Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ಷಡ್ಯಂತ್ರದ ಬಗ್ಗೆ ತನಿಖೆ ಆಗಬೇಕು: ಕೆಎಸ್ ಈಶ್ವರಪ್ಪ

ಸಂತೋಷ್ ಪಾಟೀಲ್ ಯಾವುದೇ ಡೆತ್​​ನೋಟ್ ಬರೆದಿಲ್ಲ. ಕಾಮಗಾರಿ ಟೆಂಡರ್ ನೀಡಬೇಕಾದರೆ ಕೆಲ ನಿಯಮಗಳಿರುತ್ತೆ. ಆದರೆ ಟೆಂಡರ್ ನೀಡದೆಯೇ ಕಾಮಗಾರಿ ಮಾಡಲಾಗುತ್ತಾ? ಈ ವಿಚಾರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ಗೆ ಗೊತ್ತಿಲ್ಲವಾ? ಎಂದೂ ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.

ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ, ಷಡ್ಯಂತ್ರದ ಬಗ್ಗೆ ತನಿಖೆ ಆಗಬೇಕು: ಕೆಎಸ್ ಈಶ್ವರಪ್ಪ
ಕೆ.ಎಸ್ ಈಶ್ವರಪ್ಪ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Apr 13, 2022 | 3:32 PM

ಶಿವಮೊಗ್ಗ: ನಾನು ರಾಜೀನಾಮೆ ಕೊಡುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ. ಯಾವುದೇ ಕಾರಣಕ್ಕೂ ನಾನು ರಾಜೀನಾಮೆ ನೀಡುವ ಪ್ರಶ್ನೆ ಇಲ್ಲ. ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುವುದರ ಬಗ್ಗೆ ತನಿಖೆ ಆಗಬೇಕು. ಸಮಗ್ರ ತನಿಖೆ ನಡೆಸಲು ಸಿಎಂ ಬಸವರಾಜ ಬೊಮ್ಮಾಯಿಗೆ ಮನವಿ ಮಾಡಿರುವೆ. ನಾಳೆ ಅಥವಾ ನಾಡಿದ್ದು ಬೆಂಗಳೂರಿಗೆ ತೆರಳಿ ಸಿಎಂ ಬೊಮ್ಮಾಯಿ ಭೇಟಿ ಆಗುವೆ. ನಾನು ಎಲ್ಲಿಗೂ ಓಡಿ ಹೋಗುತ್ತಿಲ್ಲ ಎಂದು ಶಿವಮೊಗ್ಗದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ ಯಾವುದೇ ಭ್ರಷ್ಟಾಚಾರ ಆಗಿಲ್ಲ. ಸಂತೋಷ್ ಪಾಟೀಲ್ ಯಾವುದೇ ಡೆತ್​​ನೋಟ್ ಬರೆದಿಲ್ಲ. ಕಾಮಗಾರಿ ಟೆಂಡರ್ ನೀಡಬೇಕಾದರೆ ಕೆಲ ನಿಯಮಗಳಿರುತ್ತೆ. ಆದರೆ ಟೆಂಡರ್ ನೀಡದೆಯೇ ಕಾಮಗಾರಿ ಮಾಡಲಾಗುತ್ತಾ? ಈ ವಿಚಾರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್​ಗೆ ಗೊತ್ತಿಲ್ಲವಾ? ಎಂದೂ ಅವರು ಪ್ರಶ್ನೆ ಮಾಡಿದ್ದಾರೆ.

ನಾನು ಎರಡು ವಿಷಯಗಳ ಬಗ್ಗೆ ಸ್ಪಷ್ಟವಾಗಿ ಹೇಳುತ್ತೇನೆ. ವಾಟ್ಸಾಪ್​ನಲ್ಲಿ ಟೈಪ್ ಮಾಡಿದ ಡೆತ್​ನೋಟ್​ ಬಂದಿದೆ. ಆದರೆ ಯಾವುದೇ ಸಹಿ ಮಾಡಿದ ಡೆತ್​​ನೋಟ್ ಪತ್ತೆಯಾಗಿಲ್ಲ. ನೀತಿ, ನಿಯಮ ಇಲ್ಲದೆ ಕಾಮಗಾರಿ ಮಾಡಿದರೆ ಬಿಲ್ ಕೊಡಬೇಕಾ? ಸಂತೋಷ್ ಪಾಟೀಲ್, ಕುಟುಂಬಸ್ಥರನ್ನು ನಾನು ನೋಡಿಲ್ಲ. ಹೈಕಮಾಂಡ್ ನಾಯಕರು ಯಾರೂ ಕೂಡ ನನ್ನನ್ನು ಸಂಪರ್ಕಿಸಿಲ್ಲ ಎಂದು ಈಶ್ವರಪ್ಪ ಮಾಹಿತಿ ಹಂಚಿಕೊಂಡಿದ್ದಾರೆ.

ಡಿವೈಎಸ್​ಪಿ ಗಣಪತಿ ಪ್ರಕರಣದಲ್ಲಿ ಖುದ್ದು ಹೇಳಿಕೆ ನೀಡಿದ್ದರು. ಆದರೆ ಈ ಪ್ರಕರಣದಲ್ಲಿ ವಾಟ್ಸಾಪ್​ನಲ್ಲಿ ಟೈಪ್ ಮಾಡಿದ್ದಾರೆ. ನಾನು ಸಂತೋಷ್ ಪಾಟೀಲ್ ಮುಖ ಕೂಡ ನೋಡಿಲ್ಲ. ಅಂಥದ್ದರಲ್ಲಿ 80 ಬಾರಿ ಭೇಟಿ ಎಂದು ಆರೋಪಿಸಿದ್ದಾರೆ. ದೆಹಲಿಗೆ ಹೋಗಲು ಫ್ಲೈಟ್ ಟಿಕೆಟ್ ಬುಕ್ ಮಾಡಿಕೊಟ್ಟಿದ್ಯಾರು? ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರ ಕಚೇರಿಗೆ ದೂರು ನೀಡಿದ್ದಾರೆ. ಕೇಂದ್ರದಿಂದ ಕೋರಿದ್ದ ಸ್ಪಷ್ಟನೆಗೆ ನಮ್ಮ ಇಲಾಖೆ ಉತ್ತರ ನೀಡಿದೆ. ಪ್ರಧಾನಿ, ಅಮಿತ್ ಶಾ ಅವರಿಗೂ ದೂರು ನೀಡಿದ್ದಾರೆ. ನನ್ನ ವಿರುದ್ಧದ ಆರೋಪದ ಬಗ್ಗೆ ಕೋರ್ಟ್ ಮೊರೆ ಹೋಗಿದ್ದೆ. ಕೋರ್ಟ್ ನೋಟಿಸ್ ಬಳಿಕ ಇಂತಹ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ಮುಗಿಸಿ ತೆರಳುವಾಗ ಸಚಿವ ಈಶ್ವರಪ್ಪ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರು ಮುತ್ತಿಗೆ ಹಾಕಿದ್ದಾರೆ. ಕಾರಿಗೆ ಮುತ್ತಿಗೆ ಹಾಕಿ ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹ ವ್ಯಕ್ತಪಡಿಸಿದ್ದಾರೆ. ಈ ವೇಳೆ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ಏರ್ಪಟ್ಟಿದೆ.

ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ ಹಿನ್ನೆಲೆ ಸಂತೋಷ್ ನಿವಾಸಕ್ಕೆ ‘ಕೈ’ ನಾಯಕರು ಭೇಟಿ ನೀಡಲಿದ್ದಾರೆ. ಸಂಜೆ 4 ಗಂಟೆಗೆ ಬೆಳಗಾವಿಯ ವಿಜಯನಗರ ಮನೆಗೆ ಭೇಟಿ ಕೊಡಲಿದ್ದಾರೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ, ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಭೇಟಿ ನೀಡಲಿದ್ದಾರೆ. ಸಂತೋಷ್ ಕುಟುಂಬಕ್ಕೆ ಸಾಂತ್ವನ ಹೇಳಲಿದ್ದಾರೆ. ನಂತರ ಸಂಜೆ 5 ಗಂಟೆಗೆ ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.

ಈಶ್ವರಪ್ಪರನ್ನು ಸಂತೋಷ್ ಪಾಟೀಲ್ ಭೇಟಿ ಮಾಡಿದ್ದು ನಿಜ; ಹಿಂಡಲಗಾ ಗ್ರಾ.ಪಂ ಅಧ್ಯಕ್ಷ ಸ್ಫೋಟಕ ಮಾಹಿತಿ

ಉಡುಪಿಯಲ್ಲಿ ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಹಿಂಡಲಗಾ ಗ್ರಾ.ಪಂ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈಶ್ವರಪ್ಪರನ್ನು ಸಂತೋಷ್ ಪಾಟೀಲ್ ಭೇಟಿ ಮಾಡಿದ್ದು ನಿಜ. ಸಂತೋಷ್ ಜೊತೆ 2 ಸಲ ಬೆಂಗಳೂರಿಗೆ ತೆರಳಿ ಸಚಿವರ ಭೇಟಿ ಮಾಡಿದ್ದೆವು. ಬೆಂಗಳೂರಿಗೆ ತೆರಳಿ ಸಚಿವ ಈಶ್ವರಪ್ಪರನ್ನು ಭೇಟಿಯಾಗಿದ್ದೆವು. ಬೈಲಹೊಂಗಲದ ಸ್ವಾಮೀಜಿ ಜೊತೆ ಇಬ್ಬರೂ ಭೇಟಿಯಾಗಿದ್ದೆವು. ಹಿಂಡಲಗಾದಲ್ಲಿ ನೂರು ವರ್ಷಕ್ಕೊಮ್ಮೆ ಗ್ರಾಮದೇವಿ ಜಾತ್ರೆ ನಡೆಯುತ್ತದೆ. 108 ಕಾಮಗಾರಿ ಮಾಡಬೇಕೆಂದು ಪಟ್ಟಿ ತಗೊಂಡು ಹೋಗಿದ್ದೆವು. ಆಯ್ತು‌ ನೀವು ಕಾಮಗಾರಿ ಆರಂಭಿಸಿ ಎಂದು ಈಶ್ವರಪ್ಪ ಹೇಳಿದ್ದರು. ಚೆನ್ನಾಗಿ ಕೆಲಸ ಮಾಡು ಅಂತಾ ಸಂತೋಷ್ ಪಾಟೀಲ್‌ಗೆ ಹೇಳಿದ್ರು ಎಂದು ತಿಳಿದುಬಂದಿದೆ.

ಈಶ್ವರಪ್ಪ ಸೂಚನೆ ಬಳಿಕವೇ 4ಕೋಟಿ ವೆಚ್ಚದ ಕಾಮಗಾರಿ ನಡೆಸಿದ್ರು. 4 ಕೋಟಿ ರೂಪಾಯಿ ವೆಚ್ಚದ 108 ಕಾಮಗಾರಿ ಮಾಡಿದ್ದರು. ನನ್ನ ಲೆಟರ್‌ಹೆಡ್‌ನಲ್ಲಿ ಸಹಿ ಮಾಡಿ ನಾನೂ ಪತ್ರ ಬರೆದಿದ್ದೆ. ರಾಜ್ಯ ಗ್ರಾಮೀಣಾಭಿವೃದ್ಧಿ ಇಲಾಖೆಗೆ ನಾನು ಪತ್ರವನ್ನ ಬರೆದಿದ್ದೆ. ನನ್ನ ವಿರುದ್ಧ ಶಾಸಕಿ ಹೆಬ್ಬಾಳ್ಕರ್ ಆರೋಪ ಕೇಳಿ ನೋವಾಯ್ತು. ಬಿಲ್ ಪಡೆಯಲು ಪರದಾಡ್ತಿದ್ದಾಗ ಸಹಾಯ ಮಾಡಬೇಕಿತ್ತು. ಇದರ ಬದಲು ಸಂತೋಷ್ ಆತ್ಮಹತ್ಯೆ ಬಳಿಕ ಧರಣಿ ಸರಿಯಲ್ಲ. ಸಂತೋಷ್‌ ಹಿಂಡಲಗಾ ಗ್ರಾಮದವ್ರು, ಚೆನ್ನಾಗಿ ಕೆಲಸ ಮಾಡಿದ್ರು. ಹೀಗಾಗಿ ಇಂದು ಗ್ರಾ.ಪಂ ಸಭೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದ್ದೇವೆ. ಕಾಮಗಾರಿ ಬಿಲ್ ಪಾವತಿಸಲು ಸರ್ಕಾರಕ್ಕೆ ಮನವಿ ಮಾಡುವೆ ಎಂದು ಹಿಂಡಲಗಾ ಗ್ರಾ.ಪಂ ಅಧ್ಯಕ್ಷ ನಾಗೇಶ್ ಮನ್ನೋಳಕರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಈಶ್ವರಪ್ಪ ಜೊತೆ ಮುಖಾಮುಖಿ ಮಾತಾಡ್ತೀನಿ ಎಂದ ಸಿಎಂ, ಮುಖ್ಯಮಂತ್ರಿ ಕೇಳಿದರೆ ರಾಜೀನಾಮೆ ಕೊಡಬೇಕಾಗುತ್ತೆ ಎಂದ ಈಶ್ವರಪ್ಪ

ಇದನ್ನೂ ಓದಿ: ಸಚಿವ ಈಶ್ವರಪ್ಪ ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದ ಕಾಂಗ್ರೆಸ್ ನಿಯೋಗ

Published On - 2:37 pm, Wed, 13 April 22