BBMP Elections 2022: ಬಿಬಿಎಂಪಿ ವಾರ್ಡ್​ಗಳ ಮರುವಿಂಗಡಣೆ: 198ರ ಬದಲು 243 ವಾರ್ಡ್​ ರಚನೆಗೆ ವರದಿ ಸಲ್ಲಿಕೆ, ಪ್ರದೇಶ ವಿಸ್ತರಣೆ ಇಲ್ಲ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 26, 2022 | 5:34 PM

Delimitation BBMP Wards: ವಾರ್ಡ್​ಗಳ ಮರುವಿಂಗಡನೆಯಲ್ಲಿ ಹೊಸ ಹಳ್ಳಿಗಳ ಸೇರ್ಪಡೆ ಇಲ್ಲ ಎಂದು ಸಮಿತಿ ತಿಳಿಸಿರುವುದಾಗಿ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ. ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಲು ಸಜ್ಜಾಗಿದೆ.

BBMP Elections 2022: ಬಿಬಿಎಂಪಿ ವಾರ್ಡ್​ಗಳ ಮರುವಿಂಗಡಣೆ: 198ರ ಬದಲು 243 ವಾರ್ಡ್​ ರಚನೆಗೆ ವರದಿ ಸಲ್ಲಿಕೆ, ಪ್ರದೇಶ ವಿಸ್ತರಣೆ ಇಲ್ಲ
ಬಿಬಿಎಂಪಿ
Follow us on

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike – BBMP) ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ವಾರ್ಡ್​ಗಳ ಮರುವಿಂಗಡಣೆಗೆ ರಚಿಸಿದ್ದ ಸಮಿತಿಯು (Delimitation Committee) ವಾರ್ಡ್​​ಗಳ ಪುನರ್​ ವಿಂಗಡಣೆ ಕುರಿತು ತನ್ನ ಅಭಿಪ್ರಾಯ ಸೂಚಿಸಿ, ವರದಿ ಸಲ್ಲಿಸಿದೆ. ಮರು ವಿಂಗಡಣೆ ವೇಳೆ ಬಿಬಿಎಂಪಿ ವ್ಯಾಪ್ತಿಯ ಆಸುಪಾಸಿನ ಗ್ರಾಮಗಳು ಸೇರಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಇದೀಗ ಸಮಿತಿಯು ಸಲ್ಲಿಸಿರುವ ವರದಿಯಲ್ಲಿ ಅಕ್ಕಪಕ್ಕದ ಗ್ರಾಮಗಳ ಸೇರ್ಪಡೆಯನ್ನು ಶಿಫಾರಸು ಮಾಡಿಲ್ಲ. ಹಾಲಿ ಅಸ್ತಿತ್ವದಲ್ಲಿದ್ದ 198 ವಾರ್ಡ್‌ಗಳ ವ್ಯಾಪ್ತಿಯನ್ನೇ ಹೊಸದಾಗಿ ವಿಂಗಡಿಸಿ, 243 ವಾರ್ಡ್‌ಗಳಾಗಿ ಪುನರ್ ರೂಪಿಸಲಾಗಿದೆ. ಭೌಗೋಳಿಕ ವಿಸ್ತೀರ್ಣಕ್ಕಿಂತಲೂ ಜನಸಂಖ್ಯೆಯನ್ನೇ ಆಧರಿಸಿ ವಿಂಗಡಣೆ ಮಾಡಲಾಗಿದೆ.

ಇದರಲ್ಲಿ ಹೊಸ ಗ್ರಾಮಗಳು ಸೇರ್ಪಡೆಯಾಗಿಲ್ಲ. ಈ ಹಿಂದೆ ವಾರ್ಡ್​ಗಳ ಸಂಖ್ಯೆ ಹೆಚ್ಚಿಸುವಾಗ ಹೊಸ ಗ್ರಾಮಗಳನ್ನು ಸೇರಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಆದರೆ ಯಾವುದೇ ಹಳ್ಳಿಯನ್ನು ಸೇರ್ಪಡೆ ಮಾಡದೆ ವರದಿ ಸಲ್ಲಿಸಲಾಗಿದೆ. ಮುಖ್ಯವಾಗಿ ಯಲಹಂಕ, ಬೊಮ್ಮನಹಳ್ಳಿ, ಮಹಾದೇವಪುರ ಆಸುಪಾಸಿನ ಕೆಲ ಹಳ್ಳಿಗಳನ್ನು ಸೇರ್ಪಡೆ ಮಾಡಬೇಕೆಂದು ಶಾಸಕರು ಶಿಫಾರಸು ಮಾಡಿದ್ದರು. ವಾರ್ಡ್​ಗಳ ಮರುವಿಂಗಡನೆಯಲ್ಲಿ ಹೊಸ ಹಳ್ಳಿಗಳ ಸೇರ್ಪಡೆ ಇಲ್ಲ ಎಂದು ಸಮಿತಿ ತಿಳಿಸಿರುವುದಾಗಿ ಬೆಂಗಳೂರು ಜಿಲ್ಲಾಧಿಕಾರಿ ಮಂಜುನಾಥ್ ಹೇಳಿದ್ದಾರೆ. ಸಮಿತಿಯು ಸರ್ಕಾರಕ್ಕೆ ವರದಿ ಸಲ್ಲಿಸಲು ಸಜ್ಜಾಗಿದೆ.

ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸಿದ್ಧತೆ
ಬಿಬಿಎಂಪಿ ಚುನಾವಣೆಗೆ ಬಿಜೆಪಿಯು ಭರದ ಸಿದ್ಧತೆ ಆರಂಭಿಸಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬುಧವಾರ (ಜ.26) ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ಬೆಂಗಳೂರು ಕೇಂದ್ರ ಹಾಗೂ ದಕ್ಷಿಣ ಜಿಲ್ಲೆಗಳ ಮುಖಂಡರ ಮಹತ್ವದ ಸಭೆ ನಡೆಯಿತು. ಸಚಿವರಾದ ಮುನಿರತ್ನ, ಶಾಸಕರಾದ ಅರವಿಂದ ಲಿಂಬಾವಳಿ, ಸುರೇಶ್ ಕುಮಾರ್, ಎಸ್.ರಘು ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು. ಸಚಿವರಾದ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ, ಶಾಸಕ ಎಂ.ಕೃಷ್ಣಪ್ಪ ಗೈರಾಗಿದ್ದರು.

ಇದನ್ನೂ ಓದಿ: ಬಿಬಿಎಂಪಿಗೆ ಚುನಾವಣೆ: ಶೀಘ್ರ ಸುಪ್ರೀಂಕೋರ್ಟ್‌ ಹಸಿರು ನಿಶಾನೆ ನಿರೀಕ್ಷೆ, ಬೆಂಗಳೂರು ಅಭಿವೃದ್ಧಿಗೆ 6 ಸಾವಿರ ಕೋಟಿ ವೆಚ್ಚಕ್ಕೆ ನಿರ್ಧಾರ
ಇದನ್ನೂ ಓದಿ: ನಕಲಿ ದಾಖಲೆ ಸೃಷ್ಟಿಸಿ ವಂಚನೆ; ಮೂರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲು