ಲೋಕಸಭೆ ಚುನಾವಣೆ ಬಳಿಕ ಬಿಬಿಎಂಪಿ ಎಲೆಕ್ಷನ್? ಡಿಕೆ ಶಿವಕುಮಾರ್ ಆ ಸೂಚನೆಯಿಂದ ಮೂಡಿತು ಕುತೂಹಲ

| Updated By: ಗಣಪತಿ ಶರ್ಮ

Updated on: May 23, 2024 | 7:15 AM

ಸ್ಥಳೀಯ ಚುನಾವಣೆಗೆ‌ ಸಿದ್ದರಾಗಿ ಎಂದು ಡಿಕೆಶಿ‌ ಹೇಳುತ್ತಿದ್ದಂತೆಯೇ ಬಿಬಿಎಂಪಿ ಚುನಾವಣೆಯನ್ನೂ ನಡೆಸಿ ಎಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರುಗಳು ಒತ್ತಾಯಿಸಿದ್ದಾರೆ. ಮತ್ತೊಂದೆಡೆ, ಲೋಕಸಭೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ, ಅದೇ ಅಲೆಯಲ್ಲಿ ಬಿಬಿಎಂಪಿ ಹಾಗೂ ಇತರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸುವ ಸಾಧ್ಯತೆ ಇದೆ.

ಲೋಕಸಭೆ ಚುನಾವಣೆ ಬಳಿಕ ಬಿಬಿಎಂಪಿ ಎಲೆಕ್ಷನ್? ಡಿಕೆ ಶಿವಕುಮಾರ್ ಆ ಸೂಚನೆಯಿಂದ ಮೂಡಿತು ಕುತೂಹಲ
ಬಿಬಿಎಂಪಿ
Follow us on

ಬೆಂಗಳೂರು, ಮೇ 23: ಲೋಕಸಭಾ ಚುನಾವಣೆ (Lok Sabha Elections) ಮುಗಿಯುತ್ತಿದ್ದಂತೆಯೇ ಇದೀಗ ಸ್ಥಳೀಯ ಚುನಾವಣೆ ವಿಚಾರ ಮುನ್ನೆಲೆಗೆ ಬಂದಿದೆ. ಅದರಲ್ಲೂ 4 ವರ್ಷಗಳ ಹಿಂದೆಯೇ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆಗೂ (BBMP Election) ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಇದರ ನಡುವೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಸಚಿವರು, ಶಾಸಕರಿಗೆ ಕೊಟ್ಟ ಸೂಚನೆ, ಪಾಲಿಕೆ‌ ಚುನಾವಣೆಯ ನಡೆಯುವ ಸುಳಿವು ನೀಡಿದೆ.

ಸದ್ಯ ಲೋಕಸಭೆ‌ ಚುನಾವಣೆ ಬಳಿಕ ರಾಜ್ಯ ಸರ್ಕಾರಕ್ಕೆ ಪಂಚಾಯತ್ ಚುನಾವಣೆ ಸೇರಿದಂತೆ ಬಿಬಿಎಂಪಿ ಚುನಾವಣೆ ನಡೆಸುವ ಉದ್ದೇಶವಿದೆ. ಇದಕ್ಕಾಗಿ‌ ಚುನಾವಣೆ ನಡೆಸಲು ಅಡ್ಡಿಯಾಗಿರುವ ಕಾನೂನು ಅಡೆ-ತಡೆಗಳನ್ನ ನಿವಾರಿಸಲು ಮುಂದಾಗಲಿದೆ. ಚುನಾವಣೆ ನಡೆಸುವ ಸಂಬಂಧ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಒಟ್ಟಾರೆ ಮೀಸಲಾತಿ ಪ್ರಮಾಣವನ್ನ ನಿರ್ಧರಿಸಿದ್ದರೂ ವಾರ್ಡ್ ವಾರು ಮೀಸಲು ನಿಗದಿಗೊಳಿಸಿರುವುದು ಬಾಕಿ ಇದೆ. ಈ ಬಗ್ಗೆ ಅಧಿಸೂಚನೆ ಹೊರಡಿಸಿ ಆಕ್ಷೇಪ ಆಹ್ವಾನಿಸಬೇಕಾಗಿದೆ. ಬರುವ ಆಕ್ಷೇಪ ಪರಿಶೀಲಿಸಿ ಅಂತಿಮ ಪಟ್ಟಿ ಪ್ರಕಟಿಸುವುದು ಬಾಕಿ‌ ಇದೆ. ಇದಾದ ನಂತರ ಚುನಾವಣಾ ಆಯೋಗ‌ ಚುನಾವಣೆ ನಡೆಸಬೇಕಾಗುತ್ತದೆ. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರುಗಳಿಗೆ ಎಚ್ಚರಿಕೆ‌ ಸಂದೇಶ ರವಾನಿಸಿದ್ದಾರೆ.

ಸ್ಥಳೀಯ ಚುನಾವಣೆಗೆ‌ ಸಿದ್ದರಾಗಿ ಎಂದು ಡಿಕೆಶಿ‌ ಹೇಳುತ್ತಿದ್ದಂತೆಯೇ ಬಿಬಿಎಂಪಿ ಚುನಾವಣೆಯನ್ನೂ ನಡೆಸಿ ಎಂದು ಕೆಪಿಸಿಸಿ ಕಚೇರಿಯಲ್ಲಿ ನಡೆದ ರಾಜೀವ್ ಗಾಂಧಿ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರುಗಳು ಒತ್ತಾಯಿಸಿದ್ದಾರೆ. ನಾಲ್ಕು ವರ್ಷಗಳಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆದಿಲ್ಲ. ಪಾಲಿಕೆ ಸದಸ್ಯರೂ‌ ಆಯ್ಕೆ‌ ಆಗಿಲ್ಲ. ಆಡಳಿತ ಹದಗೆಟ್ಟು ಹೋಗಿದೆ. ಬ್ರ್ಯಾಂಡ್ ಬೆಂಗಳೂರು ಆಗ್ಬೇಕಂದ್ರೆ ಬಿಬಿಎಂಪಿ ಕೂಡ ಆಯ್ಕೆ ಆಗಬೇಕೆನ್ನುವ ಒತ್ತಾಸೆ ಇದೆ. ಈ ಕಾರಣಕ್ಕಾಗಿ ಬಹಿರಂಗವಾಗಿ ನಿನ್ನೆ ಒಂದಷ್ಟು ಮಂದಿ ಬಿಬಿಎಂಪಿ ಚುನಾವಣೆ ಬಗ್ಗೆಯೂ ಗಮನ ಹರಿಸಿ ಅಂತ ಕೆಪಿಸಿಸಿ ಅಧ್ಯಕ್ಷ ಡಿಕೆ‌ ಶಿವಕುಮಾರ್​ಗೆ ಒತ್ತಡ ಹಾಕಿದ್ದಾರೆ.

ಲೋಕಸಭೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ ಬಿಬಿಎಂಪಿ ಚುನಾವಣೆ!

ಬಿಬಿಎಂಪಿ ಚುನಾವಣೆಯ ಈ ಕೂಗು ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಗೆದ್ದರೆ, ಅದೇ ಅಲೆಯಲ್ಲಿ ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಗಳನ್ನ ಗೆಲ್ಲಬಹುದು ಎಂಬುದು ಕೆಳ ಹಂತದ ನಾಯಕರ ಲೆಕ್ಕಚಾರ. ಆದ್ರೆ ಈ ಬಗ್ಗೆ ಸಿಎಂ ಹಾಗೂ ಡಿಸಿಎಂ ತಕ್ಷಣಕ್ಕೆ ನಿರ್ಧಾರ ಕೈಗೊಳ್ಳಲು‌ ಸಿದ್ಧರಿಲ್ಲ. ಕಾನೂನಾತ್ಮಕ ಅಂಶಗಳ ಕಡೆಗೆ ಸಿಎಂ ಗಮನಿಸುತ್ತಿದ್ದರೆ, ಡಿಕೆಶಿ ಕೂಡ ಬೇರೆಯದ್ದೇ ರೀತಿ ನೋಡುತ್ತಿದ್ದಾರೆ. ಈಗ ನಾನು‌ ಅದರ ಬಗ್ಗೆ ಮಾತಾಡುವುದಿಲ್ಲ ಅಂತ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿಎಂ ಸಿದ್ದರಾಮಯ್ಯ, ಮೊದಲು ಲೋಕಸಭೆ ಚುನಾವಣೆ ಮುಗಿಯಲಿ. ನೀತಿ‌ ಸಂಹಿತೆ ಇದೆ, ಮುಗಿದ ಮೇಲೆ ನೋಡ್ತೀವಿ. ಹಿಂದಿನ‌ ಸರ್ಕಾರ ಇದ್ದಾಗ ನೀವು ಕೇಳಲೇ ಇಲ್ಲ. ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಿ‌ ಚಿಂತಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್​ನಲ್ಲಿ ಸಿಎಂ, ಸಚಿವರ ಮಹತ್ವದ ಮಾತುಕತೆ; ಕೆಲ ಸಚಿವರ ಕುರ್ಚಿಗೆ ಕಂಟಕ ಸಾಧ್ಯತೆ

ಒಟ್ಟಾರೆ, ಲೋಕಸಭಾ ಚುನಾವಣೆ ಮುಗಿಯುತ್ತಿದ್ದಂತೆ ಇದೀಗ ಸ್ಥಳೀಯ ಚುನಾವಣೆ ವಿಚಾರ ಮುನ್ನೆಲೆಗೆ ಬಂದಿದೆ. ಕಳೆದ 4 ವರ್ಷದ ಹಿಂದೆಯೇ ನಡೆಯಬೇಕಿದ್ದ ಬಿಬಿಎಂಪಿ ಚುನಾವಣೆಗೂ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ಒಂದು ವೇಳೆ ಲೋಕಸಭೆಯಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಬಂದ್ರೆ, ಬಿಬಿಎಂಪಿ ಚುನಾವಣೆ ನಡೆಸುವ ಸಾಧ್ಯತೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ