ಈಗಾಗಲೇ ಬಹಳ ಕಾಲದಿಂದ ಸ್ಥಗಿತಗೊಂಡಿರುವ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ (bbmp elections) ಪೂರ್ವಸಿದ್ಧತೆ ಕೈಗೊಳ್ಳುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ಸಭೆ ನಡೆಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಬೆಂಗಳೂರು ಉತ್ತರ ಜಿಲ್ಲೆಯ ಬಿಜೆಪಿ ಪದಾಧಿಕಾರಿಗಳ ಸಭೆ ನಡೆದಿದೆ. ಬಿಬಿಎಂಪಿ ಚುನಾವಣೆ ಸಂಬಂಧ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (basavaraj bommai) ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ನಾರಾಯಣ, ವಿಭಾಗ ಉಸ್ತುವಾರಿ ಗೋಪಿನಾಥ್ ರೆಡ್ಡಿ ಸೇರಿದಂತೆ ಬೆಂಗಳೂರು ಉತ್ತರ ಜಿಲ್ಲಾ ಪದಾಧಿಕಾರಿಗಳು ಭಾಗಿಯಾಗಿದ್ದಾರೆ.
ಬಿಬಿಎಂಪಿ ಚುನಾವಣೆಗೆ ರಾಜ್ಯ ಸರ್ಕಾರ ಸಿದ್ಧ ಇದೆ. ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ಶೀಘ್ರದಲ್ಲೇ ಇತ್ಯರ್ಥ ನಿರೀಕ್ಷೆ ಇದೆ. 243 ವಾರ್ಡ್‌ಗೆ ಚುನಾವಣೆಗೆ ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಿದೆ. ವಾರ್ಡ್‌ಗಳ ಮರುಹಂಚಿಕೆ, ಮೀಸಲಾತಿ ನಿಗದಿ ಪ್ರಕ್ರಿಯೆ ಶೀಘ್ರದಲ್ಲೇ ಮುಗಿಯಲಿವೆ. ವಾರ್ಡ್‌ಗಳಲ್ಲಿ ಸಿದ್ಧತೆಗಳಿಗೆ ವೇಗ ಕೊಡುವ ಕೆಲಸವಾಗಲಿ. ಬೆಂಗಳೂರು ಅಭಿವೃದ್ಧಿಗೆ 6,000 ಕೋಟಿ ರೂಪಾಯಿ ವೆಚ್ಚಕ್ಕೆ ಈಗಾಗಲೇ ನಿರ್ಧರಿಸಲಾಗಿದೆ.
ಯಾವುದೇ ಅಭಿವೃದ್ಧಿ ಕಾಮಗಾರಿ KRDIL ಮೂಲಕ ನಡೆಸಲ್ಲ, ಅಭಿವೃದ್ಧಿ ಕಾಮಗಾರಿಗಳಲ್ಲಿ ಪಾರದರ್ಶಕತೆ ಇರುವಂತೆ ನಿಗಾ ವಹಿಸಲಾಗುವುದು. ಬಿಬಿಎಂಪಿ ವ್ಯಾಪ್ತಿ ಅಭಿವೃದ್ಧಿ ಕೆಲಸಕ್ಕೆ ವೇಗ ಕೊಡಲಾಗುತ್ತಿದೆ. ಕ್ಷೇತ್ರವಾರು ಅಗತ್ಯ ಅನುದಾನ ಬಿಡುಗಡೆ ಮಾಡಲಾಗುವುದು. ಜನರ ಜತೆ ನೇರವಾಗಿ ಸಂಪರ್ಕ ಸಾಧಿಸಿಕೊಳ್ಳಿ. ಸರ್ಕಾರದ ಸಾಧನೆಗಳ ಬಗ್ಗೆ ಜನರಿಗೆ ನಿರಂತರ ಜಾಗೃತಿ, ಮಾಹಿತಿ ಕೊಡುವ ಕೆಲಸ ಆಗಲಿ ಎಂದು ಸಿಎಂ ಬೊಮ್ಮಾಯಿ ಸಭೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ಪದಾಧಿಕಾರಿಗಳಿಗೆ ಸೂಚನೆ ನೀಡಿದರು.
Also Read: 19 ಮಂದಿ ಉನ್ನತ ಐಎಎಸ್ ಅಧಿಕಾರಗಳ ವರ್ಗಾವಣೆ ಮಾಡಿ ಆದೇಶ ಹೊರಡಿಸಿದ ಬಸವರಾಜ ಬೊಮ್ಮಾಯಿ ಸರ್ಕಾರ
Also Read: ಅಂತ್ಯಸಂಸ್ಕಾರಕ್ಕೆ ಅಡ್ಡಿ: ಜಮೀನು ಮಾಲೀಕರ ಮನವೊಲಿಸುವಲ್ಲಿ ಯಶಸ್ವಿಯಾದ ಹಿಂದುಳಿದ ವರ್ಗ ಇಲಾಖೆ ಅಧಿಕಾರಿಗಳು