ಬೆಂಗಳೂರು, ಅಕ್ಟೋಬರ್ 04: ಇತ್ತೀಚೆಗೆ ಬೀದಿ ನಾಯಿಗಳ (Street Dogs) ದಾಳಿಗೆ ಬೆಂಗಳೂರು ಜನರು ಒಳಗಾಗುತ್ತಿದ್ದಾರೆ. ಈ ಹಿನ್ನೆಲೆ ಮೂರು ತಿಂಗಳ ಹಿಂದೆ ಸಮೀಕ್ಷೆ ನಡೆಸುವುದಾಗಿ ಬಿಬಿಎಂಪಿ ಹೇಳಿತ್ತು. ಹಾಗಾಗಿ ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೀದಿ ನಾಯಿಗಳ ಸಮೀಕ್ಷೆ ಮಾಡಿ ಮುಗಿಸಿದ್ದು, ವಲಯವಾರು ಬೀದಿ ನಾಯಿಗಳ ಪಟ್ಟಿಯನ್ನು ಪಾಲಿಕೆ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಬಿಡುಗಡೆ ಮಾಡಿದ್ದಾರೆ. ಬೆಂಗಳೂರಲ್ಲಿ ಒಟ್ಟು 2,79,335 ಬೀದಿ ನಾಯಿಗಳನ್ನು ಪಾಲಿಕೆ ಗುರುತಿಸಿದೆ.
2019ರ ಸಮೀಕ್ಷೆ ಪ್ರಕಾರ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಆಗಿದ್ದು, ಸುಮಾರು 32 ಸಾವಿರ ಬೀದಿ ನಾಯಿಗಳು ಕಾಲಕ್ರಮೇಣವಾಗಿ ಕಡಿಮೆಯಾಗಿದೆ. ಈ 2.79 ಲಕ್ಷ ಬೀದಿ ನಾಯಿಗಳ ಪೈಕಿ 71.85% ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ. ಬಿಬಿಎಂಪಿ ಬೀದಿ ನಾಯಿ ಸಮೀಕ್ಷೆಗೆ ಒಟ್ಟು 50 ತಂಡಗಳನ್ನು ಪಾಲಿಕೆ ರಚಿಸಿತ್ತು.
ಇದನ್ನು ಓದಿ: ರೇಬಿಸ್ ರೋಗ ತಡೆಗಟ್ಟಲು ಸಂತಾನ ಶಕ್ತಿ ಹರಣ ಚಿಕಿತ್ಸೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಳೆಯಿಂದ ಬೀದಿ ನಾಯಿಗಳ ಸಮೀಕ್ಷೆ
ಈ ಕುರಿತಾಗಿ ಬಿಬಿಎಂಪಿ ಸ್ಪೆಷಲ್ ಕಮಿಷನರ್ ತ್ರಿಲೋಕ್ ಚಂದ್ರ ಪ್ರತಿಕ್ರಿಯಿಸಿದ್ದು, ರೇಬೀಸ್ ರೋಗವನ್ನು ತಡೆ ಹಿಡಿಯುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲಾಗಿದೆ. ಬೀದಿನಾಯಿಗಳ ಪರಿಪಾಲನೆ ದೃಷ್ಟಿಯಿಂದಲೂ ಸಮೀಕ್ಷೆ ನಡೆಸಲಾಗಿದೆ. ಪಾಲಿಕೆ ಸತತವಾಗಿ ಸಂತಾನಹರಣ ಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಬೀದಿ ನಾಯಿಗಳ ಸಮೀಕ್ಷೆ ನಡೆದು ನಾಲ್ಕು ವರ್ಷ ಆಗಿತ್ತು. ವೈಜ್ಞಾನಿಕವಾಗಿ 50 ತಂಡಗಳ ಮೂಲಕ ನಾವು ಸಮೀಕ್ಷೆ ನಡೆಸಿ, ವರದಿ ಕೊಟ್ಟಿದ್ದೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Street Dogs Census: ಡ್ರೋನ್ ಬಳಸಿ ಬೀದಿ ನಾಯಿಗಳ ಗಣತಿಗೆ ಮುಂದಾದ ಬಿಬಿಎಂಪಿ
ಸಮೀಕ್ಷೆ ಸಿಬ್ಬಂದಿಗಳಿಗೆ ಬಿಬಿಎಂಪಿ ಕಡೆಯಿಂದಲೇ ನಾವು ತರಬೇತಿ ಕೊಟ್ಟಿದ್ದೆವು. ಸಮೀಕ್ಷೆ ನಡೆಸಲು ಡ್ರೋನ್ ಅನ್ನು ಕೂಡ ಬಳಸಲಾಗಿದೆ. ಕೆರೆ ಹಾಗೂ ಖಾಲಿ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲು ಡ್ರೋನ್ ಬಳಸಲಾಗಿದೆ. ಈ ರೀತಿಯ ಬೀದಿನಾಯಿಗಳ ಸಮೀಕ್ಷೆಗೂ ಟೆಕ್ನಾಲಜಿ ಬಳಸಿ ಯಶಸ್ವಿಯಾಗಿದ್ದೇವೆ. ಬೀದಿನಾಯಿಗಳ ಮೇಲೆ ನಿಗಾ ಇಡಲು ನಾಯಿಗಳಿಗೆ ಜಿಯೋ ಟ್ಯಾಗಿಂಗ್ ಮಾಡಲಾಗುತ್ತೆ. ಮೈಕ್ರೋ ಚಿಪ್ ಅಳವಡಿಕೆ ಮಾಡುವ ಮೂಲಕ ಬೀದಿನಾಯಿಗಳ ಮೇಲೆ ನಿಗಾ ಇಡಬಹುದು ಎಂದು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:51 pm, Wed, 4 October 23