ಬೆಂಗಳೂರು: ವರ್ಷದ ಕೊನೆಯ ಹಾಗೂ ಕ್ರೈಸ್ತರ ದೊಡ್ಡ ಹಬ್ಬವಾಗಿರುವ ಕ್ರಿಸ್ಮಸ್ ಹಬ್ಬವನ್ನು ಡಿಸೆಂಬರ್ 25ರಂದು ಆಚರಿಸಲಾಗುತ್ತದೆ. ಆದ್ರೆ ಕೊರೊನಾ ಆತಂಕದಿಂದಾಗಿ ಈ ಬಾರಿ ಕೂಡ ಹಬ್ಬದಲ್ಲಿ ಭರ್ಜರಿ ಸೆಲೆಬ್ರೇಷನ್ಗೆ ಬ್ರೇಕ್ ಬಿದ್ದಿದೆ.
ಕ್ರಿಸ್‌ಮಸ್ ಆಚರಣೆಗೆ ಯಾವುದೇ ವಿಶೇಷ ಮಾರ್ಗಸೂಚಿ ಇರುವುದಿಲ್ಲ. ಆದ್ರೆ ಕಡ್ಡಾಯವಾಗಿ ಕೊರೊನಾ ಮಾರ್ಗಸೂಚಿಗಳನ್ನು ಅನುಸರಿಸಲೇ ಬೇಕು ಎಂದು ಬಿಬಿಎಂಪಿ ತಿಳಿಸಿದೆ. ಕಳೆದ ವರ್ಷದ ಮಾರ್ಗಸೂಚಿ ಪ್ರಕಾರವೇ ಈ ವರ್ಷವೂ ಹಬ್ಬವನ್ನು ಆಚರಿಸಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದ್ದಾರೆ. ಸ್ಯಾನಿಟೈಸರ್, ಮಾಸ್ಕ್, ದೈಹಿಕ ಅಂತರ ನಿಯಮ ಪಾಲಿಸಬೇಕು. ಚರ್ಚ್ ಬಳಿ ಹೆಚ್ಚು ಜನ ಸೇರುವಂತಿಲ್ಲ, ಸರಳವಾಗಿ ಆಚರಣೆ ಮಾಡಬೇಕು. ಹಸ್ತಲಾಘವ, ಆಲಿಂಗನ ಮಾಡುವಂತಿಲ್ಲ. ಕೊರೊನಾ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಹೆಚ್ಚುತ್ತಿರುವ ಮಹಾಮಾರಿ ಕೊರೊನಾ ಪ್ರಕರಣ ಮತ್ತು ಒಮಿಕ್ರೋನ್ ಭೀತಿಯಿಂದಾಗಿ ನಗರದಾದ್ಯಂತ ಕೊರೊನಾ ಪರೀಕ್ಷೆ ಹೆಚ್ಚಿಸಲಾಗಿದೆ. ಪ್ರತಿನಿತ್ಯ 40ರಿಂದ 50 ಸಾವಿರಕ್ಕೂ ಹೆಚ್ಚು ಪರೀಕ್ಷೆ ನಡೆಸಲಾಗುತ್ತಿದೆ. ಅವಶ್ಯಕತೆ ಬಿದ್ದರೆ ಪರೀಕ್ಷೆ ಪ್ರಮಾಣವನ್ನು ಇನ್ನೂ ಹೆಚ್ಚಿಸಲಾಗುವುದು. ರೋಗ ಲಕ್ಷಣ ಇದ್ದವರು ಕಡ್ಡಾಯವಾಗಿ ಪರೀಕ್ಷೆ ಮಾಡಿಸಿಕೊಂಡು ಹೋಂ ಐಸೋಲೇಷನ್‌ನಲ್ಲಿ ಇರಬೇಕು. ನೆಗಡಿ, ಕೆಮ್ಮು ಮತ್ತಿತರ ರೋಗ ಲಕ್ಷಣಗಳಿಂದ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಕಡ್ಡಾಯವಾಗಿ ಕೊರೊನಾ ತಪಾಸಣೆ ನಡೆಸುವಂತೆ ವೈದ್ಯರಿಗೆ ಸೂಚನೆ ನೀಡಿದ್ದೇವೆ ಎಂದು ಈ ವೇಳೆ ತಿಳಿಸಿದರು.
ಇದನ್ನೂ ಓದಿ: ಕಟ್ಟಡ ಕಾರ್ಮಿಕರಿಗೆ ಸಿಹಿ ಸುದ್ದಿ; ವಾಸಸ್ಥಳದಿಂದ ಕೆಲಸದ ಸ್ಥಳಕ್ಕೆ ಹೋಗಿ ಬರಲು ಇನ್ಮುಂದೆ ಸಿಗಲಿದೆ ಫ್ರೀ ಬಸ್ ಪಾಸ್