ಜಯನಗರ ಶಾಪಿಂಗ್​ ಕಾಂಪ್ಲೆಕ್ಸ್ ಬಳಿ ಫುಟ್‌ಪಾತ್‌ ವ್ಯಾಪಾರ ಅಂಗಡಿಮುಂಗಟ್ಟು ತೆರವುಗೊಳಿಸಲಿರುವ ಬಿಬಿಎಂಪಿ, ಏನಿದೆ ಸದ್ಯದ ಚಿತ್ರಣ

|

Updated on: Nov 07, 2023 | 10:39 AM

ಮಂಗಳವಾರ ಬೆಳಗ್ಗೆ 11.30ಕ್ಕೆ ಬಿಬಿಎಂಪಿ ಮಾರ್ಷಲ್‌ಗಳ ತಂಡ ಸ್ಥಳಕ್ಕೆ ಆಗಮಿಸಿ, ಬೀದಿಬದಿ ವ್ಯಾಪಾರಿಗಳನ್ನು ಫುಟ್‌ಪಾತ್‌ನಿಂದ ತೆರವುಗೊಳಿಸಲಿದ್ದಾರೆ. ಅದಕ್ಕೂ ಮೊದಲು ಅವರೇ ಜಾಗ ಖಾಲಿ ಮಾಡಲು ಕೊನೆಯ ಅವಕಾಶ ನೀಡಲಾಗುತ್ತದೆ ಎಂದು ಬಿಬಿಎಂಪಿ ಘೋಷಿಸಿದೆ.

ಜಯನಗರ ಶಾಪಿಂಗ್​ ಕಾಂಪ್ಲೆಕ್ಸ್ ಬಳಿ ಫುಟ್‌ಪಾತ್‌ ವ್ಯಾಪಾರ ಅಂಗಡಿಮುಂಗಟ್ಟು ತೆರವುಗೊಳಿಸಲಿರುವ ಬಿಬಿಎಂಪಿ, ಏನಿದೆ ಸದ್ಯದ ಚಿತ್ರಣ
ಜಯನಗರ ಶಾಪಿಂಗ್​ ಕಾಂಪ್ಲೆಕ್ಸ್ ಬಳಿ ಇಂದು ಫುಟ್‌ಪಾತ್‌ ವ್ಯಾಪಾರಿ ಅಂಗಡಿಮುಂಗಟ್ಟು ತೆರವುಗೊಳಿಸಲಿರುವ ಬಿಬಿಎಂಪಿ
Follow us on

ಬೆಂಗಳೂರು: ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಜಯನಗರ ಬಿಡಿಎ ಶಾಪಿಂಗ್​ ಕಾಂಪ್ಲೆಕ್ಸ್ ಬಳಿ (Jayanagar BDA shopping complex) ವ್ಯಾಪಾರ ವಹಿವಾಟು ನಡೆಸುತ್ತಿರುವ ಬೀದಿಬದಿ ವ್ಯಾಪಾರಿಗಳು ಅತಂತ್ರ ಸ್ಥಿತಿ ಎದುರಿಸುತ್ತಿದ್ದಾರೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮಂಗಳವಾರ ಬೆಳಗ್ಗೆ ಇಲ್ಲಿನ ಫುಟ್‌ಪಾತ್‌ ವ್ಯಾಪಾರಿಗಳ ಅಂಗಡಿಮುಂಗಟ್ಟು ತೆರವುಗೊಳಿಸಲು ಸಜ್ಜಾಗಿದೆ. ಹಬ್ಬದ ಸಂದರ್ಭದಲ್ಲಿ ಬಂಪರ್ ಮಾರಾಟಕ್ಕಾಗಿ ಎದುರು ನೋಡುತ್ತಿದ್ದ ಮಾರಾಟಗಾರರಿಗೆ (Jayanagar vendors) ಬಿಬಿಎಂಪಿ ನಡೆ ತುಸು ಆಘಾತ ತಂದಿದೆ. ಇಲ್ಲಿನ ವ್ಯಾಪಾರಿಗಳಿಗೆ ಇನ್ನೂ ಯಾವುದೇ ಪರ್ಯಾಯ ಜಾಗಗಳನ್ನು ನೀಡಲಾಗಿಲ್ಲ ಎಂಬುದು ಆರೋಪವಾಗಿದೆ. ಆದಾಗ್ಯೂ ಪೊಲೀಸರ ನೆರವಿನೊಂದಿಗೆ ಸಂಕೀರ್ಣದ ಸುತ್ತಲಿನ ಎಲ್ಲ ಅತಿಕ್ರಮಣ ಫುಟ್‌ಪಾತ್‌ ಅಂಗಡಿಗಳನ್ನು ತೆರವುಗೊಳಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ಪುನರುಚ್ಚರಿಸಿದ್ದಾರೆ.

ಮಂಗಳವಾರ ಬೆಳಗ್ಗೆ 11.30ಕ್ಕೆ ಬಿಬಿಎಂಪಿ ಮಾರ್ಷಲ್‌ಗಳ ತಂಡ ಸ್ಥಳಕ್ಕೆ ಆಗಮಿಸಿ, ಬೀದಿಬದಿ ವ್ಯಾಪಾರಿಗಳನ್ನು ಫುಟ್‌ಪಾತ್‌ನಿಂದ ತೆರವುಗೊಳಿಸಲಿದ್ದಾರೆ. ಅದಕ್ಕೂ ಮೊದಲು ಅವರೇ ಜಾಗ ಖಾಲಿ ಮಾಡಲು ಕೊನೆಯ ಅವಕಾಶ ನೀಡಲಾಗುತ್ತದೆ ಎಂದು ಬಿಬಿಎಂಪಿ ಘೋಷಿಸಿದೆ. ಹೆಚ್ಚಿನ ಮಾರಾಟಗಾರರು ಹತ್ತಾರು ವರ್ಷಗಳಿಂದ ಇಲ್ಲಿ ಅಂಗಡಿಗಳನ್ನು ಹಾಕಿಕೊಂಡಿದ್ದಾರೆ. ಅವುಗಳನ್ನು ಈಗ ತೆರವುಗೊಳಿಸುವುದು ಅವರ ಜೀವನೋಪಾಯವನ್ನು ಕಸಿದುಕೊಳ್ಳುವಂತಾಗುತ್ತದೆ ಎಮದು ಕೆಲವರು ಅಭಿಪ್ರಾಯಪಟ್ಟಿದ್ದಾರೆ ಎಂದು ಟೈಮ್ಸ್​ ಆಫ್​ ಇಂಡಿಯಾ (TOI) ವರದಿ ಮಾಡಿದೆ.

25 ವರ್ಷಗಳಿಂದ ಈ ಪ್ರದೇಶದಲ್ಲಿ ಬಟ್ಟೆ ಮಾರಾಟ ಮಾಡುತ್ತಿರುವ ಯೂಸುಫ್ (35) ಹೀಗೆ ಹೇಳುತ್ತಾರೆ: “ಜಯನಗರ ಕಾಂಪ್ಲೆಕ್ಸ್​​ಗೆ ಮಾತ್ರವೇ ಜನ ಇಲ್ಲಿಗೆ ಬರುವುದಿಲ್ಲ. ಬೀದಿಬದಿ ಶಾಪಿಂಗ್‌ಗಾಗಿಯೂ ಸಾಕಷ್ಟು ಜನರು ಬರುತ್ತಾರೆ. ಜನರು ನಮ್ಮ ಈ ಸರಕುಗಳನ್ನು ಇಷ್ಟಪಡುತ್ತಾರೆ. ಪ್ರತಿದಿನವೂ ಜನ ಇಲ್ಲಿಗೆ ಬಂದು ನಮ್ಮಿಂದ ಖರೀದಿಸುತ್ತಾರೆ. ಇದು ಹಬ್ಬದ ಸೀಸನ್‌ ಆಗಿರುವುದರಿಂದ ಹೆಚ್ಚು ಜನ ಬರುತ್ತಾರೆ. ಆದರೆ ಬಿಬಿಎಂಪಿ ಅವರು ನಮ್ಮನ್ನು ಇದ್ದಕ್ಕಿದ್ದಂತೆ ಇಲ್ಲಿಂದ ಎದ್ದುಹೋಗುವಂತೆ ಕೇಳಿದರೆ ನಾವು ಎಲ್ಲಿಗೆ ಹೋಗಬೆಕು? ನಮಗೆ ಏನೂ ತೋಚುತ್ತಿಲ್ಲ”

ಜಯನಗರ ಶಾಪಿಂಗ್​ ಕಾಂಪ್ಲೆಕ್ಸ್ ಬಳಿ 35 ವರ್ಷಗಳಿಂದ ಬಟ್ಟೆಗಳನ್ನು ಮಾರಾಟ ಮಾಡುತ್ತಿರುವ 49 ವರ್ಷದ ಶೇಕ್ ಸಲೀಮ್ ಅವರು TOI ಗೆ ಹೀಗೆ ಹೇಳಿದ್ದಾರೆ “ಬೇರೆಯವರು ಬಂದು ನಿಮ್ಮನ್ನು ನಿಮ್ಮ ಮನೆಯಿಂದ ಹೊರಗೆ ಹೋಗಲು ಕೇಳಿದರೆ ನೀವು ನಿಮ್ಮ ಮನೆಯಿಂದ ಹೊರಗೆ ಹೋಗುತ್ತೀರಾ? ಇಲ್ಲತಾನೆ? ಇಲ್ಲಿ ನಮಗೂ ಅಷ್ಟೇ. ವರ್ಷಗಳಿಂದ ಇಲ್ಲಿ ಬಟ್ಟೆ ಮಾರುತ್ತಿದ್ದೇವೆ. ನಾವು ಇಲ್ಲಿಂದ ಹೇಗೆ ಹೊರಹೋಗುವುದು? ಅಧಿಕಾರಿಗಳು ನಮಗೆ ಮಾರಾಟ ಮಾಡಲು ಬೇರೆ ಸ್ಥಳವನ್ನು ಸಹ ನೀಡಿಲ್ಲ. ನಮ್ಮ ವ್ಯಾಪಾರವನ್ನು ನಡೆಸಲು ನಾವು ಬೇರೆಲ್ಲಿಗೆ ಹೋಗಬೆಕು? ನಾವು ಇಲ್ಲಿಂದ ಕದಲುವುದಿಲ್ಲ, ಇದು ನಮ್ಮ ಸ್ಥಳ”

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:38 am, Tue, 7 November 23