ಬೆಂಗಳೂರು: ಗಾರ್ಡನ್ ಸಿಟಿ, ಗ್ರೀನ್ ಸಿಟಿಯೆಂದು ಹೆಸರು ಪಡೆದಿರುವ ಬೆಂಗಳೂರನ್ನು ಮತ್ತಷ್ಟು ಹಸಿರು ಮಾಡಲು ಬಿಬಿಎಂಪಿ ಮುಂದಾಗಿದೆ. ನಗರವನ್ನು ಹಸಿರಾಗಿಸಲು ಬಿಬಿಎಂಪಿಯು ನಿವಾಸಿ ಕಲ್ಯಾಣ ಸಂಘಗಳು (ಆರ್‌ಡಬ್ಲ್ಯುಎ) ಮತ್ತು ಲಾಭರಹಿತ ಸಂಸ್ಥೆಗಳು ಸೇರಿದಂತೆ ನಾಗರಿಕರಿಗೆ 2.5 ಲಕ್ಷ ಸಸಿಗಳನ್ನು ವಿತರಿಸಲು ಸಿದ್ಧತೆ ನಡೆಸಿದೆ.
ಬಿಬಿಎಂಪಿಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಸರೀನಾ ಸಿಕ್ಕಲಿಗಾರ್ ಈ ಬಗ್ಗೆ ಮಾತನಾಡಿ, ಈ ಮಳೆಗಾಲದಲ್ಲಿ 1 ಲಕ್ಷ ಸಸಿಗಳನ್ನು ನೆಡಲಾಗುವುದು. “ಈಗಾಗಲೇ ನಾವು ಎರಡು ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಟ್ಟಿದ್ದೇವೆ. ಇವುಗಳಲ್ಲಿ ಸರಿಸುಮಾರು 90 ಪ್ರತಿಶತದಷ್ಟು ಸಸಿಗಳು ಉಳಿದುಕೊಂಡಿವೆ, ಹಾಳಾದ ಸಸಿಗಳ ಸ್ಥಳಗಳಲ್ಲಿ ಹೊಸ ಸಸಿಗಳನ್ನು ನೆಡುತ್ತೇವೆ” ಸಸಿಗಳನ್ನು ನೆಡಲು ಗಾರ್ಡ್ಗಳನ್ನು ನೇಮಿಸಲಾಗುವುದು. ಅವರು ಮೂರು ವರ್ಷಗಳ ಕಾಲ ನೀರು ಹಾಕುವ ಮತ್ತು ಗಿಡಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಅವರು ತಿಳಿಸಿದರು.
ಆದರೆ, ಬಿಬಿಎಂಪಿ ನೀಡಿರುವ ಸಸಿಗಳ ಬಗ್ಗೆ ಸ್ಥಳೀಯ ಸಮುದಾಯಗಳು ಅಸಮಾಧಾನ ವ್ಯಕ್ತಪಡಿಸಿವೆ.
BBMPಯ ಸಸಿ ನೆಡುವ ಕಾರ್ಯದಲ್ಲಿ ಅನುಭವ ಹೊಂದಿರುವ RWA ಸಂಸ್ಥೆಗಳು, ಈ ಯೋಜನೆ ಹೆಚ್ಚಿನ ಮಟ್ಟದಲ್ಲಿ ಯಶಸ್ಸು ಕಾಣಬೇಕಾದ್ರೆ ಸಸಿಗಳ ಜೊತೆಗೆ ಗಾರ್ಡ್‌ಗಳನ್ನೂ ಒದಗಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿವೆ.
ಇದನ್ನೂ ಓದಿ: ಗೋಲ್ಮಾಲ್: ಬಿಬಿಎಂಪಿ ಶಾಲಾ ಕಾಲೇಜುಗಳಿಗೆ ಅನರ್ಹ ಶಿಕ್ಷಕರ ನೇಮಕ
“ಟ್ರೀ ಗಾರ್ಡ್‌ಗಳು ದುಬಾರಿ ಮತ್ತು ಅವರು ಸುಲಭವಾಗಿ ಲಭ್ಯವಿರುವುದಿಲ್ಲ. ನಾವು ಬಿಬಿಎಂಪಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಅವರು ಸ್ಟಾಕ್ ಇಲ್ಲವೆಂದು ಹೇಳಿಬಿಡುತ್ತಾರೆ” ಎಂದು ರಾಮಮೂರ್ತಿನಗರ ನಿವಾಸಿಗಳ ಕಲ್ಯಾಣ ಸಂಘದ (ಆರ್‌ಡಬ್ಲ್ಯೂಎ) ಶಂಕರ್ ಹೇಳಿದರು. “ನಮ್ಮ ವಾರ್ಡ್‌ನಲ್ಲಿ ಅಂದಾಜು 500 ಹಸುಗಳಿದ್ದು, ಟ್ರೀ ಗಾರ್ಡ್‌ಗಳಿಲ್ಲದೆ, ಸಸ್ಯಗಳನ್ನು ರಕ್ಷಿಸಲು ಆಗುತ್ತಿಲ್ಲ. ಹಸುಗಳು ಸಸಿಗಳನ್ನು ತಿಂದು ಹಾಕುತ್ತವೆ ಎಂದರು.
ಇನ್ನು ವೈಟ್‌ಫೀಲ್ಡ್ ರೈಸಿಂಗ್ ತಂಡದ ನಾಯಕಿ ಅನುಪಮಾ ಕಿಲಾರು ಮತ್ತೊಂದು ಕಳವಳ ವ್ಯಕ್ತಪಡಿಸಿದರು. “ಸಸಿಗಳ ವೆಚ್ಚವನ್ನು ಬಿಬಿಎಂಪಿ ಭರಿಸುತ್ತಿರುವಾಗ, ಈ ಸಸಿಗಳ ಸುಸ್ಥಿರತೆ ಮತ್ತು ಗುಣಮಟ್ಟದ ಬಗ್ಗೆ ಅವರಿಗೆ ನಿರ್ಲಕ್ಷ್ಯವಿದೆ. ನಿರ್ದಿಷ್ಟ ಪ್ರದೇಶದಲ್ಲಿ ಒಂದು ಜಾತಿಯು ನಿಜವಾಗಿಯೂ ಬದುಕಬಹುದೇ ಎಂದು ಅವರು ಪರಿಶೀಲಿಸುವುದಿಲ್ಲ. ಅದಕ್ಕಾಗಿಯೇ ಅಂತಹ ಸಸಿಗಳು ಕೆಲವೇ ದಿನಗಳಲ್ಲಿ ಒಣಗುವುದನ್ನು ನಾವು ನೋಡುತ್ತೇವೆ ಎಂದರು.
ಮತ್ತೊಂದೆಡೆ ಸಸಿ ನೆಡುವ ತಂಡವು ತ್ವರಿತವಾಗಿ ಬೆಳೆಯುವ, ಸುಮಾರು 10 ಅಡಿಗಳಷ್ಟು ಬೆಳೆಯುವ ಮತ್ತು ರಸ್ತೆ ಬದಿಯಲ್ಲಿ ನೆಡಲು ಸೂಕ್ತವಾದ ಸ್ಥಳೀಯ ತಳಿಗಳ ಗಟ್ಟಿಮುಟ್ಟಾದ ಮರಗಳನ್ನು ಆಯ್ಕೆ ಮಾಡುವ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ