ಬೆಂಗಳೂರು, (ಅಕ್ಟೋಬರ್ 17): ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿಂದು ಬೀದಿ ನಾಯಿಗಳಿಗಾಗಿ ಕುಕುರ್ ತಿಹಾರ್ ಎನ್ನುವ ಕಾರ್ಯಕ್ರಮ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಬೀದಿನಾಯಿಗಳಿಗೆ ವಿಶೇಷ ಪೂಜೆ ಮಾಡಲಾಯ್ತು. ಯುವತಿಯರು, ಬೀದಿ ನಾಯಿಗಳಿಗೆ ಕರ್ಪೂರ ಹಚ್ಚಿ ಆರತಿ ಮಾಡಿದರು. ಇದಕ್ಕೆ ಬಿಬಿಎಂಪಿ ಅಧಿಕಾರಿಗಳು ಸಹ ಸಾಥ್ ನೀಡಿದರು. ಹೌದು.. ರಾಜಧಾನಿಯಲ್ಲಿ ಬೀದಿನಾಯಿಗಳಿಂದ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗಿ ಜನರು ಪರದಾಡ್ತಿದ್ರೆ, ಇತ್ತ ಬಿಬಿಎಂಪಿ ಬೀದಿನಾಯಿಗಳನ್ನ ಕಂಟ್ರೋಲ್ ಮಾಡುವ ಬದಲು ಕುಕುರ್ ತಿಹಾರ್ ಎನ್ನುವ ನೇಪಾಳದ ಹಬ್ಬದ ಆಚರಣೆಯನ್ನ ಆಚರಿಸಿ ಸಂಭ್ರಮಿಸಿದೆ.
ಇನ್ನು ಸಹಬಾಳ್ವೆಯ ಚಾಂಪಿಯನ್ ಅನ್ನೋ ಹೆಸರಲ್ಲಿ ಬೀದಿನಾಯಿಗಳಿಗೆ ಪ್ರತಿವಾರ್ಡ್ ನಲ್ಲಿ ಆಹಾರ ನೀಡುವ ಕೆಲಸಕ್ಕೆ ಸಜ್ಜಾಗಿರುವ ಪಾಲಿಕೆ, ಪ್ರತಿ ವಾರ್ಡ್ ನಲ್ಲಿ ರೆಸ್ಟೋರೆಂಟ್ ಗಳ ಜೊತೆ ಚರ್ಚಿಸಿ ಉಳಿದ ಆಹಾರವನ್ನ ನಾಯಿಗಳಿಗೆ ನೀಡುವ ಪ್ರಯೋಗಕ್ಕೆ ಮುಂದಾಗಿದೆ. ಸದ್ಯ ಈ ಕೆಲಸಕ್ಕೆ ಪೌರಕಾರ್ಮಿಕರು, ಪ್ರಾಣಿಪ್ರಿಯರು, ಸ್ವಯಂಸೇವಕರನ್ನ ಬಳಸಿಕೊಳ್ಳುವುದಕ್ಕೆ ಚಿಂತನೆ ನಡೆಸಿದೆ. ಈ ಮೂಲಕ ನಾಯಿಗಳು ಮನುಷ್ಯರ ಮೇಲೆ ಅಟ್ಯಾಕ್ ಮಾಡುವುದನ್ನು ಕಂಟ್ರೋಲ್ ಮಾಡುತ್ತೇವೆ ಎಂದು ಹೊರಟಿದೆ. ಆದ್ರೆ, ಇತ್ತ ರಾಜಧಾನಿಯಲ್ಲಿ 2.70 ಲಕ್ಷಕ್ಕೂ ಹೆಚ್ಚು ಬೀದಿನಾಯಿಗಳಿವೆ, ಕೆಲ ಏರಿಯಾಗಳಲ್ಲಿ ಬೀದಿನಾಯಿಗಳು ಅಟ್ಯಾಕ್ ಮಾಡಿ ಜನರಿಗೆ ಗಾಯಗೊಳಿಸಿದ ಘಟನೆಗಳು ಸಹ ನಡೆದಿವೆ.
ಇದನ್ನೂ ಓದಿ: ಗುಡ್ನ್ಯೂಸ್: ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಫ್ರೀ ಟ್ಯೂಷನ್ ಭಾಗ್ಯ.. !
ಪಾಲಿಕೆ ಈ ಕಾರ್ಯಕ್ರಮದಿಂದ ಇಂತ ಘಟನೆಗಳನ್ನ ತಪ್ಪಿಸಬಹುದು, ನಾಯಿಗಳು ಊಟ ಸಿಕ್ಕರೇ ದಾಳಿ ಮಾಡುವುದು ತಗ್ಗುತ್ತೆ ಎಂದು ಸಮರ್ಥನೆ ನೀಡಿದೆ. ಇತ್ತ ಪ್ರಾಣಿ-ಪಕ್ಷಿಗಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನಿಷೇಧಿಸಿ ತಾನೇ ಆದೇಶ ಹೊರಡಿಸಿದ್ದ ಪಾಲಿಕೆ, ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಯಿಗಳಿಗೆ ಊಟ ಹಾಕೋಕೆ ಹೊರಟಿರೋದಕ್ಕೆ ಸಿಟಿಮಂದಿ ಆಕ್ಷೇಪ ವ್ಯಕ್ತಪಡಿಸ್ತಿದ್ದಾರೆ. ಊಟ ಹಾಕುವುದು ಒಳ್ಳೆಯ ಕೆಲಸ. ಆದ್ರೆ ಒಂದೆರಡು ದಿನ ಊಟ ಹಾಕಿ ನಿಲ್ಲಿಸಿದ್ರೆ ಬೀದಿನಾಯಿಗಳು ಊಟ ಸಿಗದಿದ್ದಾಗ ಜನರ ಮೇಲೆ ಅಟ್ಯಾಕ್ ಮಾಡುವುದು ಇನ್ನೂ ಹೆಚ್ಚಾಗುತ್ತೆ ಅಂತಿದ್ದಾರೆ.
ಸದ್ಯ ಬೀದಿನಾಯಿಗಳಿಗೆ ರೆಸ್ಟೋರೆಂಟ್ ಗಳ ಮೂಲಕ ಒಂದು ಹೊತ್ತು ಊಟ ಕೊಡುತ್ತೇವೆ ಎನ್ನುತ್ತಿರುವ ಪಾಲಿಕೆ, ಪಾಲಿಕೆಯ 8 ವಾರ್ಡ್ ಗಳಲ್ಲೂ ಈ ಪ್ರಯೋಗ ನಡೆಸುವುದಕ್ಕೆ ಹೊರಟಿದೆ. ಈ ಪ್ರಯೋಗ ಯಶಸ್ವಿಯಾದ್ರೆ ಪ್ರತಿ ವಾರ್ಡ್ ನಲ್ಲೂ ಅಳವಡಿಸೋಕೆ ಚಿಂತನೆ ನಡೆಸಿದೆ. ಆದ್ರೆ ಈಗಾಗಲೇ ನಗರದಲ್ಲಿ ಬೀದಿನಾಯಿಗಳಿಂದ ಆಗ್ತಿರೋ ಅನಾಹುತಗಳ ಬಗ್ಗೆ ಸಾಲು ಸಾಲು ದೂರು ಹರಿದು ಬರ್ತಿದ್ದು, ಪುಟ್ಟ ಪುಟ್ಟ ನಾಯಿಮರಿಗಳಿಗೆ ಊಟ ಕೊಟ್ಟು ಕಾರ್ಯಕ್ರಮ ಆರಂಭಿಸಿರೋ ಪಾಲಿಕೆ, ಗಲ್ಲಿ ಗಲ್ಲಿಯಲ್ಲಿರೋ ಡೆಡ್ಲಿ ಬೀದಿನಾಯಿಗಳಿಗೆ ಊಟ ಹಾಕಿ ಮತ್ಯಾವ ಅವಾಂತರ ಸೃಷ್ಟಿಸುತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
Published On - 10:57 pm, Thu, 17 October 24