ಮೋದಿ ರಾಜ್ಯ ಪ್ರವಾಸ ವೇಳೆ ಕಳಪೆ ರಸ್ತೆ ಕಾಮಗಾರಿ ಹಿನ್ನೆಲೆ: ಇಬ್ಬರು ಇಂಜಿನಿಯರ್​ಗಳ ಅಮಾನತು, ಬಿಬಿಎಂಪಿ ಆದೇಶ

| Updated By: ಗಂಗಾಧರ​ ಬ. ಸಾಬೋಜಿ

Updated on: Jul 22, 2022 | 9:57 AM

ಪ್ರಧಾನಿ ನರೇಂದ್ರ ಮೋದಿ ಜೂನ್ 20ರಂದು ಬೆಂಗಳೂರಿಗೆ ಬಂದಾಗ, ಅವರು ಸಂಚರಿಸುವ ರಸ್ತೆಗಳು ಲಕಲಕ ಅಂತ ಹೊಳೆಯುತ್ತಿದ್ದವು. ಆದರೆ ಮೋದಿ ವಾಪಸ್ ಹೋದ್ಮೇಲೆ ತರಾತುರಿಯಲ್ಲಿ ಮಾಡಿದ್ದ ರಸ್ತೆಗಳು ಅದ್ವಾನ ಎದ್ದುಹೋಗಿದ್ದವು.

ಮೋದಿ ರಾಜ್ಯ ಪ್ರವಾಸ ವೇಳೆ ಕಳಪೆ ರಸ್ತೆ ಕಾಮಗಾರಿ ಹಿನ್ನೆಲೆ: ಇಬ್ಬರು ಇಂಜಿನಿಯರ್​ಗಳ ಅಮಾನತು, ಬಿಬಿಎಂಪಿ ಆದೇಶ
ಕಳಪೆ ಕಾಮಗಾರಿಯಿಂದ ಹಾಳಾದ ರಸ್ತೆ
Follow us on

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸ ವೇಳೆ 23 ಕೋಟಿ ರೂ. ಖರ್ಚು ಮಾಡಿ ನಿರ್ಮಾಣ ಮಾಡಿದ್ದ ರಸ್ತೆ ಕಳಪೆ ಕಾಮಗಾರಿ ಹಿನ್ನೆಲೆ ಇಬ್ಬರು ಎಂಜಿನಿಯರ್​ಗಳನ್ನು ಬಿಬಿಎಂಪಿ ಅಮಾನತು (suspended) ಮಾಡಿದೆ. ಕಳಪೆ ಕಾಮಗಾರಿ ಬಗ್ಗೆ ಟಿವಿ9 ವರದಿ ಮಾಡಿತ್ತು. ಟಿವಿ9 ಸುದ್ದಿ ಆಧಾರದ ಮೇಲೆ ಎಂಜಿನಿಯರ್​ಗಳಿಗೆ ನೋಟೀಸ್ ನೀಡಿದ್ದು, ಬಿಬಿಎಂಪಿ ಹಿರಿಯ ಅಧಿಕಾರಿಗಳು ತನಿಖೆ ಕೈಗೆತ್ತಿಕೊಂಡಿದ್ದರು. ಪ್ರಧಾನಿ ಕಚೇರಿಯಿಂದಲೂ ವರದಿ ಕೇಳಿದ್ದ ಹಿನ್ನಲೆ ಸ್ಥಳಕ್ಕೆ ಹೋಗಿ ಗುಣಮಟ್ಟ ಪರಿಶೀಲನೆ ಮಾಡಲಾಗಿದೆ. ಪರಿಶೀಲನೆ ವೇಳೆ ಕಳಪೆ ಕಾಮಗಾರಿ ಮಾಡಿರುವುದು ರೂಜುವಾತಾಗಿದ್ದು, 40 ಎಂ.ಎಂ ಡಾಂಬರೀಕರಣ ಮಾಡಬೇಕಿದ್ದ ಜಾಗದಲ್ಲಿ, 30 ಎಂ.ಎಂ ರಸ್ತೆ ಡಾಂಬರೀಕರಣ ಮಾಡಿದ್ದು, ತನಿಖೆ ವೇಳೆ ಕಳಪೆ ಕಾಮಗಾರಿ ಪತ್ತೆಯಾಗಿದೆ. ತನಿಖೆ ವರದಿ ಆಧರಿಸಿ ಎ.ರವಿ, ಸಹಾಯಕ ಕಾರ್ಯ‌ನಿರ್ವಹಕ ಅಭಿಯಂತರರು ಹಾಗೂ ವಿಶ್ವಾಸ್ ಐ.ಕೆ ಸಹಾಯಕ ಅಭಿಯಂತರರನ್ನ ಸೇವೆಯಿಂದ ಅಮಾನತು ಮಾಡಿ ಬಿಬಿಎಂಪಿ ಆಡಳಿತ ವಿಭಾಗದ ಉಪಯುಕ್ತ ಆದೇಶ ಹೊರಡಿಸಿದೆ.

ಇದನ್ನೂ ಓದಿ: ರಸ್ತೆಗೆ ಸ್ಪೀಡ್ ಬ್ರೇಕರ್ಸ್ ಅಳವಡಿಸಲು ಬಿಬಿಎಂಪಿಗೆ ಡೆಡ್​ಲೈನ್​ ನೀಡಿದ ಬೆಂಗಳೂರು ವಿವಿ ವಿದ್ಯಾರ್ಥಿಗಳು

23 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣ:

ಪ್ರಧಾನಿ ನರೇಂದ್ರ ಮೋದಿ ಜೂನ್ 20ರಂದು ಬೆಂಗಳೂರಿಗೆ ಬಂದಾಗ, ಅವರು ಸಂಚರಿಸುವ ರಸ್ತೆಗಳು ಲಕಲಕ ಅಂತ ಹೊಳೆಯುತ್ತಿದ್ದವು. ಆದರೆ ಮೋದಿ ವಾಪಸ್ ಹೋದ್ಮೇಲೆ ತರಾತುರಿಯಲ್ಲಿ ಮಾಡಿದ್ದ ರಸ್ತೆಗಳು ಅದ್ವಾನ ಎದ್ದುಹೋಗಿದ್ದವು. 23 ಕೋಟಿ ರೂಪಾಯಿ ಖರ್ಚು ಮಾಡಿ ನಿರ್ಮಾಣ ಮಾಡಿದ ರಸ್ತೆಯ ಸ್ಥಿತಿ ನೋಡುವಂತಿಲ್ಲ. ಬಿಬಿಎಂಪಿ(BBMP) ಡಾಂಬರ್ ರಸ್ತೆ ಕಳಪೆ ಕಾಮಗಾರಿ ವಿಚಾರ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿತ್ತು. ಹೀಗಾಗಿ ರಾಜ್ಯ ಸರ್ಕಾರಕ್ಕೆ, ಪ್ರಧಾನಿ ಕಾರ್ಯಾಲಯ ವರದಿ ಕೇಳಿದ್ದು ಬಿಬಿಎಂಪಿ ಆಯುಕ್ತರಿಗೆ ವರದಿ ನೀಡುವಂತೆ ಸಿಎಂ ಕಚೇರಿ ಸೂಚನೆ ನೀಡಲಾಗಿತ್ತು.

ಬೆಂಗಳೂರಿನ ವಿವಿಯಿಂದ ಮರಿಯಪ್ಪನಪಾಳ್ಯದ ಕಡೆ ಹೋಗುವ ರಸ್ತೆಯಲ್ಲಿ ಮೋದಿ ಬರ್ತಾರೆ ಅನ್ನೋ ಕಾರಣಕ್ಕೆ ಡಾಂಬರೀಕರಣ ಮಾಡಲಾಗಿತ್ತು. ಆದರೆ ಮೂರೇ ದಿನಕ್ಕೆ ಡಾಂಬರ್ ಕಿತ್ಕೊಂಡು ಬಂದಿದೆ. ಪ್ರಧಾನಿ ಭೇಟಿ ಕೊಟ್ಟ ಅಂಬೇಡ್ಕರ್ ಎಕನಾಮಿಕ್ ಕಾಲೇಜಿನ ರಸ್ತೆಯಲ್ಲೂ ಬೃಹತ್ ಗುಂಡಿ ಬಿದ್ದಿತ್ತು. ಅಂಬೇಡ್ಕರ್ ಕಾಲೇಜಿಗೆ ಮೋದಿ ಭೇಟಿ ಕೊಡ್ತಾರೆ ಅಂತಾ ಗುಂಡಿಗಳನ್ನ ಮುಚ್ಚಲಾಗಿತ್ತು.