ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ

ಆಗಾಗ ಅರುಂಧತಿ: ಕಟಕರೊಟ್ಟಿ ಬೆಳ್ಳುಳ್ಳಿ ಖಾರ ಮತ್ತು ಬ್ಲ್ಯಾಕ್​ ಟೀ ಹಂಬಲ

Dark Truth : ಯಾರಾದರೂ ಹೊಗಳಿದರೆ ಸ್ವಲ್ಪ ಸಹಿಸಿಕೊಳ್ಳಬಹುದು. ಆದರೆ ಈ ವೈರಿರೂಪದವರು! ಹೇಗೆ ನಿದ್ರೆ ಬಂದೀತು? ಇದು ಮತ್ತೊಂದು ಚಕ್ರವ್ಯೂಹ ರಚನೆಗೆ ಪೀಠಿಕೆ ಅನ್ನಿಸಿತು.  

ಶ್ರೀದೇವಿ ಕಳಸದ | Shridevi Kalasad

|

May 07, 2022 | 3:47 PM

ಆಗಾಗ ಅರುಂಧತಿ : ಬೆಳಗಿನ ಕೋಚಿಂಗ್ ಮುಗಿಸಿಕೊಂಡು ಯೂನಿವರ್ಸಿಟಿಗೆ ನಡೆದು ಕ್ಲಾಸ್ ಇಲ್ಲವೆಂದು ತಿಳಿದಾಗ ಲೈಬ್ರರಿಗೆ ದೌಡಾಯಿಸುತ್ತಿದ್ದೆ. ಲೈಬ್ರರಿಯಲ್ಲಿ ಇನ್ನೇನು ಊಟದ ಸಮಯವಾಯಿತು ಎನ್ನುತ್ತಿದ್ದಂತೆ  ಹಾಸ್ಟೆಲ್ಲಿಗೆ ಹೋಗಲು ತಾಕಲಾಟ. ಮಧ್ಯಾಹ್ನದ ಉರಿಬಿಸಿಲು, ಮನಸ್ಸಿಲ್ಲದಿದ್ದರೂ ತೆರಳುತ್ತಿದ್ದೆ. ಏಕೆಂದರೆ ನಾಲ್ಕೂವರೆಗೆ ಮತ್ತೆ ಕೋಚಿಂಗ್ ಇರುತ್ತಿತ್ತು. ಮನಸ್ಸಿನಲ್ಲಿ ಹಾಸ್ಟೆಲ್ಲಿನ ಹುಡುಗಿಯರನ್ನು ಕ್ಲಾಸಿನ ಪುಂಡರನ್ನು ಶಪಿಸಿಕೊಳ್ಳುತ್ತಲೇ ಹೆಜ್ಜೆಹಾಕುತ್ತಿದ್ದೆ. ಹಾಗೆಯೇ ಸಮಾಧಾನವನ್ನೂ ಹೇಳಿಕೊಳ್ಳುತ್ತಿದ್ದೆ. ಆದರೆ, ಈ ಹಾಸ್ಟೆಲ್ ಸೇರುವ ಮೊದಲು ಒಮ್ಮೆ ಬಂದು ನೋಡಿಕೊಂಡು ಹೋಗಿದ್ದೆ. ಒಂದು ರೂಮಿನಲ್ಲಿ ಇಬ್ಬರು ಇಲ್ಲ ಒಬ್ಬರೇ ಇರಬಹುದು, ಅದೆಷ್ಟು ಶಾಂತ, ಗಂಭೀರ ವಾತಾವರಣ. ಸಾಕಷ್ಟು ಏಕಾಂತ ದಕ್ಕಬಹುದು ಎಂದು ನೆನೆಯುತ್ತಲೇ ಪುಳಕಗೊಂಡಿದ್ದೆ. ಆದರೆ ಅಲ್ಲಿ ಹೋಗಿ ವಾಸಿಸಲು ಪ್ರಾರಂಭಿಸಿದಾಗ ಒಂದೇ ರೂಮಿನಲ್ಲಿ ಮೂವರು ಅಥವಾ ನಾಲ್ವರು! ಅದೆಷ್ಟು ಕ್ರಿಕೆಟ್ ನೋಡುವುದು, ಜೋರಾಗಿ ಹಾಡು ಕೇಳುವುದು, ಹಾಳುಹರಟೆ… ಇದಕ್ಕೆ ರೂಮೇ ಆಗಬೇಕಿಲ್ಲ ಊಟದ ಸ್ಥಳವೇ ಆಗಬೇಕಿಲ್ಲ. ಇವರೆಲ್ಲರ ಕಣ್ಣಲ್ಲಿ ನಾನೊಬ್ಬಳು ರೋಬೋಟ್! ಅರುಂಧತಿ (Arundhathi)

(ಸತ್ಯ 5)

ಅದೇನೋ ಬೆಳಗ್ಗೆ ನಾಲ್ಕು ಗಂಟೆಗೆ ಹತ್ತು ನಿಮಿಷ ಕಡಿಮೆ ಇರುವಾಗ ಎಚ್ಚರವಾಗುತ್ತಿತ್ತು. ಕೋಚಿಂಗ್, ಲೈಬ್ರರಿ ಅಂತೆಲ್ಲ ಮುಗಿಸಿಕೊಂಡು ಬರುವ ಹೊತ್ತಿಗೆ ಕತ್ತಲು. ಆ ನಿರ್ಜನ ರಸ್ತೆಯಲ್ಲಿ ದೇವರನ್ನು ನೆನೆಸಿಕೊಂಡು ಹಾಸ್ಟೆಲ್​ಗೆ ಬರುತ್ತಲೇ 8 ಗಂಟೆ ಆಗಿರುತ್ತಿತ್ತು. ಅಷ್ಟರಲ್ಲೇ ಪಾತ್ರೆಗಳು ಲೋಟಗಳ ಸದ್ದಿನೊಂದಿಗೆ ವಟವಟ ಹುಡುಗಿಯರು ಊಟಕ್ಕೆ ಹೋಗುತ್ತಿದ್ದರು. ಎದುರಾದರೆ ಅವರ ಮಾತು ಬೇರೆ! ‘ಈಗ ಬಂದ್ಯಾ? ಕೋಚಿಂಗ್ ಚೆನ್ನಾಗಿದೆಯಾ?’. ಇನ್ನೊಬ್ಬಳು, ‘ಈ ಸಾರಿ ನಿಂದು ಕೆ-ಸೆಟ್ ಕ್ಲಿಯರ್ ಆಗುತ್ತೆ ಹಾಗಾದ್ರೆ ?’. ಮತ್ತೊಬ್ಬಳು ‘ಏನು ತುಂಬಾ ಸ್ಟಡಿ ಮಾಡ್ತಿದೀರಾ ಅಂತೆ?’ ಮಗದೊಬ್ಬಳು ಕಣ್ಣನ್ನು ವಕ್ರ ಮಾಡಿಕೊಂಡು ‘ದಿನಾ ನೀನು ಇಷ್ಟು ಗಂಟೆಗೆ ಬರೋದಾ?’ ಹೌದು, ವಾರ್ಡನ್ ಮತ್ತು ವಿಸಿಯಿಂದ ಪರ್ಮಿಷನ್ ಲೆಟರ್ ತಗೆದುಕೊಂಡಿದ್ದೇನೆ ಎನ್ನುತ್ತಿದ್ದೆ. ಅವರ ಪ್ರಶ್ನೆಗಳಿಗೆ ಮಿತಿಯೇ ಇರುತ್ತಿರಲಿಲ್ಲ. ಎಲ್ಲರಿಗೂ ಹು ಹಾ ಸರಿ ಅಷ್ಟೇ ಹೇಳಿ ಮೆಟ್ಟಿಲುಗಳನ್ನೇರುತ್ತಲೇ ಏನೇನೋ ಆಲೋಚನೆಗಳು. ಇಂಥವರೊಂದಿಗೆ ಮಾತನಾಡುವುದಕ್ಕಿಂತ ಒಂದು Black Tea ಇದ್ದರೆ ಅದೆಷ್ಟು ಆನಂದ ಕೊಡುತ್ತಿತ್ತು ಎನ್ನಿಸುತ್ತಿತ್ತು.

ಆದರೆ ಇಲ್ಲಿ ಚಹಾ ಸಿಗೋದಿಲ್ಲ. ಬರುವಾಗಲೂ ತುಂಬಾ ಕತ್ತಲಾಗಿರುತ್ತದೆಯಾದ್ದರಿಂದ ಇನ್ನು ಚಹಾ ಎಂದು ಸಮಯ ಕೊಡಲಾಗದು. ಇನ್ನು ಕತ್ತಲೆಯಲ್ಲಿ ಒಬ್ಬಳೇ ಹಾಸ್ಟೆಲ್ ಗೆ ತಲುಪುದೇ ಪವಾಡ. ಹೀಗೆ ಯೋಚಿಸುತ್ತಲೇ ಎರಡನೇ ಫ್ಲೋರಿನ ಆರನೇ ವಿಂಗ್​ನ ನನ್ನ ರೂಮಿನ ಬಾಗಿಲನ್ನು ತೆಗೆಯುತ್ತಲೇ ಒಳಗೆ ಹೋಗಿ ಗಟಗಟನೆ ನೀರು ಕುಡಿಯುತ್ತಿದ್ದೆ. ಊಟಕ್ಕೆ ಹೋದರೆ ಅಲ್ಲಿ ಕ್ಲಾಸಿನ ಹುಡುಗರ ಆಪ್ತಗೆಳತಿಯರು ನನ್ನನ್ನು ವ್ಯಂಗ್ಯದಿಂದ ಕಾಣುತ್ತಾರೆ ಎನ್ನುವುದು ಗೊತ್ತಿತ್ತು; ‘ಏನ್ ಈ ಸಾರಿ ಟಾಪರ್ ಆಗ್ಬೇಕಾ? ಈ ಸಾರಿ ನೆಟ್ ಸೆಟ್ ಕ್ಲಿಯರ್ ಹಾಗಾದ್ರೆ? ಇಷ್ಟು ಡಯಟ್ ಮಾಡ್ತಿಯಾ? ಸಾಯಂಕಾಲ ಬರ್ಬೇಕಾದ್ರೆ ಹೆದ್ರಿಕೆ ಆಗೊಲ್ವಾ ಅಲ್ಲಿ ತುಂಬ ತಿರುವಿದೆ. ಕೋಚಿಂಗ್ ಯಾಕೆ, ಇಲ್ಲೇ ಓದ್​ಬಹುದಲ್ವಾ? ಇನ್ನೂ ಏನೇನೋ ಪ್ರಶ್ನೆಗಳು! ನನಗೆ ವಾದಿಸುವುದೆಂದರೆ ಆಗದು. ಹೌದು ನೀವು ಹೇಳಿದ್ದೇ ಸರಿ ಎಂದು ಹೇಳುವುದರಲ್ಲೇ ನನಗೆ ಆನಂದ. ಇಂಥ ಪ್ರಶ್ನೆಗಳನ್ನು ಸಹಿಸಬಹುದು. ಇದನ್ನು ಮೀರಿದ ಕಾಟ!

ಹಾಗಾಗಿ ಈ ಊಟದ ತಾಪತ್ರಯವೇ ಬೇಡವೆಂದು ನಾನೊಂದು ಉಪಾಯ ಮಾಡಿದೆ. ಬೇಕರಿಯಲ್ಲಿ ಕಟಕು ರೊಟ್ಟಿಗಳನ್ನು ತರೋದು. ಜೊತೆಗೆ ಬೆಳ್ಳುಳ್ಳಿಗಳನ್ನೂ. ಬೆಳ್ಳುಳ್ಳಿ ಖಾರದಚಟ್ನಿಯನ್ನು ಮನೆಯಲ್ಲಿ ಮಾಡಿಸಿಕೊಂಡು ಹೋಗುವುದು. ದಿನಕ್ಕೆ ರಾತ್ರಿ ಕಟಕು ರೊಟ್ಟಿಗಳನ್ನು ಎರಡರಂತೆ ಅದರಲ್ಲಿ ಕೆಂಪು ಬೆಳ್ಳುಳ್ಳಿ ಚಟ್ನಿ ಹಾಕಿಕೊಂಡು ಬೆಳ್ಳುಳ್ಳಿಗಳ ಜತೆ ತಿನ್ನುತ್ತಿದ್ದೆ. ನನ್ನ ರೂಮ್​ಮೇಟ್ ಒಳ್ಳೆಯವರಿದ್ದರು. ಅಯ್ಯೋ ಕೋಚಿಂಗ್ ಬೇರೆ ಹೋಗುತ್ತಿಯಾ? ಇಂತಹ ಕಟಕ್ ರೊಟ್ಟಿ ತಿಂದರೆ ಹೊಟ್ಟೆ ಕೆಡುತ್ತದೆ ಬಾ ಊಟ ಮಾಡು ಎಂದು ಕರೆಯುತ್ತಿದ್ದರು. ನಾನು ಅವರಿಗೆ ನನಗೆ ಇದೇ ಇಷ್ಟ ಎಂದು ಹೇಳಿ ಊಟಕ್ಕೆ ಹೋಗಿ ಎನ್ನುತ್ತಿದ್ದೆ. ಅವರು ಹೋಗುತ್ತಿದ್ದರು. ಆಮೇಲೆ ನನಗೆ ಅನ್ನಿಸುತ್ತಿತ್ತು, ಕಾಡಿಸುವ ಜನರ ಮಧ್ಯೆ ಮೃಷ್ಟಾನ್ನ ಭೋಜನ ಮಾಡುವುದಕ್ಕಿಂತ ಇಲ್ಲಿ ಕಟಕರೊಟ್ಟಿಯೇ ವಾಸಿ ಎನ್ನುವುದು.

ಇದನ್ನೂ ಓದಿ : ಆಗಾಗ ಅರುಂಧತಿ: ಮಗುವನ್ನು ಚಿವುಟುವವನು ಅವನೇ, ತೊಟ್ಟಿಲನ್ನು ತೂಗುವವನೂ ಅವನೇ

ಏಕೆಂದರೆ ಜಗತ್ತಿನಲ್ಲಿ ಇದ್ದಬದ್ದ ಋಣಾತ್ಮಕ ಅಂಶಗಳೆಲ್ಲವೂ ಅವರ ಮಾತಿನಲ್ಲಿಯೇ ಇವೆಯೇನೋ ಅನ್ನಿಸುತ್ತಿತ್ತು. ಸ್ವಲ್ಪವೂ Positive Vibes ಇವರ ಬಳಿ ಇಲ್ಲವೇ? ಮನಸಲ್ಲಿ ಏನಿದೆಯೋ ಅದು ಮಾತು, ಮುಖದಲ್ಲಿ ವ್ಯಕ್ತಿವಾಗುತ್ತಿದೆ ಎನ್ನಿಸಿತು. ಪರೀಕ್ಷೆಗಳು, ಇಂಟರ್ನಲ್ಸ್ ಹತ್ತಿರವಿದ್ದಾಗ ಅವರುಗಳು, ‘ಎಷ್ಟು ಬರೆದರೂ ಈ ಯೂನಿವರ್ಸಿಟಿಯಲ್ಲಿ ಮಾರ್ಕ್ಸ್​ ಕೊಡುವುದಿಲ್ಲ. ಏಕೆ ಅಷ್ಟು ಓದಬೇಕು? ನಾವಂತೂ ಕಾಂಪಿಟೇಟಿವ್ ಎಕ್ಸಾಮ್ಸ್ ಓದುತ್ತೇವೆ. ಎಫ್​ಡಿಎ, ಎಸ್​ಡಿಎ ಅಂಥದ್ದೇನಾದರೂ ಪಾಸ್ ಮಾಡಿಕೊಂಡರಾಯಿತು. ಈ ಕೆ-ಸೆಟ್​ ಅದು ಇದು ಮತ್ತುಳಿದ್ದೆಲ್ಲ ಓದುವುದರಿಂದ ಏನು ಪ್ರಯೋಜನ?’ ಎಂದರು. ಅವರವರ ಆಯ್ಕೆ ಎಂದು ಸುಮ್ಮನಾದೆ. ಹೀಗೆ ಒಮ್ಮೆ ಅವರೊಂದಿಗೆ ಮೆಸ್ಸಿಗೆ ಚಹಾ ತರಲೆಂದು ಹೋದಾಗ ಔಪಚಾರಿಕವಾಗಿ, ‘ಎಫ್ ಡಿಎ/ಎಸ್ ಡಿಎ ಪರೀಕ್ಷೆಗೆ ಓದುತ್ತಿದ್ದೀರಾ’ ಅಂದೆ. ಅದಕ್ಕವರು, ‘ಅಯ್ಯೋ ಈ ಊರಿನಲ್ಲಿಯೇ ಒಂದು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿದ್ದಾರೆ ಪರೀಕ್ಷೆ ಬರೆಯಲು. ಇನ್ನು ನಾವು ಯಾವಾಗ ಪಾಸ್ ಆಗಬೇಕು?’ ಎಂದು ಜೋರಾಗಿ ಗೊಳ್ಳನೆ ನಕ್ಕುಬಿಟ್ಟರು. ಇಂಥ ಅನೇಕ ಸಂದರ್ಭಗಳಲ್ಲಿ ನನಗೆ  ಮೌನವೇ ಪರಮಾಪ್ತ.

ಎಂದಿನಂತೆ ರಾತ್ರಿಯ ಊಟಕ್ಕೆ ಹೋಗಲು ಮನಸ್ಸಾಗುತ್ತಿರಲಿಲ್ಲ. ಆ ಮಾತು, ವಾತಾವರಣ ನನ್ನನ್ನು ಪ್ರಭಾವಿಸಿಬಿಟ್ಟರೆ ಎಂಬ ಆತಂಕ. ಮತ್ತೆ ಕಟಕು ರೊಟ್ಟಿ ಬೆಳ್ಳುಳ್ಳಿ ಖಾರ ತಿಂದು ಓದಲು ಕೂಡುತ್ತಿದ್ದೆ. ಕೋಚಿಂಗ್​ನಲ್ಲಿ ನಾಳೆ ಏನು ಹೇಳುತ್ತಾರೋ ಎನ್ನುವುದನ್ನು ಮೊದಲೇ ಓದಿಕೊಳ್ಳುತ್ತಿದ್ದೆ. ಅದೊಂದು ಗಣರಾಜ್ಯೋತ್ಸವದ ದಿನ ನಾನು ಓದಿದ ಡಿಗ್ರಿ ಕಾಲೇಜಿನವರು ನನ್ನನ್ನು ಆಹ್ವಾನಿಸಿದ್ದರು, ಪದವಿಯಲ್ಲಿ ಅತಿಹೆಚ್ಚು ಅಂಕ ಗಳಿಸಿದ್ದೆನೆ ಎಂಬ ಕಾರಣಕ್ಕೆ ಸನ್ಮಾನವನ್ನು ಮಾಡಿದರು. ಈ ನೆನಪಿಗಾಗಿ ನನ್ನ ಹೆಸರನ್ನು ಆವರಣದಲ್ಲಿರುವ ಮರಕ್ಕೆ ಇಟ್ಟರು. ನನಗಿದೆಲ್ಲ ದೊಡ್ಡ ಮುಜುಗರ ತಂದಿತು. ಆದರೆ, ಇದರ ಹೊರತಾಗಿ ಏನಾದರೂ ತೊಡಗಿಕೊಳ್ಳಬೇಕು, ಸಾಧನೆ ಮಾಡಬೇಕು ಎನ್ನಿಸಿದ್ದು ನಿಜ. ನೋಡಿದರೆ, ಆ ಮೇಧಾವಿ ಪ್ರೊಫೆಸರ್​ನ ಪುಂಡಶಿಷ್ಯನೊಬ್ಬ ಅಲ್ಲಿಗೆ ಬಂದಿದ್ದ! ಇತ್ತ ವಿದ್ಯಾರ್ಥಿನಿಯರಿಗೆ ಉತ್ಸಾಹ ತುಂಬುವ ಕೆಲ ಮಾತುಗಳನ್ನಾಡಿ ಎಂದು ಪ್ರಿನ್ಸಿಪಾಲ್ ತರಗತಿಗೆ ನನ್ನನ್ನು ಕಳಿಸಿದರು. ಅಲ್ಲಿಯೂ ಬಂದ ಆ ಶಿಷ್ಯ, ‘ಸರ್ ನಿಮ್ಮ ಬಗೆಗೆ ತುಂಬಾ ಹೇಳುತ್ತಿದ್ದರು’ ಎಂದ. ನನಗೆ ಆಶ್ಚರ್ಯವಾಯಿತು. ನನ್ನನ್ನು ಹಾಸ್ಟೆಲ್ಲಿನಲ್ಲಿ ಕ್ಲಾಸಿನಲ್ಲಿ ಯೂನಿವರ್ಸಿಟಿಯಲ್ಲಿ ಎಲ್ಲೆಲ್ಲಿಯೂ ನನ್ನ ವಿರುದ್ಧ ಜನರನ್ನು ಎತ್ತಿಕಟ್ಟಿ ಬೆಂಕಿಯಲ್ಲಿ ನಡೆಸುತ್ತಿದ್ದ ಆ ಗುರುವಿನ ಶಿಷ್ಯ, ಈತ ಈಗ ಮಾತನಾಡಿಸಲು ಬಂದಿದ್ದಾನೆ.

ಅರೆ ಏನು ಹೇಳಿರಬಹುದು ಎಂದು ಚಕಿತಳಾದೆ. ‘ನೀವು ಕವನಗಳನ್ನು ಬರೀತೀರಂತೆ, ಅದು ಇನ್​ಸ್ಟಂಟ್ ಆಗಿ  ನಿಮಿಷದಲ್ಲೇ ಬರೆದು ಮುಗಿಸಿ ಬಿಡ್ತೀರಂತೆ’ ಅಂದ. ಅವನೇ ಮಾತು ಮುಂದುವರಿಸಿ ನಮ್ಮ ಪ್ರೊಫೆಸರ್ ಈಗ ಲಂಡನ್​ ಗೆ ಹೋಗಿದ್ದಾರೆ ಎಂದೂ ಹೇಳಿದ. ನನ್ನ ಗಮನ ಅವ ನನ್ನ ಕವನದ ಬಗ್ಗೆ ಮಾಡಿದ ಕಮೆಂಟ್​ ಕಡೆ ಹೋಯಿತು. ಕವನ ಬರೆಯಲು ಪ್ರಯತ್ನಿಸುತ್ತೇನೆ. ಆದರೆ Instant! ಈ ಬಗ್ಗೆ ನನಗೆ ಅರಿವಿರಲಿಲ್ಲ. ಯಾರಾದರೂ ಹೊಗಳಿದರೆ ಸ್ವಲ್ಪ ಸಹಿಸಿಕೊಳ್ಳಬಹುದು. ಆದರೆ ಈ ವೈರಿರೂಪದವರು! ಹೇಗೆ ನಿದ್ರೆ ಬಂದೀತು? ಇದು ಮತ್ತೊಂದು ಚಕ್ರವ್ಯೂಹ ರಚನೆಗೆ ಪೀಠಿಕೆ ಅನ್ನಿಸಿತು.

ಹಾಗಾದರೆ, ಬಲಾಢ್ಯ ಚಕ್ರವ್ಯೂಹ ರಚಿಸಲು ಸಮರ್ಥನಾದನೆ? ಮುಂದಿನ ಕಂತಿನಲ್ಲಿ ನಿರೀಕ್ಷಿಸಿ.

(ಮುಂದುವರಿಕೆ ಅರುಂಧತಿ ಬರೆದಾಗ)

ಪ್ರತಿಕ್ರಿಯೆಗಾಗಿ : tv9kannadadigital@gmail.com

ಈ ಅಂಕಣದ ಎಲ್ಲಾ ಭಾಗಗಳನ್ನೂ ಇಲ್ಲಿ ಓದಿ : https://tv9kannada.com/tag/aagaaga-arundhathi

Follow us on

Most Read Stories

Click on your DTH Provider to Add TV9 Kannada