ಬೆಂಗಳೂರು, (ಅಕ್ಟೋಬರ್ 24): ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಕೆರೆ ಹಾಗೂ ಉದ್ಯಾನವನಗಳ ನಿರ್ವಹಣೆಯ ಮೇಲ್ವಿಚಾರಣೆ ನಡೆಸಲು ನಾಗರಿಕರಿಗೆ ಅವಕಾಶ ಕಲ್ಪಿಸಿದ್ದು, ಆಸಕ್ತರು ‘ಕೆರೆ ಮಿತ್ರ’ ಹಾಗೂ ‘ಹಸಿರು ಮಿತ್ರ’ರಾಗಿ (‘Kere Mitras’ and ‘Hasiru Mitras’) ನೋಂದಾಯಿಸಿಕೊಳ್ಳಬಹುದು. ಇತ್ತೀಚೆಗೆ ನಡೆದ ಬ್ರ್ಯಾಂಡ್ ಬೆಂಗಳೂರು ಸಮ್ಮೇಳನದಲ್ಲಿ ಉಪಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿಕೆ ಶಿವಕುಮಾರ್ ಅವರು ನಾಗರಿಕರಿಗೆ ಕೆರೆ, ಉದ್ಯಾನವನಗಳ ನಿರ್ವಹಣೆ ನೀಡುವ ಬಗ್ಗೆ ಹೇಳಿದ್ದರು. ಅವರ ಯೋಜನೆಯಂತೆ ಪ್ರಥಮವಾಗಿ ಕೆರೆ ಮಿತ್ರ ಹಾಗೂ ಹಸಿರು ಮಿತ್ರ ಆರಂಭವಾಗುತ್ತಿದೆ.
ನಾಗರಿಕ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ತನ್ನ ‘ಕೆರೆ’ ಮತ್ತು ‘ಹಸಿರು ಮಿತ್ರ’ ಕಾರ್ಯಕ್ರಮಕ್ಕಾಗಿ ಅರ್ಜಿ ಸಲ್ಲಿಸಲು ನಾಗರಿಕರನ್ನು ಆಹ್ವಾನಿಸಿದೆ. ಅಕ್ಟೋಬರ್ 30 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದ್ದು, ಸೀಮಿತ ಮಂದಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. https://bbmp.gov.in/ ವೆಬ್ಸೈಟ್ಗೆ ಭೇಟಿ ನೀಡಿ ಅ.30ರೊಳಗೆ ನೋಂದಾಯಿಸಿಕೊಳ್ಳಬಹುದಾಗಿದೆ.
ಹೆಸರು ನೋಂದಾಯಿಸಿದವರಲ್ಲಿ ರ್ಯಾಂಡಮ್ ಆಗಿ 10 ಜನರನ್ನು ಆಯ್ಕೆ ಮಾಡಲಾಗುತ್ತದೆ. ಅವರು ಕೆರೆ ಮಿತ್ರ ಹಾಗೂ ಹಸಿರು ಮಿತ್ರರಾಗಿ ಒಂದು ತಿಂಗಳು ಕೆರೆ ಅಥವಾ ಉದ್ಯಾನವದ ಮೇಲ್ವಿಚಾರಣೆಯನ್ನು ನಿರ್ವಹಿಸಬಹುದು. ಬಳಿಕ ಅವುಗಳ ಅಭಿಪ್ರಾಯಗಳನ್ನು ತಿಳಿಸಬಹುದು ಎಂದು ಬಿಬಿಎಂಪಿ ಕೆರೆಗಳ ವಿಭಾಗದ ಮುಖ್ಯ ಇಂಜಿನಿಯರ್ ವಿಯಯ್ ಕುಮಾರ್ ಹರಿದಾಸ್ ಮಾಹಿತಿ ನೀಡಿದ್ದಾರೆ.
ಬಿಬಿಎಂಪಿ ವೆಬ್‌ಸೈಟ್‌ನಲ್ಲಿ ಒದಗಿಸಲಾದ ನೋಂದಣಿ ನಮೂನೆಯು ಆಸಕ್ತ ಸ್ವಯಂಸೇವಕರಿಂದ ಹೆಸರು, ಫೋನ್ ಸಂಖ್ಯೆ, ಇಮೇಲ್ ಐಡಿ, ವಸತಿ ವಿಳಾಸ, ಮತದಾರರ ಗುರುತಿನ ಪ್ರತಿ, ವಾರ್ಡ್‌ನ ಹೆಸರು ಮತ್ತು ಆದ್ಯತೆಯ ಕೆರೆ ಅಥವಾ ಉದ್ಯಾನದಂತಹ ವಿವರಗಳನ್ನು ನೀಡಬೇಕಾಗುತ್ತದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಡಿಯಲ್ಲಿ ಬರುವುದರಿಂದ ವರ್ತೂರು ಮತ್ತು ಬೆಳ್ಳಂದೂರು ಕೆರೆಗಳು ಪಟ್ಟಿಯಲ್ಲಿಲ್ಲ.
ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ