AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ

ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ

ರವಿ ಹೆಚ್ ಮೂಕಿ, ಕಲಘಟಗಿ
| Updated By: ವಿವೇಕ ಬಿರಾದಾರ

Updated on: May 21, 2025 | 10:06 PM

ಬಾಗಲಕೋಟೆ ರೈಲು ನಿಲ್ದಾಣವು ಅಮೃತ ಭಾರತ್ ಯೋಜನೆಯಡಿ 16.06 ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣಗೊಂಡಿದೆ. ನವೀಕರಿಸಿದ ನಿಲ್ದಾಣವು ಆಧುನಿಕ ಸೌಕರ್ಯಗಳಾದ ಲಿಫ್ಟ್, ಎಸ್ಕಲೇಟರ್, ವಿಶಾಲವಾದ ಕಾಯುವ ಕೊಠಡಿಗಳು, ಮತ್ತು ಸುಸಜ್ಜಿತ ಶೌಚಾಲಯಗಳನ್ನು ಹೊಂದಿದೆ. ಸ್ಥಳೀಯ ಕಲೆ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿತ್ರಕಲೆಗಳು ಮತ್ತು ಸೌರಶಕ್ತಿ ಘಟಕಗಳನ್ನು ಸಹ ಅಳವಡಿಸಲಾಗಿದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈ ನವೀಕರಿಸಿದ ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.

ಬಾಗಲಕೋಟೆ, ಮೇ 21: ಅಮೃತ ಭಾರತ್ ರೈಲು ನಿಲ್ದಾಣ ಯೋಜನೆ ಅಡಿಯಲ್ಲಿ ಕರ್ನಾಟಕದ ಐದು ರೈಲು ನಿಲ್ದಾಣಗಳನ್ನು ನವೀಕರಿಸಲಾಗಿದೆ. ಈ ಐದು ರೈಲು ನಿಲ್ದಾಣಗಳಲ್ಲಿ ಬಾಗಲಕೋಟೆ ರೈಲ್ವೆ ಸ್ಟೇಷನ್​ ಕೂಡ ಸೇರಿದೆ. ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ (ಮೇ.21) ವರ್ಚುವಲ್ ಮೂಲಕ ಬಾಗಲಕೋಟೆ ಸೇರಿದಂತೆ ರಾಜ್ಯದ ಐದು ನವೀಕೃತ ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿದ್ದಾರೆ. ಲೋಕಾರ್ಪಣೆಗೆ ಬಾಗಲಕೋಟೆ ರೈಲ್ವೆ ನಿಲ್ದಾಣ ಸಜ್ಜಾಗಿದೆ. ಬಾಗಲಕೋಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಭಾಗಿಯಾಗಲಿದ್ದಾರೆ.

ಬಾಗಲಕೋಟೆ ರೈಲು ನಿಲ್ದಾಣದ ವಿಶೇಷತೆಗಳು

ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಲಿಫ್ಟ್ ಮತ್ತು ಎಸ್ಕಲೇಟರ್ ಸೌಲಭ್ಯಗಳನ್ನು ಒದಗಿಸಲಾಗಿದೆ. ಟಿಕೆಟ್ ಕಾಯ್ದಿರಿಸುವಿಕೆ ಹಾಗೂ ಸಾಮಾನ್ಯ ಟಿಕೆಟ್ ಕೊಳ್ಳುವಿಕೆಗಾಗಿ ಕನಿಷ್ಠ ಮೂರು ಮತ್ತು ಗರಿಷ್ಠ ಐದು ಕೌಂಟರ್​ಗಳನ್ನು ತೆರೆಯಲಾಗಿದೆ. ಸ್ಥಳೀಯ ಉತ್ಪನ್ನಗಳ ಮಾರಾಟಕ್ಕೆ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದೆ.

ಮಹಿಳೆಯರು, ಪುರುಷರಿಗೆ ಹಾಗೂ ವಿಶೇಷ ಚೇತನರಿಗೆ ಪ್ರತ್ಯೇಕ ಸುಸಜ್ಜಿತ ಶೌಚಾಲಯಗಳ ವ್ಯವಸ್ಥೆ ಇದೆ. ವಿಶಾಲವಾದ ಕಾಯುವ ಕೊಠಡಿಗಳು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಸ್ಥಳೀಯ ಸಂಸ್ಕೃತಿ, ವಾಸ್ತುಶಿಲ್ಪವನ್ನು ರೈಲು ನಿಲ್ದಾಣದ ಗೋಡೆಗಳ ಮೇಲೆ ಚಿತ್ರಿಸಲಾಗಿದೆ. ಸೋಲಾರ್ ವಿದ್ಯುತ್ ಘಟಕ, ಜೊತೆಗೆ, ಮಳೆ ನೀರು ಕೊಯ್ಲು ಮತ್ತು ತ್ಯಾಜ್ಯ ನಿರ್ವಹಣಾ ಘಟಕ ಇದೆ. ಬಾಗಲಕೋಟೆ ರೈಲು ನಿಲ್ದಾಣ ಒಟ್ಟು 16.06 ಕೋಟಿ ರೂ. ವೆಚ್ಚದಲ್ಲಿ ನವೀಕರಣಗೊಂಡಿದೆ.