Basavaraj Bommai Oath Taking: ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಪ್ರಮಾಣ ವಚನ, ದೇವಸ್ಥಾನ ದರ್ಶನ ಬಳಿಕ ಬಿಎಸ್ವೈ ಭೇಟಿ
CM of Karnataka Swearing in Ceremony: ಯಡಿಯೂರಪ್ಪ ಹೋದ್ರು ಬಸವರಾಜ ಬೊಮ್ಮಾಯಿ ಬಂದ್ರು, ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಂದಿನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆ ಆದ್ರು. ಎಲ್ಲಾ ಲೆಕ್ಕಾಚಾರ, ಎಲ್ಲಾ ಊಹೆಗಳನ್ನೂ ತಲೆಕೆಳಗೆ ಮಾಡಿದ, ಆಕಾಂಕ್ಷಿಗಳ ಲಾಬಿಗಳನ್ನೂ ಠುಸ್ ಮಾಡಿದ ಹೈಕಮಾಂಡ್ ಬೊಮ್ಮಾಯಿಗೆ ಸಿಎಂ ಪಟ್ಟ ಕಟ್ಟಿದೆ. ಜುಲೈ 27ರಂದು ಸಿಎಂ ಆಗಿ ಆಯ್ಕೆಯಾದ ಬಸವರಾಜ ಬೊಮ್ಮಾಯಿ ಇಂದು (ಜುಲೈ 28ಕ್ಕೆ) ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಬೆಂಗಳೂರು: ಗೃಹ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಯವ್ರನ್ನೇ(CM Basavaraj Bommai) ಹೈಕಮಾಂಡ್ ಸಿಎಂ ಆಗಿ ಆಯ್ಕೆ ಮಾಡಿದೆ. ಅಚ್ಚರಿಯ ಆಯ್ಕೆ, ಜಾತಿ ಲೆಕ್ಕಾಚಾರ, ಆರೆಸ್ಸೆಸ್ ಕ್ಯಾಂಡಿಡೇಟ್ ಹೀಗೆ ಹತ್ತು ಹಲವು ಆಯಾಮಗಳಲ್ಲಿ ನಡೀತಿದ್ದ ಚರ್ಚೆಗೆ ಬೊಮ್ಮಾಯಿ ಆಯ್ಕೆ ಮಾಡೋ ಮೂಲಕ ವರಿಷ್ಠರು ಬ್ರೇಕ್ ಹಾಕಿದ್ದಾರೆ. ಕುತೂಹಲ, ಅಂತೆಕಂತೆಗಳ ಗುಸುಗುಸು ಹೆಚ್ಚುತ್ತಿದ್ದಂತೆ ಬಸವರಾಜ ಬೊಮ್ಮಾಯಿ ಸಿಎಂ ಆಗಿ ಆಯ್ಕೆಯಾಗಿರೋ ಬಗ್ಗೆ ಘೋಷಿಸಲಾಗಿದೆ. ಹೀಗೆ ಯಡಿಯೂರಪ್ಪ ರಾಜೀನಾಮೆಯಿಂದ ತೆರವಾದ ಸಿಎಂ ಪೋಸ್ಟ್ಗೆ ಬಸವರಾಜ ಬೊಮ್ಮಾಯಿ ಆಯ್ಕೆಯಾಗಿದ್ದು, ಜುಲೈ 28ರ ಬೆಳಗ್ಗೆ 11 ಗಂಟೆಗೆ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ(Oath Taking). ಹೀಗಾಗಿ ರಾಜಭವನದ ಬಳಿ ಹೆಚ್ಚುವರಿ ಪೊಲೀಸ್ ಆಯುಕ್ತರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಡಿಸಿಪಿ, ಎಸಿಪಿ ಸೇರಿ 500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಇನ್ನು ನೂತನ ಸಿಎಂ ಆಗಿ ಬಸವರಾಜ ಬೊಮ್ಮಾಯಿ ಆಯ್ಕೆ ಹಿನ್ನೆಲೆಯಲ್ಲಿ ಬಸವರಾಜ ಬೊಮ್ಮಾಯಿ ಮನೆ ಬಳಿ ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಬೊಮ್ಮಾಯಿ ಮನೆ ಬಳಿ ಕಾರ್ಯಕರ್ತರು ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಬ್ಯಾರಿಕೇಡ್ ಹಾಕಿ ಭದ್ರತೆ ಕಾಪಾಡಲಾಗಿದೆ. ಆರ್.ಟಿ.ನಗರದ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಬಂದ್ ಮಾಡಲಾಗಿದೆ. ನೂತನ ಸಿಎಂ ನಿವಾಸಕ್ಕೆ ಎನ್.ಮಹೇಶ್ ಸೇರಿದಂತೆ ಗಣ್ಯರು ಭೇಟಿ ನೀಡುತ್ತಿದ್ದಾರೆ.
ನಗರದಲ್ಲಿ ಉಂಟಾಗಲಿದೆ ಟ್ರಾಫಿಕ್ ಸಮಸ್ಯೆ 50 ಅಧಿಕಾರಿಗಳ ನೇತೃತ್ವದಲ್ಲಿ 500 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ. ರಾಜಭವನದ ಒಳಗೆ ಹಾಗೂ ಹೊರಗೆ ಅಗತ್ಯ ಭದ್ರತೆ ಕಲ್ಪಿಸಲಾಗಿದೆ. ಪಾಸ್ ಇದ್ದವರಿಗೆ ಮಾತ್ರ ರಾಜಭವನದ ಒಳಗೆ ಪ್ರವೇಶ. ರಾಜಭವನದ ಹೊರಗೆ ಪ್ರತಿಭಟನೆಗೆ ಅವಕಾಶ ಇಲ್ಲ. ಮುನ್ನೆಚ್ಚರಿಕೆಯಾಗಿ ಪ್ರತಿಭಟನೆ ಬಗ್ಗೆ ನಿಗಾ ವಹಿಸಿದ್ದೇವೆ. ಅಹಿತಕರ ಘಟನೆ ನಡೆದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಹೇಳಿಕೆ ನೀಡಿದ್ದಾರೆ. ಇಂದು ನೂತನ ಸಿಎಂ ಪ್ರಮಾಣ ವನಚ ಸ್ವೀಕಾರ ಹಿನ್ನೆಲೆ ಟ್ರಾಫಿಕ್ ಸಮಸ್ಯೆ ಕೂಡ ಉಂಟಾಗಬಹುದು.
ಮತ್ತೊಂದೆಡೆ ರಾಜಭವನದ ಬಳಿ ಬಿಜೆಪಿಗರು ಆಗಮಿಸಿದ್ದು ಬೊಮ್ಮಾಯಿಗೆ ಜೈಕಾರ ಹಾಕುತ್ತಿದ್ದಾರೆ. ಅಬ್ಕಿ ಬಾರ್ ಬೊಮ್ಮಾಯಿ ಸರ್ಕಾರ್ ಎಂದು ಘೋಷಣೆ ಕೂಗಿ ಸಂಭ್ರಮಿಸುತ್ತಿದ್ದಾರೆ.
ಪ್ರಮಾಣ ವಚನಕ್ಕೂ ಮುನ್ನ ಟೆಂಪಲ್ ರನ್ ಬೆಳಗ್ಗೆ 8ಕ್ಕೆ ಬೆಂಗಳೂರಿನ ಸಂಜಯನಗರದಲ್ಲಿರುವ ರಾಧಾಕೃಷ್ಣ ದೇವಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ತಮ್ಮ ಕುಟುಂಬಸ್ಥರ ಜತೆ ಭೇಟಿ ನೀಡಲಿದ್ದಾರೆ. ಬಳಿಕ ಬಾಲಬ್ರೂಯಿ ಅತಿಥಿಗೃಹದ ಬಳಿಯ ಆಂಜನೇಯ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದು B.S.ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಲಿದ್ದಾರೆ.
ಸಿಎಂ ಜೊತೆಗೆ ಡಿಸಿಎಂಗಳೂ ಪ್ರಮಾಣವಚನ ಸ್ವೀಕರಿಸ್ತಾರಾ? ಅಂದಹಾಗೆ ಈವರೆಗಿನ ನಿರ್ಧಾರದಂತೆ ಇಂದು ಸಿಎಂ ಆಗಿ ಬಸವರಾಜ ಬೊಮ್ಮಾಯಿ ಮಾತ್ರ ಪ್ರಮಾಣ ವಚನ ಸ್ವೀಕರಿಸ್ತಾರಂತೆ. ಆದ್ರೆ ಇಂದು ಬೆಳಗ್ಗೆ 11 ಗಂಟೆಯೊಳಗಾಗಿ ದೆಹಲಿಯಿಂದ ಸೂಚನೆ ಬಂದಲ್ಲಿ ಮಾತ್ರ ಡಿಸಿಎಂಗಳು ಅಥವಾ ಕೆಲವು ಸಚಿವರು ಪ್ರಮಾಣ ವಚನ ಸ್ವೀಕರಿಸೋ ಸಾಧ್ಯತೆ ಇದೆ ಎನ್ನಲಾಗಿದೆ. ದಲಿತ, ಒಕ್ಕಲಿಗ ಹಾಗೂ ವಾಲ್ಮೀಕಿ ಜಾತಿ ಕಾಂಬಿನೇಷನ್ನಲ್ಲಿ ಡಿಸಿಎಂಗಳ ಆಯ್ಕೆಯಾಗೋ ಸಾಧ್ಯತೆ ಬಗ್ಗೆಯೂ ಚರ್ಚೆಯಾಗ್ತಿದೆ. ಅಂದ್ರೆ ದಲಿತ ಕೋಟಾದಲ್ಲಿ ಗೋವಿಂದ ಕಾರಜೋಳ, ಒಕ್ಕಲಿಗ ಕೋಟಾದಲ್ಲಿ ಆರ್. ಅಶೋಕ್ ಹಾಗೂ ವಾಲ್ಮೀಕಿ ಕೋಟಾದಲ್ಲಿ ಶ್ರೀರಾಮುಲುಗೆ ಡಿಸಿಎಂ ಪಟ್ಟ ಸಿಗೋ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ರೆ ಇವತ್ತು ಬೆಳಗ್ಗೆ ಒಬ್ಬನೇ ಪ್ರಮಾಣ ವಚನ ಸ್ವೀಕರಿಸ್ತೇನೆ ಅಂತಾ ಖುದ್ದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ಒಟ್ನಲ್ಲಿ ಹಲವು ದಿನಗಳ ಬದಲಾವಣೆ ಬಡಿದಾಟದ ಬಳಿಕ ಬಿಜೆಪಿಯಲ್ಲಿ ಹೊಸ ಸೂರ್ಯೋದಯ ಆಗಿದೆ. ನಾಯಕತ್ವ ಬದಲಾವಣೆ ಬಡಿದಾಟಕ್ಕೆ ಬಸವರಾಜ ಬೊಮ್ಮಾಯಿ ಆಯ್ಕೆ ಮೂಲಕ ಬ್ರೇಕ್ ಹಾಕಿದೆ. ಇವತ್ತು ಬಸವರಾಜ ಬೊಮ್ಮಾಯಿ ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಇದನ್ನೂ ಓದಿ: Basavaraj Bommai Oath Taking LIVE: ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಪದಗ್ರಹಣ ಸಮಾರಂಭಕ್ಕೆ ಸಕಲ ಸಿದ್ಧತೆ
Published On - 8:15 am, Wed, 28 July 21