ಬೆಂಗಳೂರು: ಮತದಾರರ ಪಟ್ಟಿ ನವೀಕರಣ ಕಾರ್ಯಾಚರಣೆಗೆ ಬಿಬಿಎಂಪಿ(BBMP) ನೀಡಿದ ಆದೇಶ ದುರುಪಯೋಗವಾಗಿದೆ. ಖಾಸಗಿ ಎನ್‌ಜಿಒ(Bengaluru NGO) ಚಿಲುಮೆ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆ ವಿರುದ್ಧ ದುರ್ಬಳಕೆ ಆರೋಪ ಕೇಳಿ ಬಂದಿದೆ. ಖಾಸಗಿ ಎನ್‌ಜಿಒ ಚಿಲುಮೆ ಸಂಸ್ಥೆ, ತಮ್ಮ ಏಜೆಂಟರನ್ನು ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ರಹಸ್ಯವಾಗಿ ಮತದಾರರ ವೈಯಕ್ತಿಕ, ಸೂಕ್ಷ್ಮ ಮಾಹಿತಿಗಳನ್ನು ಸಂಗ್ರಹಿಸಿದೆ(Voters Data) ಎಂಬ ಆರೋಪ ಕೇಳಿ ಬಂದಿದೆ. ಹಲವು ತಿಂಗಳಿಂದ ಈ ಅಕ್ರಮ ಸರ್ವೆ ನಡೆದಿದೆ ಎನ್ನಲಾಗುತ್ತಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ ಮತದಾರರ ಪಟ್ಟಿಯನ್ನು ಪರಿಷ್ಕರಿಸಲು ಚುನಾವಣಾ ಆಯೋಗದ ವಿಶೇಷ ಮತದಾರರ ಜಾಗೃತಿ ಅಭಿಯಾನ SVEEP (Systematic Voters Education and Electoral Participation) ನಡೆಸಲು ಚಿಲುಮೆ ಸಂಸ್ಥೆಗೆ ಬಿಬಿಎಂಪಿ ಅನುಮತಿ ನೀಡಿತ್ತು. ಆದರೆ ಚಿಲುಮೆ ಸಂಸ್ಥೆ ಆದೇಶವನ್ನು ದುರುಪಯೋಗಪಡಿಸಿಕೊಂಡಿದೆ. ತನ್ನ ನೂರಾರು ಏಜೆಂಟರಿಗೆ ನಕಲಿ ಐಡಿ-ಕಾರ್ಡ್‌ಗಳನ್ನು ನೀಡಿದೆ ಎನ್ನಲಾಗಿದ್ದು ಆ ಐಡಿ ಕಾರ್ಡುಗಳಲ್ಲಿ ಏಜೆಂಟರನ್ನ ಬಿಬಿಎಂಪಿಯ ಬೂತ್ ಮಟ್ಟದ ಅಧಿಕಾರಿಗಳು ಎಂದು ಉಲ್ಲೇಖಿಸಲಾಗಿದೆಯಂತೆ.
ಇದನ್ನೂ ಓದಿ: ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳ ಮತದಾರರ ಪಟ್ಟಿ ಪರಿಷ್ಕರಣೆಗೆ ಅವಕಾಶ: ರಾಜ್ಯ ಚುನಾವಣಾ ಆಯೋಗ
ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ಹಿಂಪಡೆದ ಬಿಬಿಎಂಪಿ
BLO ಆಗಬೇಕಾದ್ರೆ ಅವರು ಸರ್ಕಾರಿ, ಅರೆ-ಸರ್ಕಾರಿ ಅಥವಾ ನಿವೃತ್ತ ಸರ್ಕಾರಿ ನೌಕರರಾಗಿರಬೇಕು. ಬಿಎಲ್‌ಒಗಳು ತಮ್ಮನ್ನು ನಿಯೋಜಿಸಲಾದ ಮತಗಟ್ಟೆಯ ನಿವಾಸಿಗಳಾಗಿರಬೇಕು. ಆದರೆ, ಚಿಲುಮೆ ಸಂಸ್ಥೆ ತನ್ನ ಏಜೆಂಟರುಗಳಿಗೆ ಬಿಎಲ್‌ಒ ಎಂದು ನಕಲಿ ಗುರುತಿನ ಚೀಟಿ ನೀಡಿ ಮತದಾರರ ಮಾಹಿತಿ ಸಂಗ್ರಹಿಸಿದೆ. ಈ ಏಜೆಂಟ್ಗಳು ಮತದಾರರಿಂದ ಜಾತಿ, ಮಾತೃಭಾಷೆ, ವೈವಾಹಿಕ ಸ್ಥಿತಿ, ವಯಸ್ಸು, ಲಿಂಗ, ಉದ್ಯೋಗ ಮತ್ತು ಶಿಕ್ಷಣದ ವಿವರ, ಆಧಾರ್ ಸಂಖ್ಯೆ, ಫೋನ್ ಸಂಖ್ಯೆ, ವಿಳಾಸ, ಮತದಾರರ ಐಡಿ ಸಂಖ್ಯೆ ಮತ್ತು ಇಮೇಲ್ ವಿಳಾಸ ಸೇರಿದಂತೆ ಮತದಾರರ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಹಾಗೂ ಚುನಾಯಿತ ಪ್ರತಿನಿಧಿಗಳ ಕಾರ್ಯದ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರ ಸಂಗ್ರಹಿಸಿದ್ದಾರೆ. ಈ ಅಕ್ರಮ ವಿಚಾರ ಬಯಲಾಗ್ತಿದ್ದಂತೆ ಬಿಬಿಎಂಪಿ ತರಾತುರಿಯಲ್ಲಿ ಎನ್‌ಜಿಒಗೆ ನೀಡಿದ್ದ ಅನುಮತಿ ರದ್ದುಗೊಳಿಸಿದೆ. ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿಯನ್ನು ಬಿಬಿಎಂಪಿ ಹಿಂಪಡೆದಿದೆ.
ಇನ್ನು ಈ ಚಿಲುಮೆ ಸಂಸ್ಥೆ ಕಾರ್ಯಾಚರಣೆಯ ಭಾಗವಾಗಿ ಅಕ್ರಮವಾಗಿ ಸಂಗ್ರಹಿಸಿದ ಸಾವಿರಾರು ಮತದಾರರ ಡೇಟಾವು ಅಗಾಧವಾದ ವಾಣಿಜ್ಯ ಮೌಲ್ಯವನ್ನು ಹೊಂದಿದ್ದು, ಇದನ್ನು ಖರೀದಿಸಲು ಖಾಸಗಿ ಸಂಸ್ಥೆಗಳು ತುದಿಗಾಲಲ್ಲಿ ನಿಂತಿವೆಯಂತೆ. ಯಾವುದೇ ವಿಧಾನದಿಂದ ಚುನಾವಣೆಯಲ್ಲಿ ಗೆಲ್ಲಲು ಹವಣಿಸುತ್ತಿರುವ ರಾಜಕಾರಣಿಗಳಿಗೆ ಈ ಡೇಟಾವು ಅಮೂಲ್ಯವಾಗಿದೆ. ಈ ಕಾರಣಕ್ಕಾಗಿಯೇ ಈ ಮಾಹಿತಿಯನ್ನು ಸಂಗ್ರಹಿಸಲು ಸರ್ಕಾರಿ ಅಧಿಕಾರಿಗಳಿಗೆ ಮಾತ್ರ ಅನುಮತಿಸಲಾಗಿದೆ.
Published On - 7:31 am, Thu, 17 November 22