ಸಂತೋಷ್ ಆತ್ಮಹತ್ಯೆ, ಈಶ್ವರಪ್ಪ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 14, 2022 | 10:59 AM

ನಿನ್ನೆಯಷ್ಟೇ ಸಂತೋಷ್​​ ಪಾಟೀಲ್ ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ಪ್ರಾಥಮಿಕ ಮಾಹಿತಿ ಬಂದ ಮೇಲೆ ನಿರ್ಧಾರ ಮಾಡುತ್ತೇವೆ. ಪ್ರಾಥಮಿಕ ತನಿಖೆಯ ಬಳಿಕವಷ್ಟೇ ಮುಂದಿನ‌ ನಿರ್ಧಾರ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಸಂತೋಷ್ ಆತ್ಮಹತ್ಯೆ, ಈಶ್ವರಪ್ಪ ವಿಚಾರದಲ್ಲಿ ಹೈಕಮಾಂಡ್ ಮಧ್ಯಪ್ರವೇಶ ಇಲ್ಲ: ಸಿಎಂ ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ
Follow us on

ಬೆಂಗಳೂರು: ಸಚಿವ ಕೆ.ಸ್.ಈಶ್ವರಪ್ಪ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ್ದ ಸಂತೋಷ್ ಪಾಟೀಲ್ ಶಂಕಿತ ಸಾವಿನ ನಂತರ ರಾಜ್ಯ ರಾಜಕಾರಣದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಪಕ್ಷರು ಮುಖ್ಯಮಂತ್ರಿ ಮನೆಗೆ ಮುತ್ತಿಗೆ ಹಾಕುವುದಾಗಿ ಘೋಷಿಸಿದೆ. ಅತ್ತ ಬೆಳಗಾವಿ ಜಿಲ್ಲೆ ಬಡಸ ಗ್ರಾಮದಲ್ಲಿ ಗುರುವಾರ ಮೃತ ಸಂತೋಷ್ ಪಾರ್ಥಿವ ಶರೀರದ ಅಂತ್ಯಸಂಸ್ಕಾರ ನಡೆಯಿತು. ಈ ವೇಳೆ ಪರಿಹಾರ ಮತ್ತು ಮೃತರ ಪತ್ನಿಗೆ ಸರ್ಕಾರಿ ನೌಕರಿ ಕೊಡಬೇಕು ಎನ್ನುವ ಒತ್ತಾಯ ಕೇಳಿಬಂತು. ಸಚಿವ ಈಶ್ವರಪ್ಪ ರಾಜೀನಾಮೆಗೆ ಒತ್ತಾಯ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೇಳಿಕೆಯೊಂದು ಮಹತ್ವ ಪಡೆದಿದೆ. ‘ಪ್ರಕರಣದ ಸಂಪೂರ್ಣ ತನಿಖೆಯಾಗಿ ಸತ್ಯ ಹೊರಬರಲಿದೆ. ಪ್ರಕರಣದ ಬಗ್ಗೆ ಹೈಕಮಾಂಡ್ ಮಾಹಿತಿ ಪಡೆದಿದೆಯಾದರೂ ಇದರಲ್ಲಿ ಅವರ ಪಾತ್ರವಿಲ್ಲ. ಅವರು ಮಧ್ಯಪ್ರವೇಶಿಸುವುದಿಲ್ಲ. ತನಿಖೆ ಯಾವ ರೀತಿ ಆಗಬೇಕು ಎಂಬ ಬಗ್ಗೆ ಗಮನ ಹರಿಸುತ್ತೇನೆ’ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

‘ಮೃತ ಸಂತೋಷ್ ಪಾಟೀಲ್ ಮರಣೋತ್ತರ ಪರೀಕ್ಷೆಯು ನಿನ್ನೆಯಷ್ಟೇ (ಏಪ್ರಿಲ್ 13) ನಡೆದಿದೆ. ಈಶ್ವರಪ್ಪ ಅವರಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆದುಕೊಳ್ಳುವ ಕುರಿತು ಪ್ರಾಥಮಿಕ ತನಿಖೆಯ ಮಾಹಿತಿ ಬಂದ ನಂತರ ನಿರ್ಧಾರ ಮಾಡುತ್ತೇನೆ’ ಎಂದು ಹೇಳಿದರು. ಬೊಮ್ಮಾಯಿ ನಿರ್ಧಾರದಿಂದ ಸಚಿವ ಈಶ್ವರಪ್ಪಗೆ ತಾತ್ಕಾಲಿಕವಾಗಿ ರಿಲೀಫ್ ಸಿಕ್ಕಂತೆ ಆಗಿದೆ. ಕಾಂಗ್ರೆಸ್​ನವರ ಆಧಾರರಹಿತ ಆರೋಪಗಳಿಗೆ ಉತ್ತರ ನೀಡುವುದಿಲ್ಲ. ಗುತ್ತಿಗೆದಾರರ ಸಂಘದವರು ಮಾಡಿರುವ ಆರೋಪಗಳಿಗೆ ದಾಖಲೆ ನೀಡಲಿ. ಆಧಾರ ರಹಿತ ಆರೋಪಗಳಿಗೆ ಉತ್ತರ ಕೊಡಲು ಸಾಧ್ಯವಿಲ್ಲ. ಸಿದ್ದರಾಮಯ್ಯ ಕಾಲದಲ್ಲೂ ಕೂಡ ಹಗರಣ, ಲಂಚದ ಆರೋಪಗಳು ಕೇಳಿ ಬಂದಿದ್ದವು. ಬಿಡಿಎಗೆ ಸಂಬಂಧಿಸಿದ ಹಗರಣ ನಡೆದಿತ್ತು ಎಂದು ಅರ್ಕಾವತಿ ಡಿನೋಟಿಫಿಕೇಷನ್ ಪ್ರಕರಣವನ್ನು ಬೊಮ್ಮಾಯಿ ನೆನಪಿಸಿದರು. ಕಾಂಗ್ರೆಸ್​ನವರು ತಮ್ಮ ಕಾಲದಲ್ಲಿ ಅರಾಜಕತೆ ಹೆಚ್ಚಾಗಿತ್ತು. ಹೀಗಾಗಿಯೇ ಜನರು ಅವರನ್ನು ತಿರಸ್ಕರಿಸಿದರು ಎಂದರು.

ಕೆಂಪಣ್ಣ ಆಗಲಿ, ಬೇರೆ ಯಾರೇ ಆಗಲಿ ದಾಖಲೆ ಕೊಟ್ಟು ಮಾತನಾಡಬೇಕು. ಕೆಂಪಣ್ಣ ಅವರ ಗುತ್ತಿಗೆದಾರರ ಅಸೋಸಿಯೇಶನ್ ಬಿಟ್ಟು ಬೇರೆ ಅಸೋಸಿಯೇಷನ್​ಗಳೂ ಇವೆ. ಒಂದು ತಿಂಗಳು ಕೆಲಸ ಮಾಡುವುದಿಲ್ಲವೆಂದು ಬೇರೆ ಅಸೋಸಿಯೇಷನ್​ನವರು ಹೇಳಿಲ್ಲ. ಅವರ ನಿರ್ಧಾರ ಏನೂ ಅನ್ನುವುದು ಗೊತ್ತಿಲ್ಲ. ಆದರೆ ಯಾರೇ ಆಗಲಿ ಅಸ್ಪಷ್ಟವಾಗಿ ಮಾತನಾಡಬಾರದು. ಕಾಂಗ್ರೆಸ್​ನವರು ರಾಜಕೀಯ ಲಾಭಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಸಚಿವ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಪಟ್ಟು ಹಿಡಿದಿರುವ ವಿಚಾರಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಜಿಲ್ಲಾ ಉಸ್ತುವಾರಿ ಎಸ್.ಟಿ. ಸೋಮಶೇಖರ್ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲವನ್ನು ನಮ್ಮ ಸಿಎಂ ಸಮರ್ಥವಾಗಿ ನಿಭಾಯಿಸುತ್ತಾರೆ. ಪ್ರಕರಣದ ಸತ್ಯಾಸತ್ಯತೆ ತನಿಖೆ ಮೂಲಕ ಗೊತ್ತಾಗಲಿದೆ. ನಮ್ಮ ಮುಖ್ಯಮಂತ್ರಿಗಳಿಗೆ ಎಲ್ಲವನ್ನು ನಿಭಾಯಿಸುವ ಶಕ್ತಿ ಇದೆ ಎಂದು ಹೇಳಿದ್ದಾರೆ. ಸಚಿವ ಸುಧಾಕರ್ ವಿರುದ್ಧ ಭ್ರಷ್ಟಾಚಾರದ ಆರೋಪ ವಿಚಾರವಾಗಿ ಮಾತನಾಡಿ, ಸುಧಾಕರ್ ಸಮರ್ಥರಾಗಿದ್ದು ಅವರೇ ಈ ಬಗ್ಗೆ ಉತ್ತರಿಸುತ್ತಾರೆ. ಕೊವಿಡ್ ಸಂದರ್ಭದಲ್ಲಿ ಸುಧಾಕರ್ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರಿಗೂ ಇದನ್ನೆಲ್ಲ ನಿಭಾಯಿಸುವುದು ಗೊತ್ತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಂತೋಷ್ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ನೀಡಲಿ; ಈಶ್ವರಪ್ಪರನ್ನು ಬಂಧಿಸಲಿ: ಸಂತೋಷ್ ಮನೆಗೆ ಭೇಟಿ ಬಳಿಕ ಕೈ ನಾಯಕರ ಹೇಳಿಕೆ

ಇದನ್ನೂ ಓದಿ: ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ಷಡ್ಯಂತ್ರದ ಬಗ್ಗೆ ತನಿಖೆ ಆಗಬೇಕು: ಕೆಎಸ್ ಈಶ್ವರಪ್ಪ

Published On - 10:02 am, Thu, 14 April 22