ಬೆಂಗಳೂರು: ಬಿಬಿಎಂಪಿ (BBMP) ವ್ಯಾಪ್ತಿಯ 2010 ರಸ್ತೆ ಗುಂಡಿಗಳನ್ನು (Pothole) ಮುಚ್ಚಲಾಗಿದೆ ಎಂದು ಹೈಕೋರ್ಟ್ಗೆ (High Court) ಬಿಬಿಎಂಪಿ ಪರ ವಕೀಲ ವಿ. ಶ್ರೀನಿಧಿ ಮಾಹಿತಿ ನೀಡಿದ್ದಾರೆ. ಪ್ರಮುಖ ರಸ್ತೆಗಳ 221 ರಸ್ತೆಗುಂಡಿ ಮುಚ್ಚುವುದು ಬಾಕಿಯಿದೆ. ದೂರು ಪರಿಹಾರಕ್ಕೆ ವೆಬ್ಸೈಟ್ನಲ್ಲಿ ಅವಕಾಶ ಕಲ್ಪಿಸಲಾಗಿದೆ, ಆದರೆ ದೂರು ಪರಿಹಾರ ಕೋಶ ಅಸಮರ್ಪಕವಾಗಿದೆ. ವೆಬ್ಸೈಟ್ನ ದೂರವಾಣಿ ನಂಬರ್ ಕೆಲಸ ಮಾಡುತ್ತಿಲ್ಲವೆಂದು ಹೈಕೋರ್ಟ್ಗೆ ವರದಿ ನೀಡಿದ್ದಾರೆ.
ಇದಕ್ಕೆ ಹೈಕೋರ್ಟ್, ಇಂತಹ ವೆಬ್ಸೈಟ್ಗಳಿಂದ ದೂರು ಪರಿಹಾರ ಸಾಧ್ಯವೇ ? ಎಂದು ಬಿಬಿಎಂಪಿಗೆ ಹೈಕೋರ್ಟ್ ವಿಭಾಗೀಯ ಪೀಠ ಪ್ರಶ್ನೆ ಮಾಡಿದೆ. ರಸ್ತೆಗುಂಡಿ ಮುಚ್ಚಲು ಕೋಲ್ಡ್ ಮಿಕ್ಸ್ ಬಳಕೆಗೂ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದ್ದು, ಬಾಳಿಕೆ ಬರುವ ಹಾಟ್ ಮಿಕ್ಸ್ ತಂತ್ರಜ್ಞಾನ ಬಳಸಲು ಸೂಚನೆ ನೀಡಿದೆ.
427 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ಟೆಂಡರ್ ಕರೆಯಲಾಗಿದೆ. 2023 ಜ.21ರೊಳಗೆ ಡಾಂಬರೀಕರಣ ಪೂರ್ಣಗೊಳಿಸಲಾಗುವುದು. 2023 ಮಾ.31 ರೊಳಗೆ 2500 ಕಿ.ಮೀ. ಒಳರಸ್ತೆ ಡಾಂಬರೀಕರಣವನ್ನು ಪೂರ್ಣಗೊಳಿಸಲಾಗುವುದು ಎಂದು ಹೈಕೋರ್ಟ್ಗೆ ಬಿಬಿಎಂಪಿ ಪರ ವಕೀಲರು ಮಾಹಿತಿ ನೀಡಿದ್ದಾರೆ. ಬೈಕ್ ಸವಾರರಿಗೆ ಅಪಾಯಕಾರಿಯಾಗದ ರೀತಿ ರಸ್ತೆಗುಂಡಿ ಮುಚ್ಚಲು ಹೈಕೋರ್ಟ್ ಬಿಬಿಎಂಪಗೆ ಸೂಚನೆ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್ 30ಕ್ಕೆ ಮುಂದೂಡಿದೆ.
ಅರೆಬರೆ ಒತ್ತುವರಿ ತೆರವಿಗೆ ಹೈಕೋರ್ಟ್ ಅಸಮಾಧಾನ
ಮಳೆಯಿಂದಾಗಿ ಬೆಂಗಳೂರಿನಲ್ಲಿ ಪ್ರವಾಹ ಸ್ಥಿತಿ ಹಿನ್ನೆಲೆ ಅರೆಬರೆ ಒತ್ತುವರಿ ತೆರವಿಗೆ ಹೈಕೋರ್ಟ್ ಅಸಮಾಧಾನ ಹೊರ ಹಾಕಿದೆ. ರಾಜಕಾಲುವೆ ಒತ್ತುವರಿ ಕುರಿತಾದ ಸಿಎಜಿ ವರದಿ ಜಾರಿಗೊಳಿಸಿ ಬಿಬಿಎಂಪಿಗೆ ಹೈಕೋರ್ಟ್ ವಿಭಾಗೀಯ ಪೀಠ ನಿರ್ದೇಶನ ನೀಡಿದೆ. 2021ರ ಸೆಪ್ಟೆಂಬರ್ನಲ್ಲೇ ಸಿಎಜಿ ವರದಿ ನೀಡಿದ್ರೂ ಕ್ರಮ ಕೈಗೊಂಡಿಲ್ಲ. ಸಿಎಜಿ ವರದಿ ಜಾರಿಗೆ ಬಿಬಿಎಂಪಿ ಕ್ರಮ ತೃಪ್ತಿಕರವಾಗಿಲ್ಲ ಎಂದು ಸಿಎಜಿ ವರದಿ ಜಾರಿಗೆ 3 ಅಧಿಕಾರಿಗಳ ಸಮಿತಿ ರಚಿಸಲು ಸೂಚನೆ ನೀಡಿದೆ.
ಈ ಸಮಿತಿ ಸಿಎಜಿ ವರದಿ ಜಾರಿ ಬಗ್ಗೆ ನಿಗಾ ವಹಿಸಬೇಕು. 15 ದಿನಗಳಿಗೊಮ್ಮೆ ಹೈಕೋರ್ಟ್ಗೆ ವರದಿ ಸಲ್ಲಿಸಲು ಸೂಚಿಸಲಾಗಿದೆ. 2,626 ರಾಜಕಾಲುವೆ ಒತ್ತುವರಿ ಪೈಕಿ 2,024 ತೆರವುಗೊಳಿಸಲಾಗಿದೆ. 602 ಒತ್ತುವರಿ ತೆರವು ಬಾಕಿಯಿರುವುದಾಗಿ ಬಿಬಿಎಂಪಿ ಹೇಳಿದೆ. ಎಲ್ಲ ಒತ್ತುವರಿ ತೆರವುಗೊಳಿಸಿ 15 ದಿನಕ್ಕೊಮ್ಮೆ ವರದಿ ಸಲ್ಲಿಸಬೇಕು. ಹೈಕೋರ್ಟ್ ಆದೇಶ ಪಾಲಿಸದಿದ್ರೆ ಗಂಭೀರವಾಗಿ ಪರಿಗಣಿಸಲಾಗುವುದು. ಬೇರೆ ಸಂಸ್ಥೆಗಳು ಈ ಬಗ್ಗೆ ಪ್ರತ್ಯೇಕ ವಿಚಾರಣೆ ನಡೆಸದಂತೆ ಸೂಚನೆ ನೀಡಿ ಹೈಕೋರ್ಟ್ ಆದೇಶಿಸಿದೆ.
ಕೆರೆ ಒತ್ತುವರಿ ಕುರಿತು ತನಿಖೆ ಮಾಡಲು ಸರ್ಕಾರ ಸಿದ್ಧ
ಇನ್ನು ಮತ್ತೊಂದು ಕಡೆ ಕೆರೆ ಒತ್ತುವರಿ ಕುರಿತು ತನಿಖೆ ಮಾಡಲು ಸರ್ಕಾರ ಸಿದ್ಧ ಎಂದು ವಿಧಾನಸಭೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಒತ್ತುವರಿ ಬಗ್ಗೆ ತನಿಖೆ ಮಾಡಿಯೇ ಮಾಡುತ್ತೇವೆ. ತನಿಖೆಯ ಸ್ವರೂಪದ ಕುರಿತು ಮುಂದೆ ಮಾಹಿತಿ ನೀಡುತ್ತೇನೆ. ಕೆರೆಗಳನ್ನು ಯಾವ ರೀತಿ ಒತ್ತುವರಿ ಮಾಡಲಾಯ್ತು, ಕೆರೆಗಳನ್ನು ಹೇಗೆ ಮುಚ್ಚಲಾಯ್ತು, ಅನುಮತಿ ಕೊಟ್ಟವಱರು? ಈ ಎಲ್ಲದರ ಬಗ್ಗೆಯೂ ಸಹ ತನಿಖೆಯನ್ನು ಮಾಡಿಸುತ್ತೇವೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸದನದಲ್ಲಿ ಘೋಷಣೆ ಮಾಡಿದ್ದಾರೆ.
ವಿಧಾನಸಭೆಯ ಕಲಾಪದಲ್ಲಿ ಅತಿವೃಷ್ಟಿ ಕುರಿತು ಕಂದಾಯ ಸಚಿವ ಅಶೋಕ್ ಉತ್ತರ ಕೊಡ್ತಿದ್ರು. ಈ ವೇಳೆ ಮಧ್ಯ ಪ್ರವೇಶ ಮಾಡಿದ ಸರ್ವಜ್ಞ ನಗರ ಶಾಸಕ ಕೆ.ಜೆ. ಜಾರ್ಜ್, ಕೆರೆ ರಕ್ಷಣೆ ಮಾಡುವ ಜವಾಬ್ದಾರಿ ಎಲ್ಲಾ ಸರಕಾರಗಳದ್ದು. ಆದರೆ ಕೆರೆ ಒತ್ತುವರಿ ಮಾಡಿದ್ದಾರೆ ಅಂತ ಆರೋಪ ಮಾಡಲಾಗಿದೆ. ದುರುದ್ದೇಶದಿಂದ ಆರೋಪ ಮಾಡುವುದನ್ನು ನಿಲ್ಲಿಸಬೇಕು. ನಮ್ಮ ಕಾಲದಲ್ಲಿ ಕೆರೆ ಮುಚ್ಚಿದ್ದರೆ ತನಿಖೆ ಮಾಡಿ ಎಂದು ಸಿಎಂ ಬೊಮ್ಮಾಯಿಗೆ ಮನವಿ ಮಾಡಿದ್ರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:38 pm, Mon, 19 September 22