುತ್ತಿಲ್ಲ. ಬಿಸಿಲ ಝಳಕ್ಕೆ ಗಿಡಮರದ ಹೊಳೆವ ಮುಖ ಸೋತು ನೆಲ ನೋಡುತ್ತಿವೆ. ನನ್ನ ದಾಸವಾಳ ಕಾಡು ಇರುವ ಈ ಇಷ್ಟಗಲದ ಜಾಗ ಮಾತ್ರ ಹೊರಲೋಕಕ್ಕೂ ತನಗೂ ಸಂಬಂಧವಿಲ್ಲದಂತಿದೆ ಹನೀ!
ಬಿಡುವಿಲ್ಲದ ಕೆಲಸ ಇರುವವರಂತೆ ಗುಬ್ಬಚ್ಚಿಗಳು ಪ್ರತಿ ಹರೆಹರೆಯನ್ನೂ ಸರ್ವೆ ಮಾಡ್ತಾ ಆಗಾಗ ಅದು ನನ್ ಕೊಂಬೆ ,ಇದು ನಿನ್ ಕೊಂಬೆ ಆಯ್ತಾ ಅಂತೇನೋ ದೊಡ್ಡ ದನಿಯಲ್ಲಿ ಗದ್ದಲ ಮಾಡ್ತವೆ. ಆಗಿಂದಾಗ್ಗೆ ಅವುಗಳ ನಡುವೆ ಎಂತಕೋ ಜಗಳ ಎದ್ದು ಒಂದರ ಮೇಲೊಂದು ಉರುಳಾಡಿ ರೆಕ್ಕೆ ಪುಕ್ಕ ಕತ್ತು ಎಲ್ಲಕ್ಕೂ ಕುಕ್ಕಾಡುತ್ತ ಮೈ ಸೋತು ಅಲ್ಲೇ ಬಾಲ್ದಿಯಲ್ಲಿಟ್ಟಿರುವ ನೀರು ಕುಡಿದು,ಬ್ರೂನೊ ಉಳಿಸಿದ್ದ ಹಾಲು ಅನ್ನ ತಿಂದು ಬಳಲಿಕೆ ಆರಿಸಿಕೊಳ್ತವೆ.
ಈ ರೆಕ್ಕೆ ಇರುವ ದೇವತೆಗಳ ಸಖ್ಯದೊಂದಿಗೆ, ನಮ್ಮ ಹಸೀನೆನಪುಗಳೊಂದಿಗೆ, ಪುರುಸೊತ್ತಿರದ ಕೆಲಸಗಳೊಂದಿಗೆ ಹಗಲುಗಳು ಸಹ್ಯವಾಗುತ್ತವೆ ಹನೀ. ಇರುಳು ಸ್ವಾಗತಿಸಲು ಬರುವ ಸಂಜೆಗಳದ್ದೇ ತಕರಾರು ನೋಡು. ನಿನ್ನ ನೆನಪುಗಳ ನಾದಕ್ಕೆ ಎದೆಯೊಳಗೆ ಖಮ್ಮನೆ ಹೂವರಳುತ್ತದೆ.ಪರಿಮಳದ ಹಾಡೊಂದನ್ನು ಸುಮ್ಮನೆ ಗುಣುಗುಣಿಸುತ್ತೇನೆ. ಸುಖದ ವಿಷಾದವೊಂದು ಹೊಕ್ಕುಳಾಳದಿಂದ ಉಕ್ಕಿ ಕಣ್ಣ ತುದಿಯಲ್ಲಿ ತುಳುಕುತ್ತದೆ.
ಇನ್ನೇನು ಈಗ,ಇದೇ ಹೊತ್ತಿಗೆ ನಿನ್ನ ಸುತ್ತಿನ ಕೋಟೆ ಕಳಚಿ ವಾಕಿಂಗ್ ಹೆಸರಿನಲ್ಲಿ ಆಚೆ ಬರುತ್ತಿ ನೀನು. ನನ್ನ ಸಲುವಾದ ತಲ್ಲಣಗಳು ನಿನ್ನ ಹಾದಿಗೆ ಹೂಮೊಗ್ಗು ಹಾಸುತ್ತವೆ. ಹಕ್ಕಿ ಹಗುರಾದ ಮನಸ್ಸು ಹೊತ್ತವನು ಈಗ ನೀನು. ಕೊರಳಲ್ಲಿ ಜೇನು ತುಂಬಿಕೊಂಡು ಕರೆ ಹಚ್ಚುತ್ತಿ ನನಗೆ.
ಹನೀ
ನೀನು ಬಂದಮೇಲೆ ನನ್ನ ಪಾಲಿಗೆ ಸಂಜೆಯೆಂದರೆ ಸಂಭ್ರಮ ಸಂಜೆಯೆಂದರೆ ಪ್ರೇಮ. ಸಂಜೆಯೆಂದರೆ ಕೇವಲ ನಾನು ನೀನು. ಆದರೆ… ಸುದೀರ್ಘ ಮುಕ್ಕಾಲು ತಿಂಗಳಾಯ್ತು ನಮ್ಮ ನಡುವಿನ ಮಾತಿಗೆ ಮುಕ್ತಿ ಬಿದ್ದು. ಅದೆಂತದ್ದೋ ವ್ರತದ ನೆಪ ಹೇಳಿ ಮಾತು ತಪ್ಪಿಸುತ್ತಿದ್ದೀಯಾ. ಅವ ಯಾವೂರ ದೇವರು ಹನೀ ನಿಮ್ಮವ. ಒಂದು ಶುದ್ದಾನುಶುದ್ದ ಪ್ರೇಮಕ್ಕೆ ನಿಯಮದ ಹೆಸರೊಡ್ಡಿ ತಣ್ಣಾಗಿರಲು ಹೇಳುವವ? ಸಿಕ್ಕರೆ ಸುಮ್ಮನೆ ಬಿಡಬಾರದು ಎನಿಸುತ್ತದೆ.
ತಿಂಗಳ ಮೌನಕ್ಕೆ ಜನ್ಮವೇ ಮುಗಿದಂತ ಸಂಕಟ ಹರವಿಕೊಂಡಿದೆ ಇಲ್ಲಿ. ಎಂದೋ ಧಾರಕಾರ ಮಳೆ ಸುರಿದ ದಿನ ಲೋಕದ ಜೀವಿಗಳಿಗೆಲ್ಲ ಸುಖದ ತ್ರಾಸು.ಈ ಜನ್ಮಕ್ಕೆ ಇಷ್ಟು ಸಾಕು ಎನ್ನುವ ತೃಪ್ತಿ. ಗಿಡಮರಗಳ ಕೆಂಪನೆ ಚಿಗುರು ಮತ್ತಷ್ಟು ಹೊಳೆಯುತ್ತದೆ.ಈ ತನಕ ಮುಖವೇ ತೋರಿಸದಿದ್ದ ಕಪ್ಪೆಗಳು ವಟಗುಟುತ್ತ ಗುಟುರು ಹಾಕತೊಡಗುತ್ತವೆ. ಜೀರುಂಡೆಗಳಿಗೆ ಹಬ್ಬದ ಸಂಭ್ರಮ ಮೂಡಿ ಒಂದೇ ಸಮನೆ ಜೀಈಈಈ ಸದ್ದು ಜಗದ ಸುತ್ತನ್ನೂ ವ್ಯಾಪಿಸಿಕೊಳ್ತದೆ.
ಅರ್ಧತಾಸು ಸುರಿದ ಮಳೆಗೆ ಭೂಮಿ ನಂಬಿದವನ ಮುಖದಲ್ಲಿ ಸಂಭ್ರಮ.ನಾಳೆ ಮಾಡಬೇಕಾದ ಕೆಲಸಗಳ ಬಗ್ಗೆ ಈಗಿಂದಲೇ ಲೆಕ್ಕಾಚಾರ ನಡೆಸುತ್ತಾನೆ. ನಿಮಗ್ಗೊತ್ತಾ ಹನೀ. ಅದೇ ಮಳೆ ಮೂರು ತಾಸಿನವರೆಗೆ ಏನಾದರೂ ಸೋಗರೆದರೆ ‘ಹಾಳು ಮಳೆ. ಹಗಲೆಲ್ಲ ಜೋಗುಟ್ಲಿಕ್ಕೆ ಶುರುವಾಯ್ತು’ ಅಂತೀವಿ. ‘ಇನ್ನೊಂದು ಹದಿನೈದು ದಿನ ಮಳೆ ಹೋದರೂ ಎಂಥ ಫರಕ್ಕೂ ಆಗೋದಿಲ್ಲ’ ಅಂತೆಲ್ಲ ಸಸಾರ ಮಾತಾಡ್ತಿವಿ. ಇನ್ನೂ ಒಂದು ದಿನ ಮುಂದುವರೆದರೆ ‘ಹಾಳು ಮಳೆ.. ಈಗಲೇ ಠಿಕಾಣಿ ಹೂಡ್ತಲ್ಲ’ ಅಂತ ಕಸಿವಿಸಿ ಶುರುವಾಗ್ತದೆ.
ಆದರೆ ಮಾರನೆ ಬೆಳಗ್ಗಿಗೇ ಬಿಸಿಲು ಈ ಭೂಮಿಗೆ ಭೂಮಿಯನ್ನೇ ಆವಿಗಟ್ಟಿಸುವಂತೆ ರಾಚಲು ಶುರುವಾದಾಗ ಸಂಜೆಗೊಂದು ಮಳೆ ಸುರಿಯಲಿ ಶಿವನೇ ಅಂತ ಒಳಗೊಳಗೇ ದೇವರಿಗೆ ಮುಡಿಪು ಕಟ್ತಿವಿ.
ಇದನ್ನೂ ಓದಿ : ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್ ಟೀ ಹಂಬಲ
ಹನೀ..
ಈ ಮನಸ್ಸೂ ಹೀಗೇ ನೋಡು. ರುಚಿಕಟ್ಟಾದ ತಿನಿಸೊಂದು ತಿನ್ನುವಾಗ ಆದ ತೃಪ್ತಿ ಮೂರುತಾಸಿಗೆ ಕಳೆದು ಮತ್ತೆ ಹಸಿವು ವ್ಯಾಪಿಸುತ್ತಿದೆ. ತಿರುಗಾಟ ಮುಗಿದ ದಿನ ಇನ್ನಾರು ತಿಂಗಳು ಎಲ್ಲಿಗೂ ಬೇಡ ಎಂದುಕೊಂಡಿದ್ದ ಮನಸ್ಸಿಗೆ ಮೂರೇ ವಾರಕ್ಕೆ ಮನೆ ಬೇಸರ ಬಂದು ಒಂದು ಔಟಿಂಗ್ ಕೇಳುತ್ತದೆ. ಹನೀ… ತುಸು ಮೆಲ್ಲಗೆ ಹೇಳ್ತಿದ್ದೀನಿ. ಕೇಳಿಸ್ಕೋ.
ನಮ್ಮ ಆ ಅದ್ಭುತ ಮಿಲನ ಮುಗಿದು ಒಬ್ಬರಿಗೊಬ್ಬರು ತುಸು ಹೊತ್ತು ತೆಕ್ಕೆಯೊಳಗಿರುವ ಹೊತ್ತಿನಲ್ಲಿ ಈ ಜನ್ಮಕ್ಕೆ ಇಷ್ಟು ಸುಖ ಸಾಕು ಅನಿಸ್ತದೆ. ಇದರ ನೆನಪೊಂದೇ ನಮ್ಮ ನಾಳೆಗಳ ತಿಳಿಯಾಗಿಸಬಲ್ಲದು ಎಂದುಕೊಳ್ತೀವಿ. ಎಂದಾದರೊಂದು ದಿನ ಒಟ್ಟಿಗೆ ಊಟ ಮಾಡುವಷ್ಟು ಅವಕಾಶ ಸೃಷ್ಟಿಸಲಿ ವಿಧಿ. ಅಷ್ಟು ಸಾಕು ಬಾಳುವುದಕ್ಕೆ ಎಂದುಕೊಳ್ತೇವೆ. ಆಗ ತಾನೆ ಮುಗಿದ ಸಮೃದ್ಧ ಪ್ರೇಮಕ್ಕೆ ಎದೆ ನೆಂದು ಹೋಗಿರುತ್ತದೆ. ಈ ಕ್ಷಣ ಅಂತಿಮ ಅನಿಸುತ್ತದೆ.
ಆದರೆ..
ಒಲುಮೆಗೆ ಒಡ್ಡಿಕೊಂಡ ನೋವುಗಳು ಮೈಯಿಂದ ಮಾಸುವ ಮುನ್ನವೇ, ಕೊನೆ ಸದ್ದಿನ ಗುಂಗಿನ್ನೂ ಗುಯ್ಗುಡುವಾಗಲೇ, ತೊಟ್ಟ ಬಟ್ಟೆಯಲ್ಲಿ ಮೆತ್ತಿಕೊಂಡಿದ್ದ ಸುಖದಕಲೆಗಳ ತೊಳೆಯುವ ಮುನ್ನವೇ… ಇನ್ನೊಮ್ಮೆ.. ಇನ್ನೊಂದೇ ಒಂದು ಸರ್ತಿ ನೀನು ಬೇಕು ಅಂತ ತೀವ್ರವಾಗಿ ಅನಿಸಲಾರಂಭಿಸುತ್ತದೆ. ಇರುಳಿನ ತಂಪು ಜ್ವರವಾಗಿ ಕಾಡುತ್ತದೆ. ಹೊರಗೊಂದು ಮುಖ ಹೊತ್ತು ಒಳಗೆ ಬೆಟ್ಟದಷ್ಟು ಬಯಕೆ ಹೊತ್ತು ಪ್ರೇಮ ಭಾರದಲ್ಲಿ ದಿನಚರಿಯನ್ನು ನಟಿಸುತ್ತೇವೆ ಹನೀ.
ಈ ಪ್ರೇಮಕಾಮಗಳೂ ಒಂದು ಬಗೆಯ ನಶೆ ಹನೀ.
ಜಗತ್ತಿನ ಯಾವ ಸಂಪತ್ತಿನಿಂದಲೂ ಇದನ್ನು ಕೊಂಡುಕೊಳ್ಳಲಾಗದು. ಪ್ರೇಮಿಗಳಿಬ್ಬರು ಹಚ್ಚಿಕೊಂಡ ಬಗೆ, ತೀವ್ರತೆ ಮಾತ್ರ ಈ ನಶೆಯನ್ನು ಅನುಭವಕ್ಕೆ ತರುತ್ತದೆ. ಈ ನಶೆಗಾಗಿಯೇ ಇಡೀ ಲೋಕ ಹಪಹಪಿಸುತ್ತಿದೆ. ಇಂಥದ್ದೆ ಒಂದು ನಶೆಯ ಹಗಲು ಅದು. ಎಂದಿನಂತೆ ನಿನ್ನ ವ್ರತದ ಮೌನ. ಧಗೆ ಎಬ್ಬಿಸುವ ಬಿಸಿಲು.
ಒಳಗಿನ ಸಂಕಟ ಹೊರಗಿನ ಕುದಿ ಎರಡೂ ಸೇರಿ ಮನಸ್ಸು ನಿತ್ರಾಣವಾಗಿತ್ತು. ಎಲ್ಲಿಗಾದರೂ ದೂರ ಹೋಗಿ ಹಸುರ ಒಡಲಿನಲ್ಲಿ ಮನಸ್ಸು ಮರೆಸಿಕೊಳ್ಳಬೇಕು ಅನಿಸುತ್ತಿತ್ತು. ಅದೇ ಸಮಯಕ್ಕೆ ತವರಿಂದ ಸುಗ್ಗಿಗೆ ಬರಬೇಕು ಅಂತ ಕರೆ ಬಂತು ಹನೀ. ರೋಗಿ ಬಯಸಿದ್ದು ವೈದ್ಯ ಹೇಳಿದ್ದೂ ಒಂದೇ ನೋಡಿ.
ಧಗೆಯ ಮಧ್ಯಾಹ್ನದಲ್ಲಿ ಈ ಮನೆಗೆ ಬಂದೆ.
ಮಳೆ ಕುರುಹುಗಳನ್ನು ಗಮನಿಸ್ತಾ ಗೂಗಲ್ ಹೇಳಿದ್ದ ನೈಂಟಿ ಪರ್ಸೆಂಟ್ ರೈನ್ ನಿಜವಾಗ್ತದಾ ಸುಳ್ಳಾಗ್ತದಾ ಎನ್ನುವುದಕ್ಕೆ ಮುಗಿಲು ಯಾವ ದಿಕ್ಕಿಗೆ ಕೂಡ್ತಿದೆ. ನೆತ್ತಿಮೋಡ ಎಷ್ಟು ದಟ್ಟವಾಗಿದೆ ಅಂತೆಲ್ಲ ಲೆಕ್ಕಾಚಾರ ಹಾಕ್ತಾ ಬಾಗಿಲಲ್ಲೇ ಕುಂತಿದ್ರು ಅಪ್ಪ.
ಅದೆಲ್ಲಿತ್ತೋ ರಣವೇಗದ ಗಾಳಿ!
ನಿಂತಿರುವ ಮರವೆಲ್ಲ ಬಾಗಿ ಮಣ್ಣಿಗೊಮ್ಮೆ ನಮಸ್ಕರಿಸುತ್ತವೇನೋ ಎಂಬಂತೆ ಬೀಸತೊಡಗಿತು. ತವರಿಗೆ ಬಂದು ಇನ್ನೂ ಅರ್ಧತಾಸಾಗಿಲ್ಲ. ಮನೆ ಬಾಗಿಲಿನ ಎದುರಿಗಿರುವ ಪಾರ್ವತಮ್ಮನ ಬೆಟ್ಟದ ಹಿಂಬದಿಗೆಲ್ಲ ಕಡುಗಂದು ತೆರೆ ಇಳಿಬಿಟ್ಟರೇನೋ ಎಂಬಂತೆ ಮುಗಿಲು ದಟ್ಟೈಸತೊಡಗಿತು.
ತಟಪಟ ತಟಪಟ ಹನಿಗಳು ನೆಲ ತಲುಪುತ್ತಲೂ ಅಪ್ಪ
‘ಉಸ್ಸ್ ನಮ್ಮಪ್ಪ ..ಒಂದೂವರಿಂಚಾದರೂ ಮಳೆ ಬಂದ್ರೆ ಸಾಕಾಗಿತೆ ಶಿವನೇ’ ಅನ್ನುತ್ತಾ ‘ಅವ್ವ ಪಾರ್ವತಮ್ಮ ..ನೆಲದಣಿಯೇ ಸುರಿಯಲವ್ವ ನಿನ್ನ ಸವತಿ’ ಎನ್ನುತ್ತಾ ಪ್ರಾರ್ಥನೆಯ ಜೊತೆಗೆ ಸಣ್ಣಗೆ ದೇವರಿಗೆ ಚುಚ್ಚಿದಂಗೆ ಮಾಡಿ ಖುಷಿಯಲ್ಲಿ ಎದ್ದರು. ಮೇಘಸ್ಪೋಟದಂತಹ ಮಳೆ ಹನೀ ಅದು. ಅಪ್ಪನ ಸಂಭ್ರಮ ನೋಡಬೇಕಿತ್ತು ನೀವು.
ಮಣ್ಣು ನೆಚ್ಚಿದವರಿಗೆ ಮಳೆ ಕೊಡುವ ಸಂಭ್ರಮ ಬಂಗಾರ ಕೊಟ್ಟರೂ ಸಿಗುವುದಿಲ್ಲ. ತಾಸುಮೂರು ತಾಸಾದರೂ ಮಳೆ ನಿಲ್ಲಲಿಲ್ಲ. ಅಂದು ಸುಗ್ಗಿಯಮ್ಮನನ್ನು ಗಂಗಾಸ್ನಾನಕ್ಕೆ ಕರೆದೊಯ್ಯುವುದೂ ಮಳೆಯ ಕಾರಣ ತಡವಾಗ್ತದೆ ಅಂತ ತೋಟದಿಂದ ಕರೆ ಬಂತು. ನಡುರಾತ್ರಿ ಹೊತ್ತಿಗೆ ಮಳೆ ತುಸುವೇ ನಿಂತು ಆಗ ದೇವಿಗೆ ಹೂವಿನಲಂಕಾರ ಆಗಿ ಮಂಗಳಾರತಿ ಆಯ್ತು.
ಅಪ್ಪನಿಗೆ ಸುಗ್ಗಿಯಲ್ಲಿ ಜೊತೆಯವರೊಂದಿಗೆ ಮಾತೇಮಾತು. ಬರೀ ಮಳೆಯ ಕುರಿತೇ.
‘ಇನ್ ಹದಿನೈದು ದಿನ ಮಳೆ ಬರದಿದ್ರೂ ಚಿಂತಿಲ್ಲ ನೋಡಿ.. ಮೆಣಸು ಬಳ್ಳಿಗೇ ಭೇಷಾಯ್ತು ಈ ಮಳೆಯಿಂದ. ಇನ್ನೇನು ಹತ್ತುದಿನದೊಳಗೆ ಹೂಗರೆ ಹೊರಟು ಚಿಗುರು ಶುರುವಾಗ್ತದೆ. ಇಂಥಾ ಬಿಸಿಲುಕಾಲದ ಮಳೆಗೇ ಬಳ್ಳಿಯಲ್ಲಿ ಚಿಗುರು ಹೊರಟು ದೊಡ್ಡಮಳೆ ಹಿಡಿಯುವ ಹೊತ್ತಿಗೆ ಎಲೆ ಮಂದವಾಗಬಿಡಬೇಕು’
ಅಂತೆಲ್ಲ ಮಾತು ನಡೀತಿತ್ತು ಹನೀ. ಅಪ್ಪನ ಸಂಭ್ರಮ ಮನಸ್ಸಿಗೆ ಖುಷಿ ಕೊಡ್ತಿತ್ತು. ಅದೂ ಅಲ್ಲದೇ ಸುಗ್ಗಿಯಲ್ಲಿ ಅಪ್ಪ ಅಮ್ಮನಿಗೆ ವಿಶೇಷ ಗೌರವ. ಮೊದಲ ಮಂಗಳಾರತಿ ಮೊದಲ ಅರ್ಚನೆ ಎಲ್ಲವೂ ಅವರಿಂದಲೇ. ಅವರ ಮಗಳಾಗಿ ಹುಟ್ಟಿದ ನನಗೂ ಈ ಎಲ್ಲ ಗೌರವದಲ್ಲೂ ಪಾಲು!
ಕೈಯಲ್ಲಿದ್ದ ಫೋನ್ ತೆಗೆದು ನೋಡಿದೆ. ಎಷ್ಟೋ ದಿನದ ನಂತರ ನಿಮ್ಮಿಂದ ತುಳುಕುವ ಒಂದು ಸಂದೇಶ ಬಂದಿದೆ!
‘ನೆನಪುಗಳು ಕಾಡುತ್ತಿವೆ ಚಿನ್ನಾ!’
ನನ್ನ ಜೀವದ ಬೆಳಕಿನಂತವನು ನೀನು. ನಿನ್ನ ತುಂಬಿಕೊಂಡ ಎದೆಯಿಂದ ಈ ಒಂದು ಮಾತಿಗಾಗಿ ಕಾಯುತ್ತಿದ್ದೆ ಹನೀ. ಈ ಜನ್ಮಕ್ಕೆ ಇಷ್ಟು ಸಾಕು. ನಿಜ..ಈ ಜನ್ಮಕ್ಕಿಷ್ಟು ಸಾಕು. ಎದೆಯೊಳಗಿನ ಅಷ್ಟೂ ನೆತ್ತರು ತೆಳೂವಾಗಿ ಜೀವದ ಮೂಲೆಮೂಲೆಗೂ ನುಗ್ಗಿ ಮೈ ಬೆಚ್ಚಗಾಯಿತು. ಮತ್ತೊಮ್ಮೆ ಸುಗ್ಗಿಯಮ್ಮನಿಗೆ ಕೈಮುಗಿದವಳ ಮನಸ್ಸು ಹಗುರಾಗಿತ್ತು.
ಹಿಂತಿರುಗವಾಗಲೂ ಅಪ್ಪನ ಮಳೆ ಮಾತು ಮುಗಿಯಲಿಲ್ಲ ‘ಈ ಸರ್ತಿ ಮೆಣಸು ಬಳ್ಳಿಗೆ ಎಲೆ ಚುಕ್ಕಿ ರೋಗ ಬರಲ್ಲ ನೋಡು… ಇನ್ ಹದಿನೈದು ದಿನ ಮಳೆ ಬರದಿದ್ರೂ ಫರಕ್ಕಿಲ್ಲ ..’ ಮತ್ತೂ ಮುಂದುವರೆಯುತ್ತಿದೆ.
ಮಾರನೆಯ ಹಗಲು ಇದು.
ಸೂರ್ಯ ಇವತ್ತು ಇನ್ನಷ್ಟು ಹತ್ತಿರಕ್ಕೆ ಬಂದಿದ್ದಾನೆ ಹನೀ. ರಾತ್ರಿ ಕೊಟ್ಟಿದ್ದೆಲ್ಲವನ್ನೂ ವಾಪಸು ಪಡೆಯುವ ದುಷ್ಟ ಪ್ರೇಮಿಯಂತೆ ನಿನ್ನೆ ಸುರಿದ ಮಳೆಯೊಂದಿಗೆ ನೆಲದೊಳಗೆ ಮೊದಲೇ ಇದ್ದ ನೀರೆಲ್ಲವನ್ನೂ ಆವಿಗಟ್ಟಿಸುತ್ತಿದ್ದಾನೆ. ಗಿಡಮರಗಳೆಲ್ಲವೂ ಸುಖಕ್ಕೆ ಸೋತು ಹಗುರಾದ ಹೊತ್ತಿನಲ್ಲೇ ಬಿಸಿಲ ದಾಳಿ.
‘ಸಾಯಂಕಾಲ ಒಂದು ಹದ ಮಳೆ ಬಂದ್ರೆ…’
ಅಪ್ಪನ ಮಾತಿನ ವರಸೆ ಈಗ ಬದಲಾಗ್ತಿದೆ. ಹನೀ..ನಿನ್ನಿಂದ ಇನ್ನೊಂದು ಸಂದೇಶ ಬರಬಹುದೆಂದು. ‘ಈ ಸಂಜೆ ನಿನ್ನೊಂದಿಗೆ ಮಾತಾಡಬೇಕು ಚಿನ್ನಾ’ ಅಂತೇನೋ ಹೇಳಬಹುದೆಂದು ಮತ್ತೆಮತ್ತೆ ನಾನು ಫೋನು ತೆರೆದು ನೋಡುತ್ತಿದ್ದೇನೆ.
ವಿಧಿ ಸಣ್ಣಗೆ ನಗುತ್ತಿದೆ.
ಪ್ರತಿಕ್ರಿಯೆಗಾಗಿ : tv9kannadadigital@gmail.com
(ಮುಂದಿನ ಋತು : 24.5.2022)
ಈ ಅಂಕಣದ ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/rutuvilaasini