ಲೋಕಾಯುಕ್ತ ಎಡಿಜಿಪಿ ಎಂದು ಕಾರ್ಯಪಾಲಕ ಇಂಜಿನಿಯರ್ಗೆ ಕರೆ ಮಾಡಿದ್ದ ವ್ಯಕ್ತಿಯ ಬಂಧನ
ಲೋಕಾಯುಕ್ತ ಎಡಿಜಿಪಿ ಎಂದು ಶಿರಾ ವಿಭಾಗದ ಭದ್ರಾ ಮೇಲ್ದಂಡೆ ಕಾರ್ಯಪಾಲಕ ಇಂಜಿನಿಯರ್ ರಾಮದಾಸಪ್ಪಗೆ ಕರೆ ಮಾಡಿದ್ದ ವ್ಯಕ್ತಿಯನ್ನು ವಿಧಾನಸೌಧ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರು ನ.07: ಲೋಕಾಯುಕ್ತ (Lokayukta) ಎಡಿಜಿಪಿ (ADGP) ಎಂದು ಶಿರಾ ವಿಭಾಗದ ಭದ್ರಾ ಮೇಲ್ದಂಡೆ ಕಾರ್ಯಪಾಲಕ ಇಂಜಿನಿಯರ್ ರಾಮದಾಸಪ್ಪಗೆ ಕರೆ ಮಾಡಿದ್ದ ವ್ಯಕ್ತಿಯನ್ನು ವಿಧಾನಸೌಧ ಪೊಲೀಸ್ (Police) ಠಾಣೆ ಪೊಲೀಸರು ಬಂಧಿಸಿದ್ದಾರೆ. ಪಟ್ಟೆಗಾರಪಾಳ್ಯದ ತ್ಯಾಗರಾಜ್ (68) ಬಂಧಿತ ಆರೋಪಿ. ಆರೋಪಿ ತ್ಯಾಗರಾಜ್ ಕಾರ್ಯಪಾಲಕ ಇಂಜಿನಿಯರ್ ರಾಮದಾಸಪ್ಪಗೆ ಕರೆ ಮಾಡಿ, ನಾನು ಲೋಕಾಯುಕ್ತ ಇನ್ಸ್ಪೆಕ್ಟರ್ ಎಂದು ಪರಿಚಯಿಸಿಕೊಂಡಿದ್ದಾನೆ.
ನಂತರ ನಮ್ಮ ಲೋಕಾಯುಕ್ತ ಎಡಿಜಿಪಿ ಸಾಹೇಬರು ನಿಮ್ಮ ಜೊತೆ ಮಾತನಾಡುತ್ತಾರೆ ಎಂದು ಹೇಳಿದ್ದಾನೆ. ಆತನೇ ಧ್ವನಿ ಬದಲಾಯಿಸಿ, ನಿಮ್ಮ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ಮುಕ್ತಾಯಗೊಳಿಸಲು ವ್ಯವಹಾರ ಮಾಡಬೇಕಾಗಿರುತ್ತದೆ ಎಂದು ಹೇಳಿದನು. ಪ್ರಕರಣ ಮುಕ್ತಾಯ ಮಾಡಲು ನಮ್ಮ ಲೋಕಾಯುಕ್ತ ಇನ್ಸ್ಪೆಕ್ಟರ್ ಅವರನ್ನು ಭೇಟಿ ಮಾಡಿ ಎಂದಿದ್ದನು.
ಈ ಬಗ್ಗೆ ಅನುಮಾನಗೊಂಡ ರಾಮದಾಸಪ್ಪ ಅವರು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರು ಹಿನ್ನೆಲೆಯಲ್ಲಿ ತನಿಖೆಗೆ ಇಳಿದ ಪೊಲೀಸರು ಆರೋಪಿ ತ್ಯಾಗರಾಜ್ನನ್ನು ಬಂಧಿಸಿದರು. ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ