ಬೆಂಗಳೂರು: ಇಂದು ಕರುನಾಡಿನಲ್ಲಿ 66ನೇ ಕನ್ನಡ ರಾಜ್ಯೋತ್ಸವ ಸಂಭ್ರಮ. ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ನಾಡಿನ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯವನ್ನು ಕೋರಿದರು. ಭುವನೇಶ್ವರಿ ತಾಯಿಗೆ ಪೂಜೆ ಸಲ್ಲಿಸಿ ಧ್ವಜಾರೋಹಣ ಮಾಡಿದರು. ನಂತರ ಮಾತನಾಡಿ, ಕನ್ನಡ ರಾಜ್ಯೋತ್ಸವ ವಿಜೃಂಭಣೆಯಿಂದ ಆಚರಿಸಬೇಕು. ಕನ್ನಡಿಗರು ಪ್ರತಿದಿನವೂ ಕನ್ನಡದಲ್ಲೇ ಮಾತನಾಡಬೇಕು. ಕನ್ನಡ ನಮ್ಮೆಲ್ಲರನ್ನೂ ಒಗ್ಗೂಡಿಸಿದೆ. ಕನ್ನಡ ನಮ್ಮ ದೇವರು. ಕನ್ನಡವೆಂಬ ತಾಯಿ ದೇವರನ್ನು ಸಂರಕ್ಷಿಸಬೇಕು ಎಂದು ಹೇಳಿದರು.
ಕನ್ನಡವನ್ನು ಬೃಹತ್ ಹೆಮ್ಮರವಾಗಿ ಬೆಳಸಬೇಕೆಂದು ಕರೆ ನೀಡಿದ ಬೊಮ್ಮಾಯಿ, ಭಾಷೆ ಸದೃಢವಾಗಿದ್ದರೆ ಆ ರಾಜ್ಯ ಶಕ್ತಿಶಾಲಿಯಾಗಿರುತ್ತದೆ. ಭಾರತದಲ್ಲಿ ಅತ್ಯಂತ ಪುರಾತನವಾದ ಭಾಷೆ ಕನ್ನಡ. ಕನ್ನಡ ಭಾಷೆಗೆ ತನ್ನದೇ ಆದ ಅಂತರ್ಗತ ಶಕ್ತಿ ಇದೆ. ಎಲ್ಲಾ ರಂಗಗಳಲ್ಲಿಯೂ ಕನ್ನಡಕ್ಕೆ ಸ್ಥಾನ ನೀಡಬೇಕು. ಕನ್ನಡವನ್ನು ರಾಜ್ಯದ ಗಡಿಯೊಳಗೆ ಸೀಮಿತವಾಗಿ ನೋಡುತ್ತಿಲ್ಲ. ಮುಂಬೈ ಕರ್ನಾಟಕವನ್ನು ಕಿತ್ತೂರು ಕರ್ನಾಟಕ ಮಾಡಬೇಕು. ಕಿತ್ತೂರು ಕರ್ನಾಟಕ ಮಾಡಬೇಕೆಂದು ತೀರ್ಮಾನಿಸಿದ್ದೇವೆ. ಗಡಿ ವಿವಾದಗಳು ಇದ್ದಾಗಲೂ ಮುಂಬೈ ಕರ್ನಾಟಕ ಅನ್ನಬಾರದು ಅಂತ ತಿಳಿಸಿದರು.
ರಾಜ್ಯದ ಯಾವುದೇ ಪ್ರದೇಶ ಹಿಂದುಳಿಯಲು ಬಿಡುವುದಿಲ್ಲ.ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ಯೋಜನೆ ರೂಪಿಸುತ್ತೇವೆ. ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಬೇಕು. ಕನ್ನಡ ಸಾಹಿತ್ಯವನ್ನು ಇಡೀ ದೇಶಕ್ಕೆ ಮುಟ್ಟಿಸಬೇಕು. ಕನ್ನಡ ಬಾರದವರಿಗೆ ಕನ್ನಡ ಭಾಷೆಯನ್ನು ಕಲಿಸಬೇಕು. ಕನ್ನಡಿಗರಿಗೆ ಕೆಲಸ ಕೊಡಿಸುವ ಕೆಲಸ ಮಾಡಬೇಕು. ಆಗ ಮಾತ್ರ ಕರ್ನಾಟಕ, ಕನ್ನಡ ಅಭಿವೃದ್ಧಿಯಾಗುತ್ತದೆ. ಹೊಸ ಶಿಕ್ಷಣ ನೀತಿಯಲ್ಲಿ ಕನ್ನಡಕ್ಕೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಕನ್ನಡ ಮಾಧ್ಯಮದಲ್ಲಿ ತಾಂತ್ರಿಕ ಶಿಕ್ಷಣ ನೀಡಲಾಗುತ್ತಿದೆ. ಇದು ನಮ್ಮ ಸರ್ಕಾರ ಮಾಡಿದೆ ಎಂದು ಬಹಳ ಹೆಮ್ಮೆಯಿಂದ ಹೇಳುತ್ತಿದ್ದೇನೆ ಅಂತ ಕಾರ್ಯಕ್ರಮದಲ್ಲಿ ಸಿಎಂ ಅಭಿಪ್ರಾಯಪಟ್ಟರು.
ಕನ್ನಡ ರಾಜ್ಯೋತ್ಸವದಿಂದ ಕನ್ನಡಿಗರ ಜನೋತ್ಸವ ಆಗಬೇಕು ಎಂದು ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ ಸಿಎಂ, ಎಲ್ಲರೂ ಒಟ್ಟಾಗಿ ಕರ್ನಾಟಕ, ಕನ್ನಡಿಗರ ಬದುಕು ಕಟ್ಟೋಣ. ಗುರಿ ಮುಟ್ಟುವವರೆಗೆ ಎಲ್ಲರೂ ಒಟ್ಟಾಗಿ ಸಾಗೋಣ.ಕರ್ನಾಟಕ, ಕನ್ನಡ, ಕನ್ನಡಿಗರಿಗಾಗಿ ಒಟ್ಟಾಗಿ ದುಡಿಯೋಣ ಎಂದರು.
ರಾಜ್ಯದ 80 ಐಟಿಐಗಳನ್ನು ಉನ್ನತೀಕರಣ ಮಾಡಲಾಗಿದೆ. ರಾಜ್ಯದ ವಿದ್ಯಾರ್ಥಿಗಳು ಯಾವುದರಲ್ಲೂ ಹಿಂದುಳಿಯಬಾರದು. ಕನ್ನಡಿಗರಿಗೆ ಹೆಚ್ಚು ಅವಕಾಶಗಳು ಸಿಗುವಂತೆ ನಮ್ಮ ಸರ್ಕಾರ ವಿಶೇಷ ಕಾರ್ಯಕ್ರಮ ರೂಪಿಸುತ್ತಿದೆ. ಆಡಳಿತ ವ್ಯವಸ್ಥೆಯಲ್ಲಿಯೂ ಕನ್ನಡ ಭಾಷೆ ಇರಬೇಕು. ರಾಜ್ಯದಲ್ಲಿರುವ ಕನ್ನಡಿಗರಿಗೆ ಉತ್ತಮವಾದ ಆಡಳಿತ ಸಿಗಬೇಕು ಅಂತ ಬೊಮ್ಮಾಯಿ ನುಡಿದರು.
ಇದನ್ನೂ ಓದಿ
Karnataka Rajyotsava 2021: ಸಾವಯವ ಕೃಷಿಕನಿಗೆ ಒಲಿದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
Published On - 10:23 am, Mon, 1 November 21