ಬೆಂಗಳೂರು: BBMP ಕಸದ ಲಾರಿ ಹರಿದು ಡೆಲಿವರಿ ಬಾಯ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಲಾರಿ ಚಾಲಕ ದಿನೇಶ್ ನಾಯ್ಕ್ ಪರವಾನಿಗೆಯನ್ನೇ ಹೊಂದಿಲ್ಲ. ಲಾರಿ ಓಡಿಸಲು ಅರ್ಹತೆ ಇಲ್ಲದಿದ್ದರೂ ಡ್ರೈವಿಂಗ್ ಮಾಡುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ. ಚಾಲಕ ದಿನೇಶ್ ನಾಯ್ಕ್ ಕೇವಲ ಬೈಕ್, ಕಾರು ಮತ್ತು ಟ್ರಾಕ್ಟರ್ ಓಡಿಸಬಹುದು. ಎಲ್ಎಂವಿ & ಟ್ರ್ಯಾಕ್ಟರ್ ಚಾಲನೆ ಲೈಸೆನ್ಸ್ ಮಾತ್ರ ಹೊಂದಿದ್ದಾನೆ. ಹೆವಿ ಮೋಟಾರ್ ವೆಹಿಕಲ್ ಲೈಸೆನ್ಸ್ ಇಲ್ಲ. ಆದರೂ BBMP ಕಸದ ಲಾರಿ ಓಡಿಸಿ ಒಂದು ಜೀವವನ್ನು ತೆಗೆದಿದ್ದಾನೆ. ಪರಿಶೀಲನೆ ವೇಳೆ ದಿನೇಶ್ ಲೈಸೆನ್ಸ್ ಹೊಂದಿರದ ಕುರಿತು ಪತ್ತೆಯಾಗಿದೆ.
ಘಟನೆ ಹಿನ್ನೆಲೆ
ಶನಿವಾರ(ಮೇ 14) ಸಂಜೆ ಬಿಬಿಎಂಪಿ ಕಸದ ಲಾರಿ ಥಣಿಸಂದ್ರದ ರೇಲ್ವೇ ಮೇಲ್ಸೇತುವೆ ಬಳಿ 25 ವರ್ಷದ ಸ್ವಿಗ್ಗಿ ಡೆಲಿವರಿ ಬಾಯ್ ಒಬ್ಬನ ಮೇಲೆ ಹರಿದು ಯುವಕನನ್ನು ಕ್ಷಣಾರ್ಧದಲ್ಲಿ ಬಲಿ ಪಡೆದಿದೆ. ಯುವಕನನ್ನು ಯಾದಗಿರಿ ಜಿಲ್ಲೆ ಸುರಪುರದ ದೇವಣ್ಣ (Devanna) ಎಂದು ಗುರುತಿಸಲಾಗಿದೆ. ಲಾರಿಯ ಚಾಲಕ 40 ವರ್ಷ ವಯಸ್ಸಿನ ದಿನೇಶ್ ನಾಯ್ಕ್ ನನ್ನು ಬಂಧಿಸಿರುವ ಚಿಕ್ಕಜಾಲ ಟ್ರಾಫಿಕ್ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.
ಲಾರಿ ಬಹಳ ವೇಗದಿಂದ ಚಲಿಸುತಿತ್ತು ಮತ್ತು ದೇವಣ್ಣ ನಾಗವಾರ ಸರ್ಕಲ್ ನಿಂದ ಹೆಗಡೆ ನಗರದ ಕಡೆ ಬೈಕಲ್ಲಿ ಹೋಗುತ್ತಿದ್ದರು. ದೇವಣ್ಣ ಮೇಲ್ಸೇತುವೆ ಹತ್ತಿರದ ರಸ್ತೆಯಿಂದ ಮುಖ್ಯರಸ್ತೆಗೆ ತಿರುಗುತ್ತಿದ್ದ ಸಮಯದಲ್ಲಿ ವೇಗವಾಗಿ ಬರುತ್ತಿದ್ದ ಕಸದ ಲಾರಿ ಗುದ್ದಿದೆ. ಡಿಕ್ಕಿಯ ರಭಸಕ್ಕೆ ದೇವಣ್ಣ ಡಿವೈಡರ್ ಮೇಲಿಂದ ರಸ್ತೆಯ ಆ ಬದಿಗೆ ಹೋಗಿ ಬಿದಿದ್ದಾರೆ. ಹೆಲ್ಮೆಟ್ ಧರಿಸಿದ್ದರೂ ಅವರು ತಲೆ ಒಡೆದುಹೋಗಿತ್ತು ಅಂತ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.
Published On - 5:40 pm, Sun, 15 May 22